ಬೆಂಗಳೂರು,ಅ.4- ಜೆಡಿಎಸ್, ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಪೂರಕವಾಗಿ ಮತ್ತಷ್ಟು ಪ್ರಮುಖ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರನ್ನು ಭೇಟಿ ಮಾಡಿದ್ದಾರೆ. ಹನೂರಿನ ಶಾಸಕ ಮಂಜುನಾಥ್ ಅವರು ಸಿಎಂ ಸಿದ್ದರಾಮಯ್ಯನವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‍ರೊಂದಿಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಜೆಡಿಎಸ್‍ನ ಶಾಸಕರು ರಾಜಕೀಯ ಆಗುಹೋಗುಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಬಿಜೆಪಿಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರನ್ನು ಭೇಟಿ ಮಾಡಿದ್ದಾರೆ.
ಕಾಂಗ್ರೆಸಿಗರು ಹಾಲಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಬದಲಾಗಿ ಮಾಜಿ ಶಾಸಕರು, ಪ್ರಭಾವಿ ಮುಖಂಡರನ್ನು ಕೇಂದ್ರೀಕರಿಸಿದ್ದಾರೆ. ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಜೆಡಿಎಸ್‍ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅತೃಪ್ತ ಪ್ರಮುಖ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.
ಸುದ್ದಿ ಸಂಸ್ಥೆಗಳ ಮೇಲಿನ ದಾಳಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ : ಸಚಿವ ಗುಂಡೂರಾವ್
ಈಗಾಗಲೇ ಬಿಬಿಎಂಪಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಾಯಕರುಗಳು ಹಂತ ಹಂತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಕೆಲವು ಪ್ರಭಾವಿ ನಾಯಕರುಗಳನ್ನು ವರಿಷ್ಠ ನಾಯಕರು ಕೆಪಿಸಿಸಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡರೆ ಕೆಳ ಹಂತದ ನಾಯಕರನ್ನು ಜಿಲ್ಲಾ ಮಟ್ಟದಲ್ಲೇ ಕರೆದುಕೊಳ್ಳಲಾಗುತ್ತಿದೆ.
ಹನೂರಿನ ಹಾಲಿ ಶಾಸಕ ಮಂಜುನಾಥ್ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದರ ಹಿಂದೆ ರಾಜಕೀಯ ಉದ್ದೇಶವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಆದರೆ ಸಚಿವ ಭೈರತಿ ಸುರೇಶ್ ಜೊತೆಗೆ ಹೋದ ಶಾಸಕರು ಮುಖ್ಯಮಂತ್ರಿಯವರ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಸಿದ್ದರಾಮಯ್ಯ ತೆರೆಮರೆಯ ಕಾರ್ಯತಂತ್ರವನ್ನು ರೂಪಿಸಿದ್ದಾರೆಯೇ ಎಂಬ ಅನುಮಾನ ರಹಸ್ಯ ಮಾತುಕತೆ ಹುಟ್ಟುಹಾಕಿದೆ.