ಬೆಂಗಳೂರು,ಫೆ.1- ಮಧ್ಯಮ ವರ್ಗದವರು , ವೇತನದಾರರಿಗೆ ಸಿಹಿ ಸುದ್ದಿಯನ್ನು ಘೋಷಣೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷದವರೆಗೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ವಾರ್ಷಿಕ 12 ಲಕ್ಷ ಆದಾಯ ಹೊಂದಿರುವವರು ಇನ್ನು ಮುಂದೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಜೊತೆಗೆ ಹಿರಿಯ ನಾಗರಿಕರಿಗೆ 50 ಸಾವಿರದಿಂದ 1 ಲಕ್ಷದವರೆಗೂ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ.
ಹೊಸ ತೆರಿಗೆ ಪದ್ದತಿಯಲ್ಲಿ ವಾರ್ಷಿಕ 12 ಲಕ್ಷದವರೆಗೆ ಆದಾಯ ಗಳಿಸುವವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ. ಇದಕ್ಕೆ 75 ಸಾವಿರ ರೂ.ಗಳ ಪ್ರಾಮಾಣಿಕ ಕಡಿತವನ್ನು ಸೇರಿಸಿದರೆ ವಾರ್ಷಿಕ 12 ಲಕ್ಷದ 75 ಸಾವಿರದವರೆಗೂ ಆದಾಯ ಹೊಂದಿರುವವರು ತೆರಿಗೆಯಿಂದ ವಿನಾಯಿತಿ ಪಡೆಯಲಿದ್ದಾರೆ.ಲೋಕಸಭೆಯಲ್ಲಿ ಪ್ರಸಕ್ತ 2025-26ನೇ ಸಾಲಿನ ಬಜೆಟ್ ಮಂಡಿಸಿದ ಅವರು, ದೇಶದ ಜನತೆಯ ಬೇಡಿಕೆಯಂತೆ ತೆರಿಗೆ ವಿನಾಯ್ತಿ ನೀಡುವ ಮೂಲಕ ಮಧ್ಯಮ ವರ್ಗದವರು ತೆರಿಗೆದಾರರು, ವೇತನದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ಬಾರಿ ಬಜೆಟ್ ಮಂಡನೆ ವೇಳೆ ತೆರಿಗೆ ವಿನಾಯ್ತಿ ನೀಡಬೇಕೆಂಬುದು ಬಹುತೇಕರ ಬೇಡಿಕೆಯಾಗಿರುತ್ತಿತ್ತು. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹತ್ತು ಲಕ್ಷದವರೆಗೂ ತೆರಿಗೆ ವಿನಾಯ್ತಿಯನ್ನು ನೀಡಬಹುದೆಂದು ಅಂದಾಜಿಸಲಾಗಿತ್ತು.ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿರುವ ನಿರ್ಮಲಾ ಸೀತರಾಮನ್ ಅವರು 12 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಘೋಷಣೆ ಮಾಡಿದ್ದಾರೆ.
ತೆರಿಗೆದಾರರು 0-4=0, 4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು, 12 ಲಕ್ಷದಿಂದ 15 ಲಕ್ಷದವರೆಗೆ ಶೇ.15, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20ರಷ್ಟು, 20ರಿಂದ 24 ಲಕ್ಷದವರೆಗೆ ಶೇ.25ರವರೆಗೆ ಹಾಗೂ 24 ಲಕ್ಷ ಮೇಲ್ಪಟ್ಟ ಆದಾಯ ಹೊಂದಿರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಬಾಡಿಗೆ ಮೇಲಿನ ಟಿಡಿಎಸ್ ವಾರ್ಷಿಕ ಮಿತಿಯನ್ನು 2.40 ಲಕ್ಷದಿಂದ 6 ಲಕ್ಷದವರೆಗೂ ಹೆಚ್ಚಳ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಜೊತೆಗೆ ಹಿರಿಯ ನಾಗರಿಕರಿಗೆ 50 ಸಾವಿರದಿಂದ 1 ಲಕ್ಷದವರೆಗೂ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ. ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಹಾಗೂ ಸ್ವದೇಶದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳು ಇನ್ನು ಮುಂದೆ ಅಗ್ಗವಾಗಲಿವೆ.
ಮುಂದಿನ ವಾರ ಹೊಸ ತೆರಿಗೆ ಮಸೂದೆಯನ್ನು ಮಂಡಿಸುವುದಾಗಿ ಹೇಳಿರುವುದರಿಂದ ಮಸೂದೆ ಜಾರಿಗೆ ಬಂದ ನಂತರ ತೆರಿಗೆ ಪಾವತಿ ಪದ್ಧತಿ ಇನ್ನಷ್ಟು ಸರಳೀಕರಣವಾಗಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.
ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಹೊಸ ತೆರಿಗೆ ಶ್ರೇಣಿಯನ್ನು ಘೋಷಿಸಿರುವ ನಿರ್ಮಲ ಸೀತಾರಾಮನ್, ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ಮಾಡುತ್ತೇವೆ ಎಂದರು.
ನಮ ಗುರಿ ಸಾಮಾನ್ಯ ಜನರ ಕಷ್ಟಗಳನ್ನು ಕಡಿಮೆ ಮಾಡುವುದು ಮಾತ್ರ ನಾವು ವೃದ್ದರಿಗೆ ಭಾರೀ ತೆರಿಗೆ ವಿನಾಯ್ತಿನೀಡಲಿದ್ದೇವೆ. ಹಿರಿಯ ನಾಗರಿಕರ ಟಿಡಿಎಸ್ ಮಿತಿ ದ್ವಿಗುಣಗೊಳಿಸಲಾಗಿದೆ. ಇದು ಜನಸಾಮಾನ್ಯರ ಬಜೆಟ್ ಎಂಬುದಕ್ಕೆ ಇದು ನಿದರ್ಶನ ಎಂದು ಹೇಳಿದರು.
ತೆರಿಗೆ ವಿನಾಯ್ತಿ
0-4 ಲಕ್ಷ ರೂಪಾಯಿ ಆದಾಯ 0 %
4 ರಿಂದ 8 ಲಕ್ಷ ರೂಪಾಯಿ 5 %
8 ರಿಂದ 12 ಲಕ್ಷ ರೂಪಾಯಿ 10 %
12 ರಿಂದ 16 ಲಕ್ಷ ರೂಪಾಯಿ 15 %
16 ರಿಂದ 20 ಲಕ್ಷ ರೂಪಾಯಿ 20 %
20 ರಿಂದ 24 ಲಕ್ಷ ರೂಪಾಯಿ 25 %
24 ಲಕ್ಷಕ್ಕಿಂತ ಮೇಲ್ಪಟ್ಟ 30 %
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ:
ಈ ಬಾರಿಯ ಬಜೆಟ್‌ನಲ್ಲಿ ಸ್ವದೇಶಿ ಬಟ್ಟೆಗಳು, ಎಲೆಕ್ಟ್ರಿಕ್ ಕಾರುಗಳು, ಚರ್ಮದ ಉತ್ಪನ್ನಗಳು, ಎಲ್‌ಇಡಿ ಟಿವಿ ಬೆಲೆ, ಕ್ಯಾನ್ಸರ್ ಔಷಧಿ, ಮೊಬೈಲ್ ಹಾಗೂ ಮೊಬೈಲ್ ಬಿಡಿಭಾಗಗಳ ಬೆಲೆ ಇಳಿಕೆ ಮಾಡಲಾಗಿದೆ. ಅಲ್ಲದೆ ಹಲವು ಉತ್ಪನ್ನಗಳ ಬೆಲೆ ಇಳಿಕೆ ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ಗುಡ್‌ನ್ಯೂಸ್ ಕೊಡಲಾಗಿದೆ.