Friday, February 14, 2025
Homeಬೆಂಗಳೂರುಬೆಂಗಳೂರಲ್ಲಿ ಬಿಹಾರಿ ಮಹಿಳೆಯ ಕೊಲೆ

ಬೆಂಗಳೂರಲ್ಲಿ ಬಿಹಾರಿ ಮಹಿಳೆಯ ಕೊಲೆ

ಬೆಂಗಳೂರು,ಮಾ.25- ಮನೆಯಲ್ಲಿ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಯನ್ನು ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಸಿಂಗಸಂದ್ರದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಗುಡಿಯಾ ದೇವಿ(42) ಕೊಲೆಯಾಗಿರುವ ಗಾರ್ಮೆಂಟ್ಸ್ ಉದ್ಯೋಗಿ.

ಸಿಂಗಸಂದ್ರದ ವಠಾರವೊಂದರಲ್ಲಿ ಮನೆ ಮಾಡಿಕೊಂಡು ಸಹೋದರಿ ಗೀತಾಕುಮಾರಿ ಹಾಗೂ ಸಂಬಂಧಿ ರಾಜೇಶ್ಕುಮಾರ್ ಜೊತೆ ಗುಡಿಯಾದೇವಿ ವಾಸವಾಗಿದ್ದರು. ರಾಜೇಶ್ಕುಮಾರ್ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾನೆ. ರಾತ್ರಿ ಯಾವುದೋ ವಿಚಾರಕ್ಕೆ ಈ ಮೂವರ ಮಧ್ಯೆ ಜಗಳವಾಗಿದೆ. ಬೆಳಗಾಗುವಷ್ಟರಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಗುಡಿಯಾದೇವಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಸಹೋದರಿ ಗೀತಾಕುಮಾರಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸಂಬಂಧಿ ರಾಜೇಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಗುಡಿಯಾದೇವಿ ಅವರ ಮೈಮೇಲೆ ಯಾವುದೇ ಗಾಯದಗುರುತುಗಳಿಲ್ಲ. ಯಾವ ರೀತಿ ಈ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬುದು ನಿಗೂಢವಾಗಿದೆ.

ಉಸಿರುಗಟ್ಟಿಸಿ ಇಲ್ಲವೇ ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ಸಾವು ಹೇಗಾಗಿದೆ ಎಂಬುದು ಗೊತ್ತಾಗಲಿದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News