ಬೆಂಗಳೂರು, ಆ.31– ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ರಾಜ್ಯದೆಲ್ಲೆಡೆ ಇಂದು ಗೋವಿಂದ ನಾಮಸ್ಮರಣೆ ಮೊಳಗಿತ್ತು.
ಇಂದು ಮುಂಜಾನೆಯಿಂದಲೇ ರಾಜ್ಯದ ವೆಂಕಟೇಶ್ವರ, ಶನಿಮಹಾತ, ಆಂಜನೇಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶನಿಶ್ಚರಸ್ವಾಮಿಗೆ ಭಕ್ತರು ಅತ್ಯಂತ ನಿಷ್ಠೆ ಹಾಗೂ ನಿಯಮದಿಂದ ಪೂಜೆ ಸಲ್ಲಿಸುವ ಪದ್ದತಿ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದು, ಇಂದು ದೇವಾಲಯಗಳಿಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಧುರೆಯ ಶನಿಮಹಾತ ದೇವಾಲಯದಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ದೇವಾಲಯಗಳನ್ನು ಶೃಂಗರಿಸಿದ್ದು, ಬೆಂಗಳೂರು, ತುಮಕೂರು, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಅದೇ ರೀತಿ ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ಗೆಟ್ ವೃತ್ತದ ಸಮೀಪವಿರುವ ಶ್ರೀ ಶನೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಚಿಕ್ಕಬಳ್ಳಾಪುರ ನಗರದ ಕಂದಾವರ ಪೇಟೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ದೇವರಿಗೆ ಮುತ್ತಿನ ಅಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಶೃಂಗರಿಸಲಾಗಿತ್ತು.ಇಂದು ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು. ಸರದಿ ಸಾಲಿನಲ್ಲೇ ನಿಂತ ಭಕ್ತರು ಗೋವಿಂದ ಗೋವಿಂದ ಎಂಬ ನಾಮಸರಣೆಯೊಂದಿಗೆ ಪೂಜೆ ಸಲ್ಲಿಸಿ ಭಕ್ತಿಪರಕಾಷ್ಠೆ ಮೆರೆದರು.
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದುಬಂದಿದ್ದು, ಮುಂಜಾನೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ಆಗಮಿಸಿ ಇಂದು ವೆಂಕಟರಮಣನ ದರ್ಶನ ಪಡೆದು ಕೃತಾರ್ಥರಾದರು.
ಶ್ರಾವಣ ಮಾಸದಲ್ಲಿ ವೆಂಕಟರಮಣನ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಭಕ್ತರ ನಂಬಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ವಿವಿಧ ದೇವಾಲಯಗಳಿಗೆ ಭಕ್ತರು ಆಗಮಿಸಿ ಹರಕೆಗಳನ್ನು ಸಲ್ಲಿಸಿದ್ದಾರೆ.