ಬೆಂಗಳೂರು, ಜೂ.24- ಜನಾದೇಶದಂತೆ ನಾನು ವಿಶ್ರಾಂತಿ ಪಡೆಯುತ್ತೇನೆ. ಚನ್ನಪಟ್ಟಣ ಉಪಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಸಾಕಷ್ಟು ಒತ್ತಡದಲ್ಲಿದ್ದೆ. ವಿಶ್ರಾಂತಿಯ ಅಗತ್ಯವಿತ್ತು. ಲೋಕಸಭಾ ಚುನಾವಣೆಯಲ್ಲಿ ಜನ ತಮಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇನೆ. ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇರಾದೆ ಇಲ್ಲ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎಂದು ಯಾರೂ ನನ್ನ ಬಳಿ ಚರ್ಚೆ ಮಾಡಿಲ್ಲ. ಎಐಸಿಸಿ ಅಧ್ಯಕ್ಷರೂ ಕೂಡ ಪ್ರಸ್ತಾಪಿಸಿಲ್ಲ. ಪಕ್ಷ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಈಗಷ್ಟೇ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರ ತೆರವಾದ ಬಳಿಕ ಅದಕ್ಕೆ ಉಪಚುನಾವಣೆ ಘೋಷಣೆಯಾಗಬೇಕಿದೆ. ಸದ್ಯಕ್ಕೆ ಅಲ್ಲಿಂದ ಸ್ಪರ್ಧೆ ಮಾಡುವ ಪ್ರಸ್ತಾಪ ನನ್ನ ಮುಂದಿಲ್ಲ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗೆ ತಾವು ಪ್ರಾಮುಖ್ಯತೆ ನೀಡುವುದಿಲ್ಲ. ನಟ, ನಿರ್ಮಾಪಕರಾಗಿರುವ ಅವರ ಹೇಳಿಕೆಗಳು ಯಾವಾಗ ಬೇಕಾದರೂ ಬದಲಾಗಬಹುದು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.