Saturday, July 20, 2024
Homeಅಂತಾರಾಷ್ಟ್ರೀಯಬಿಸಿಲ ಶಾಖಕ್ಕೆ ಮೆಕ್ಕಾದಲ್ಲಿ ಸುಮಾರು 550 ಹಜ್‌ ಯಾತ್ರಿಗಳ ಸಾವು

ಬಿಸಿಲ ಶಾಖಕ್ಕೆ ಮೆಕ್ಕಾದಲ್ಲಿ ಸುಮಾರು 550 ಹಜ್‌ ಯಾತ್ರಿಗಳ ಸಾವು

ಜೇರೂಸಲೇಂ,ಜೂ.19- ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ 550ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ.

ಮೃತದೇಹಗಳನ್ನು ಮೆಕ್ಕಾದ ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.2023ರ ಹಜ್ ಯಾತ್ರೆ ಸಂದರ್ಭದಲ್ಲಿ ವಿವಿಧ ದೇಶಗಳ ಕನಿಷ್ಠ 240 ಯಾತ್ರಿಕರು ಸಾವನ್ನಪ್ಪಿದ್ದರು ಎಂದು ಅರಬ್ ರಾಜತಾಂತ್ರಿ ಕರು ತಿಳಿಸಿದ್ದಾರೆ.

ಕನಿಷ್ಠ 60 ಯಾತ್ರಿಕರು ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಹಜ್ ಯಾತ್ರೆಯ ಸಮಯದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯೆಸ್ನಷ್ಟಿರುತ್ತಿತ್ತು. ಈ ಬಾರಿ ಭಾರೀ ಏರಿಕೆ ಕಂಡಿದೆ.ಹವಾಮಾನ ಬದಲಾವಣೆಯು ಹಜ್ ಯಾತ್ರೆಯ ಮೇಲೆ ಪರಿಣಾಮ ಬೀರುತ್ತಿದೆ ಧಾರ್ಮಿಕ ಆಚರಣೆಗಳನ್ನು ನಡೆಸುವ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4 ಏರುತ್ತಿದೆ ಎಂದು ತಿಳಿದುಬಂದಿದೆ.

ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರವು ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್ಹೀಟ್) ತಲುಪಿದೆ ಎಂದು ಹೇಳಿದೆ. 1920 ರ ದಶಕದಲ್ಲಿ ಮೆಕ್ಕಾವನ್ನು ಸೌದಿ ರಾಜಮನೆತನ ತಮ್ಮ ವಶಕ್ಕೆ ತೆಗೆದುಕೊಂಡಿತು.ಆ ಬಳಿಕ ತೀರ್ಥಯಾತ್ರೆ ಆಯೋಜಿಸುವುದು ಹೆಮ್ಮೆ ಎಂದು ಅದು ಪರಿಗಣಿಸಿದೆ.

ಈ ವರ್ಷ ಸುಮಾರು 18 ಲಕ್ಷ ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದರು, ಅವರಲ್ಲಿ 16 ಲಕ್ಷ ಯಾತ್ರಿಕರು ವಿವಿಧ ದೇಶಗಳಿಂದ ಬಂದಿದ್ದರು ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಬಕ್ರೆದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಒಮ್ಮೆಯಾದರೂ ಹಜ್ ಯಾತ್ರೆಯನ್ನು ಪೂರ್ಣಗೊಳಿಸಬೇಕು ಎಂದು ಭಾವಿಸುತ್ತಾರೆ. ಆದ್ರೆ ಈ ಬಾರಿ ಮೆಕ್ಕಾದಲ್ಲಿ ಬಿಸಿಲಿನ ತಾಪಮಾನ ಏರಿಕೆಯಿಂದ ನೂರಾರು ಜನ ಮೃತಪಟ್ಟಿದ್ದಾರೆ, ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್ಹೀಟ್) ಕಂಡುಬಂದಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ತಾಪಮಾನ ಏರಿಕೆ ಸಂದರ್ಭದಲ್ಲಿ ಕೆಲವರು ಮೈಮೇಲೆ ನೀರು ಸುರಿದುಕೊಂಡು ಪ್ರಾಣ ಉಳಿಸಿಕೊಂಡಿರುವ ದೃಶ್ಯಗಳು ಕಂಡುಬಂದಿದೆ.

ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಶತಕೋಟಿ ಡಾಲರ್ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೂ 2015 ರಲ್ಲಿ ಇಲ್ಲಿ ಉಂಟಾದ ಕಾಲ್ತುಳಿತಕ್ಕೆ ಸುಮಾರು 2,400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

ಏನಿದು ಹಜ್‌ ಯಾತ್ರೆ?
ಬಕ್ರೆದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್ನ ಧಾರ್ಮಿಕ ವಿಧಿ -ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಬಕ್ರೆದ್ ಮುನ್ನಾದಿನ ಅಥವಾ ದುಲ್ ಹಜ್ ತಿಂಗಳ 9ರಂದು ಹಜ್ ಯಾತ್ರಿಕರು ಮೆಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.ಮುಸ್ಲಿಮರ ಹಜ್ ಯಾತ್ರೆ ಜೂನ್ 14ರಿಂದ ಪ್ರಾರಂಭವಾಗಿದ್ದು, ಯಾತ್ರೆ ಭಾಗವಾಗಿ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾಗೆ ವರ್ಷಕ್ಕೆ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭೇಟಿ ನೀಡುತ್ತಾರೆ.

RELATED ARTICLES

Latest News