ಬೆಂಗಳೂರು,ಮಾ.25- ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಪರಿಗಣಸಲಾಗಿರುವ ಎಸ್ಸೆಸ್ಸೆಲ್ಸಿ ಮೊದಲ ವಾರ್ಷಿಕ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ರಾಜ್ಯಾದ್ಯಂತ 2700ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಸುಲಲಿತವಾಗಿ ನಡೆದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನಕಲು ತಡೆಗಟ್ಟಲು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಇಂದು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪ್ರಥಮ ಭಾಷೆಯ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್ , ಸಂಸ್ಕøತ ವಿಷಯಗಳ ಪರೀಕ್ಷೆಗಳು ನಡೆದವು.ಸರ್ಕಾರಿ, ಅನುದಾನ, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳು ಸೇರಿದಂತೆ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 2,750 ಪರೀಕ್ಷಾ ಕೇಂದ್ರಗಳನ್ನು ಮಂಡಳಿ ತೆರೆದಿದೆ.
ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ಬಳಕೆ ನಿಷೇಧ ಮಾಡಲಾಗಿದೆ. ಅಲ್ಲದೆ ಪರೀಕ್ಷೆ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಕ್ರಮವಹಿಸಲಾಗಿದೆ. ರಾಜ್ಯಾದ್ಯಂತ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಉತ್ಸಾಹ ಕಂಡುಬಂದಿದೆ. ಪೊಷಕರಲ್ಲಿ ಮಕ್ಕಳ ಭವಿಷ್ಯದ ಕಾಳಜಿ, ದುಗುಡಗಳು ಪರೀಕ್ಷಾ ಕೇಂದ್ರದ ಬಳಿ ಕಂಡುಬಂದವು.
ವಿದ್ಯಾರ್ಥಿಗಳು ನಿಗದಿತ ಅವಗಿಂತಲೂ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಸಗರ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ತಾಯಿ ಗಂಗಮ್ಮ, ಆಕೆಯ ಪುತ್ರ ಮಲ್ಲಿಕಾರ್ಜುನ್ ಒಟ್ಟಿಗೆ ಪರೀಕ್ಷೆ ಬರೆದಿದ್ದು ಗಮನಸೆಳೆದಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಗಳ ಹೊರತಾಗಿಯೂ ರಾಜ್ಯಾದ್ಯಂತ ಸುಗಮವಾದ ಪರೀಕ್ಷೆ ನಡೆದಿದ್ದು, ಏಪ್ರಿಲ್ 6ರಂದು ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ವಿಷಯಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ.