Friday, November 7, 2025
Home Blog Page 12

ಮುಂಬೈ ವಿಮಾನ ನಿಲ್ದಾಣದಲ್ಲಿ 47 ಕೋಟಿ ಮೌಲ್ಯದ ಕೊಕೇನ್‌ ವಶ

ನವದೆಹಲಿ, ನ. 1 (ಪಿಟಿಐ)- ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಲಂಬೊದಿಂದ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರಿಂದ ಸುಮಾರು 47 ಕೋಟಿ ರೂ. ಮೌಲ್ಯದ 4.7 ಕೆಜಿ ಕೊಕೇನ್‌ ಅನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ಐದು ಜನರನ್ನು ಬಂಧಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಡಿಆರ್‌ಐ ಅಧಿಕಾರಿಗಳು ಪ್ರಯಾಣಿಕಳ ಆಗಮನದ ಸ್ವಲ್ಪ ಸಮಯದ ನಂತರ ಅವರನ್ನು ತಡೆದು ಅವರ ಲಗೆಜ್‌ಗಳನ್ನು ವಿವರವಾದ ಪರೀಕ್ಷೆಗೆ ಒಳಪಡಿಸಿದರು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಪರಿಶೀಲನೆಯಲ್ಲಿ ಕಾಫಿ ಪ್ಯಾಕೆಟ್‌ಗಳ ಒಳಗೆ ಮರೆಮಾಡಲಾಗಿರುವ ಬಿಳಿ ಪುಡಿಯ ವಸ್ತುವಿನ ಒಂಬತ್ತು ಚೀಲಗಳು ಪತ್ತೆಯಾಗಿವೆ. ಎನ್‌ಡಿಪಿಎಸ್‌‍ ಫೀಲ್ಡ್ ಕಿಟ್‌ನೊಂದಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ಆ ವಸ್ತುವು ಕೊಕೇನ್‌ ಎಂದು ದೃಢಪಟ್ಟಿದೆ.

ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲಗಳಿಗೆ ದೊಡ್ಡ ಹೊಡೆತವಾಗಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಸಿಎಸ್‌‍ಎಂಐಎ) ಕೊಲಂಬೊದಿಂದ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರಿಂದ ಅಕ್ರಮ ಮಾರುಕಟ್ಟೆಯಲ್ಲಿ ಸುಮಾರು 47 ಕೋಟಿ ರೂ. ಮೌಲ್ಯದ 4.7 ಕೆಜಿ ಕೊಕೇನ್‌ ಅನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆ ತಿಳಿಸಿದೆ.

ಡಿಆರ್‌ಐ ಸಿಂಡಿಕೇಟ್‌ನ ನಾಲ್ವರು ಹೆಚ್ಚುವರಿ ವ್ಯಕ್ತಿಗಳನ್ನು ಬಂಧಿಸಿದೆ – ಒಬ್ಬರು ಸಾಗಣೆಯನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರು ಮತ್ತು ಕಳ್ಳಸಾಗಣೆ ಮಾಡಿದ ಮಾದಕ ವಸ್ತುಗಳ ಹಣಕಾಸು, ಲಾಜಿಸ್ಟಿಕ್‌್ಸ ಮತ್ತು ವಿತರಣಾ ಜಾಲಕ್ಕೆ ಸಂಬಂಧಿಸಿದ ಮೂವರು ಸೇರಿದಂತೆ ಐದು ಆರೋಪಿಗಳನ್ನು ಮಾದಕ ದ್ರವ್ಯಗಳು ಮತ್ತು ಮನೋವಿಶ್ಲೇಷಕ ವಸ್ತುಗಳ (ಎನ್‌ಡಿಪಿಎಸ್‌‍) ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಿಆರ್‌ಐ ಇತ್ತೀಚೆಗೆ ವಶಪಡಿಸಿಕೊಂಡ ಕೆಲವು ಪ್ರಕರಣಗಳು, ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಿಂಡಿಕೇಟ್‌ಗಳು ಭಾರತೀಯ ಮಹಿಳೆಯರನ್ನು ಕೊರಿಯರ್‌ಗಳಾಗಿ ಹೆಚ್ಚಾಗಿ ಬಳಸಿಕೊಳ್ಳುತ್ತಿವೆ, ಆದರೆ ಆಹಾರ ಪದಾರ್ಥಗಳು ಮತ್ತು ದಿನನಿತ್ಯದ ಖಾದ್ಯಗಳಲ್ಲಿ ಮಾದಕ ದ್ರವ್ಯಗಳನ್ನು ಮರೆಮಾಚಲು ಮತ್ತು ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಬಳಸುತ್ತಿವೆ ಎಂಬ ಕಳವಳಕಾರಿ ಪ್ರವೃತ್ತಿಯನ್ನು ಸೂಚಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸುವ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ : ಡಿಕೆಶಿ

ಬೆಂಗಳೂರು, ನ.1- ಇಡೀ ನವೆಂಬರ್‌ ತಿಂಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಹಾಗೂ ಇದಕ್ಕೂ ಮೊದಲು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳ ಜತೆ ಮಾತನಾಡಿದರು. ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ.

ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ಏನೋ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ನಮ ಕರ್ನಾಟಕ ಶಾಂತಿಯಿಂದ ಕೂಡಿದೆ. ಹೊರಗಿನಿಂದ ಬಂದವರು ಸಹ ಊಟ, ವಸತಿ ಗಳಿಸಿಕೊಂಡಿದ್ದಾರೆ. ಇದೇ ನಮ ಕನ್ನಡ ತಾಯಿ, ಭೂಮಿಯ ವಿಶೇಷ. ಇಲ್ಲಿ ಇರುವ ಅತ್ಯುತ್ತಮ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕೃತಿ ಹಾಗೂ ನೆಲ, ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ ಎಂದರು.

ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಬೇಕು. ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವುಗಳು ಮರೆಯಬಾರದು. ಅನೇಕ ಹಿರಿಯರು ಈ ಭಾಷೆ, ನೆಲ, ಜಲ, ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ. ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ ಮಾಡಿದ್ದೇವೆ ಎಂದರು.

ಈ ವರ್ಷ ಸಮೃದ್ಧಿಯಿಂದ ಕೂಡಿದೆ. ಮಳೆ ಇಳೆಯನ್ನು ತಂಪುಗೊಳಿಸಿದೆ. ಕೆಆರ್‌ಎಸ್‌‍ ಒಂದೇ ವರ್ಷದಲ್ಲಿ ಮೂರು ಬಾರಿ ತುಂಬಿದೆ ಎಂದು ಹೇಳಿದರು.ಕುವೆಂಪು ಅವರು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳಿಗೆಗೆ ದುಡಿಯಬೇಕು. ಜಾಗತಿಕವಾಗಿ ಬೆಂಗಳೂರು ಬೆಳಗುತ್ತಿದೆ. ಪ್ರಪಂಚದ ಜನರು ನಮನ್ನು ಗಮನಿಸುತ್ತಿದ್ದಾರೆ. ಕನ್ನಡ, ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ನಾವೆಲ್ಲರೂ ಕೊಂಡೊಯ್ಯಬೇಕು. ಭುವನೇಶ್ವರಿ ತಾಯಿ ಇಡೀ ಭೂಮಿಗೆ ಒಡತಿ. ಕರ್ನಾಟಕದ ನಾಡದೇವತೆ ಎಂದರು.

ಶಾಲಾ ಮಕ್ಕಳ ಪಥಸಂಚಲನ ನೋಡುತ್ತಿದ್ದರೆ ನನಗೂ ಸಹ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ. ನಾನು ಸಹ ಇದೇ ರೀತಿ ಸಮವಸ್ತ್ರ ಧರಿಸಿ ಶಿಸ್ತಿನಿಂದ ನಡೆಯುತ್ತಿದ್ದೆ. ಬೇಸ್‌‍ಡ್ರಮ್‌ ನುಡಿಸುವವನಾಗಿ ಹೆಜ್ಜೆ ಹಾಕಿದ್ದೆ. ಇದೇ ಕ್ರೀಡಾಂಗಣದಲ್ಲಿ ನಾನು ನಡೆದಾಡಿದ್ದು ನೆನಪಾಯಿತು ಎಂದು ಶಾಲಾ ದಿನವನ್ನು ಮೆಲುಕು ಹಾಕಿದರು.

ಸಾಮ್ರಾಟ್‌ ಅಶೋಕ ಚಕ್ರವರ್ತಿಯ ಕಾಲದಿಂದಲೂ ಕನ್ನಡದ ಹಿರಿಮೆಯಿದೆ. ಕನ್ನಡ ಹಾಗೂ ಕರ್ನಾಟಕದ ಇತಿಹಾಸವನ್ನು ಮಾಧ್ಯಮಗಳು ಅತ್ಯುತ್ತಮವಾಗಿ ವರದಿ ಮಾಡಿವೆ. ಕರ್ನಾಟಕದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನುತಿಳಿಸುತ್ತೇನೆ ಎಂದರು.

ಬೆಂಗಳೂರಲ್ಲಿ ಹೆಚ್ಚುತ್ತಲೇ ಇವೆ ರೋಡ್‌ರೇಜ್‌ ಪ್ರಕರಣಗಳು

ಬೆಂಗಳೂರು,ನ.1-ನಗರದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಕಡೆ ರೋಡ್‌ ರೇಜ್‌ ಪ್ರಕರಣಗಳು ನಡೆಯುತ್ತಿವೆ. ನಗರದ ಟಿನ್‌ ಫ್ಯಾಕ್ಟರಿ ಬಳಿ ಇಂತಹದೊಂದು ಘಟನೆ ನಡೆದಿದ್ದು, ದಾರಿಯಲ್ಲಿ ಸೈಡ್‌ ಕೊಡುವ ವಿಚಾರಕ್ಕೆ ಕ್ಯಾಬ್‌ ಚಾಲಕ ಹಾಗೂ ಬೈಕ್‌ ಸವಾರನ ನಡುವೆ ಗಲಾಟೆಯಾಗಿದೆ.

ಬೈಕ್‌ ಸವಾರ ಸ್ವಲ್ಪ ಮುಂದೆ ಹೋಗಿ ಕ್ಯಾಬ್‌ ಚಾಲಕನಿಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಕ್ಯಾಬ್‌ಚಾಲಕ ಕಾರಿನಿಂದ ಬೈಕ್‌ಗೆ ಗುದ್ದಿಸಿ ಸವಾರನನ್ನು ಬೀಳಿಸಿ ಹೋಗಿರುವುದು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾರೊಂದರ ಡ್ಯಾಶ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಕ್ಯಾಬ್‌ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಸೇರಿದಂತೆ ನಗರದ ಮತ್ತಿತರ ಪ್ರದೇಶಗಳಲ್ಲೂ ರೋಡ್‌ರೇಜ್‌ ಪ್ರಕರಣಗಳು ನಡೆದಿದ್ದವು.

ಅ.27ರಂದು ರಾತ್ರಿ ವೇಳೆ ಕಾರಿನ ಸೈಡ್‌ ಮಿರರ್‌ಗೆ ಬೈಕ್‌ ಡಿಕ್ಕಿ ಹೊಡೆದ ಘಟನೆ ನಂತರ ಕಾರಿನಲ್ಲಿದ್ದವರು ಬೈಕ್‌ ಸವಾರರನ್ನು ಬೆನ್ನತ್ತಿ ಹೋಗಿ ಡಿಕ್ಕಿ ಹೊಡೆದಿದ್ದ ಪರಿಣಾಮ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದ ಘಟನೆ ಪುಟ್ಟೇನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಅದೇ ರೀತಿ ಇದೇ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ತಾಗಿದ ವಿಚಾರದಲ್ಲಿ ಸಾಫ್‌್ಟವೇರ್‌ ಎಂಜಿನಿಯರ್‌ ಒಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರಿಂದ ಅವರು ಗಾಯಗೊಂಡಿದ್ದರು.

ಒಂಟಿ ಮಹಿಳೆಯರ ಸರ ಎಗರಿಸುತ್ತಿದ್ದ ಕುಖ್ಯಾತ ಐದು ಮಂದಿ ಸರಗಳ್ಳರ ಬಂಧನ

ಬೆಂಗಳೂರು,ನ.1-ದಾರಿಹೋಕ ಒಂಟಿ ಮಹಿಳೆಯರ ಸರಗಳನ್ನು ಎಗರಿಸುತ್ತಿದ್ದ ಕುಖ್ಯಾತ ಐದು ಮಂದಿ ಸರಗಳ್ಳರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ 8ಲಕ್ಷ ರೂ ಮೌಲ್ಯದ 75 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿಯ ನವೀನ್‌ (32), ಮಹೇಶ್‌ (26), ಸುದೀಪ್‌ (24), ದರ್ಶನ್‌ (23) ಮತ್ತು ಮೂಲತಃ ಕೋಲಾರದ ಆರ್‌ಆರ್‌ನಗರದಲ್ಲಿ ವಾಸವಾಗಿದ್ದ ಹರ್ಷವರ್ಧನ್‌ (23)ಬಂಧಿತ ಸರಗಳ್ಳರು.
ಕೆಂಗೇರಿಯ ಕೆಹೆಚ್‌ಬಿ ಪ್ಲಾಟಿನಂ ಅಪಾರ್ಟ್‌ಮೆಂಟ್‌ ಹಿಂಭಾಗದ ನಿವಾಸಿ ಹೇಮಾವತಿ ಎಂಬುವವರು ಅ.20 ರಂದು ಸಂಜೆ 6.30 ರ ಸುಮಾರಿನಲ್ಲಿ ಕೆಂಗೇರಿ ಉಪನಗರದ 80 ಅಡಿ ರಸ್ತೆಯ ಜೆಕೆ ಮೋಟಾರ್‌ರ‍ಸ ಕಾರ್‌ ಕೇರ್‌ ಸೆಂಟರ್‌ ಎದುರಿನ ಪುಟ್‌ಪಾತ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಭಾಲಿಸಿಕೊಂಡು ಬಂದ ಸರಗಳ್ಳರು 75 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸರಗಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.ಈ ತಂಡ ಕಾರ್ಯಾಚರಣೆ ನಡೆಸಿ ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಐದು ಮಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ನಡೆಸಿ ಎರಡು ದ್ವಿಚಕ್ರ ವಾಹನಗಳು, ನಾಲ್ಕು ಮೊಬೈಲ್‌ ಫೋನ್‌ಗಳು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಜಗದೀಶ್‌ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡು ಐದು ಮಂದಿ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಭಾಷೆ ಮೇಲ್ದರ್ಜೆಗೆ ಹೊಸ ನೀತಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.1- ಕೃತಕಬುದ್ಧಿಮತ್ತೆಯ ತಂತ್ರಜ್ಞಾನ ಇಡೀ ಜಗತ್ತನ್ನು ಆಕ್ರಮಿಸುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗುವ ಆತಂಕವಿದೆ. ಹೊಸ ಸವಾಲಿಗೆ ತಕ್ಕ ಹಾಗೆ ಭಾಷೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಗೆ ಅನುಗುಣವಾಗಿ ಭಾಷೆಯನ್ನು ಮೇಲ್ದರ್ಜೆಗೆರಿಸಲು ತಂತ್ರಜ್ಞರು ಹಾಗೂ ವಿದ್ವಾಂಸರು ಒಗ್ಗೂಡಿ ಕೆಲಸ ಮಾಡಬೇಕು. ಸರ್ಕಾರ ಕೂಡ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟಕ್ಕೇರಿಸಲು ಹೊಸ ನೀತಿ ರೂಪಿಸಲಿದೆ ಎಂದು ಹೇಳಿದರು.

ಕನ್ನಡಕ್ಕೆ ಸಾಕಷ್ಟು ಸವಾಲುಗಳಿವೆ. ಹೊಸ ತಲೆ ಮಾರಿನ ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸಿ ನಮ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳೋಣ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಮುಂದುವರೆದ ದೇಶಗಳ ಮಟ್ಟಕ್ಕೆ ಬೆಳೆಸಬೇಕಾಗಿದೆ ಎಂದರು.

ಭಾಷೆ ನಮ ಹೆಮೆಯ ಪರಂಪರೆ ಮತ್ತು ಸಂಸ್ಕೃತಿ ಅಭಿವ್ಯಕ್ತಿಯ ರೂಪ. ಕನ್ನಡಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಮಹಾ ಕಾವ್ಯ ಮಹಾಭಾರತದಲ್ಲಿ ಹಾಗೂ ದಕ್ಷಿಣ ಭಾರತದ ಶಿಲ್ಪ ಕಾವ್ಯಗಳಲ್ಲಿ ಕನ್ನಡ ಉಲ್ಲೇಖ ಕಂಡು ಬರುತ್ತಿದೆ. ಕನ್ನಡ ನಾಡಿನ ಸಾಮ್ರಾಜ್ಯ ಪ್ರಭಾವ ಭಾರತದೆಲ್ಲೆಡೆ ಇದೆ. ಬಂಗಾಳದ ಸೇನಾ ರಾಜವಂಶರು ಹಾಗೂ ಬಿಹಾರದ ಯಾದವರು ತಮನ್ನು ತಾವು ಕನ್ನಡದ ವಂಶಸ್ಥರು ಎಂದು ಹೇಳಿಕೊಂಡಿದ್ದಾರೆ.

ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಭಾಷಾ ಸ್ಥಾನಮಾನ ಸಿಕ್ಕಿದೆ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ, ಬಹು ಜನಾಂಗಗಳು ಒಗ್ಗೂಡಿ ಬದಕುವುದನ್ನು ನಮ ಹಿರಿಯರು ಕಂಡುಕೊಂಡಿದ್ದರು. ಮೊದಲಿನಿಂದಲೂ ಐಕ್ಯತೆಯೊಂದಿಗೆ ನಮಲ್ಲಿ ನಾಡನ್ನು ಕಟ್ಟಿ ಬೆಳೆಸಲಾಗಿದೆ. ನಾವು ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.

ಶಿಕ್ಷಣ ಬಲರ್ವಧನೆಗೆ 65 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ. ವಸತಿ ಶಾಲೆಗಳಲ್ಲಿ 8.36 ಲಕ್ಷ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಆರಂಭಿಸುತ್ತಿದ್ದೇವೆ. ರಾಜ್ಯಗಳಲ್ಲಿ ಶತಮಾನ ಪೂರೈಸಿದ 3 ಸಾವಿರ ಸರ್ಕಾರಿ ಶಾಲೆಗಳಿವೆ, ಅವುಗಳ ಜೀರ್ಣೋದ್ಧಾರ ಮಾಡಲಾಗುವುದು ಎಂದರು.

800 ಸರ್ಕಾರಿ ಶಾಲೆಗಳನ್ನು ಪಬ್ಲಿಕ್‌ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 180 ಮದ್ರಾಸ್‌‍ಗಳಲ್ಲಿ ಕನ್ನಡ ಕಲಿಸಲಾಗುತ್ತಿದ್ದು, ಅದನ್ನು 1,500 ಮದ್ರಾಸಗಳಿಗೆ ವಿಸ್ತರಿಸಲಾಗುತ್ತಿದೆ. 483 ಕೋಟಿ ರೂ. ವೆಚ್ಚಗಳಲ್ಲಿ 100 ಉರ್ದು ಶಾಲೆಗಳನ್ನು ಕೆಪಿಎಸ್‌‍ ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ನೇಮಕಾತಿ ಹಾಗೂ ತರಬೇತಿಗಳನ್ನು ಕಾಲಕಾಲಕ್ಕೆ ಕೈಗೊಳ್ಳಲಾಗಿದೆ. 800 ಪದವಿ ಪೂರ್ವ ಉಪನ್ಯಾಸಕರು ಸೇರಿ ಹೊಸದಾಗಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.
ಪ್ರೊಫೆಸರ್‌ ಸುಖದೇವ್‌ ಭೋರಟ್‌ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ವರದಿ ನೀಡಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಾಗುವುದು. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ ಎಂದರು.

ಮೊಬೈಲ್‌ ಬಳಕೆಯಿಂದ ಮಕ್ಕಳಲ್ಲಿನ ಅಪಾಯಗಳ ಬಗ್ಗೆ ಇದೇ ವೇಳೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ತಂತ್ರಜ್ಞಾನ ಬಳಕೆ ಅನುಕೂಲದ ಜೊತೆಗೆ ಅನಾನುಕೂಲಗಳನ್ನು ತಂದೊಡ್ಡುತ್ತಿದೆ ಎಂದರು.

ರಾಜ್ಯದಲ್ಲಿ ಪಂಚಖಾತ್ರಿ ಯೋಜನೆಗಳ ಮೂಲಕ 1.04 ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ರವಾನಿಸಲಾಗಿದೆ ಎಂದು ಯೋಜನೆ ಫಲಾನುಭವಿಗಳ ಬಗ್ಗೆ ವಿವರಣೆ ನೀಡಿದರು. 2024-25ನೇ ಸಾಲಿನ ವಿದೇಶಿ ಹೂಡಿಕೆಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. 50,107 ಕೋಟಿ ವಿದೇಶಿ ನೇರ ಹೂಡಿಕೆ ರಾಜ್ಯದಲ್ಲಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದಲ್ಲೇ ಶೇ.51ರಷ್ಟು ಹೂಡಿಕೆ ಪಾಲನ್ನು ಹೊಂದಿವೆ ಎಂದರು. ಹಿಂದಿನ ಸರ್ಕಾರ ವಿದ್ಯುತ್‌ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು, ನಮ ಸರ್ಕಾರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನವೀಕೃತ ಇಂಧನವೇ 24 ಸಾವಿರ ಮೇಗಾವ್ಯಾಟ್‌ ನಷ್ಟವಾಗಿದೆ.

ತಲಾ ಆದಾಯದಲ್ಲೂ ಕಳೆದ 10 ವರ್ಷದಲ್ಲಿ ಶೇ.101ರಷ್ಟು ಸಾಧನೆ ಮಾಡಲಾಗಿದೆ. ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸಲು ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯಲ್ಲಿ ನಂದಿನ ಬ್ರಾಂಡ್‌ನ 175ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.

ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 8 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ನಿರುದ್ಯೋಗದ ಪ್ರಮಾಣ ದೇಶದಲ್ಲಿ ಶೇ.7ರಷ್ಟಿದ್ದರೆ, ರಾಜ್ಯದಲ್ಲಿ ಶೇ.2.7ರಷ್ಟಿದೆ. ಶೇ.60ರಷ್ಟು ಜೈವಿಕ ತಂತ್ರಜ್ಞಾನ ಕಂಪನಿಗಳು ರಾಜ್ಯದಲ್ಲಿವೆ. ರಫ್ತಿನಲ್ಲಿ ಶೇ.58ರಷ್ಟು ಕೊಡುಗೆ ನೀಡುತ್ತಿದೆ. ಐಟಿ, ಹಣಕಾಸು, ಆತಿಥ್ಯ, ರಿಯಲ್‌ ಎಸ್ಟೇಟ್‌ ನಲ್ಲಿ, ಕೃಷಿಯಲ್ಲಿ ಕಾಫಿ, ಎಣ್ಣೆಕಾಳು, ರಾಗಿ ಸೇರಿ ಅನೇಕ ಉತ್ಪನ್ನಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿಕೊಂಡರು.

ಜನರಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳನ್ನು ತಮ ಸರ್ಕಾರ ಆಯೋಜಿಸುತ್ತಲೆ ಇದೆ. ವಾಣಿಜ್ಯ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಗೊಳಿಸಲಾಗಿದ್ದು, ಹೆಸರಾಯಿತು ಕನ್ನಡ ಉಸಿರಾಯಿತು ಕನ್ನಡ ಅಭಿಯಾನ ನಡೆಸಲಾಗಿದೆ. ವಿಧಾನಸೌಧದ ಬಳಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಕನ್ನಡಕ್ಕೆ ಈ ವರ್ಷ ಬಾನುಮುಷ್ತಾಕ್‌ ಮತ್ತು ದೀಪಾಬಸ್ತಿ ಬೂಕರ್‌ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಕನ್ನಡವನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಸರಿಸಿದರು.
ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ನಾಡಿನ ಅಸೀತೆಗಾಗಿ ನಡೆದ ಗೋಕಾಕ್‌ ಚಳುವಳಿಗಾರರನ್ನು ಸರಿಸಿಕೊಳ್ಳುವುದು ಅನಿವಾರ್ಯ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕರಾದ ರಿಜ್ವಾನ್‌ ಅರ್ಷದ್‌, ಗಣೇಶ್‌ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಬಿ.ಜಿ.ಪಾಟೀಲ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಡಿಜಿಪಿ ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ಕಲಬುರಗಿ ಜಲ್ಲೆಯ ಸಮಸ್ತ ಅಭಿವೃದ್ದಿಗೆ ನೀಲಿ ನಕ್ಷೆ ರೆಡಿಯಾಗಿದೆ : ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ, ನ.1– ಕಲಬುರಗಿ ಜಲ್ಲೆಯ ಸಮಸ್ತ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಾಗಿದ್ದು ಅದರ ಅಡಿಯಲ್ಲಿ ಮುಂದಿನ ವರ್ಷದೊಳಗೆ ಜಿಲ್ಲೆಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದ ಗಂಜ್‌ ಪ್ರದೇಶದಲ್ಲಿರುವ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲಬುರಗಿ ಜಿಲ್ಲೆಯಲ್ಲಿ ನವೋದ್ಯಮಕ್ಕೆ ಉತ್ತೇಜನ, ಪ್ರವಾಸೋದ್ಯಮ ಅಭಿವೃದ್ದಿ, ಯುವ ಸಬಲೀಕರಣ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆ ಹೊಂದುವ ಸಮಗ್ರ ಅಭಿವೃದ್ದಿಗಾಗಿ ನವ ಕಲಬುರಗಿ ನಿರ್ಮಾಣದ ನೀಲಿನಕ್ಷೆ ತಯಾರಾಗಿದ್ದು ಮುಂದಿನ ಎರಡು ವಾರದಲ್ಲಿ ಸಾರ್ವಜನಿಕರ ಮುಂದೆ ಇಡಲಿದ್ದೇವೆ ಎಂದು ಅವರು ಹೇಳಿದರು.

ಕಲಬುರಗಿ ಜಿಲ್ಲೆಯನ್ನು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ಅಡಿಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್‌, ಉದ್ಯಮಶೀಲತೆ ಕ್ಷೇತ್ರಗಳ ಅಭಿವೃದ್ದಿ ಪಡಿಸಲಾಗುವುದು ಎಂದರು.ಕನ್ನಡಿಗರು ಕನ್ನಡವನ್ನು ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ಕನ್ನಡವನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ. ಕನ್ನಡಿಗರ ಸೌಹಾರ್ದತೆಯೇ ಕರ್ನಾಟಕದ ಮಾನವ ಸಂಪನೂಲದ ಬಗ್ಗೆ ವಿಶ್ವದಲ್ಲೇ ಹೆಚ್ಚಿನ ಗೌರವವಿದೆ ಎಂದು ಹೇಳಿದರು.

ಜರ್ಮನ್‌ ಮೂಲದ ಮರ್ಸಿಡೀಸ್‌‍ ಬೆಂಜ್‌ ಅಧ್ಯಕ್ಷರು ತಾವು ಕರ್ನಾಟಕಕ್ಕೆ ಹೋಗಿಬಂದ ಮೇಲೆ ಹೊಸ ಚೈತನ್ಯ ಮೂಡುತ್ತದೆ. ಬೆಂಗಳೂರಿನ ತಮ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕೆಲಸ ಮಾಡುವವರು ಜರ್ಮನಿಯನ್ನು ಸುಲಲಿತವಾಗಿ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು ಅದನ್ನು ನೋಡಿ ಖುಷಿಯಾಯಿತು ಎಂದು ಮಾಧ್ಯಮಗಳ ಸಂದರ್ಶನವೊಂದರಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಘಟನೆಯನ್ನು ಮೆಲುಕು ಹಾಕಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದ ಜಿಡಿಪಿಗೆ ಬೆಂಗಳೂರು ಶೇ.40 ಕೊಡುಗೆ ನೀಡಿದ್ದರೆ, ದಕ್ಷಿಣಕನ್ನಡ ಶೇ.4.5, ಬೆಂಗಳೂರು ಗ್ರಾಮೀಣ ಶೇ.1 ಹಾಗೂ ಕಲಬುರಗಿ ಶೇ.1.9 ಕೊಡುಗೆ ನೀಡುತ್ತಿವೆ. ನವೋದ್ಯಮ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ದಿ, ಉದ್ಯೋಗ ಸೃಷ್ಟಿ, ಮಾನವ ಸಂಪನೂನ ಬೆಳವಣಿಗೆ, ಕೌಶಲ್ಯ ಅಭಿವೃದ್ದಿ, ಆವಿಷ್ಕಾರ ಕೇಂದ್ರ, ಕೃಷಿ ವಲಯದ ಸ್ಥಿರತೆ, ಪ್ರವಾಸೋದ್ಯಮದ ಬಲಪಡಿಸುವ ಗುರಿಯೊಂದಿಗೆ ನವಕಲಬುರಗಿಯನ್ನು ಅಭಿವೃದ್ದಿಪಡಿಸಲಾಗುವುದು ಎಂದರು.

ಕಲಬುರಗಿಯ ಜಿಡಿಪಿಯನ್ನು ಶೇ.1.9 ನಿಂದ ಶೇ.2.15ಗೆ ಎತ್ತರಿಸಲು ಪ್ರಯತ್ನಿಸಲಾಗುವುದು. ಬಿಯಾಂಡ್‌ ಬೆಂಗಳೂರು ಕಾರ್ಯಕ್ರಮ ಅಡಿಯಲ್ಲಿ ಬೆಂಗಳೂರು ಹೊರತುಪಡಿಸಿ ಕಲಬುರಗಿಯಲ್ಲಿ ನವೋದ್ಯಮದ ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.

ಆಂಧ್ರಪ್ರದೇಶದ ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ, 10 ಮಂದಿ ಸಾವು

ಹೈದರಾಬಾದ್‌,ನ.1-ಏಕಾದಶಿ ಪ್ರಯುಕ್ತ ಭಾರೀ ಸಂಖ್ಯೆಯ ಭಕ್ತರು ಸೇರುವ ಹಿನ್ನೆಲೆಯಲ್ಲಿ ಏಕಾಏಕಿ ನೂಕುನುಗ್ಗಲಿಂದ ಉಂಟಾದ ಕಾಲ್ತುಳಿತದಲ್ಲಿ 10 ಮಂದಿ ಭಕ್ತರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಇತಿಹಾಸ ಪ್ರಸಿದ್ದ ಶ್ರೀಕಾಕುಳಂನಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಬಗ್ಗೆ ದಿಗ್ಬ್ರಾಂತಿ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಶ್ರೀಕಾಕುಳಂನ ಕಾಸಿಬುಗ್ಗಾದಲ್ಲಿರುವ ಇತಿಹಾಸ ಪ್ರಸಿದ್ದ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಇಂದು ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಭಕ್ತರು ಸುತ್ತಮುತ್ತಲ ಭಾಗಗಳಿಂದ ಆಗಮಿಸಿದ್ದರು.

ಏಕಾದಶಿ ಮತ್ತು ಶನಿವಾರದ ದಿನ ವೆಂಟೇಶ್ವರ ಸ್ವಾಮಿಯ ದರ್ಶನ ಪಡೆದರೆ ಬಯಸಿದ್ದೆಲ್ಲವೂ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರಿದ್ದರು.

ದೇವಸ್ಥಾನಕ್ಕೆ ತೆರಳುವ ಪ್ರವೇಶದ್ವಾರವು ಕಡಿದಾಗಿದ್ದು ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಏಕಾಏಕಿ ನೂಕುನುಗ್ಗಲು ಉಂಟಾಯಿತು. ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದು, ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆ್ಯಂಬುಲೆನ್‌್ಸ ವೈದ್ಯರ ತಂಡ ಆಗಮಿಸಿ ಗಾಯಾಳುಗನ್ನು ಶ್ರೀಕಾಕುಳಂನಲ್ಲಿರುವ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು. ದರ್ಶನ ಪಡೆಯುವ ಧಾವಂತದಲ್ಲಿ ನಾ ಮುಂದು, ತಾ ಮುಂದು ಎಂಬಂತೆ ಒಳಗಡೆ ಪ್ರವೇಶಿಸಲು ಮುಗಿಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ತುರ್ತು ಸಿಬ್ಬಂದಿ ಹರಸಾಹಸಪಟ್ಟರು. ಗಾಯಾಳುಗಳನ್ನು ತಕ್ಷಣವೇ ಆ್ಯಂಬುಲೆನ್‌್ಸ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರಪ್ರದೇಶದ ಕೃಷಿ ಸಚಿವ ಕೆ.ಅಚ್ಚನಾಯ್ಡು ದೇವಸ್ಥಾನಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು, ಆಡಳಿತ ಮಂಡಳಿ, ಜಿಲ್ಲಾಡಳಿತ, ರಕ್ಷಣಾ ತಂಡ ಮತ್ತಿತರರು ಶಾಂತ ರೀತಿಯಲ್ಲಿರುವಂತೆ ಮನವಿ ಮಾಡಿಕೊಂಡರು.

ಇದೀಗ ದೇವಸ್ಥಾನದಲ್ಲಿ ಪೊಲೀಸ್‌‍ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಯಾರೂ ಬರಬಾರದೆಂದು ಮನವಿ ಮಾಡಿದ್ದಾರೆ. ಅಲ್ಲದೆ ತಾತ್ಕಾಲಿಕವಾಗಿ ದೇವಸ್ಥಾನದಲ್ಲಿ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ.

ನಾಯ್ಡು ಸಂತಾಪ:
ಘಟನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿರುವ ನಾಯ್ಡು, ಇದೊಂದು ಹೃದಯವಿದ್ರಾವಕ ಘಟನೆ. ಇದಕ್ಕೆ ಯಾವ ರೀತಿ ಸಂತಾಪ ಸೂಚಿಸಬೇಕು ಎಂಬುದಕ್ಕೆ ನನ್ನ ಬಳಿ ಪದಗಳಿಲ್ಲ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸೂಚನೆ ನೀಡಲಾಗಿದೆ.

ಶೀಘ್ರದಲ್ಲೇ ಆಹಾರ ನಿಗಮದ 386 ನೂತನ ಸಿಬ್ಬಂದಿ ನೇಮಕಾತಿ ಪತ್ರ ವಿತರಣೆ

ಬೆಂಗಳೂರು,ನ.1- ಆಹಾರ ನಿಗಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆಹಾರ ನಿಗಮದ 386 ನೂತನ ಸಿಬ್ಬಂದಿಯ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ವಸಂತನಗರದ ಅಬ್ದುಲ್‌ಕಲಾಂ ಭವನದಲ್ಲಿ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 52ನೇ ವರ್ಷದ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ನಿಮಗದಲ್ಲಿ 1500 ಸಾವಿರ ಸಿಬ್ಬಂದಿ ಇದ್ದರು. 200ರಿಂದ 250ಕ್ಕೆ ಇಳಿದಿದೆ. ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿಗಳು ಈ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿದ್ದು ಕೆಲವೇ ದಿನಗಳಲ್ಲಿ ಸಿಬ್ಬಂದಿಗೆ ನೇಮಕಾತಿಪತ್ರ ನೀಡಲಾಗುವುದು ಎಂದರು.

ಆಹಾರ ನಿಗಮ ಕಳೆದ ವರ್ಷಕ್ಕಿಂತ ಈ ವರ್ಷ ಎಂ ಎಸ್‌‍ ಪಿ ಯೋಜನೆಯಡಿ ಆಹಾರ ದಾನ್ಯಗಳ ಖರೀದಿ ಹೆಚ್ಚಾಗಿದೆ. ಮನುಷ್ಯನಿಗೆ ಆರೋಗ್ಯಕರವಾದ ರಾಗಿ ಮತ್ತು ಜೋಳ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ಜನರಿಗೆ ವಿತರಣೆಗೆ ಸಹಕಾರಿಯಾಗಿದೆ ಹಾಗೇಯೇ ಅದರಿಂದ ಬರುವ ಕಮೀಷನ್‌ ನಿಂದ ನಿಗಮದ ನಿರ್ವಹಣೆಗೂ ಸಹಕಾರಿಯಾಗಿದೆ ಎಂದರು.

ನಿಗಮದ ಅಧ್ಯಕ್ಷ ಬಿ.ಜಿ ಗೋವಿಂದಪ್ಪ ಮಾತನಾಡಿ, ದೇವರಾಜ ಅರಸು ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಈ ನಿಗಮದ ಸ್ಥಾಪನೆಗೆ ಸಹಕಾರಿಯಾದರು. ಇಂದಿಗೆ ನಿಗಮ 52 ವಸಂತಗಳು ಪೂರೈಸಿದೆ.

ಈ ನಿಗಮದಿಂದ ರಾಗಿ ಭತ್ತ ಜೋಳವನ್ನು ಖರೀದಿಸಿ ಅವನ್ನು ರಾಜ್ಯದ ಜನರಿಗೆ ನೀಡಲು ಸಹಕಾರಿಯಾಗಿದೆ ಆಹಾರ ಧನ್ಯವಾದಗಳ ಖರೀದಿಗೆ ರಾಜ್ಯದಾದ್ಯಂತ ಖರೀದಿ ಕೇಂದ್ರ ಗಳನ್ನು ಸ್ಥಾಪಿಸಿ ಅದರಿಂದ ರೈತರಿಗೆ ಬಲ ನೀಡಿದರು ಈ ನಿಗಮಕ್ಕ 386 ನೂತನ ಸಿಬ್ಬಂದಿ ವರ್ಗದವರನ್ನು ನೇಮಕಾತಿ ಮಾಡಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದರಾದ ಚಂದ್ರಪ್ಪ, ಆಯುಕತ್ತರಾದ ವಿ.ವಿ.ಜೋತ್ಸನಾ, ನಿಗಮದ ನಿರ್ದೇಶಕರಾದ ಕೆ.ಜಗದೀಶ್‌, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್‌.ನಟರಾಜ್‌, ವ್ಯವಸ್ಥಾಪಕರಾದ ಮಂಜುನಾಥ್‌,ರಾಘವೇಂದ್ರ, ವೈದ್ಯರಾದ ಆಂಜನಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ಬೆಂಗಳೂರು,ನ.1– ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನೇರಿ ಮಠದ ಪೀಠಾಧಿಪತಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ರಾಜ್ಯಾದ್ಯಂತ ಬಸವ ಅಭಿಯಾನದ ನೇತೃತ್ವ ವಹಿಸಿದ್ದ 300ಕ್ಕೂ ಹೆಚ್ಚು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಅಶ್ಲೀಲ ಮತ್ತು ಮಾನಹಾನಿಕರ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನೇರಿ ಮಠಾಧಿಪತಿಗಳ ವಿರುದ್ಧ 1 ಕೋಟಿ ರೂ.ಗಳ ಮಾನಹಾನಿ ಮೊಕದ್ದಮೆ ಹೂಡಿದೆ.

ಏತನಧ್ಯೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಗ್ಗೆ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡದಂತೆ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ನಿರ್ಬಂಧಿಸಿ, ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬೆಂಗಳೂರಿನ 30ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎನ್‌ಆರ್ಮಧು ಅವರು ವಿಚಾರಣೆ ನಡೆಸಿದರು.ಅರ್ಜಿಯ ಮುಂದಿನ ವಿಚಾರಣೆವರೆಗೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಸಾರ್ವಜನಿಕವಾಗಿ ಹಾಗೂ ಮುದ್ರಣ ಮಾಧ್ಯಮ, ಡಿಜಿಟಲ್‌ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮಾನಹಾನಿಕರ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಕಾಡಸಿದ್ದೇಶ್ವರ ಸ್ವಾಮಿಗಳನ್ನು ನಿರ್ಬಂಧಿಸಿ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದರು. ಇದೇ ವೇಲೆ ಅರ್ಜಿ ಸಂಬಂಧ ಕಾಡಸಿದ್ದೇಶ್ವರ ಸ್ವಾಮೀಜಿಗೆ ನೋಟಿಸ್‌‍ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿದರು.ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಮಾತನಾಡಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಳೆದ ಎರಡು ತಿಗಂಗಳುಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಕಲಾವಿದರು ಸೇರಿ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಿಲ್ಲ. ಮನೆಯಲ್ಲಿನ ದೇವರನ್ನು ಹೊರಗೆ ಹಾಕಿ ಎನ್ನುತ್ತಿದ್ದಾರೆ.

ಇವರಿಗೆ ನಾನೇ ಬುದ್ಧಿ ಹೇಳಬೇಕು ಎಂದು ಕೆಲ ಅಸಂವಿಧಾನಿಕ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಲಿಂಗಾಯತ ಮಠಾಧೀಶರು ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಜಗಳ, ಮ್ಯಾನೇಜರ್‌ನನ್ನು ಕೊಲೆ ಮಾಡಿದ ನೌಕರ

ಬೆಂಗಳೂರು,ನ.1-ಕ್ಷುಲ್ಲಕ ವಿಚಾರಕ್ಕೆ ಮ್ಯಾನೇಜರ್‌ ಹಾಗೂ ನೌಕರನ ನಡುವೆ ಜಗಳವಾಗಿ ಮ್ಯಾನೇಜರ್‌ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋವಿಂದರಾಜ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಚಿತ್ರದುರ್ಗ ಮೂಲದ ಭೀಮೇಶ್‌ಬಾಬು (41) ಕೊಲೆಯಾದ ಮ್ಯಾನೇಜರ್‌.

ಮೂಲತಃ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಆರೋಪಿ ಸೋಮಲವಂಶಿ (24) ಪೊಲೀಸ್‌‍ ಠಾಣೆಗೆ ಹೋಗಿ ಶರಣಾಗಿದ್ದಾನೆ.ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಚಲನಚಿತ್ರಗಳ ವಿಡಿಯೋ ಮತ್ತು ಫೋಟೋಗಳನ್ನು ಸಂಗ್ರಹಿಸಿ ಎಡಿಟಿಂಗ್‌ ಮಾಡಿ ಹಾರ್ಡ್‌ಡಿಸ್ಕ್‌ನಲ್ಲಿ ಹಾಕಿ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ನೀಡಲು ಸರಸ್ವತಿ ನಗರದಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡಲಾಗುತ್ತದೆ.

ಈ ಕಚೇರಿಯಲ್ಲಿ ಸೋಮಲವಂಶಿ ಸೇರಿದಂತೆ ಐದಾರು ಮಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ನಾಯಂಡಹಳ್ಳಿಯಲ್ಲಿ ರೂಂ ಮಾಡಿಕೊಂಡು ವಾಸವಿದ್ದಾರೆ. ಭೀಮೇಶ್‌ಬಾಬು ಅವರು ಮ್ಯಾನೇಜರ್‌ ಆಗಿದ್ದರು. ಈ ಕಚೇರಿಗೆ ಹೊಂದಿಕೊಂಡಿರುವ ಮನೆಯಲ್ಲೇ ವಾಸಿಸುತ್ತಿದ್ದರು.

ನಿನ್ನೆ ರಾತ್ರಿ ನೌಕರರು ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಎಡಿಟಿಂಗ್‌ ಕೆಲಸವಿದ್ದ ಕಾರಣ ಕಚೇರಿಯಲ್ಲಿ ಸೋಮಲವಂಶಿ ಮತ್ತು ಭೀಮೇಶ್‌ಬಾಬು ಇಬ್ಬರೇ ಇದ್ದರು. ಬೆಳಗಿನ 1.30ರ ಸುಮಾರಿಗೆ ಸೋಮಲವಂಶಿ ಲೈಟ್‌ ಆನ್‌ ಅಂಡ್‌ ಆಫ್‌ ಮಾಡುತ್ತಲೇ ಇದ್ದನು.
ಇದರಿಂದ ಕೋಪಗೊಂಡ ಭೀಮೇಶ್‌ಬಾಬು ಅವರು ಏಕೆ ಹೀಗೆ ಮಾಡುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ನಂತರ ಮ್ಯಾನೇಜರ್‌ ಕಚೇರಿಗೆ ಹೊಂದಿಕೊಂಡಿರುವ ತಮ ಮನೆಗೆ ಹೋಗಿದ್ದಾರೆ. ಇಷ್ಟಕ್ಕೆ ಸುಮನಾಗದ ಸೋಮಲವಂಶಿ ಅವರ ಹಿಂದೆಯೇ ಹೋಗಿ ಮನೆಯಲ್ಲಿದ್ದ ಖಾರದಿಪುಡಿ ಎರಚಿ ಡಂಬಲ್‌್ಸನಿಂದ ತಲೆಗೆ ಹೊಡೆದಾಗ ಗಾಯವಾಗಿ ರಕ್ತ ಸೋರಿಕೆಯಾಗಿದೆ.ಇದರಿಂದ ಆರೋಪಿ ಗಾಬರಿಯಾಗಿ ನಾಯಂಡಹಳ್ಳಿಯಲ್ಲಿದ್ದ ತನ್ನ ಸ್ನೇಹಿತನಿಗೆ ಮೊಬೈಲ್‌ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ನೇಹಿತ ಬಂದು ನೋಡಿದಾಗ ತೀವ್ರ ರಕ್ತ ಸೋರಿಕೆಯಾಗಿರುವುದು ಗಮನಿಸಿ 108 ಗೆ ಕರೆ ಮಾಡಿದ್ದಾನೆ.

ಅಂಬ್ಯುಲೆನ್ಸ್ ಸಿಬ್ಬಂದಿ ಬಂದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಪೊಲೀಸ್‌‍ ಠಾಣೆಗೆ ಹೋಗಿ ನಡೆದ ವಿಷಯವನ್ನು ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.ಗೋವಿಂದರಾಜನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.