ಬೆಂಗಳೂರು,ಫೆ.1– ಮೈಕ್ರೋ ಫೈನಾನ್ಸ್ ಕಿರುಕುಳವನ್ನು ತಡೆಯಲು ರಾಜ್ಯಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆ ಕರಡು ಮಸೂದೆಯನ್ನು ಕುರಿತು ಇಂದು ಮತ್ತೊಂದು ಸುತ್ತಿನ ಸಭೆ ನಡೆಯಿತು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್‌ಬಿಐ ಅಧೀನಕ್ಕೆ ಒಳಪಡಲಿದ್ದು ಸುಗ್ರೀವಾಜ್ಞೆ ಮೂಲಕ ಅವುಗಳನ್ನು ನಿಯಂತ್ರಿಸಲು ಮುಂದಾದರೆ ಎದುರಾಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರ ಕ್ರಮಗಳನ್ನು ಅನುಸರಿಸಿದರೆ, ಸಾಮರ್ಥ್ಯ ಮೀರಿ ಸಾಲ ನೀಡಿ ನಂತರ ಅದರ ವಸೂಲಿಗೆ ವಾಮಮಾರ್ಗಗಳನ್ನು ಹಿಡಿಯುವುದನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ವಿಶ್ಲೇಷಣೆ ನಡೆಸಲಾಗಿದೆ.
ಮೈಕ್ರೋ ಫೈನಾನ್ಸ್ ಗಳು ಮಧ್ಯಮ ವರ್ಗದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಹೀಗಾಗಿ ಏಕಾಏಕಿ ಅವುಗಳ ಮೇಲೆ ಗದಾಪ್ರಹಾರ ನಡೆಸಿದರೆ ಎದುರಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆಯೂ ಚರ್ಚೆ ಮಾಡಲಾಗಿದೆ.
ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಮೈಕ್ರೋ ಫೈನಾನ್ಸ್ ಕಂಪನಿಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಬರಲಿವೆ. ಕೇಂದ್ರ ಸಚಿವರು ಇಲ್ಲಿ ಬಂದು ಮಾತನಾಡುತ್ತಾರೆ. ಆರ್‌ಬಿಐ ಯಾರ ವ್ಯಾಪ್ತಿಯಲ್ಲಿದೆ ಎಂಬುದನ್ನೇ ಕೇಂದ್ರ ಸಚಿವರು ಮರೆತಿದ್ದಾರೆ. ರಾಜ್ಯದ ಜನ ಮೈಕ್ರೋ ಫೈನಾನ್ಸ್ ನಿಂದ ಅನುಭವಿಸುತ್ತಿರುವ ಕಿರುಕುಳ ಕೇಂದ್ರ ಸರ್ಕಾರಕ್ಕೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಇದೇ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮೈಕ್ರೋ ಫೈನಾನ್‌್ಸ ಹಾವಳಿಯನ್ನು ತಡೆಯಲು ಇರುವ ಕಾನೂನನ್ನೇ ಸಮರ್ಪಕವಾಗಿ ಮೊದಲು ಜಾರಿ ಮಾಡಬೇಕು. ಅನಂತರ ಸುಗ್ರೀವಾಜ್ಞೆ ತರಬಹುದು ಎಂದರು.
ಎಲ್ಲಾ ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆ ಇರುವುದರಿಂದ ಕಿರುಕುಳವಾಗುತ್ತಿದೆ ಎಂಬ ದೂರುಗಳಿವೆ. ಕೆಲವೆಡೆ ಆತಹತ್ಯೆಗಳಾಗಿವೆ. ಈ ವೇಳೆ ಚಾಲ್ತಿಯಲ್ಲಿರುವ ಕಾನೂನುಗಳನ್ನೇ ಬಳಸಿ ಏಕೆ ಪ್ರಕರಣ ದಾಖಲಿಸುತ್ತಿಲ್ಲ? ಎಂದು ಅಚ್ಚರಿ ವ್ಯಕ್ತಪಡಿಸಿದರು.
ಇದರಲ್ಲಿ ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಕಿರುಕುಳವಾಗುವುದನ್ನು ತಡೆಯಲು ನಮ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ನಾಳೆಯೊಳಗಾಗಿ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಕಳುಹಿಸುವುದಾಗಿ ತಿಳಿಸಿದರು.