ಇಸ್ಲಮಾಬಾದ್, ಫೆ.19- ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ವಾಯುಪಡೆಯು ಆರಂಭಿಕ ಪಂದ್ಯಕ್ಕೂ ಮುನ್ನ ವಾಯು ಪ್ರದರ್ಶನವನ್ನು ಆಯೋಜಿಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಪ್ರಾರಂಭವಾಗುತ್ತಿದ್ದಂತೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನ ವಾಯುಪಡೆ (ಪಿಎಎಫ್) ಒಳಗೊಂಡ ವಾಯು ಪ್ರದರ್ಶನವನ್ನು ಯೋಜಿಸಿದೆ.
ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಪಿಎಎಫ್ ಶೇರ್ ದಿಲ್ ವಾಯು ಪ್ರದರ್ಶನವನ್ನು ಒಳಗೊಂಡಿರುತ್ತದೆ ಎಂದು ಪಿಸಿಬಿ ದೃಢಪಡಿಸಿದೆ, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮುಖ್ಯ ಅತಿಥಿಯಾಗಿರುತ್ತಾರೆ.
ಪಾಕಿಸ್ತಾನವು 29 ವರ್ಷಗಳ ನಂತರ ಆಯೋಜಿಸುತ್ತಿರುವ ಮೊದಲ ಐಸಿಸಿ ಕಾರ್ಯಕ್ರಮ ಇದಾಗಿದ್ದು, ಚಾಂಪಿಯನ್ಸ್ ಟ್ರೋಫಿಗೆ ದೇಶದ ಸಿದ್ಧತೆಯ ಬಗ್ಗೆ ಪಿಸಿಬಿ ಮುಖ್ಯಸ್ಥ ಮೊಹ್ಲಿ ನ್ ನಖಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ನಖಿ ಹೇಳಿದರು. ಎಲ್ಲಾ ತಂಡಗಳಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಾಗುವುದು. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳಿಗೆ ಸಾಧ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು.
29 ವರ್ಷಗಳ ನಂತರ ಐಸಿಸಿ ಪಂದ್ಯಾವಳಿಯನ್ನು ನಡೆಸುವುದು ಪಾಕಿಸ್ತಾನಕ್ಕೆ ಹೆಮ್ಮೆಯ ವಿಷಯವಾಗಿದೆ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ನಾವು ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂದಿದ್ದಾರೆ.