Home Blog Page 1826

ರಾಜ್ಯದ 1673 ಸಣ್ಣ ಕೆರೆಗಳಲ್ಲಿ ಭರ್ತಿಯಾಗಿದ್ದು ಕೇವಲ 428 ಮಾತ್ರ

ಬೆಂಗಳೂರು,ನ.10-ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯಿಂದಾಗಿ ರಾಜ್ಯದ 104 ಸಣ್ಣ ಕೆರೆಗಳಿಗೆ ನೀರಿಲ್ಲದೆ ಬತ್ತಿ ಹೋಗಿವೆ. ಅದರಲ್ಲೂ ಕೋಲಾರ ಜಿಲ್ಲೆಯ 31 ಹಾಗೂ ಬೀದರ್ ಜಿಲ್ಲೆಯ 33 ಕೆರೆಗಳಿಗೆ ನೀರಿಲ್ಲ. ರಾಜ್ಯದಲ್ಲಿ ಈ ಎರಡು ಜಿಲ್ಲೆಯಲ್ಲಿ ಹೆಚ್ಚು ಕೆರೆಗಳು ನೀರಿಲ್ಲದೆ ಒಣಗಿವೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನ.4ರವರೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿ 48 ಕೆರೆಗಳಿಗೆ ನೀರು ಬಂದಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ 56 ಕೆರೆಗಳಿಗೆ ನೀರೇ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಒಟ್ಟು 104 ಕೆರೆಗಳಿಗೆ ಮುಂಗಾರು ಹಂಗಾಮಿನಲ್ಲಿ ನೀರೇ ಬಂದಿಲ್ಲ.

ರಾಜ್ಯದಲ್ಲಿ 3673 ಕೆರೆಗಳಿದ್ದು, 428 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಅದರಲ್ಲೂ ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ.

ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

1297 ಕೆರೆಗಳಲ್ಲಿ ಶೇ.30ರಷ್ಟು ನೀರು ಬಂದಿದ್ದರೆ 991 ಕೆರೆಗಳಲ್ಲಿ ಶೇ.50ರಷ್ಟು ನೀರು ಸಂಗ್ರಹವಾಗಿದೆ. 853 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ದಕ್ಷಿಣ ಕರ್ನಾಟಕದ 165 ಕೆರೆಗಳು ಪೂರ್ಣವಾಗಿ ತುಂಬಿದ್ದರೆ, ಉತ್ತರ ಕರ್ನಾಟಕದ 263 ಕೆರೆಗಳು ತುಂಬಿವೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೆಲವು ಕೆರೆಗಳಿಗೆ ಅಲ್ಪಪ್ರಮಾಣದ ನೀರು ಕೂಡ ಬಂದಿದೆ.

ಮುಂಗಾರು ಮಳೆಯಂತೆ ಹಿಂಗಾರು ಕೂಡ ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಬರಪರಿಸ್ಥಿತಿ ಮುಂದುವರೆದಿದೆ. ಹೀಗಾಗಿ ಸಣ್ಣಪುಟ್ಟ ಕೆರೆಗಳು ಕೂಡ ಭರ್ತಿಯಾಗುವ ಸಾಧ್ಯತೆ ವಿರಳ. ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಪ್ರಮುಖ ಜಲಾಶಯಗಳು ಭರ್ತಿಯಾಗಿಲಿಲ್ಲ. ಹೀಗಾಗಿ ನೀರಾವರಿ ಬೆಳೆಗಳಿಗೆ ತೊಂದರೆ ಉಂಟಾಗಿದೆ.

ಒತ್ತಡಕ್ಕೆ ಮಣಿದು ರಾಜಕೀಯ ನಿವೃತ್ತಿ ಘೋಷಿಸಿಲ್ಲ : ಡಿ.ವಿ.ಸದಾನಂದಗೌಡ

ಬೆಂಗಳೂರು,ನ.10-ರಾಜಕೀಯ ನಿವೃತ್ತಿ ಎಂಬುದು ನನ್ನ ಸ್ವಯಂ ನಿರ್ಧಾರವೇ ಹೊರತು ಯಾರೊಬ್ಬರ ಒತ್ತಡಕ್ಕೆ ಮಣಿದು ನಾನು ಇಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎಂಬುದು ಆಧಾರರಹಿತ ಹೇಳಿಕೆ. ಇದಕ್ಕೆ ನಾನು ಉತ್ತರ ಕೊಡಬೇಕಾದ ಅಗತ್ಯವೂ ಇಲ್ಲ. ನಾನು ಹೃದಯಾಂತರಾಳದಿಂದ ತೆಗೆದುಕೊಂಡ ನಿರ್ಧಾರವೇ ಹೊರತು ಇದರಲ್ಲಿ ಬಾಹ್ಯ ಒತ್ತಡ ಇಲ್ಲ ಎಂದು ಪುನರುಚ್ಚರಿಸಿದರು.

ನಾನು ಹನುಮಂತನಂತೆ ಎದೆ ಬಗೆದು ಶ್ರೀರಾಮನನ್ನು ತೋರಿಸಲು ಆಗುವುದಿಲ್ಲ. ಪಕ್ಷವು ಎಲ್ಲವನ್ನು ಕೊಟ್ಟಿರುವಾಗ ಯುವಕರಿಗೆ ಮನ್ನಣೆ ಸಿಗಬೇಕೆಂಬ ಕಾರಣಕ್ಕಾಗಿ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಇನ್ನು ಮುಂದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನಕೊಡುವೆ ಎಂದು ಹೇಳಿದರು.

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ನನಗೆ ರಾಜಕೀಯ ನಿವೃತ್ತ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರು ಒತ್ತಡ ಹಾಕಿದ್ದರು ಎಂಬುದು ಶುದ್ದ ಸುಳ್ಳು. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೊದಲ ಬಾರಿಗೆ ಶಾಸಕ ಸ್ಥಾನದಿಂದ ಹಿಡಿದು ಮುಖ್ಯಮಂತ್ರಿ ,ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷ ಕೊಟ್ಟಿದೆ. ಎಲ್ಲವನ್ನು ಅನುಭವಿಸಿರುವಾಗ ಉಳಿದಿರುವ ಅವಯಲ್ಲಿ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳುತ್ತೇನೆ ಎಂದರು.

ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವ ಆಲೋಚನೆಯನ್ನು ಎಂಥದ್ದೇ ಸಂದರ್ಭದಲ್ಲೂ ಮಾಡಿಲ್ಲ. ನಾನು ನಂಬಿರುವ ಸಿದ್ದಾಂತ ಬೇರೆ ಪಕ್ಷ ಸಿದ್ದಾಂತ ನನಗೆ ಹೊಂದಾಣಿಕೆಯಾಗುವುದಿಲ್ಲ. ನನ್ನ ಕೊನೆಯುಸಿರು ಇರುವವರೆಗೂ ಬಿಜೆಪಿಯೇ ನನ್ನ ಆಸ್ತಿ ಎಂದು ಪ್ರತಿಪಾದಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನನ್ನ ಅಭ್ಯಂತರವಿಲ್ಲ. ಪಕ್ಷ ಏನು ಸೂಚನೆ ಕೊಡುತ್ತದೆಯೋ ಅದನ್ನು ಶಿರಾಸವಹಿಸಿ ಮಾಡುವೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ ಎಂದರು.

ಪ್ರಧಾನಿ ನರೇಂದ್ರಮೋದಿ ಅವರು ಮತ್ತೊಮ್ಮೆ ದೇಶವನ್ನು ಮುನ್ನಡೆಸಬೇಕು ಎಂಬುದು ಇಡೀ ಭಾರತೀಯರ ದೃಢಸಂಕಲ್ಪವಾಗಿದೆ. ಅದಕ್ಕಾಗಿ ನಾನು ಕೂಡ ನನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತೇನೆ. ಯಾವ ಸಿದ್ದಾಂತವನ್ನು ನಂಬಿ ಬಂದಿದ್ದೇನೋ ಅದೇ ಸಿದ್ದಾಂತಕ್ಕೆ ಬದ್ದನಾಗಿ ಮುನ್ನಡೆಯುತ್ತೇನೆ. ಗಾಳಿ ಸುದ್ದಿಗೆಲ್ಲ ಕಿವಿಗೊಡುವ ಅಗತ್ಯವಿಲ್ಲ ಎಂದು ಸದಾನಂದಗೌಡ ಹೇಳಿದರು.

ಒಳ ಉಡುಪುನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯರ ಬಂಧನ, 5 ಕೆಜಿ ಚಿನ್ನ ವಶ

ಬೆಂಗಳೂರು,ನ.10- ಮಹಿಳೆಯರ ಒಳ ಉಡುಪು, ಪರ್ಸ್‍ಗಳಲ್ಲಿ ಅಕ್ರಮವಾಗಿ ಸುಮಾರು ಮೂರು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕುವೈತ್, ಸಾರ್ಜಾ, ದುಬೈ, ಅಬುದಾಬಿ, ಬ್ಯಾಂಕಾಕ್‍ನಿಂದ ವಿಮಾನದಲ್ಲಿ ಬಂದಿದ್ದ ಆರೋಪಿಗಳು ನಿಲ್ದಾಣದಿಂದ ಹೊರಗೆ ಹೋಗುವಾಗ ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ 5 ಕೆಜಿ 315 ಗ್ರಾಂ ತೂಕದ ಚಿನ್ನ ಸಿಕ್ಕಿದೆ. ಕೆಲವನ್ನು ಪೇಸ್ಟ್ ರೂಪದಲ್ಲಿ, ಇನ್ನೂ ಕೆಲವನ್ನು ತಂತಿಯ ರೂಪದಲ್ಲಿ ಅಡಗಿಸಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಆರೋಪಿ ಮಹಿಳೆಯೊಬ್ಬರು ಔಷಧ ತುಂಬುವ ಕ್ಯಾಪ್ಸಿಲ್‍ನಲ್ಲಿ ಚಿನ್ನ ತುಂಬಿ ತಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ಪ್ರಯಾಣಿಕರ ಪರ್ಸ್‍ಗಳಲ್ಲೂ ಅರ್ಧ ಕೆಜಿಗೂ ಹೆಚ್ಚು ಚಿನ್ನ ಸಿಕ್ಕಿದೆ. ಅನುಮಾನ ಬಾರದ ರೀತಿಯಲ್ಲಿ ಚಿನ್ನಕ್ಕೆ ಹಲವು ಲೇಪನಗಳನ್ನು ಬಳಸಲಾಗಿದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ಅದು ಚಿನ್ನ ಎಂಬುದು ತಿಳಿದು ಬಂದಿದೆ.

ಕೇರಳ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಚಿನ್ನ ಕಳ್ಳಸಾಗಾಣಿಕೆ ದಂಧೆ ನಡೆಯುತ್ತಿದ್ದು, ಆದರೆ, ಇದು ಈಗ ಬೆಂಗಳೂರಿಗೂ ವ್ಯಾಪಿಸಿದ್ದು, ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನು ಯಾರಿಗೆ ತಲುಪಿಸಲು ತರಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರೆಲ್ಲರೂ ಕಳ್ಳಸಾಗಾಣಿಕೆ ದಾರರ ಏಜೆಂಟ್‍ಗಳು ಎಂದು ಹೇಳಲಾಗುತ್ತಿದೆ.

ಲೋಕ ಚುನಾವಣೆಗೆ ಬಿಜೆಪಿ ರಣತಂತ್ರ, 12 ಹಾಲಿ ಸಂಸದರಿಗೆ ಕೊಕ್

ಬೆಂಗಳೂರು,ನ.10- ಮುಂಬರುವ 2024ರ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ಆರಂಭಿಸಿರುವ ಬಿಜೆಪಿ ತಯಾರಿಯ ಮೊದಲ ಭಾಗವಾಗಿ ಕೆಲ ಹಾಲಿ ಸಂಸದರಿಗೆ ಕೊಕ್ ನೀಡಲು ಪಕ್ಷ ಮುಂದಾಗಿದೆ. ಈಗಾಗಲೇ ಕೇಂದ್ರದ ಮಾಜಿ ಸಚಿವ ಹಾಗೂ ಡಿ.ವಿ.ಸದಾನಂದಾಗೌಡರು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಬೆನ್ನಲೇ ರಾಜ್ಯದ 12 ಹಾಲಿ ಸಂಸದರು ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಪಕ್ಷದ ವರಿಷ್ಠರು ಇತ್ತೀಚೆಗೆ ಡಿವಿಎಸ್ ಅವರನ್ನು ದೆಹಲಿಗೆ ಆಹ್ವಾನಿಸಿ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಮೂಲಕ ನೀಡಿದ ಸಂದೇಶವೀಗ ನಿಚ್ಚಳವಾಗಿದೆ. ಹಾಲಿ ಸಂಸದರಲ್ಲಿ ಯಾರೆಲ್ಲ, ಕಳಪೆ ಸಾಧನೆ, ವಯಸ್ಸು ಹಾಗೂ ಅನಾರೋಗ್ಯ ಕಾರಣಕ್ಕೆ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅವರು ತೋರಿರುವ ಕ್ಷಮತೆಯನ್ನು ಪರಿಗಣಿಸಿ ಹಾಗೂ ಕೆಲವು ಕ್ಷೇತ್ರಗಳಲ್ಲಿ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ಇರುವ ದೃಷ್ಟಿಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಇರಬಹುದು ಎಂದು ಹೇಳಲಾಗಿದೆ.

ಅವರಲ್ಲಿ ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ವರ, ಚಾಮರಾಜ ನಗರ ಸಂಸದ ಶ್ರೀನಿವಾಸ್ ಪ್ರಸಾದ್, ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗ್ಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮುಂತಾದವರು ಸೇರಿದ್ದಾರೆ. ಈ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಿದ್ದು, 75 ವರ್ಷ ದಾಟಿದ ಮತ್ತು ಪಕ್ಷದಲ್ಲಿ ಸಕ್ರಿಯವಾಗಿಲ್ಲದ ಕೆಲ ಸಂಸದರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.

ಹಾಲಿ ಸಂಸದರಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಪಕ್ಷದ ವಿರುದ್ದ ಬಂಡಾಯ ಚಟುವಟಿಕೆ ನಡೆಸದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿದೆ. ಇನ್ನೊಂದೆಡೆ ಈ ಬಾರಿ 12ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಯುವ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ಹೊಸ ಮುಖಗಳಿಗಾಗಿ ಈಗಾಗಲೇ ಹುಡುಕಾಟ ನಡೆದಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಮಾಜಿ ಸಿಎಂ ಸದಾನಂದ ಗೌಡ, ಚಿಕ್ಕಬಳ್ಳಾಪುರದ ಸಂಸದ ಬಚ್ಚೇಗೌಡ, ಕೋಲಾರ ಸಂಸದ ಮುನಿಸ್ವಾಮಿ, ಚಾಮರಾಜನಗರದ ಸಂಸದ ಶ್ರೀನಿವಾಸ ಪ್ರಸಾದ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ತುಮಕೂರು ಸಂಸದ ಜಿ.ಎಸ್.ಬಸವರಾಜು, ಕೊಪ್ಪಳದ ಸಂಸದ ಸಂಗಣ್ಣ ಕರಡಿ, ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

ನಳೀನ್‍ಕುಮಾರ್ ಲೋಕಸಭೆಯಲ್ಲಿ ಮಂಗಳೂರು ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಮರ್ಪಕವಾಗಿ ಮುನ್ನಡೆಸದೇ ಇರುವುದು ನಳೀನ್‍ಕುಮಾರ್ ಕಟೀಲ್ ಅವರ ಮೇಲೆ ಬಿಜೆಪಿ ಹೈಕಮಾಂಡ್ ಮುನಿಸಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಸ್ವಕ್ಷೇತ್ರದಲ್ಲೇ (ದಕ್ಷಿಣ ಕನ್ನಡ) ಅವರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಗುಟ್ಟಾಗೇನೂ ಉಳಿದಿಲ್ಲ. ಹಾಗಾಗಿಯೇ, ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್‍ಕುಮಾರ್ ಹೆಗ್ಡೆಗೂ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಅಗ್ರೆಸ್ಸಿವ್ ಹಿಂದುತ್ವವವಾದನ್ನೇ ನೆಚ್ಚಿಕೊಂಡು ಬಂದಿದ್ದ ಅನಂತ್‍ಕುಮಾರ್ ಹೆಗ್ಡೆಯರಿಗೆ ಕೆಲವು ವಿಚಾರಗಳಲ್ಲಿ ಬಿಜೆಪಿ ಹೈಕಮಾಂಡ್ ಮೇಲೆ ಮುನಿಸು ಬಂದಿದೆ.

ಅತ್ತ ಹೈಕಮಾಂಡ್ ಕೂಡ ಇವರನ್ನು ಓಲೈಸಲು ಪ್ರಯತ್ನಿಸಿಲ್ಲ. ಪಕ್ಷದ ಸಭೆ, ಸಮಾರಂಭಗಳಿಂದ ಅವರಿಗೆ ಆಹ್ವಾನವನ್ನೂ ನೀಡದೇ ದೂರ ಇಟ್ಟಿದೆ. ಇತ್ತೀಚೆಗೆ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ಉತ್ತರ ಕನ್ನಡಕ್ಕೆ ಬಂದಾಗಲೂ ಅನಂತಕುಮಾರ್ ಹೆಗ್ಡೆಗೆ ಆಹ್ವಾನ ಇರಲಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.

ಕೇಂದ್ರದ ಹಾಲಿ ಸಚಿವೆ ಶೋಭಾ ಕರದ್ಲಾಂಜೆಗೂ ಟಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ರಾಜ್ಯ ರಾಜಕರಾಣದತ್ತ ಒಲವು ತೋರಿರುವ ಅವರು ಪಕ್ಷದ ರಾಜ್ಯಧ್ಯಕ್ಷರಾದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿಲ್ಲ. ಇದು ನಿಜವಾದರೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ ಸಿ.ಟಿ.ರವಿ ಅಭ್ಯರ್ಥಿಯಾಗುವ ಸಂಭವವಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಪ್ರಯೋಗಗಳನ್ನು ಮಾಡಿದರೂ ಬಿಜೆಪಿಗೆ ಗೆಲುವು ಸಿಕ್ಕಲಿಲ್ಲ ಎಂಬುದು ಬೇರೆ ಮಾತು. ಹಾಗಿದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಪ್ರಯೋಗವನ್ನು ಮಾಡಲು ಬಿಜೆಪಿ ನಿರ್ಧರಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ತಂತ್ರಗಾರಿಕೆಯನ್ನು ಅನುಸರಿಸಿದ್ದು ಸರಿಯಾಗಿದೇ ಇತ್ತು. ಆದರೆ, ರಾಜ್ಯದಲ್ಲಿ ಅದಾಗಲೇ ಬಿಜೆಪಿ ವಿರೋಧಿ ಅಲೆ ಪ್ರಬಲವಾಗಿದ್ದರಿಂದ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಕೆಲವು ಸಚಿವರು ಹಾಗೂ ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಇದ್ದಿದ್ದರಿಂದ, ಮೇಲಾಗಿ ಜನಾಭಿಪ್ರಾಯವವೂ ಅದೇ ಆಗಿದ್ದರಿಂದಾಗಿ ಬಿಜೆಪಿಯ ಪ್ರಯೋಗಗಳು ಫಲಿಸಲಿಲ್ಲ.

ಆದರೆ, ಲೋಕಸಭಾ ಚುನಾವಣೆಯಲ್ಲಿ ಹಾಗಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಪ್ರಧಾನಿ ಮೋದಿಯವರ ಪ್ರಭಾವ ಹೆಚ್ಚಾಗಿ ಕೆಲಸ ಮಾಡುತ್ತದೆ. ಅಲ್ಲಿ, ಗೆಲುವು ಬಿಜೆಪಿಗೆ ಕಟ್ಟಿಟ್ಟ ಬುತ್ತಿ. ಹಾಗಾಗಿ, ಈ ಬಾರಿಯೂ ಪ್ರಯೋಗಗಳಿಗೆ ಇನ್ನೂ ಅವಕಾಶವಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಯಾರ್ಯಾರಿಗೆ ಕೊಕ್?
ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ)
ರಮೇಶ್ ಜಿಗಜಿಣಗಿ (ವಿಜಯಪುರ)
ಮಂಗಳಾ ಅಂಗಡಿ (ಬೆಳಗಾವಿ)
ಪಿ.ಸಿ ಗದ್ದಿಗೌಡರ್ (ಬಾಗಲಕೋಟ್)
ಶಿವಕುಮಾರ್ ಉದಾಸಿ (ಹಾವೇರಿ)
ಜಿ.ಎಸ್ ಬಸವರಾಜ್ (ತುಮಕೂರು)
ಬಿ.ಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ)
ಡಿ.ವಿ ಸದಾನಂದಗೌಡ (ಬೆಂಗಳೂರು ಉತ್ತರ)
ಜಿ.ಎಂ ಸಿದ್ದೇಶ್ (ದಾವಣಗೆರೆ)
ನಳೀನ್ ಕುಮಾರ್ ಕಟೀಲ್ ( ದಕ್ಷಿಣ ಕನ್ನಡ )
ಅನಂತ ಕುಮಾರ್ ಹೆಗ್ಡೆ( ಉತ್ತರ ಕನ್ನಡ)
ಸಂಗಣ್ಣ ಕರಡಿ( ಕೊಪ್ಪಳ)

ಸಂಪೂರ್ಣ ಕಣ್ಣು ಕಸಿ ಮಾಡುವಲ್ಲಿ ಅಮೆರಿಕ ವೈದ್ಯರು ಯಶಸ್ವಿ

ವಾಷಿಂಗ್ಟನ್,ನ.10- ಇಡೀ ಕಣ್ಣಿನ ಸಂಪೂರ್ಣ ಕಸಿ ಮಾಡುವಲ್ಲಿ ನ್ಯೂಯಾರ್ಕ್ ವೈದ್ಯರು ಯಶಸ್ವಿಯಾಗಿದ್ದಾರೆ. ನ್ಯೂಯಾರ್ಕ್‍ನ ಶಸ್ತ್ರಚಿಕಿತ್ಸಕರ ತಂಡವು ವೈದ್ಯಕೀಯ ಪ್ರಗತಿ ಎಂದು ವಿವರಿಸಿದ ಪ್ರಕ್ರಿಯೆಯಲ್ಲಿ ಇಡೀ ಕಣ್ಣಿನ ಸಂಪೂರ್ಣ ಕಸಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಆದರೆ, ಇದರಿಂದ ರೋಗಿಯು ನಿಜವಾಗಿಯೂ ತನ್ನ ದೃಷ್ಟಿಯನ್ನು ಮರಳಿ ಪಡೆಯುತ್ತಾನೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ದಾನಿಗಳ ಮುಖದ ಭಾಗ ಮತ್ತು ಸಂಪೂರ್ಣ ಎಡಗಣ್ಣನ್ನು ತೆಗೆದು ಅದನ್ನು ಸ್ವೀಕರಿಸುವವರಿಗೆ ಕಸಿಮಾಡುವುದು ಈ ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ. ಕಳೆದ 2021ರಲ್ಲಿ ವಿದ್ಯುತ್ ಆಘಾತದಿಂದ ಬದುಕುಳಿದ 46 ವರ್ಷದ ಆರನ್ ಜೇಮ್ಸ್ ಎಂಬ ಕೆಲಸಗಾರನ ಮೇಲೆ ಈ ಪ್ರಯೋಗ ಮಾಡಲಾಗಿದೆ.

ನಾವು ಮೊದಲ ಯಶಸ್ವಿ ಸಂಪೂರ್ಣ ಕಣ್ಣಿನ ಕಸಿಯನ್ನು ಸಾಸಿದ್ದೇವೆ ಎಂಬುದು ಬಹಳ ಹಿಂದಿನಿಂದಲೂ ಅನೇಕರು ಯೋಚಿಸಿರುವ ಅದ್ಭುತ ಸಾಧನೆಯಾಗಿದೆ ಎಂದು 21 ಗಂಟೆಗಳ-ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಎಡ್ವರ್ಡೊ ರೋಡ್ರಿಗಸ್ ಹೇಳಿದರು.

ಕೆಸಿಆರ್ 59 ಕೋಟಿ ರೂ. ಆಸ್ತಿ ಒಡೆಯ

ಕಸಿ ಮಾಡಿದ ಎಡಗಣ್ಣು ಉತ್ತಮ ಆರೋಗ್ಯದ ಲಕ್ಷಣಗಳನ್ನು ತೋರಿಸಿದ್ದರೂ, ರೆಟಿನಾಕ್ಕೆ ನೇರ ರಕ್ತದ ಹರಿವು ಸೇರಿದಂತೆ, ಬೆಳಕನ್ನು ಸ್ವೀಕರಿಸಲು ಮತ್ತು ಮೆದುಳಿಗೆ ಚಿತ್ರಗಳನ್ನು ಕಳುಹಿಸಲು ಕಾರಣವಾಗಿದೆ, ಜೇಮ್ಸ ತನ್ನ ದೃಷ್ಟಿಯನ್ನು ಮರಳಿ ಪಡೆಯುತ್ತಾನೆ ಎಂಬುದು ಖಚಿತವಾಗಿಲ್ಲ.

ಅದೇನೇ ಇದ್ದರೂ, ಇದು ಒಂದು ದೊಡ್ಡ ವ್ಯವಹಾರವಾಗಿದೆ ಎಂದು 15 ವರ್ಷಗಳಿಂದ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೊಲೊರಾಡೋ ಆನ್‍ಶುಟ್ಜ್ ವೈದ್ಯಕೀಯ ಕ್ಯಾಂಪಸ್‍ನ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಕಿಯಾ ವಾಷಿಂಗ್ಟನ್ ತಿಳಿಸಿದ್ದಾರೆ.

ಚಿಕೂನ್ ಗುನ್ಯಾಗೆ ಲಸಿಕೆ ಕಂಡು ಹಿಡಿದ ಅಮೆರಿಕ

ವಾಷಿಂಗ್ಟನ್,ನ.10- ಸೊಳ್ಳೆಗಳಿಂದ ಹರಡುವ ಚಿಕೂನ್‍ಗುನ್ಯಾ ಸೋಂಕಿಗೆ ಅಮೆರಿಕ ವಿಶ್ವದ ಮೊದಲ ಲಸಿಕೆಯನ್ನು ಕಂಡು ಹಿಡಿದಿದೆ. ಯುರೋಪ್‍ನ ವಾಲ್ನೆವಾ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಯುಎಸ್ ಆರೋಗ್ಯ ಅಧಿಕಾರಿಗಳು ಅನುಮೋದನೆ ನಿಡಿದ್ದಾರೆ.

ಈ ಲಸಿಕೆಯನ್ನು ಇಕ್ಸ್‍ಚಿಕ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು, ಇದನ್ನು 18 ವರ್ಷ ಮೇಲ್ಪಟ್ಟವರ ಮೇಲೆ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಜ್ವರ ಮತ್ತು ತೀವ್ರವಾದ ಕೀಲು ನೋವನ್ನು ಉಂಟುಮಾಡುವ ಚಿಕೂನ್‍ಗುನ್ಯಾ ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಅಮೆರಿಕದ ಭಾಗದಲ್ಲಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ.

ಆದಾಗ್ಯೂ, ಚಿಕುನ್‍ಗುನ್ಯಾ ವೈರಸ್ ಹೊಸ ಭೌಗೋಳಿಕ ಪ್ರದೇಶಗಳಿಗೆ ಹರಡಿದೆ, ಇದು ರೋಗದ ಜಾಗತಿಕ ಹರಡುವಿಕೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದ್ದು, ಕಳೆದ 15 ವರ್ಷಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.

ಚಿಕೂನ್‍ಗುನ್ಯಾ ವೈರಸ್‍ನ ಸೋಂಕು ತೀವ್ರ ರೋಗ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ವಯಸ್ಸಾದ ವಯಸ್ಕರಿಗೆ ಮತ್ತು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಎಂದು ಹಿರಿಯ ಎಫ್‍ಡಿಎ ಅಧಿಕಾರಿ ಪೀಟರ್ ಮಾಕ್ರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ಇಂದಿನ ಅನುಮೋದನೆಯು ಪೂರೈಸದ ವೈದ್ಯಕೀಯ ಅಗತ್ಯವನ್ನು ತಿಳಿಸುತ್ತದೆ ಮತ್ತು ಸೀಮಿತ ಚಿಕಿತ್ಸಾ ಆಯ್ಕೆಗಳೊಂದಿಗೆ ಸಂಭಾವ್ಯ ದುರ್ಬಲಗೊಳಿಸುವ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪ್ರಗತಿಯಾಗಿದೆ. ಲಸಿಕೆಯನ್ನು ಒಂದು ಡೋಸ್‍ನಲ್ಲಿ ಚುಚ್ಚಲಾಗುತ್ತದೆ ಮತ್ತು ಇತರ ಲಸಿಕೆಗಳೊಂದಿಗೆ ಪ್ರಮಾಣಿತವಾಗಿರುವ ಚಿಕುನ್‍ಗುನ್ಯಾ ವೈರಸ್‍ನ ನೇರ, ದುರ್ಬಲ ಆವೃತ್ತಿಯನ್ನು ಹೊಂದಿರುತ್ತದೆ.

ವಿಮಾನ ಸ್ಫೋಟಿಸುವ ಖಲಿಸ್ತಾನಿ ಉಗ್ರನ ಬೆದರಿಕೆಯ ತನಿಖೆ ಆರಂಭಿಸಿದ ಕೆನಡಾ

ಒಟ್ಟಾವಾ,ನ.10- ಖಲಿಸ್ತಾನಿ ಉಗ್ರ ಗುರ್‍ಪತ್‍ಸಿಂಗ್ ಎಂಬಾತ ಇದೇ 19ರಂದು ಏರ್ ಇಂಡಿಯಾದಲ್ಲಿ ಸಂಚರಿಸದಂತೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆನಡಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಾವು ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ವಿಶೇಷವಾಗಿ ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಕೆನಡಾ ಸಾರಿಗೆ ಸಚಿವ ಪಾಬ್ಲೊ ರೊಡ್ರಿಗಸ್ ಒಟ್ಟಾವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬೆದರಿಕೆ ಪ್ರಕರಣ ಕುರಿತಂತೆ ರಾಯಲ್ ಕೆನಡಿಯನ್ ಮೆಂಟೆಡ್ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ವಾರ ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಸಿಖ್ಸ್ ಫಾರ್ ಜಸ್ಟಿಸ್‍ನ ಸಾಮಾನ್ಯ ಸಲಹೆಗಾರ ಎಂದು ಗುರುತಿಸಿಕೊಂಡಿರುವ ಗುರುಪತ್‍ವಂತ್ ಸಿಂಗ್ ಪನ್ನುನ್ ಎಂಬಾತ, ನ.19 ರಂದು ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಬಾರದು ಒಂದು ವೇಳೆ ನನ್ನ ಮಾತನ್ನು ಕಡೆಗಣಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದ.

ಇದು ಬೆದರಿಕೆಯಲ್ಲ, ಬದಲಿಗೆ ಭಾರತೀಯ ವ್ಯವಹಾರಗಳನ್ನು ಬಹಿಷ್ಕರಿಸುವ ಕರೆ ಎಂದು ಅವರು ಕೆನಡಾದ ಮಾಧ್ಯಮಗಳಿಗೆ ತಿಳಿಸಿದರು. ಕೆನಡಾವು ಸುಮಾರು 770,000 ಸಿಖ್ಖರಿಗೆ ನೆಲೆಯಾಗಿದೆ, ಅವರು ಒಟ್ಟಾರೆ ಜನಸಂಖ್ಯೆಯ ಸುಮಾರು ಎರಡು ಪ್ರತಿಶತವನ್ನು ಹೊಂದಿದ್ದಾರೆ.

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‍ನಲ್ಲಿ ವ್ಯಾಂಕೋವರ್ ಬಳಿ ಕೆನಡಾದ ಸಿಖ್ ನಾಯಕನ ಜೂನ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಪಾತ್ರ ವಹಿಸಿದ್ದಾರೆ ಎಂಬ ಆರೋಪಗಳನ್ನು ಎತ್ತಿದರು ಮತ್ತು ಹತ್ಯೆಗೆ ಸಂಬಂಧವಿದೆ ಎಂದು ನಂಬಲಾದ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದರು.

ಬಾಂಬ್ ಶೆಲ್ ಆರೋಪವನ್ನು ಭಾರತವು ಅಸಂಬದ್ಧ ಎಂದು ತಳ್ಳಿಹಾಕಿದೆ. ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಬಗೆಹರಿಯದ ಕೊಲೆಯ ಮೇಲೆ ಕುಸಿದಿದೆ ಮತ್ತು ಒಟ್ಟಾವಾ ಸಿಖ್ ಪ್ರತ್ಯೇಕತಾವಾದಿಗಳನ್ನು ಹೇಗೆ ನಿಭಾಯಿಸಿದೆ ಎಂಬುದರ ಬಗ್ಗೆ ಭಾರತೀಯರು ಅಸಮಾಧಾನಗೊಂಡಿದ್ದಾರೆ.

ಭಯೋತ್ಪಾದಕರಿಗೆ ಧನ ಸಹಾಯ ಮಾಡಿದವರ ಮೇಲೆ ಪೊಲೀಸ್ ದಾಳಿ

ಶ್ರೀನಗರ, ನ 10 (ಪಿಟಿಐ)- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಭಯೋತ್ಪಾದಕರಿಗೆ ಧನ ಸಹಾಯ ಪ್ರಕರಣಗಳ ಬೆನ್ನು ಬಿದ್ದಿದ್ದಾರೆ. ಪೊಲೀಸ್ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಮುಂಜಾನೆ ಕಣಿವೆಯಲ್ಲಿ ಭಯೋತ್ಪಾದಕರಿಗೆ ಧನಸಹಾಯ ಪ್ರಕರಣದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಈ ಪ್ರಕರಣವು ಆರೋಪಿಗಳಿಂದ ಅಪರಾಧದ ಆದಾಯವನ್ನು ಅಕ್ರಮವಾಗಿ ಸಂಗ್ರಹಿಸುವುದು, ಲೇಯರ್ ಮಾಡುವುದು ಮತ್ತು ಲಾಂಡರಿಂಗ್‍ಗೆ ಸಂಬಂಧಿಸಿದೆ ಎಂದು ಅವರು ಹೇಳಿದರು.

ಇನ್ನೋವಾ ಕಾರಿನಿಂದ ಸರಣಿ ಅಪಘಾತ, ಮೂವರ ದುರ್ಮರಣ

ಅಪರಾಧದ ಆದಾಯವನ್ನು ತರುವಾಯ ಪ್ರತ್ಯೇಕತೆ ಮತ್ತು ಭಯೋತ್ಪಾದನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಈ ದಾಳಿ ನಡೆಸಲಾಗಿದೆ.

ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

ಬೆಂಗಳೂರು,ನ.10- ನಗರದಲ್ಲಿ ಇಂದಿನಿಂದ ಐದು ದಿನಗಳ ಕಾಲ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 62 ಮೈದಾನಗಳಲ್ಲಿ 267 ಪಟಾಕಿ ವ್ಯಾಪಾರಗಳಿಗೆ ಮಾರಾಟ ಮಾಡಲು ಅಷ್ಟೇ ಅವಕಾಶ ಮಾಡಿಕೊಡಲಾಗಿದೆ.

ಬಿಬಿಎಂಪಿ ಈ ಬಾರಿ ಪಟಾಕಿ ಮಳಿಗೆಗಳಿಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಿಕೊಟ್ಟಿರುವುದು ವಿಶೇಷವಾಗಿದೆ. ನಗರದಾದ್ಯಂತ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಅನುಮತಿ ಇಲ್ಲದೆ ಪಟಾಕಿ ಮಾರಾಟ ಕಂಡು ಬಂದರೆ ಅಕ್ರಮ ಮಾರಾಟಗಾರರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿರುವ ಬಿಬಿಎಂಪಿ ಅಧಿಕಾರಿಗಳು ನಗರದ ಎಂಟು ವಲಯದ ಮೈದಾನದಲ್ಲಿ ಮೂಲಸೌಕರ್ಯ ಹಾಗೂ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪಟಾಕಿ ಮಾರಾಟ ನಿಯಮಗಳು: ಹಸಿರು ಪಟಾಕಿ ಮಾರುವುದು ಕಡ್ಡಾಯ ಪಟಾಕಿ ಪ್ಯಾಕೆಟ್‍ಗಳ ಮೇಲೆ ಚಿಕ್ಕ ಕ್ಯೂಆರ್ ಕೋಡ್ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಪಟಾಕಿ ಮಾರಾಟ ಮಳಿಗೆಗಳ ವಿಸ್ತೀರ್ಣ 10ಬೈ 10 ಅಡಿಗೆ ಸೀಮಿತಗೊಳಿಸಲಾಗಿದೆ. ಮಳಿಗೆಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು. ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶ ದ್ವಾರ ಇರಲೆಬೇಕಾಗಿದೆ.ಪ್ರ ತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯವಾಗಿದ್ದು, ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು.

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ಪ್ರತಿ ಮಾರಾಟ ಮಳಿಗೆ ಯಲ್ಲಿ ಅಗ್ನಿಶಮನ ವ್ಯವಸ್ಥೆ ಇರಬೇಕು. ಮಳಿಗೆ ಸಮೀಪ ಧೂಮಪಾನಕ್ಕೆ ಅವಕಾಶವಿಲ್ಲ. ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ. ರಾತ್ರಿ ವೇಳೆ ಯಾರೂ ಮಳಿಗೆಯಲ್ಲಿ ಮಲಗದಂತೆ ಎಚ್ಚರ ವಹಿಸಬೇಕು. ಎಲೆಕ್ಟಿಕಲ್ ವೈರಿಂಗ್ ಮತ್ತು ಫಿಟ್ಟಿಂಗ್ಸ್ ವ್ಯವಸ್ಥೆ ಮಾಡಿಕೊಂಡಿರಬೇಕು. ಪರವಾನಗಿ ಪಡೆದಿರುವ ದಿನಾಂಕ, ಸ್ಥಳದಲ್ಲಿ ಮಾತ್ರವೇ ಮಾರಾಟಕ್ಕೆ ಅವಕಾಶ. ವಿದೇಶಿ ತಯಾರಿಕ ಪಟಾಕಿ ಮಾರಾಟಕ್ಕೆ ನಿರ್ಬಂಧ ಹಾಗೂ ಪಟಾಕಿಯನ್ನು 18 ವರ್ಷದೊಳಗಿನ ಮಕ್ಕಳಿಗೆ ಮರಾಟ ಮಾಡುವಂತಿಲ್ಲ ಎಂಬ ನಿಯಮ ಹಾಕಲಾಗಿದೆ.

ಕೆಸಿಆರ್ 59 ಕೋಟಿ ರೂ. ಆಸ್ತಿ ಒಡೆಯ

ಹೈದರಾಬಾದ್, ನ.10 (ಪಿಟಿಐ) – ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಹಿಂದೂ ಅವಿಭಜಿತ ಕುಟುಂಬ ಸೇರಿದಂತೆ ಸುಮಾರು 59 ಕೋಟಿ ರೂಪಾಯಿ ಮೌಲ್ಯದ ಕುಟುಂಬದ ಆಸ್ತಿ ಮತ್ತು 25 ಕೋಟಿ ರೂಪಾಯಿಗಳ ಹೊಣೆಗಾರಿಕೆಯನ್ನು ಘೋಷಿಸಿದ್ದಾರೆ.

ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್‍ನಿಂದ ಈ ವರದಿ ಬಹಿರಂಗಗೊಂಡಿದ್ದರೂ ಅವರ ಬಳಿ ಸ್ವಂತ ಕಾರಿಲ್ಲ ಎನ್ನುವುದು ವಿಶೇಷವಾಗಿದೆ.

ಅವರ ವಿರುದ್ಧ ಒಂಬತ್ತು ಪ್ರಕರಣಗಳು ಬಾಕಿ ಉಳಿದಿವೆ, ಎಲ್ಲವೂ ತೆಲಂಗಾಣ ರಾಜ್ಯ ಆಂದೋಲನದ ಸಮಯದಲ್ಲಿ ದಾಖಲಾಗಿವೆ ಮತ್ತು ಅವರು ಯಾವುದೇ ಕ್ರಿಮಿನಲ್ ಅಪರಾಧಕ್ಕೆ ಶಿಕ್ಷೆಗೊಳಗಾಗಿಲ್ಲ.
ಅವರ ಪತ್ನಿ ಶೋಭಾ ಅವರ ಹೆಸರಿನಲ್ಲಿರುವ ಚರ ಆಸ್ತಿಗಳ ಒಟ್ಟು ಮೌಲ್ಯವು ಏಳು ಕೋಟಿ ರೂ.ಗಿಂತ ಹೆಚ್ಚಿದ್ದು, ಅವರ ಹಿಂದೂ ಅವಿಭಜಿತ ಕುಟುಂಬದ ಒಂಬತ್ತು ಕೋಟಿ ರೂ. ಹಾಗೂ ಆಕೆಯ ಬಳಿ ಸುಮಾರು 1.5 ಕೋಟಿ ಮೌಲ್ಯದ 2.81 ಕೆಜಿ ಚಿನ್ನಾಭರಣ, ವಜ್ರ ಮತ್ತಿತರ ಬೆಲೆಬಾಳುವ ವಸ್ತುಗಳು ಇವೆ.

ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಷರತ್ತು ವಿಧಿಸಿದ ಬಾಲಿವುಡ್ ನಟಿ

ರಾವ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 8.50 ಕೋಟಿ ರೂ.ಗಳಾಗಿದ್ದು, ಹೆಚ್‍ಯುಎಫ್ ಹೆಸರಿನಲ್ಲಿ ಸುಮಾರು 15 ಕೋಟಿ ರೂ.ಗಳಿವೆ. ಐಟಿ ರಿಟನ್ರ್ಸ್ ಪ್ರಕಾರ ರಾವ್ ಅವರ ಒಟ್ಟು ಆದಾಯವು ಮಾರ್ಚ್ 31, 2023 ರ ವೇಳೆಗೆ 1.60 ಕೋಟಿ ರೂ.ಗಿಂತ ಹೆಚ್ಚಿದ್ದರೆ, ಮಾರ್ಚ್ 31, 2019 ರ ವೇಳೆಗೆ ಇದು ರೂ. 1.74 ಕೋಟಿ ಆಗಿತ್ತು. ಅಫಿಡವಿಟ್‍ನಲ್ಲಿ ರಾವ್ ಅವರು ಕೃಷಿಕ ಎಂದು ತೋರಿಸಿದರು ಮತ್ತು ಅವರ ಶೈಕ್ಷಣಿಕ ಅರ್ಹತೆ ಬಿಎ ಆಗಿದೆ.

ಏತನ್ಮಧ್ಯೆ, ರಾವ್ ಅವರ ಪುತ್ರ ಮತ್ತು ಬಿಆರ್‍ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಮತ್ತು ಅವರ ಕುಟುಂಬವು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಸಲ್ಲಿಸಿದ ಅಫಿಡವಿಟ್‍ನಲ್ಲಿ ಒಟ್ಟು 54.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ.

ಅಫಿಡವಿಟ್ ಪ್ರಕಾರ, ರಾಮರಾವ್ ಅವರ ಪತ್ನಿ ಶೈಲಿಮಾ ಅವರು 4.5 ಕೆಜಿ ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಸೇರಿದಂತೆ 26.4 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಅದೇ ರೀತಿ, 2018 ರಲ್ಲಿ 1.30 ಕೋಟಿ ರೂಪಾಯಿಗಳ ಸ್ಥಿರಾಸ್ತಿಗಳಿಗೆ ಹೋಲಿಸಿದರೆ ರಾಮರಾವ್ ಅವರ 10.4 ಕೋಟಿ ರೂಪಾಯಿಗಳ ಸ್ಥಿರ ಆಸ್ತಿ (ಮಾರುಕಟ್ಟೆ ಮೌಲ್ಯ) ಹೆಚ್ಚಾಗಿದೆ. ಅವರ ಪತ್ನಿ 7.42 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ ಮತ್ತು ಅವರ ಮಗಳು 46.7 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.