Home Blog Page 1863

ಶೀಘ್ರದಲ್ಲೇ ಮನೆ ಬಾಗಿಲಿಗೆ ಬರಲಿದೆ ಪಡಿತರ

ಬೆಂಗಳೂರು, ಅ.26- ರಾಜ್ಯಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ರೇಷನ್ ಡೋರ್ ಡೆಲಿವರಿಗೆ ದಿನಗಣನೆ ಆರಂಭವಾಗಿದ್ದು, ನವೆಂಬರ್‍ನಿಂದ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ಭಾಗ್ಯ ದೊರೆಯಲಿದೆ.

ಆಹಾರ ಇಲಾಖೆಯು ಈ ನೂತನ ಇಲಾಖೆ ಯೋಜನೆಗೆ ಈಗಾಗಲೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮನೆ ಬಾಗಿಲಿಗೆ ಪಡಿತರ ಸರಬರಾಜು ಮಾಡಲು ದರ ಕೂಡ ನಿಗದಿ ಮಾಡಿದೆ. ಹಿರಿಯ ನಾಗರಿಕರಿಗೆ ನವೆಂಬರ್ ತಿಂಗಳಿನಿಂದ ಅಧಿಕೃತವಾಗಿ ಪಡಿತರ ಮನೆ ಬಾಗಿಲಿಗೆ ತಲುಪಲಿದೆ. 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಡಿತರ ಚೀಟಿಯಲ್ಲಿ ಅವರ ಒಬ್ಬರದ್ದೇ ಹೆಸರಿದ್ದರೆ ಈ ಯೋಜನೆ ದೊರೆಯಲಿದೆ.

ರಾಜ್ಯದಲ್ಲಿ 7 ಸಾವಿರ ಫಲಾನುಭವಿಗಳನ್ನು ಆಹಾರ ಇಲಾಖೆ ಗುರುತಿಸಿದ್ದು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪೈಲೇಟ್ ಪ್ರಾಜೆಕ್ಟ್ ಪ್ರಾರಂಭ ಕೂಡ ಮಾಡುತ್ತಿದೆ. ಸದ್ಯ ಪಡಿತರ ಕೇಂದ್ರಗಳಲ್ಲಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಪ್ರತಿ ಮನೆ ಬಾಗಿಲಿಗೆ ತಲುಪಿಸಲು 50 ರೂ. ಡೆಲವರಿ ಚಾರ್ಜ್ ನಿಗದಿ ಮಾಡಲಾಗುತ್ತದೆ.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ನವೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ಡೋರ್ ಡೆಲವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರಿಂದ ವೃದ್ಧರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಇದರಿಂದ ಸಮಯವು ಉಳಿತಾಯವಾಗಲಿದೆ. ಈ ಯೋಜನೆಯಿಂದ ವೃದ್ಧರಿಗೆ ಅನುಕೂಲವಾಗಲಿದೆ ಎಂದು ಹಿರಿಯ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಬಹಿರಂಗ ಚರ್ಚೆಗೆ ಸಿದ್ದ, ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು,ಅ.26- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿ ದಾಖಲೆ ಸಹಿತ ಬಹಿರಂಗ ಚರ್ಚೆ ನಡೆಸಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಆರೋಪಗಳ ಸುರಿಮಳೆಗೈದರು. ವಿಧಾನಸಭೆ ಅಧಿವೇಶನ ಕರೆದರೆ ಅಲ್ಲಿ ದಾಖಲೆಗಳ ಸಹಿತ ನನ್ನ ಆಡಳಿತಾವಧಿ, ಅವರ ಆಡಳಿತಾವಧಿಯ ವಿಚಾರಗಳ ಚರ್ಚೆ ನಡೆಸಲು ಸಿದ್ದ. ಅವರು ಎಲ್ಲಿಗೆ ಕರೆದರೂ ಅಲ್ಲಿಗೆ ಹೋಗಿ ಚರ್ಚೆ ನಡೆಸಲು ಸಿದ್ದವಿರುವುದಾಗಿ ಹೇಳಿದರು.

ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ. ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಮುಕ್ತವಾಗಿ ಚರ್ಚೆ ಮಾಡೋಣ. ಮಾಡುವ ಎಲ್ಲ ಆರೋಪಗಳಿಗೂ ದಾಖಲೆಗಳಿವೆ ಎಂದರು. ನಿಮ್ಮಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ನಮ್ಮ ಮೈತ್ರಿಯ ಬಗ್ಗೆ ಪಾಠ ಹೇಳುತ್ತೀರಿ ಎಂದು ಟೀಕಿಸಿದ ಅವರು, ಕೇರಳದಲ್ಲಿ ಕಮ್ಯುನಿಸ್ಟರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜೊತೆ ಸೇರುತ್ತೀರಿ, ಈಗ ನಮಗೆ ನೀತಿ ಪಾಠ ಹೇಳಲು ಬಂದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸ್ವಾಗತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ ಎಂದರು. 2013ರಿಂದ 2018ರವಗಿನ ಅವರ ಆಡಳಿತ ಸೇರಿದಂತೆ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಆಡಳಿತದಲ್ಲಿ ಆರ್ಥಿಕ ಶಿಸ್ತಿನ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

2018ರಲ್ಲಿ ಬಜೆಟ್‍ನಲ್ಲಿ 2700 ಕೋಟಿ ರೂ. ವಸತಿ ಯೋಜನೆಗೆ ಇಟ್ಟಿದ್ದರು. ಆದರೆ 29000 ಕೋಟಿ ಕಮಿಟ್ಮೆಂಟ್ ಇತ್ತು. ಈ ಸರ್ಕಾರಕ್ಕೆ ನೀರಾವರಿಗೆ ಒಂದು ಲಕ್ಷದ ಮೂರು ಕೋಟಿ ಎಂದು ಘೋಷಿಸಿ ಎಷ್ಟು ಇಟ್ಟಿದ್ದರು? ಹಣಕಾಸಿನ ಮಂಜೂರಾತಿಯೇ ದೊರೆತಿರಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ದೇವಾಲಯಗಳ ಆವರಣದಲ್ಲಿ RSS ಚಟುವಟಿಕೆ ನಿಷೇಧ ಸಮರ್ಥಿಸಿಕೊಂಡ ಕೇರಳ

ಯಾವ್ಯಾವ ಗುತ್ತಿಗೆದಾರರ ಬಳಿ ಎಷ್ಟು ವಸೂಲಿ ಮಾಡಿದ್ದೀರಿ? ಎಂಬುದನ್ನು ಸದನದಲ್ಲೇ ಪ್ರಸ್ತಾಪ ಮಾಡುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ಹೋಟೆಲ್‍ನಲ್ಲಿದ್ದು ಅಧಿಕಾರ ಮಾಡಿದರು ಎಂದು ಸಿದ್ದರಾಮಯ್ಯ ಹೇಳುತ್ತಾ ಇದ್ದಾರೆ. ಹೋಟೆಲ್‍ನಲ್ಲಿದ್ದರೂ ಏನು ಕಾರ್ಯಕ್ರಮ ಮಾಡಿದ್ದೀನಿ ಎಂಬುದಕ್ಕೆ ದಾಖಲೆ ನೀಡುತ್ತೇನೆ ಎಂದರು.

ರಾಜಕೀಯವಾಗಿ ವಿಲನ್: ರಾಜಕೀಯವಾಗಿ ಮುಖ್ಯಮಂತ್ರಿಯವರಿಗೆ ನಾನು ವಿಲನ್. ನಾನ್ಯಾಕೆ ಅವರಿಗೆ ಸ್ನೇಹಿತನಾಗಲಿ? ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿ ಶಾಸಕರೊಬ್ಬರು ನನ್ನ ಮುಂದೆ ಯಾವ ರೀತಿ ದಾಖಲೆ ಎಸೆದು ಯಾವ ರೀತಿ ಮಾಡಿದರು ಎಂಬುದು ಗೊತ್ತಿದೆ. ಎಲ್ಲವನ್ನೂ ನಾನು ತಡೆದುಕೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಬಿಜೆಪಿ ಮೇಲೆ ನಾನು ಆಕ್ರೋಶ ವ್ಯಕ್ತಪಡಿಸಿದ್ದೆ. ಆ ಸರ್ಕಾರ ಬರುವುದಕ್ಕೆ ಯಾರು ಕಾರಣ? ಬೆಳಗಾವಿ ರಾಜಕಾರಣದ ಬದಲಾವಣೆಯಿಂದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕರನ್ನು ಕರೆದುಕೊಂಡು ಹೋದರಲ್ಲಾ ಅವರೆಲ್ಲಾ ಅಂದು ಬಿಜೆಪಿ ಜೊತೆ ಕೈ ಜೋಡಿಸಿದ್ದು, ಸಿದ್ದರಾಮಯ್ಯನವರೇ, ಬಿಜೆಪಿ ಜೊತೆ ನೀವು ಕೈ ಜೋಡಿಸದೇ ಇದ್ದರೆ ಅವರ್ಯಾಕೆ ಸರ್ಕಾರ ತೆಗೆಯುತ್ತಿದ್ದರು ಎಂದು ಆರೋಪಿಸಿದರು.

ಐಎಮ್‍ಎ ಪ್ರಕರಣ ತನಿಖೆ ನಡೆಸುತ್ತಿದ್ದರಲ್ಲಾ ಆಗ ಯಾವ ಅಧಿಕಾರಿಯನ್ನು ಅಂದು ಮನೆಗೆ ಕರೆಸಿದ್ದೀರೀ? ನಿಮ್ಮ ಆತ್ಮೀಯರು ಇದ್ದರೆಂದು ಏನು ಮಾಡಿದ್ದೀರಿ? ಹೇಳುತ್ತಾ ಹೋದರೆ ಎರಡು ದಿನ ಬೇಕಾಗುತ್ತದೆ ಎಂದರು.
ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ವಿದ್ಯುತ್ ಬಗ್ಗೆ ಮಾತನಾಡಿದ್ದು ಅಸೂಯೆಯಿಂದಲ್ಲ. ಲೋಪವನ್ನು ಸರಿಪಡಿಸಿಕೊಳ್ಳಲಿ ಎಂದು ಅವರು ತಿಳಿಸಿದರು.

ರಾಮನಗರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡ್ತೀನಿ : ಹೆಚ್‌ಡಿಕೆ

ಬೆಂಗಳೂರು,ಅ.26- ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದರೆ ಜೀವ ಪಣಕ್ಕಿಟ್ಟು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವರ್ಗಾವಣೆ ವಿಚಾರದಲ್ಲಿ ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಚಾಮುಂಡಿ ಬೆಟ್ಟ ಇಲ್ಲವೇ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಬೇಕೆಂಬ ಸವಾಲನ್ನು ಸ್ವೀಕರಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರಕ್ಕೊ ನನಗೂ ಭಾವನಾತ್ಮಕ ಸಂಬಂಧವಿದೆ, ವ್ಯವಹಾರಿಕರ ಸಂಬಂಧವಿಲ್ಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರದ ಹೆಸರು ಬದಲಾಯಿಸಿದರೆ ಅಮರಣಾಂತ ಉಪವಾಸ ಮಾಡುತ್ತೇನೆ ಎಂದರು. ರಾಮನಗರದ ಹೆಸರು ಬದಲಾಯಿಸಿದರೆ ನನ್ನ ಆರೋಗ್ಯದ ಬಗ್ಗೆ ಚಿಂತಿಸದೆ, ಕೊನೆಕ್ಷಣದವರೆಗೂ ನಾನು ಉಪವಾಸ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು. ನನ್ನ ಹೋರಾಟಕ್ಕೆ ರಾಮನಗರ ಜಿಲ್ಲೆಯ ಜನರ ಸಹಾಯ ಕೋರುತ್ತೇನೆ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದರೂ, ನನ್ನ ಜೀವನದ ಅಂತ್ಯ ರಾಮನಗರದಲ್ಲೇ ಎಂದರು.

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಮಾಡಿದ ರಸ್ತೆ, ಸೇತುವೆ ಮುಂತಾದ ಯೋಜನೆಗಳ ವಿವರವನ್ನು ನೀಡಿದ ಅವರು, ಡಿ.ಕೆ.ಶಿವಕುಮಾರ್ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಹಳೆಯ ಸ್ನೇಹಿತರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವ ಸವಾಲು ಹಾಕಿದ್ದಾರೆ. ವರ್ಗಾವಣೆ ವಿಚಾರಣದಲ್ಲಿ ಒಂದು ರೂಪಾಯಿ ಪಡೆದಿಲ್ಲ ಎಂದು ಧರ್ಮಸ್ಥಳ ಮತ್ತು ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಲು ಸಿದ್ದ ಎಂದರು.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 30 ಸಚಿವರನ್ನು ಕರೆದುಕೊಂಡು ಬರಲಿ. ಐದು ತಿಂಗಳ ಆಡಳಿತದ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆ ನೀಡಿಕೆಯಲ್ಲಿ ಒಂದು ರೂ. ಪಡೆದಿಲ್ಲ ಎಂದು ಅವರೂ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ ಅಧಿಕಾರ ಯಾರಿಗೂ ಶಾಶ್ವತವಲ್ಲ. ಚಕ್ರ ತಿರಗುತ್ತಿರುತ್ತದೆ. ಹುಟ್ಟಿನಿಂದ ನಾನು ಲಕ್ಷಾಪತಿಯಲ್ಲ. ಚುನಾವಣೆಗೆ ಕೆಲವು ಸ್ನೇಹಿತರು ಪ್ರೀತಿಯಿಂದ ದೇಣಿಗೆ ನೀಡಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆಯ 600 ಕೋಟಿ ರೂ. ಕಾಮಗಾರಿಯ ತುಂಡು ಗುತ್ತಿಗೆಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಏಕೆ ಮುಚ್ಚಿ ಹಾಕಿದಿರಿ ಎಂದು ಪ್ರಶ್ನಿಸಿದರು. ಹಾರೋಹಳ್ಳಿ ಬಳಿ ಹಾಲಿನ ಪುಡಿ ತಯಾರಿಕಾ ಘಟಕಕ್ಕೆ ಸ್ವಾೀಧಿನಪಡಿಸಿಕೊಂಡ ಭೂಮಿಯ ರೈತರಿಗೆ 50 ಸಾವಿರದಿಂದ ಒಂದು ಲಕ್ಷ ನೀಡಿ ಜಿಪಿಎ ಮಾಡಿಸಿಕೊಂಡಿದ್ದ ನಿಮ್ಮ ಪಟಾಲಯಂ 50 ಲಕ್ಷ ರೂ.ವರೆಗೂ ಲಪಟಾಯಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪಿಸಿದರು.

ರಾಮನಗರ ಜಿಲ್ಲೆ ತಲವಾರು ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ. ಇಗ್ಗಲೂರು ಜಲಾಶಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿವೆ. ಕೇವಲ ಮೂರು ಕಟ್ಟಡಗಳನ್ನು ನಿರ್ಮಿಸಿಲ್ಲ ಎಂದು ತಿರುಗೇಟು ನೀಡಿದರು. ಹೊಸಕೆರೆ ಹಳ್ಳಿ ಬಳಿಯ 8 ಎಕರೆ ಜಮೀನನ್ನು ಬಿಎಂಐಸಿ ಕಾರಿಡಾರ್‍ಗೆ ಅಧಿಸೂಚನೆ ಹೊರಡಿಸಿ ಆ ಜಮೀನಿನ ಭೂ ಪರಿವರ್ತನೆಯನ್ನು ಡಿ.ಕೆ.ಸುರೇಶ್ ಹೆಸರಿಗೆ ಮಾಡಿಸಲಾಗಿದೆ.

ಭೂ ಪರಿವರ್ತನೆಯ ದಾಖಲೆ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ. ಈ ಜಮೀನು ಭಾಗ್ಯಲಕ್ಷ್ಮಿ ಅಮಾವಸೆ ಗೌಡ ಎಂಬುವರಿಗೆ ಸೇರಿದ್ದೆಂಬ ಉಲ್ಲೇಖವಿದೆ. ರಾಮನಗರ ಜಿಲ್ಲೆ ತೆಗೆದು ಬ್ರಾಂಡ್ ಬೆಂಗಳೂರು ಮಾಡುತ್ತಿರುವ ಉದ್ದೇಶವಿದೆಯೇ? ಅಲ್ಲಿ ರಸ್ತೆ ಮಾಡುತ್ತಿಲ್ಲ, ರಿಯಲ್ ಎಸ್ಟೇಟ್ ಮಾಡುತ್ತಾರೆ. ಆ ಕಾರಣಕ್ಕಾಗಿ ನೈಸ್ ರಸ್ತೆ ಯೋಜನೆಯನ್ನು ರದ್ದುಪಡಿಸಿ ಎಂದು ಆಗ್ರಹಿಸಿರುವುದು ಎಂದು ಹೇಳಿದರು.

ತಾವರೆಕೆರೆ ಬಳಿ ಡಿಎಲ್‍ಎಫ್‍ಗೆ ಸೇರಿದ ಜಮೀನಿನಲ್ಲಿ 300 ಎಕರೆ ಯಾರ ಹೆಸರಿನಲ್ಲಿದೆ. ಇಂದಿರಾನಗರದಲ್ಲಿರುವ ಡಿಎಲ್‍ಎಫ್ ಶಾಖಾ ಕಚೇರಿಯಲ್ಲಿ ಕೆಐಎಡಿಬಿ ವ್ಯವಹಾರಗಳು ಸಭೆಗಳು ನಡೆಯುತ್ತಿವೆ. ಅದಕ್ಕೆ ಕಾಂಗ್ರೆಸ್‍ನ ಪ್ರಭಾವಿ ನಾಯಕರ ಸೂಚನೆ ಮೇರೆಗೆ ನಡೆಯುತ್ತಿವೆ ಎಂದು ಆಪಾದಿಸಿದರು. ಬ್ರಾಂಡ್ ಬೆಂಗಳೂರು ಹೆಸರು ಹೇಳಿಕೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎನ್ನುತ್ತಿದ್ದಾರೆ. ಯಾರಿಗೆ ದಕ್ಷಿಣೆ ಕೊಡಲು ದಕ್ಷಿಣೆ ಜಿಲ್ಲೆ ಎನ್ನುತ್ತಾರೆ ಎಂದು ಪ್ರಶ್ನಿಸಿದರು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಕೆರೆಗಳನ್ನು ನುಂಗಿದ್ದು, ನಾಡಪ್ರಭು ಕೆಂಪೇಗೌಡರ ಹೆಸರು ಹೇಳಲು ಯಾವ ನೈತಿಕತೆ ಇದೆ. ರಾಮನಗರ ಹೆಸರಿದ್ದರೆ ಜಮೀನನ್ನು ಅಡಿ ಲೆಕ್ಕದಲ್ಲಿ ಮಾರಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು. ಬೆಂಗಳೂರು ಎಂಬುದು ಕೇವಲ ರಾಮನಗರಕ್ಕೆ ಸೀಮಿತವಲ್ಲ. ಇಡೀ ರಾಜ್ಯಕ್ಕೆ ಅನ್ವಯ. ಇಲ್ಲಿನ ಆರ್ಥಿಕ ಶಕ್ತಿಯಿಂದ ರಾಜ್ಯದ ಮೆರವಣಿಗೆಯಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸ್ಥಾನ ಯಾರ ಅಪ್ಪನ ಆಸ್ತಿಯೂ ಅಲ್ಲ. ಈ ಸ್ಥಾನ ಶಾಶ್ವತವೂ ಅಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಕಾನೂನು ಘಟಕದ ಎ.ಪಿ.ರಂಗನಾಥ್, ಮಾಜಿ ಶಾಸಕ ಎ.ಮಂಜು, ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಚ್.ಸಿ.ಜಯಮುತ್ತು ಮತ್ತಿತರರು ಉಪಸ್ಥಿತರಿದ್ದರು.

ಹಿಮಾಚಲಪ್ರದೇಶದಿಂದ ವಿದ್ಯುತ್ ಖರೀದಿ : ಸಚಿವ ಕೆ.ಜೆ.ಜಾರ್ಜ್

ನವದೆಹಲಿ, ಅ.26- ರಾಜ್ಯದಲ್ಲಿ ಕೊರತೆಯಾಗಿರುವ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ಹಿಮಾಚಲಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು, ಜೊತೆಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ವಿದ್ಯುತ್ ಕೊರತೆಗೆ ಗೃಹಜ್ಯೋತಿ ಯೋಜನೆ ಕಾರಣವಲ್ಲ. ಈ ಯೋಜನೆ ಸೌಲಭ್ಯ ಪಡೆಯಲು ಗರಿಷ್ಠ 200 ಯೂನಿಟ್ ಅಥವಾ ಬಳಕೆಯ ಮಿತಿಯಲ್ಲೇ ಇರಬೇಕಿರುವುದರಿಂದ ಜನ ಬಳಕೆಯಲ್ಲೇ ಉಳಿತಾಯ ನೀತಿಯನ್ನು ಪಾಲನೆ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಈ ಬಾರಿ ಕೃಷಿ ಪಂಪ್‍ಸೆಟ್ ಹಾಗೂ ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.

ಇಂಧನ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಶೇ.10ರಷ್ಟು ವಿದೇಶಿ ಕಲ್ಲಿದ್ದಲ್ಲನ್ನು ದೇಶಿಯ ಕಲ್ಲಿದ್ದಲಿಗೆ ಮಿಶ್ರಣ ಮಾಡಿದರೆ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 2 ಮೆಗಾಟನ್ ಕಲ್ಲಿದ್ದಲ್ಲನ್ನು ಮಂಜೂರು ಮಾಡಿದೆ. ದೇಶಿಯ ಕಲ್ಲಿದ್ದಲಿನಲ್ಲಿ ಬೂದಿ ಹೆಚ್ಚಿದೆ ಅದನ್ನು ತೊಳೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿಯಲ್ಲಿ ಹಣ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಆತ್ಮಸಾಕ್ಷಿ ಇರುವ ಯಾವ ರಾಜಕಾರಣಿಯೂ ಕೃತಕ ಅಭಾವ ಸೃಷ್ಟಿಸಲ್ಲ, ಆ ರೀತಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಿಯಾಗಿ ನಾವು ಪ್ರತಿದಿನ ಪರಿಸ್ಥಿತಿ ಪರಿಶೀಲನೆ ಮಾಡುತ್ತೇವೆ.

ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುವುದು ಕೇಂದ್ರ ಗ್ರಿಡ್‍ನಿಂದ. ನಮ್ಮ ಅಧಿಕಾರಿಗಳು ಮುನ್ನಾ ದಿನ ಗ್ರಿಡ್‍ಗೆ ಹೋಗಿ ಬಿಡ್‍ನಲ್ಲಿ ಭಾಗವಹಿಸುತ್ತಾರೆ. ಆ ದಿನದ ದರಕ್ಕೆ ತಕ್ಕಂಗೆ ಹರಾಜು ಕೂಗಿ ವಿದ್ಯುತ್ ಖರೀದಿಸುತ್ತೇವೆ. ಕುಮಾರಸ್ವಾಮಿ ಬಯಸಿದರೆ ಗ್ರಿಡ್‍ನಲ್ಲಿ ನಡೆಯುವ ಖರೀದಿ ಪ್ರಕ್ರಿಯೆಯನ್ನು ತೋರಿಸಲು ಕರೆದುಕೊಂಡು ಹೋಗಲು ಸಿದ್ದರಿದ್ದೇವೆ. ಸುಳ್ಳು ಆರೋಪ ಮಾಡಿ ಜನರಲ್ಲಿ ಅನುಮಾನ ಬರುವಂತೆ ಮಾಡುವುದು ಸರಿಯಲ್ಲ ಎಂದರು.

ಕೂಡಗಿ ಸ್ಥಾವರದ ಐದು ಸ್ಥಾವರದಲ್ಲಿ ಮೂರಲ್ಲಿ ಮಾತ್ರ ಉತ್ಪಾದನೆಯಾಗುತ್ತಿದೆ ಎಂದಿದ್ದಾರೆ. ಅವು ಕೇಂದ್ರ ಸರ್ಕಾರ ನಿಯಂತ್ರಣದಲ್ಲಿವೆ, ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ. ಅಲ್ಲಿ ಉತ್ಪಾದನೆಯಾಗುವ 2400 ಮೆಗಾವ್ಯಾಟ್‍ನಲ್ಲಿ ರಾಜ್ಯಕ್ಕೆ 1250 ಮೇಗಾವ್ಯಾಟ್ ಮಂಜೂರಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ 150 ಮೆಗಾವ್ಯಾಟ್ ವಿದ್ಯುತ್ ನೀಡಲು ಮುಂದಾಗಿತ್ತು. ಅದನ್ನು ಆಗಿನ ಸರ್ಕಾರ ಖರೀದಿಸದೆ, ದೆಹಲಿಗೆ ಬಿಟ್ಟುಕೊಟ್ಟಿದೆ. ಆ ಒಪ್ಪಂದ ಅಕ್ಟೋಬರ್ 31ವರೆಗೂ ಚಾಲ್ತಿಯಲ್ಲಿದೆ, ಅನಂತರ 150 ಮೆಗಾವ್ಯಾಟ್ ರಾಜ್ಯಕ್ಕೆ ದೊರೆಯಲಿದೆ ಎಂದರು.

ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ವಸ್ತು ಸ್ಥಿತಿ ಅರಿವಿಲ್ಲದೆ ಅವರು ಆರೋಪ ಮಾಡಿದ್ದಾರೆ. ನಾನು ಯಾರ ಮೇಲೂ ದೋಷಾರೋಪಣೆ ಮಾಡುವುದಿಲ್ಲ. ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ ಎಂದರು. ನಮ್ಮಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಈ ಮೊದಲು ಕೃಷಿಗೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಕೊರತೆ ಹೆಚ್ಚಾಗಿದ್ದರಿಂದ ಐದು ಗಂಟೆಗೆ ಇಳಿಸಿದ್ದೇವೆ. ಜಿಲ್ಲಾ ಮಟ್ಟದ ಸಮಿತಿಗಳು ಬೇಡಿಕೆ, ಪೂರೈಕೆಯನ್ನು ನಿಭಾಯಿಸುತ್ತವೆ ಎಂದರು.

ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನದಿಂದ 600 ಮೇಗಾವ್ಯಾಟ್ ವಿದ್ಯುತ್ ದೊರೆಯುವ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದ ಸರ್ಕಾರದಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಅಲ್ಲಿ ಜಲವಿದ್ಯುತ್ ಉತ್ಪಾದನೆ ಹೆಚ್ಚಿದೆ. ನಮಗೆ 200 ಮೆಗಾವ್ಯಾಟ್ ಅನ್ನು ಪಿಕ್ ಅವರ್‍ನಲ್ಲಿ ಈಗಾಗಲೇ ಪೂರೈಕೆಯಾಗುತ್ತಿದೆ. ಖಾಸಗಿ ಅಥವಾ ಮಧ್ಯವರ್ತಿಗಳಿಂದ ನಾವು ವಿದ್ಯುತ್ ಖರೀದಿ ಮಾಡುತ್ತಿಲ್ಲ ಎಂದು ಹೇಳಿದರು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಇತ್ತೀಚೆಗೆ ಪವನ ಹಾಗೂ ಸೌರ ಶಕ್ತಿ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಮತ್ತಷ್ಟು ಸೌರ ಶಕ್ತಿ ವೃದ್ಧಿಸುವ ನಿರೀಕ್ಷೆಗಳಿವೆ ಎಂದರು. ಮುಂದಿನ ವರ್ಷ ಎಲ್ಲಾ ಉಪಸ್ಥಾವರಗಳಿಗೆ ಸೌರ ಶಕ್ತಿ ಅಳವಡಿಕೆಗೆ ಪ್ರತಿ ಯೂನಿಟ್‍ಗೆ 3.20 ರೂಪಾಯಿನಂತೆ ಟೆಂಡರ್ ಕರೆಯಲಾಗಿತ್ತು, ಅದರ ಅವ ನಿನ್ನೆ ಮುಗಿದಿದೆ.

ರಾಜ್ಯದಲ್ಲಿ 900 ಸಾವಿರ ಉಪಸ್ಥಾವರಗಳಿವೆ, ಅವುಗಳಲ್ಲಿ 200 ಉಪಸ್ಥಾವಗಳಿಗೆ ಕೇಂದ್ರ ಸರ್ಕಾರದ ಕುಸುಮ್-ಬಿ ಯೋಜನೆಯಲ್ಲಿ ಸೌರಶಕ್ತಿ ಉತ್ಪಾದನೆ ಮಾಡಿ, ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃಷಿ ಪಂಪ್‍ಸೆಟ್‍ಗಳಿಗೆ ಸೌರಶಕ್ತಿ ವಿದ್ಯುತ್ ಘಟಕ ಅಳವಡಿಸುವ ಯೋಜನೆ ಎಂಟತ್ತು ತಿಂಗಳಲ್ಲಿ ಮುಗಿಯಲಿದೆ ಎಂದರು.

ಪಾವಗಡದಲ್ಲಿ ಈಗಾಗಲೇ 10 ಸಾವಿರ ಎಕರೆ ಪ್ರದೇಶದಲ್ಲಿ 2300 ಮೇಗಾವ್ಯಾಟ್ ಸೌರ ಶಕ್ತಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಅಲ್ಲಿನ ರೈತರು ಇನ್ನೂ ಹತ್ತು ಸಾವಿರ ಎಕರೆಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಆರು ಸಾವಿರ ಎಕರೆಗೆ ಒಪ್ಪಂದವಾಗಿದೆ. ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗಲಿದೆ ಎಂದರು.

ಜೊತೆಗೆ ಗದಗ, ಕಲಬುರಗಿ, ರಾಯಚೂರಿನಲ್ಲೂ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ. ಪವನ ಶಕ್ತಿ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಪಂಪ್ ಸ್ಟೋರೆಜ್‍ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಚತ್ತಿಸ್‍ಗಡದಲ್ಲಿ ವಿದ್ಯುತ್ ಘಟಕ ಸ್ಥಾಪನೆಗೆ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಉತ್ಪಾದನೆಯಾಗುತ್ತಿಲ್ಲ, ವಿದ್ಯುತ್ ಸಿಗುತ್ತಿಲ್ಲ , ಚುನಾವಣೆ ಬಳಿಕ ಅಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಯಲಹಂಕದಲ್ಲಿನ ಡಿಸೇಲ್ ಘಟಕವನ್ನು ಅನಿಲ ಆಧಾರಿತವಾಗಿ ಘಟಕವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ 375 ಮೇಗಾ ವ್ಯಾಟ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಶರಾವತಿ ಸೇರಿದಂತೆ ಜಲವಿದ್ಯುತ್ ಉತ್ಪಾದನೆ ಶೇ.50ರಷ್ಟು ಕಡಿಮೆಯಾಗಿದೆ. ಮೋಡ ಮುಸುಕಿದ ವಾತಾವರಣದಿಂದ ಸೌರ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಉಷ್ಣ ವಿದ್ಯುತ್ ಸ್ಥಾವರಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿಮಾಚಲ ಪ್ರದೇಶ. ಪಂಜಾಬ್, ಉತ್ತರ ಪ್ರದೇಶದಿಂದ ವಿನಿಮಯ ದರದ ಮೇಲೆ ವಿದ್ಯುತ್ ಖರೀದಿಸುತ್ತೇವೆ. ಭವಿಷ್ಯದ ಬೇಡಿಕೆಯನ್ನು ನಿಭಾಯಿಸುತ್ತಿದ್ದೇವೆ. ಹಂಚಿಕೆಯಾಗದೆ ಇರುವ ವಿದ್ಯುತ್‍ನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.

ಬಡವರು ಮತ್ತು ಮಧ್ಯಮ ವರ್ಗ ಆದಾಯ ಕಡಿತವಾಗಿತ್ತು. ಅವರ ಕೈ ಬಲ ಪಡಿಸಲು ಪಂಚಖಾತ್ರಿಗಳನ್ನು ಜಾರಿಗೆ ತರಲಾಗಿದ್ದು ಗೃಹಜ್ಯೋತಿ ರೂಪಿಸಲಾಯಿತು. ರಾಜ್ಯದಲ್ಲಿ 2.14 ಲಕ್ಷ ಸಂಪರ್ಕಗಳಿವೆ 1.51 ಕೋಟಿ ಫಲಾನುಭವಿಗಳು ನೋಂದಣಿಯಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ತಿಂಗಳಿಗೆ 750 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಎಸ್ಕಾಂಗಳಿಗೆ ಪಾವತಿಸುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ದಿನ 43 ಮಿಲಿಯನ್ ಯೂನಿಟ್ ಬಳಕೆಯಾಗುತ್ತಿದೆ. ಮುಖ್ಯಮಂತ್ರಿಯವರು ಗೃಹಜ್ಯೋತಿಗೆ ಮುಂಗಡವಾಗಿಯೇ ಹಣ ಪಾವತಿ ಮಾಡುತ್ತಿದ್ದಾರೆ ಎಂದರು.

ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ ಗುಪ್ತ ಮಾತನಾಡಿ, ರಾಜ್ಯದಲ್ಲಿ ಇನ್ಸಾಟಾಲ್ ಕೆಪಾಸಿಟಿಗೆ ತಕ್ಕಂತೆ ವಿದ್ಯುತ್ ಉತ್ಪಾದಿಸಿ ಪೂರೈಸುತ್ತಿದ್ದೇವೆ. ನಾಲ್ಕೈದು ವರ್ಷಗಳಿಂದ ಬೇಡಿಕೆ ಹೆಚ್ಚಾಗಿರಲಿಲ್ಲ. ಈ ಬಾರಿ ಮಳೆ ಕೊರತೆಯಿಂದ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಷ್ಟೆ ಅಲ್ಲ, ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಬೇಡಿಕೆ ಹೆಚ್ಚಾಗಿದೆ.

ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ, ಮುಂಗಾರಿನಲ್ಲಿ ಮಾತ್ರ ಪವನ ವಿದ್ಯುತ್ ಹೆಚ್ಚಾಗುತ್ತದೆ ಅನಂತರ ತಗ್ಗಿದೆ. ಮಳೆ ಕೊರತೆಯಿಂದಾಗಿ ನೀರಾವರಿ ಪಂಪ್‍ಸೆಟ್ ಗಳಿಗೆ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ. ಕಳೆದ ವರ್ಷಕ್ಕಿಂತ ಶೇ.50ರಿಂದ 80ರಷ್ಟು ಹೆಚ್ಚಾಗಿದೆ. ಅದಕ್ಕೆ ಅನುಗುಣವಾಗಿ ನಾವು ನಮ್ಮ ಉತ್ಪಾದನೆಯನ್ನು ಶೇ.40ರಿಂದ 50ರಷ್ಟು ಹೆಚ್ಚಿಸಿದ್ದೇವೆ ಎಂದರು.

ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್

ಕಳೆದ ವರ್ಷ ಅಕ್ಟೋಬರ್ 24ರಂದು 7,647 ಮೆಗಾವ್ಯಾಟ್ ವಿದ್ಯುತ್ ಖರ್ಚಾಗಿತ್ತು, ಈ ವರ್ಷ ಅದೇ ದಿನ 13,812 ಮೇಗಾವ್ಯಾಟ್ ಬಳಕೆಯಾಗಿದೆ. ಶೇ,80ರಷ್ಟು ಬೇಡಿಕೆ ಹೆಚ್ಚಾಗಿದೆ. ಬೇರೆ ರಾಜ್ಯದಲ್ಲೂ ಶೇ.30ರಿಂದ 40ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.

2022ರ ಸೆಪ್ಟಂಬರ್ ತಿಂಗಳಿನಲ್ಲಿ ಗೃಹಬಳಕೆಗೆ 1236 ಮಿಲಿಯನ್ ಯೂನಿಟ್ ಇದ್ದರೆ, ಈ ವರ್ಷ ಅದೇ ತಿಂಗಳಿನಲ್ಲಿ 1287 ಯೂನಿಟ್ ಬಳಕೆಯಾಗಿದೆ, ಶೇ.4ರಷ್ಟು ಮಾತ್ರ ಹೆಚ್ಚಾಗಿದೆ. ಕೈಗಾರಿಕೆಗಳಿಗೆ ಕಳೆದ ವರ್ಷ 958 ಮಿಲಿಯನ್ ಯೂನಿಟ್ ಬಳಕೆಯಾಗಿದ್ದರೆ, 1041 ಯೂನಿಟ್ ಸೇರಿ ಶೇ.8ರಷ್ಟು ಹೆಚ್ಚಾಗಿದೆ. ವಾಣಿಜ್ಯ ಉದ್ದೇಶಕ್ಕೆ 572 ರ ಬದಲು 668 ಮಿಲಿಯನ್ ಯೂನಿಟ್ ಸೇರಿ ಶೇ.16ರಷ್ಟು ಹೆಚ್ಚಿದೆ. ನೀರಾವರಿ ಪಂಪ್ ಸೆಟ್‍ಗೆ 958 ಎದುರಾಗಿ 2426 ಮಿಲಿಯನ್ ಯೂನಿಟ್ ಅಂದರೆ ಶೇ.150 ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.

ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ನೀರಾವರಿಗೆ ತ್ರಿಪೇಸ್ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಉತ್ಪಾದನೆ ಹೆಚ್ಚಿಸಲು, ಬೇರೆ ರಾಜ್ಯಗಳಿಂದ ವಿನಿಮಯದ ಆಧಾರದ ಮೇಲೆ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದನ್ನು ಪರಿಶೀಲನೆ ಮಾಡಿದೆ.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಮಳೆಕೊರತೆಯಿಂದ ಶೇ.11ರಷ್ಟು ಜಲವಿದ್ಯುತ್ ಕಡಿತವಾಗಿದೆ. 2 ಗಿಗಾ ವ್ಯಾಟ್‍ನಷ್ಟು ಕಡಿಮೆಯಾಗಿದೆ. ಆದಾಗ್ಯೂ ತಡೆ ರಹಿತ ವಿದ್ಯುತ್ ಉತ್ಪಾದನೆಗೆ ವಿದೇಶಿ ಕಲ್ಲಿದ್ದಲನ್ನು ಆಮುದು ಮಾಡಿಕೊಂಡು ದೇಶಿಯ ಕಲ್ಲಿದ್ದಲಿನ ಜೊತೆಗೆ ಮಾರ್ಚ್ ವರೆಗೂ ಶೇ.6ರಷ್ಟು ಬ್ಲೆಂಡ್ ಮಾಡಲು ಸೂಚಿಸಲಾಗಿದೆ ಎಂದರು.

“ಬಿಜೆಪಿ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ, ಬಾಯಿ ಚಟಕ್ಕೆ ಮಾತಾಡ್ತಾರೆ”

ಬೆಂಗಳೂರು,ಅ.26- ಬಿಜೆಪಿ ನಾಯಕರಿಗೆ ಕೆಲಸವಿಲ್ಲ, ಬಾಯಿ ಚಟಕ್ಕೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತನವಾಗಲಿದೆ ಎಂಬುದು ಅವರ ಕನಸು ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಹಿಂದೆ ಲಿಂಗಾಯಿತ-ವೀರಶೈವ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದರು. ಮುಖ್ಯಮಂತ್ರಿ ಜೊತೆ ಮಾತುಕತೆ ನಡೆದಿರುವ ಹಾಗೂ ತಮ್ಮ ಹೇಳಿಕೆಯಲ್ಲಿ ಮೃಧುತ್ವದ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಡಿ ಶೇ.99ರಷ್ಟು ಮಂದಿ ಫಲಾನುಭವಿಗಳಿಗೆ ಹಣ ಬಂದಿದೆ. ಶೇ.1ರಷ್ಟು ವ್ಯತ್ಯಾಸವಾಗಿದೆ. ಅದನ್ನು ಸರಿ ಪಡಿಸಲಾಗುವುದು, ಯಾರಿಗೆ ಬಂದಿಲ್ಲ ಅವರಿಗೆ ತಕ್ಷಣ ಹಣ ಕೊಡಿಸಲಾಗುತ್ತದೆ ಎಂದರು.

ಶ್ಯಾಮನೂರು ಶಿವಶಂಕರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೊಂದಾಣಿಕೆ ಮಾಡಿಕೊಳ್ಳಲಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇನೆ ಎಂದರು.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಡಿಸೆಂಬರ್ 24ರಂದು ವೀರಶೈವ ಲಿಂಗಾಯಿತ ಮಹಾಸಮಾವೇಶ ನಡೆಯಲಿದೆ. ಬರ ಇರಲಿ, ಏನೇ ಇದ್ದರೂ ನಾವು ಸಮಾವೇಶ ಮಾಡೇ ಮಾಡೇ ಮಾಡುತ್ತೇವೆ. ಪ್ರಪಂಚವೇ ಕೆಳಗೆ ಬಿದ್ದರೂ ಪತ್ರಿಕೆಯವರು ಇರಲಿ, ಇಲ್ಲದೆ ಇರಲಿ ನಾವು ನಿಲ್ಲಿಸುವುದಿಲ್ಲ. ಏನು ತಿಳಿದುಕೊಂಡಿದ್ದಿಯಾ ಎಂದು ಮರು ಪ್ರಶ್ನಿಸಿದರು.

ಸಮಾವೇಶಕ್ಕೆ ಮುಖ್ಯಮಂತ್ರಿಯವರನ್ನು ಕರೆಯುವುದಿಲ್ಲ. ಲಿಂಗಾಯಿತ-ವೀರಶೈವ ಸಮಾವೇಶವದು ಸಮುದಾಯದವರನ್ನು ಕರೆಯುತ್ತೇವೆ. ಅದರಲ್ಲೂ ರಾಜಕೀಯ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸಮುದಾಯದ 70 ಮಂದಿ ಯುವ ಶಾಸಕರೆಲ್ಲಾ ಒಂದು, ಹಿರಿಯರಲ್ಲಾ ಒಂದು ಎಂದು ಚೆನ್ನಗಿರಿ ಶಾಸಕರು ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಶಾಮನೂರು ಶಿವಶಂಕರಪ್ಪ, ಈ ವಿಷಯದಲ್ಲಿ ಅವನನ್ನೇ ಕೇಳಿ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಸಮಯ ಬಂದಾಗ ನೋಡಿಕೊಳ್ಳೋಣ ಈಗ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದ ಅವರು, ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಷಯ ತೆಗೆದುಕೊಂಡು ನಾವೇನು ಮಾಡೋಣ. ನಮಗೆ ದಾವಣಗೆರೆ ವಿಷಯಗಳಿದ್ದರೆ ಹೇಳಿ ಎಂದರು.

ಕಾವಲುಗಾರನ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

ನವದೆಹಲಿ,ಅ.26- ಕಾವಲುಗಾರನ ಕಾರ್ಯಕ್ಷಮತೆಯಿಂದಾಗಿ ದೇಶದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ರೈಲು ದುರಂತ ತಪ್ಪಿದೆ. ಭಂಡಾಯ್ ನಿಲ್ದಾಣದ ಬಳಿಯ ರೈಲ್ವೇ ಕ್ರಾಸಿಂಗ್ ಒಂದರಲ್ಲಿ ನಿಯೋಜನೆಗೊಂಡಿರುವ ನಿವೃತ್ತ ಸೇನಾ ಅಧಿಕಾರಿ ಗೇಟ್‍ಮ್ಯಾನ್ ಯಶಪಾಲ್ ಸಿಂಗ್ ನೂರಾರು ಜನರ ಪ್ರಾಣ ರಕ್ಷಿಸಿದ ವ್ಯಕ್ತಿಯಾಗಿದ್ದಾರೆ.

ಒಂದು ವೇಳೆ ಅವರು ಕರ್ತವ್ಯ ಲೋಪ ಮಾಡಿದ್ದರೆ ರೈಲಿಗೆ ಬಿದ್ದ ಬೆಂಕಿಯಿಂದ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎನ್ನಲಾಗಿದೆ. ರೈಲು ಭಂಡಾಯ್ ನಿಲ್ದಾಣವನ್ನು ತಲುಪುವ ಮೊದಲು ನಿನ್ನೆ ಮಧ್ಯಾಹ್ನ 3.35 ಕ್ಕೆ ಗೇಟ್ ಮೂಲಕ ಹಾದುಹೋದಾಗ, ಸಿಂಗ್ ಇಂಜಿನ್‍ನಿಂದ 4 ನೇ ಕೋಚ್‍ನಿಂದ ಹೊಗೆ ಬರುತ್ತಿರುವುದನ್ನು ಪತ್ತೆ ಹಚ್ಚಿ ತಕ್ಷಣವೇ ನಿಲ್ದಾಣದ ಉಪ ಸ್ಟೇಷನ್ ಸೂಪರಿಂಟೆಂಡೆಂಟ್ ಹರಿದಾಸ್ ಅವರಿಗೆ ಮಾಹಿತಿ ನೀಡಿದರು.

ರೈಲು ನಿಯಂತ್ರಕರು ತಕ್ಷಣವೇ ಓಎಚ್‍ಇ (ಓವರ್ ಹೆಡ್ ಎಕ್ವಿಪ್‍ಮೆಂಟï) ಉಸ್ತುವಾರಿ ವಹಿಸಿರುವ ಎಲ್ಲಾ ರೈಲುಗಳ ವಿದ್ಯುತ್ ಸರಬರಾಜನ್ನು ಆಯಾ ಸ್ಥಳಗಳಲ್ಲಿ ಅಪ್ ಅಂಡ್ ಡೌನ್ ದಿಕ್ಕುಗಳಲ್ಲಿ ಅವುಗಳನ್ನು ನಿಲ್ಲಿಸುವಂತೆ ನಿರ್ದೇಶಿಸಿದ್ದರು.

ದುರ್ಗಾಪೂಜೆ ವೇಳೆ ಪಾಕ್ ಪರ ಘೋಷಣೆ : ಅಪ್ರಾಪ್ತ ಬಾಲಕಿ ಸೇರಿ 6 ಜನರ ಅರೆಸ್ಟ್

ಪಟಾಲ್‍ಕೋಟ್ ಎಕ್ಸ್‍ಪ್ರೆಸ್ ಮಧ್ಯಾಹ್ನ 3.37 ಕ್ಕೆ ನಿಂತಾಗ, ಅದು ಈಗಾಗಲೇ ಭಂಡಾಯ್ ನಿಲ್ದಾಣವನ್ನು ದಾಟಿತ್ತು. 10 ನಿಮಿಷಗಳಲ್ಲಿ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸ್ಪಾರ್ಟ್ (ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲು) ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.

ಅಷ್ಟೊತ್ತಿಗೆ ಬೆಂಕಿ ಎರಡು ಕೋಚ್‍ಗಳನ್ನು ಆವರಿಸಿತ್ತು. ಇಂಜಿನ್‍ನಿಂದ 3 ನೇ ಮತ್ತು 4 ನೇ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸಮಯಕ್ಕೆ ಸ್ಥಳಾಂತರಿಸಲಾಯಿತು. ಸಂಜೆ 5.10 ರ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು ಮತ್ತು ಒಟ್ಟು 11 ಜನರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ರೈಲ್ವೆ ರಕ್ಷಣಾ ಪಡೆ ತಿಳಿಸಿದೆ.

ಘಟನೆಯಲ್ಲಿ ರಾಹುಲ್ ಕುಮಾರ್ (18), ಮೋಹಿತ್ (25), ಶಿವಂ (18) ಮನೋಜ್ ಕುಮಾರ್ (34), ಹರದಯಾಳ್ (59), ಮಣಿರಾಮ್ (45), ರಾಮೇಶ್ವರ್ (29), ಗೌರವ್ (22), ಸಿದ್ಧಾರ್ಥ್ (18) ಹಿತೇಶ್ (17) ಮತ್ತು ರೈಲಿಗೆ ಬೆಂಕಿ ತಗುಲಿ ವಿಕಾಸ್ (17) ಗಾಯಗೊಂಡಿದ್ದಾರೆ.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ರೈಲು ಪಂಜಾಬ್‍ನ ಫಿರೋಜ್‍ಪುರ ಕಂಟೋನ್ಮೆಂಟ್‍ನಿಂದ ಮಧ್ಯಪ್ರದೇಶದ ಸಿಯೋನಿಗೆ ಹೋಗುತ್ತಿದ್ದಾಗ ಆಗ್ರಾದಿಂದ 10 ಕಿಮೀ ದೂರದಲ್ಲಿರುವ ಭಂಡಾಯ್ ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‍ಒ ಶ್ರೀವಾಸ್ತವ ತಿಳಿಸಿದ್ದಾರೆ.

ಬೆಂಕಿ ಹಚ್ಚಿ ಹೆತ್ತ ತಾಯಿಯನ್ನೇ ಕೊಂದ ಮಗ

ಮುಂಬೈ,ಅ.26- ಊಟ ಬಡಿಸುವ ವಿಚಾರದಲ್ಲಿ ತನ್ನ ತಾಯಿಯೊಂದಿಗೆ ಜಗಳವಾಡಿದ ಮಗ ಕೋಪದ ಭರದಲ್ಲಿ ಆಕೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ರೇವದಂಡ ಬಳಿಯ ನವಖರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀರು ತಿಳಿಸಿದ್ದಾರೆ.

ದೇಹದಾದ್ಯಂತ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆ ಇಂದು ಬೆಳಗ್ಗೆ ಅಲಿಬಾಗ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮಗನಿಂದಲೆ ಸಾವನ್ನಪ್ಪಿದ ಹತಭಾಗ್ಯ ತಾಯಿಯನ್ನು ಚಂಗುನಾ ನಾಮದೇ ಖೋಟ್ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಊಟ ತಯಾರಿಸಿ ಬಡಿಸುವ ವಿಚಾರದಲ್ಲಿ ಜಗಳವಾಡಿದ ಆಕೆಯ ಮಗ ಜಯೇಶ್ ಆಕೆಯನ್ನು ಥಳಿಸಿದ್ದಾನೆ. ಕೋಪದ ಭರದಲ್ಲಿ, ಅವನು ಅವಳನ್ನು ಮನೆಯ ಮುಂಭಾಗದ ತೆರೆದ ಜಾಗಕ್ಕೆ ಎಳೆದೊಯ್ದು, ಒಣಮರವನ್ನು ಸಂಗ್ರಹಿಸಿ ಬೆಂಕಿ ಹಚ್ಚಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ರಾವದಂಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ತಿಳಿಸಿರುವ ಪೊಲೀಸರು ತಲೆಮರೆಸಿಕೊಂಡಿದ್ದ ಜಯೇಶ್‍ನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

2025ರ ವೇಳೆಗೆ ಬತ್ತಿಹೋಗಲಿದೆಯಂತೆ ಇಂಡೋ-ಗಂಗಾ ಜಲಾನಯನ ಪ್ರದೇಶ

ನವದೆಹಲಿ,ಅ.26- ಮುಂಬರುವ 2025ರ ವೇಲೆ ಭಾರತದಲ್ಲಿನ ಇಂಡೋ-ಗಂಗಾ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿಯಲಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು ತಿಳಿಸಿದೆ. ಇಂಟರ್‍ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023 ಎಂಬ ಶೀರ್ಷಿಕೆಯಡಿ ಮತ್ತು ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯದಿಂದ ಈ ವರದಿಯನ್ನು ಪ್ರಕಟಿಸಲ್ಪಟ್ಟಿದೆ.

ಇನ್‍ಸ್ಟಿಟ್ಯೂಟ್ ಫರ್ ಎನ್ವಿರಾನ್‍ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ ವರದಿಯು ಪ್ರಪಂಚವು ಆರು ಪರಿಸರದ ತುದಿಗಳನ್ನು ಸಮೀಪಿಸುತ್ತಿದೆ ಎಂದು ತೋರಿಸುತ್ತದೆ: ವೇಗವರ್ಧಿತ ಅಳಿವುಗಳು, ಅಂತರ್ಜಲ ಕುಸಿತ, ಪರ್ವತ ಹಿಮನದಿ ಕರಗುವಿಕೆ , ಬಾಹ್ಯಾಕಾಶ ಅವಶೇಷಗಳು, ಅಸಹನೀಯ ಶಾಖ ಮತ್ತು ವಿಮೆ ಮಾಡಲಾಗದ ಭವಿಷ್ಯ ಎಂದು ಪ್ರಕಟಿಸಿದೆ.

ಪರಿಸರದ ಟಿಪ್ಪಿಂಗ್ ಪಾಯಿಂಟ್‍ಗಳು ಭೂಮಿಯ ವ್ಯವಸ್ಥೆಗಳಲ್ಲಿ ನಿರ್ಣಾಯಕ ಮಿತಿಗಳಾಗಿವೆ, ಅದನ್ನು ಮೀರಿ ಹಠಾತ್ ಮತ್ತು ಆಗಾಗ್ಗೆ ಬದಲಾಯಿಸಲಾಗದ ಬದಲಾವಣೆಗಳು ಸಂಭವಿಸುತ್ತವೆ, ಇದು ಪರಿಸರ ವ್ಯವಸ್ಥೆಗಳು, ಹವಾಮಾನ ಮಾದರಿಗಳು ಮತ್ತು ಒಟ್ಟಾರೆ ಪರಿಸರದಲ್ಲಿ ಆಳವಾದ ಮತ್ತು ಕೆಲವೊಮ್ಮೆ ದುರಂತ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಅಂತರ್ಜಲ ಹಿಂತೆಗೆದುಕೊಳ್ಳುವಿಕೆಯ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ ಬಳಸಲಾಗುತ್ತದೆ, ಆಗಾಗ್ಗೆ ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಚರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಡಲಾಗಿದೆ.

ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಚರಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿಗಳಿಂದ ಪ್ರವೇಶಿಸಬಹುದಾದ ಮಟ್ಟಕ್ಕಿಂತ ಕೆಳಗಿರುವ ನೀರಿನ ಮಟ್ಟವು ಕಡಿಮೆಯಾದಾಗ, ರೈತರು ನೀರಿನ ಪ್ರವೇಶವನ್ನು ಕಳೆದುಕೊಳ್ಳಬಹುದು, ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಲಾಗಿದೆ.

ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಅಪಾಯದ ತುದಿಯನ್ನು ಮೀರಿದೆ, ಆದರೆ ಭಾರತ ಕೂಡ ಅಂತಹ ಪರಿಸ್ಥಿತಿಗೆ ಎದುರಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಭಾರತವು ಅಮೆರಿಕ ಮತ್ತು ಚೀನಾದ ಬಳಕೆಯನ್ನು ಮೀರಿದ ಅಂತರ್ಜಲ ಬಳಕೆಯ ವಿಶ್ವದ ಅತಿದೊಡ್ಡ ಬಳಕೆದಾರರಾಗಿದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 1.4 ಶತಕೋಟಿ ಜನರಿಗೆ ಬ್ರೆಡ್ ಬುಟ್ಟಿಯಾಗಿ ಕಾರ್ಯನಿರ್ವಹಿಸುತ್ತದೆ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು 50 ಪ್ರತಿಶತವನ್ನು ಉತ್ಪಾದಿಸುತ್ತವೆ. ದೇಶದ ಅಕ್ಕಿ ಪೂರೈಕೆ ಮತ್ತು ಅದರ ಶೇ.85 ಗೋಧಿ ದಾಸ್ತಾನು ಇರುವುದು ವಿಶೇಷ.

ಗಾಜಾ ಮೇಲೆ ಗ್ರೌಂಡ್ ಆಪರೇಷನ್‌ಗೆ ಇಸ್ರೇಲ್ ಸಿದ್ಧತೆ : ನೆತನ್ಯಾಹು ಘೋಷಣೆ

ಆದಾಗ್ಯೂ, ಪಂಜಾಬ್‍ನ ಶೇಕಡಾ 78 ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಒಟ್ಟಾರೆಯಾಗಿ ವಾಯುವ್ಯ ಪ್ರದೇಶವು 2025 ರ ವೇಳೆಗೆ ವಿಮರ್ಶಾತ್ಮಕವಾಗಿ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.

ದೇವಾಲಯಗಳ ಆವರಣದಲ್ಲಿ RSS ಚಟುವಟಿಕೆ ನಿಷೇಧ ಸಮರ್ಥಿಸಿಕೊಂಡ ಕೇರಳ

ತಿರುವನಂತಪುರಂ, ಅ 26 (ಪಿಟಿಐ) ತನ್ನ ನಿಯಂತ್ರಣದಲ್ಲಿರುವ ದೇವಾಲಯಗಳ ಆವರಣದಲ್ಲಿ ಆರ್‍ಎಸ್‍ಎಸ್ ಚಟುವಟಿಕೆಗಳನ್ನು ನಿಷೇಧಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯನ್ನು ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಈ ನಿರ್ಧಾರ ಯಾರನ್ನೂ ದೂರವಿಡುವ ಉದ್ದೇಶ ಹೊಂದಿಲ್ಲ ಆದರೆ ದೇವಾಲಯಗಳಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ದೇವಸ್ವಂ ಆಯುಕ್ತರು ಹೊರಡಿಸಿದ ಸುತ್ತೋಲೆಯು ದೇವಸ್ಥಾನಗಳಿಗೆ ಯಾರನ್ನೂ ಪ್ರವೇಶಿಸದಂತೆ ತಡೆಯುವ ಉದ್ದೇಶವನ್ನು ಹೊಂದಿರಲಿಲ್ಲ ಮತ್ತು ಈ ವಿವಾದವು ಸಂಪೂರ್ಣವಾಗಿ ಅನಗತ್ಯವಾಗಿದೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಟಿಡಿಬಿಯ ಸುತ್ತೋಲೆಯ ವಿರುದ್ಧ ಬಲಪಂಥೀಯ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ವ್ಯಾಪಕ ಟೀಕೆಗಳು ಮತ್ತು ತೀವ್ರ ಚರ್ಚೆಯ ಹಿನ್ನೆಲೆಯಲ್ಲಿ ಸಚಿವರ ಪ್ರತಿಕ್ರಿಯೆ ಬಂದಿದೆ, ಇದು ಸಂಘ ಪರಿವಾರವನ್ನು ರಾಜ್ಯದಲ್ಲಿ ದೇಗುಲಗಳಿಂದ ದೂರವಿಡಲು ಎಡ ಸರ್ಕಾರದ ಕ್ರಮವಾಗಿದೆ ಎಂದು ಆರೋಪಿಸಲಾಗುತ್ತಿದೆ. ಕೇರಳದ ತಿರುವಾಂಕೂರು ಪ್ರದೇಶದಲ್ಲಿನ ಪ್ರಮುಖ ದೇವಾಲಯಗಳನ್ನು ನಿರ್ವಹಿಸುವ ಉನ್ನತ ದೇವಾಲಯದ ಸಂಸ್ಥೆಯಾಗಿದೆ.

ಪೂಜಾ ಸ್ಥಳಗಳು ಸದಾ ಶಾಂತಿಯ ಕೇಂದ್ರಗಳಾಗಬೇಕು. ಎಲ್ಲ ಭಕ್ತರು ಶಾಂತಿಯುತವಾಗಿ ಬಂದು ಪ್ರಾರ್ಥನೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ರಾಧಾಕೃಷ್ಣನ್ ಹೇಳಿದರು. ದೇವಸ್ವಂ ಕಮಿಷನರ್ ಹೊರಡಿಸಿರುವ ಸುತ್ತೋಲೆ ಪ್ರಕಾರ, ದೇವಸ್ಥಾನದ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುವ ದೇಗುಲಗಳ ಆವರಣದಲ್ಲಿ ನಾಮಜಪ ಪ್ರತಿಭಟನೆ (ಮಂತ್ರಗಳನ್ನು ಪಠಿಸುವ ಮೂಲಕ ಪ್ರತಿಭಟನೆಗಳು) ಸಹ ನಿಷೇಧಿಸಲಾಗಿದೆ.

ಗಾಜಾ ಮೇಲೆ ಗ್ರೌಂಡ್ ಆಪರೇಷನ್‌ಗೆ ಇಸ್ರೇಲ್ ಸಿದ್ಧತೆ : ನೆತನ್ಯಾಹು ಘೋಷಣೆ

ಟಿಡಿಬಿಯ ಅನುಮತಿಯಿಲ್ಲದೆ ಆರ್‍ಎಸ್‍ಎಸ್ ಮತ್ತು ತೀವ್ರ ಸಿದ್ಧಾಂತಗಳನ್ನು ಹೊಂದಿರುವ ಸಂಘಟನೆಗಳ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಅದು ಹೇಳಿದೆ.

ಚಿಕ್ಕಬಳ್ಳಾಪುರ : ಸಿಮೆಂಟ್ ಬಲ್ಕರ್ ಲಾರಿಗೆ ಟಾಟಾ ಸುಮೋ ಡಿಕ್ಕಿ , 13 ಮಂದಿ ದುರ್ಮರಣ

ಚಿಕ್ಕಬಳ್ಳಾಪುರ, ಅ.26- ಕುಟುಂಬದವರೊಂದಿಗೆ ಖುಷಿ ಖುಷಿಯಿಂದ ಹಬ್ಬ ಮುಗಿಸಿಕೊಂಡು ಕಾಯಕಕ್ಕೆ ಮರಳುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ 13 ಮಂದಿಯನ್ನು ಬಲಿತೆಗೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವತಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.

ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ಗಂಡು ಮಗು ಮೃತಪಟ್ಟಿದ್ದು,
ಕೆಲವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣಾ (40) ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರದ ಕೊತ್ತಚೆರಮ ನಿವಾಸಿ ಪೆರುಮಾಳ್, ಕಾವಲ್ ಬೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದ್ದು, ಉಳಿದವರ ಹೆಸರು, ವಿಳಾಸಕ್ಕಾಗಿ ಪೊಲೀಸರು ಮಾಹತಿ ಕಲೆ ಹಾಕುತ್ತಿದ್ದಾರೆ.

ಆಯುಧ ಪೂಜೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಸಂಭ್ರಮದಿಂದ ಕುಟುಂಬದವರೊಂದಿಗೆ ಹಬ್ಬ ಮಾಡಿಕೊಂಡು ರಾತ್ರಿ ಬೆಂಗಳೂರಿಗೆ ಮರಳಲು ಆಂಧ್ರದ ಕಡೆಯಿಂದ ಬರುತಿದ್ದ ಟಾಟಾಸುಮೋ ಹತ್ತಿದ್ದಾರೆ. ಆಂಧ್ರ ನೊಂದಣಿಯ ಟಾಟಾ ಸುಮೋ ಚಾಲಕ ಮಾರ್ಗಮಧ್ಯೆ ಬೇರೆ ಬೇರೆ ಊರಿನಲ್ಲಿ ಬೆಂಗಳೂರಿಗೆ ತೆರಳಲು ವಾಹನಕ್ಕಾಗಿ ರಸ್ತೆ ಬದಿ ಕಾಯುತ್ತಿದ್ದ ಜನರನ್ನು ಹತ್ತಿಸಿಕೊಂಡು ಒಟ್ಟು 13 ಮಂದಿಯನ್ನು ಕರೆದುಕೊಂಡು ಬಾಗೇಪಲ್ಲಿ -ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಅತೀ ವೇಗವಾಗಿ ಬರುತ್ತಿದ್ದನು.


ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಾವತಿಯ ಬಳಿ ಬರುತ್ತಿದ್ದಂತೆ ರಸ್ತೆ ಬದಿ ಯಾವುದೇ ಸೂಚನಾ ದೀಪ (ಬ್ಲಿಕಿಂಗ್ ಲೈಟ್) ಹಾಕದೆ ಸಿಮೆಂಟ್ ಬಲ್ಕರ್ ಲಾರಿ ನಿಲ್ಲಿಸಿರುವುದು ಚಾಲಕನ ಗಮನಕ್ಕೆ ಬಾರದೆ ವೇಗವಾಗಿ ಟಾಟಾ ಸುಮೋ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತ ಸಂಭವಿಸುತ್ತದ್ದಂತೆ ಸುತ್ತಮುತ್ತಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಟಾಟಾ ಸುಮೋ ವಾಹನದ ಬಾಗಿಲುಗಳನ್ನು ತೆಗೆದು ಸಂತ್ರಸ್ಥರನ್ನು ರಕ್ಷಿಸಲು ಮುಂದಾದರು. ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಟಾಟಾ ಸುಮೋ ವಾಹನದೊಳಗೆ ಗಂಭೀರ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ 7 ಮಂದಿ ಮೃತಪಟ್ಟಿದ್ದಾರೆ.ಆಸ್ಪತ್ರೆಗೆ ದಾಖಲಿಸಿದ್ದ ಉಳಿದಿದ್ದ ಒಬ್ಬ ಮಹಿಳೆಯೂ ಚಿಕಿತ್ಸೆ ಫಲಿಸದೆ 10 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.

ಮಂಜು ಕವಿದ ವಾತಾವರಣ
ಬೆಳ್ಳಂಬೆಳಗ್ಗೆ ವಿಪರಿತ ಮಂಜು ಕವಿದಿದ್ದು ಟಾಟಾಸುಮೋ ಚಾಲಕನಿಗೆ ರಸ್ತೆ ಕಾಣದೆ ಲಾರಿಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ವಾಹನದೊಳಗೆಸಿಕ್ಕಿಕೊಂಡು ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುದ್ದಿತಿಳಿದ ಕೂಡಲೆ ಜಿಲ್ಲಾಪೊಲೀಸ್ ವರಿಷ್ಟಾಕಾರಿ ನಾಗೇಶ್ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ ನಾಗೇಶ್, ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೆ ಈ ಅಪಘಾತ ಸಂಭವಿಸಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ. ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸಿದ್ದರೂ ರಾತ್ರಿ ವೇಳೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಚಾಲಕರು ನಿದ್ರೆ ಮಾಡುತ್ತಾರೆ. ಹಾಗಾಗಿ ಇಂತಹ ಅಚಾತುರ್ಯಗಳು ನಡೆಯುತ್ತಿವೆ. ಈ ಬಗ್ಗೆ ಲಾರಿ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ರವೀಂದ್ರ ಅವರು ಸ್ಥಳಕ್ಕೆ ಆಗಮಿಸಿ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕುಟುಂಬಸ್ಥರ ಆಕ್ರಂದನ :ಹಬ್ಬ ಮುಗಿಸಿಕೊಂಡು ವಾಪಸ್ಸು ತಮ್ಮ ಮನೆಗಳಿಗೆ ತೆರಳಲು ಹೋಗುವುದಾಗಿ ಕುಟುಂಬಸ್ಥರಿಗೆ ಹೇಳಿ ಹೋಗಿದ್ದವರು ಮಾರ್ಗಮಧ್ಯೆಯೇ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಜೇಬು, ಬ್ಯಾಗ್‍ಗಳಲ್ಲಿದ್ದ ಐಡಿ ಕಾರ್ಡ್, ಮೊಬೈಲ್‍ಗಳಿಂದ ಅವರ ವಾರಸುದಾರರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ.

ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಊರುಗಳಿಂದ ಬಂದು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.