Friday, November 7, 2025
Home Blog Page 44

ಉಡುಪಿ : ಸಮುದ್ರದಲ್ಲಿ ಮುಳುಗಿ ಮೂವರು ಬಾಲಕರ ಸಾವು

ಉಡುಪಿ,ಅ.15- ಸಮುದ್ರದಲ್ಲಿ ಈಜಲು ಹೋಗಿ ಮೂವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಸಂಕೇತ್‌ (16), ಸೂರಜ್‌ (15) ಮತ್ತು ಆಶಿಶ್‌ (14) ಎಂದು ಗುರುತಿಸಲಾಗಿದೆ.

ಕಿರಿಮಂಜೇಶ್ವರ ಗ್ರಾಮದ ಬಳಿಯ ಕೊಡೇರಿ ಹೊಸಹಿತ್ಲುವಿನ ಕರಾವಳಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾಲ್ವರು ಅಪ್ರಾಪ್ತ ಬಾಲಕರು ಆಟವಾಡುತ್ತಾ ಸಮುದ್ರದಲ್ಲಿ ಈಜಾಡುವಾಗ ಮುಳುಗಿದ್ದಾರೆ. ಹೊರಗೆ ಬರಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಆದರೆ ಒಬ್ಬ ಈಜಿ ದಡ
ಸೇರಿದ ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಕಾರ್ಯಾಚರಣೆ ನಡೆಸಿ ಮೂರು ಬಾಲಕರ ಶವಗಳನ್ನುಪತ್ತೆಹಚ್ಚಿದ್ದೇವೆ ಒಬ್ಬ ಅಸ್ವಸ್ಥ ಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ,ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ದುರಂತಕ್ಕೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಪಾಕ್ ಮತ್ತೆ ದುಷ್ಕೃತ್ಯ ಎಸಗಿದರೆ ಆಪರೇಷನ್‌ ಸಿಂಧೂರ್‌ 2.0 ಡೆಡ್ಲಿ ಆಗಿರುತ್ತೆ”

ನವದೆಹಲಿ, ಅ.15– ಪಾಕಿಸ್ತಾನ ಭಾರತದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿಲ್ಲ. ಆದರೆ ಪಹಲ್ಗಾಮ್‌ ಮಾದರಿಯ ದಾಳಿಯನ್ನು ಮತ್ತೆ ಪ್ರಯತ್ನಿಸಬಹುದು. ಒಂದು ವೇಳೆ ಮತ್ತೊಮೆ ಅಂತಹ ಕೃತ್ಯಕ್ಕೆ ಕೈ ಹಾಕಿದರೆ ಆಪರೇಷನ್‌ ಸಿಂಧೂರ್‌ 2.0 ಅವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಪಶ್ಚಿಮ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಕುಮಾರ್‌ ಕಟಿಯಾರ್‌ ಪ್ರತಿಪಾದಿಸಿದ್ದಾರೆ.

ಮುಂದಿನ ಬಾರಿ ನಾವು ತೆಗೆದುಕೊಳ್ಳುವ ಕ್ರಮವು ಹಿಂದಿನದಕ್ಕಿಂತ ಹೆಚ್ಚು ಮಾರಕವಾಗಿರುತ್ತದೆ. ಅದು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹೌದು, ನೀವು ಹೇಳಿದ್ದು ತುಂಬಾ ಸರಿ – (ಆಪರೇಷನ್‌ ಸಿಂಧೂರ್‌ 2.0) ಹೆಚ್ಚು ಮಾರಕವಾಗಿರಬೇಕು. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಲೆಫ್ಟಿನೆಂಟ್‌ ಜನರಲ್‌ ಕಟಿಯಾರ್‌ ವರದಿಗಾರರಿಗೆ ತಿಳಿಸಿದರು.

ಆಪರೇಷನ್‌ ಸಿಂದೂರ್‌ 2.0 ಮೊದಲನೆಯದಕ್ಕಿಂತ ಹೆಚ್ಚು ಮಾರಕವಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಪಹಲ್ಗಾಮ್‌ ಮಾದರಿಯ ದಾಳಿಗಳು ನಡೆಯುತ್ತವೆಯೇ ಎಂದು ಕೇಳಿದಾಗ, ಪಾಕಿಸ್ತಾನದ ಚಿಂತನೆಯಲ್ಲಿ ಬದಲಾವಣೆ ಬರುವವರೆಗೆ, ಅದು ಅಂತಹ ದುಷ್ಕೃತ್ಯಗಳನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ನಮ್ಮೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಅದಕ್ಕಿಲ್ಲ. ಅವರು ಯುದ್ಧ ಮಾಡಲು ಬಯಸುವುದಿಲ್ಲ. ಸಾವಿರ ಕಡಿತಗಳ ಮೂಲಕ ಭಾರತವನ್ನು ರಕ್ತಸಿಕ್ತಗೊಳಿಸುವ ನೀತಿಯಂತೆ ಅದು ದುಷ್ಕೃತ್ಯಗಳನ್ನು ಎಸಗುತ್ತದೆ ಎಂದು ಅವರು ಹೇಳಿದರು.
ಆಪರೇಷನ್‌ ಸಿಂಧೂರ್‌ನಲ್ಲಿ ಭಾರತ ಪಾಕಿಸ್ತಾನದ ಮೇಲೆ ಭಾರೀ ಹಾನಿಯನ್ನುಂಟುಮಾಡಿದೆ ಎಂದು ಪಶ್ಚಿಮ ಸೇನಾ ಕಮಾಂಡರ್‌ ಹೇಳಿದರು. ನಾವು ಅದರ ನೆಲೆಗಳು ಮತ್ತು ವಾಯುನೆಲೆಗಳನ್ನು ನಾಶಪಡಿಸಿದ್ದೇವೆ, ಆದರೆ ಅದು ಮತ್ತೆ ಪಹಲ್ಗಾಮ್‌ ದಾಳಿಯಂತಹದನ್ನು ಪ್ರಯತ್ನಿಸಬಹುದು. ನಾವು ಸಿದ್ಧರಾಗಿರಬೇಕು. ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ.

ಈ ಬಾರಿಯ ಕ್ರಮವು ಹಿಂದಿನದಕ್ಕಿಂತ ಹೆಚ್ಚು ಮಾರಕವಾಗಿರುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು. ಆಪರೇಷನ್‌ ಸಿಂಧೂರ್‌ನಲ್ಲಿ ಸಶಸ್ತ್ರ ಪಡೆಗಳ ಪಾತ್ರಕ್ಕಾಗಿ ಸೇನಾ ಕಮಾಂಡರ್‌ ಅವರನ್ನು ಶ್ಲಾಘಿಸಿದರು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಅದು ಸೂಕ್ತ ಉತ್ತರವನ್ನು ನೀಡಿದೆ ಎಂದು ಹೇಳಿದರು.ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮತ್ತೆ ಭಯೋತ್ಪಾದಕ ದಾಳಿಯ ಮೂಲಕ ದುಷ್ಕೃತ್ಯದ ದಾಳಿಗೆ ಪ್ರಯತ್ನಿಸಿತು, ಆದರೆ ಭಾರತೀಯ ಸೇನೆಯು ಬಲವಾಗಿ ಪ್ರತಿಕ್ರಿಯಿಸಿತು. ಆಪರೇಷನ್‌ ಸಿಂಧೂರ್‌ನಲ್ಲಿ, ನಾವು ಸಾರ್ವಜನಿಕರು, ನಿವೃತ್ತ ಸೈನಿಕರು, ರಾಜ್ಯ ಮತ್ತು ನಾಗರಿಕ ಆಡಳಿತ ಮತ್ತು ಇತರ ಎಲ್ಲರಿಂದ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.

1965 ರ ಭಾರತ-ಪಾಕಿಸ್ತಾನ ಯುದ್ಧದ 60 ವರ್ಷಗಳನ್ನು ಸ್ಮರಿಸಲು ಮಾಜಿ ಸೈನಿಕರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್‌ ದಾಳಿಯಲ್ಲಿ ಭಯೋತ್ಪಾದಕರು ಅಮಾಯಕ ಜನರನ್ನು ಕೊಂದಿದ್ದಾರೆ ಎಂದು ಹೇಳಿದರು. ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿತು. ಆಡಳಿತ, ಮಾಜಿ ಸೈನಿಕರು ಮತ್ತು ಸ್ಥಳೀಯ ಜನರಿಂದ ನಮಗೆ ಸಂಪೂರ್ಣ ಬೆಂಬಲ ದೊರೆತ ಕಾರಣ ಆಪರೇಷನ್‌ ಸಿಂಧೂರ್‌ ಯಶಸ್ವಿಯಾಗಿದೆ.

ನೆರೆಯ ರಾಷ್ಟ್ರದ ಭವಿಷ್ಯದ ದಾಳಿಗಳನ್ನು ತಡೆಯಲು ಪಡೆಗಳು ಸಿದ್ಧವಾಗಿವೆ ಎಂದು ಸೇನಾ ಕಮಾಂಡರ್‌ ಸಮರ್ಥಿಸಿಕೊಂಡರು.ಪಾಕಿಸ್ತಾನಕ್ಕೆ ಭಾರತವನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ ಮತ್ತು ಅದರ ಉದ್ದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನದ ವರ್ತನೆ ಬದಲಾಗುವುದಿಲ್ಲ ಎಂದು ನಾವು ನಂಬುತ್ತೇವೆ. ಅದು ನಮ್ಮ ಮೇಲೆ ಮತ್ತೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ನಮ್ಮನ್ನು ನೇರವಾಗಿ ಎದುರಿಸುವ ಧೈರ್ಯ ಅದಕ್ಕೆ ಇಲ್ಲ, ಆದ್ದರಿಂದ ಅದು ಪಹಲ್ಗಾಮ್‌ನಲ್ಲಿ ನಡೆದಂತಹ ಮತ್ತೊಂದು ಭಯೋತ್ಪಾದಕ ದಾಳಿಯನ್ನು ಪ್ರಯತ್ನಿಸುತ್ತದೆ. ನಾವು ಜಾಗರೂಕರಾಗಿರುವುದು ಮುಖ್ಯ. ಪಾಕಿಸ್ತಾನದ ಯಾವುದೇ ದುರುದ್ದೇಶಪೂರಿತ ನಡೆಯನ್ನು ತಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌‍ ಪಕ್ಷಕ್ಕೆ ದಮ್ಮು-ತಾಕತ್ತು ಇದ್ದರೆ ಆರ್‌ಎಸ್‌‍ಎಸ್‌‍ ನಿಷೇಧ ಮಾಡಲಿ : ವಿಜಯೇಂದ್ರ

ಚಿತ್ರದುರ್ಗ,ಅ.15- ಸಾಲು ಸಾಲು ಚುನಾವಣೆ ಸೋತು ದೇಶದಲ್ಲೇ ಅಸ್ತಿತ್ವಕ್ಕೆ ಪರದಾಡುತ್ತಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಆರ್‌ಎಸ್‌‍ಎಸ್‌‍ ನಿಷೇಧ ಮಾಡುವ ದಮ್ಮು ಇಲ್ಲವೇ ತಾಕತ್ತು ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌‍ಎಸ್‌‍ ನಿಷೇಧ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಮೂರ್ಖತನದ ಪರಮಾವಧಿ. ನಿಮಿಂದ ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ದೇಶದಲ್ಲಿ ಕಾಂಗ್ರೆಸ್‌‍ ಎಲ್ಲಾ ಚುನಾವಣೆಗಳಲ್ಲಿ ಸೋತು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಒಂದೆರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇಂತಹ ಪಕ್ಷ ಶತಮಾನಗಳ ಇತಿಹಾಸವಿರುವ ಆರ್‌ಎಸ್‌‍ಎಸ್‌‍ನ್ನು ನಿಷೇಧ ಮಾಡುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಅದನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದರು.

ಆರ್‌ಎಸ್‌‍ಎಸ್‌‍ ಒಂದು ದೇಶಭಕ್ತ ಸಂಘಟನೆ. ಅವರೇನು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಸನಾತನ ಧರ್ಮ ಉಳಿಸುವಿಕೆ ರಾಷ್ಟ್ರ ರಕ್ಷಣೆ, ದೇಶಭಕ್ತಿಗಾಗಿ ಹೋರಾಟ ಮಾಡುತ್ತಿದೆ. ಭಾರತವಲ್ಲದೆ 40 ರಾಷ್ಟ್ರಗಳಲ್ಲಿ ಅದರ ಸಂಘಟನೆಗಳು ವಿಸ್ತರಣೆಯಾಗಿವೆ. ಇಂತಹ ಸಂಘಟನೆಯನ್ನು ಪ್ರಿಯಾಂಕ ಖರ್ಗೆ ಇರಲಿ ಅಥವಾ ಇನ್ಯಾರು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ಆರ್‌ಎಸ್‌‍ಎಸ್‌‍ ನಿಷೇಧ ಮಾಡುವುದು ಆಮೇಲಿರಲಿ. ಮೊದಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿ ನೀವು ನಿಮ ಇಲಾಖೆಯಲ್ಲಿ ಮಾಡಿರುವ ಸುಧಾರಣೆಗಳೇನು? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಇಲಾಖೆಯಲ್ಲಿ ಯಾವುದಾದರೂ ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೀರಾ? ಮೊದಲು ಅದನ್ನು ಜನತೆಯ ಮುಂದಿಡಿ ಎಂದು ವಿಜಯೇಂದ್ರ ಸವಾಲು ಹಾಕಿದರು.

ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಜನರ ಸಂತ್ರಸ್ತರಾಗಿದ್ದಾರೆ. ಅವರಿಗೆ ಪರಿಹಾರವನ್ನೇ ಒದಗಿಸಿಲ್ಲ. ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ವಿಷಯಾಂತರ ಮಾಡಲು ಆರ್‌ಎಸ್‌‍ಎಸ್‌‍ ನಿಷೇಧದ ಬಗ್ಗೆ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಿಂದ ಹಣ ಕೊಟ್ಟರೆ ಹೈಕಮಾಂಡ್‌ ಖುಷಿಪಡಿಸಬಹುದೆಂಬ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಹದಗೆಟ್ಟ ರಸ್ತೆಗಳು, ಗುಂಡಿಗಳು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೆ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಂಡವಾಳ ಹೂಡುವವರು ಸರಿಯಾದ ಮೂಲಭೂತ ಸೌಕರ್ಯ ಇಲ್ಲ ಎಂದರೆ ಬೇರೆ ರಾಜ್ಯಗಳಿಗೆ ಹೋಗುವುದು ಅನಿವಾರ್ಯವಾಗುತ್ತದೆ ಎಂದರು.

ಸಮೀಕ್ಷೆಗೆ ಬಂದ ಶಿಕ್ಷಕಿಗೆ ಬಾಗಿನ

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದರೆ ನಿರ್ಲಕ್ಷ್ಯ ತೋರುವ ಸಮೀಕ್ಷಾದಾರರನ್ನು ಅವಹೇಳನ ಮಾಡಿ ಟೀಕಿಸಿ ವ್ಯಂಗ್ಯವಾಡುವ ಸನ್ನಿವೇಶಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿನಿ ಬಡಾವಣೆಯಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಯ ಕುಶಲೋಪರಿ ವಿಚಾರಿಸಿ ಬಾಗಿನ ನೀಡಿ ಮಡಿಲು ತುಂಬಿ ಸತ್ಕರಿಸಿ ಮಾದರಿಯಾದ ಪ್ರಸಂಗ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಸಮೀಕ್ಷಾದಾರರ ಬಗ್ಗೆ ಕುಹಕವಾಡುವ, ಅವರನ್ನು ಕಾಂಪೌಂಡ್‌ ಒಳಗೂ ಬಿಟ್ಟುಕೊಳ್ಳದಿರುವ, ಈಗ ಬನ್ನಿ, ಆಗ ಬನ್ನಿ ಎಂದು ಹೇಳುವ ಉದಾಹರಣೆಗಳು ಕಣ್ಣಮುಂದೆ ಇದೆ. ಸಮೀಕ್ಷಾದಾರರು ಮನೆಯ ಕಾಲಿಂಗ್‌ ಬೆಲ್‌ ಒತ್ತಿದರೆ ಯಾರೂ ಇಲ್ಲ ಎಂದು ಹೇಳಿ ಸಾಗು ಹಾಕುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಂತೂ ಸಮೀಕ್ಷಾದಾರರಿಗೆ ಸರಿಯಾಗಿ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ.

ಕೆಲವೆಡೆ ನಾಯಿಗಳ ಕಾಟದಿಂದ ಸಮೀಕ್ಷೆಗೆ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಸಂಕಷ್ಟ, ಸವಾಲುಗಳ ನಡುವೆಯೇ ಶಿಕ್ಷಕರು, ನೌಕರರು ಸರ್ಕಾರದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಸಮೀಕ್ಷೆಗೆ ಸಹಕರಿಸುತ್ತಾರೆ. ಮತ್ತೆ ಕೆಲವರು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಮಾಹಿತಿ ನೀಡದೆ ಸತಾಯಿಸುತ್ತಾರೆ. ಈ ರೀತಿಯಾದರೆ ಸರ್ಕಾರಿ ನೌಕರರ ಪಾಡೇನು?

ಈ ಎಲ್ಲಾ ಬೆಳವಣಿಗೆಗಳ ನಡುವೆ ನಂದಿನಿ ಲೇಔಟ್‌ನ ಮನೆಯೊಂದರಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಗೆ ಆದರದ ಸತ್ಕಾರವೇ ದೊರೆಯಿತು. ಈ ರೀತಿಯ ಸತ್ಕಾರ ಸಿಗುತ್ತದೆ ಎಂದು ಆ ಶಿಕ್ಷಕಿ ಊಹಿಸಿರಲಿಲ್ಲ. ಸಮೀಕ್ಷೆಗೆ ಬಂದಾಗ ಮನೆಯವರು ಅವರನ್ನು ಸ್ವಾಗತಿಸಿ ಅಗತ್ಯ ಮಾಹಿತಿಗಳನ್ನು, ದಾಖಲೆಗಳನ್ನು ನೀಡಿ ಸಹಕರಿಸಿದರು. ಅವರ ಕುಶಲೋಪರಿಯನ್ನು ವಿಚಾರಿಸಿ ಕುಡಿಯಲು ತಂಪು ಪಾನೀಯ ನೀಡಿದರು. ಅಲ್ಲದೆ ಊಟಕ್ಕೂ ಆಹ್ವಾನಿಸಿದರು.

ಆದರೆ ಅವರ ಊಟವಾಗಿತ್ತು. ಸಮೀಕ್ಷೆ ಮುಗಿಸಿ ಹೊರಡಲು ಸಿದ್ಧವಾದಾಗ ಮನೆಯವರು ಅವರಿಗೆ ಬಾಗಿನ ಅರ್ಪಿಸಿ ಹಣ್ಣುಹಂಪಲು ನೀಡಿ ಸತ್ಕರಿಸಿದರು. ಇದರಿಂದ ಆ ಶಿಕ್ಷಕಿ ಭಾವುಕರಾದರು. ಈ ರೀತಿ ಎಲ್ಲರೂ ಪ್ರತಿಕ್ರಿಯಿಸಿದರೆ ನಮ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ದೊಡ್ಡ ದೊಡ್ಡವರೆಂದರೆ ಭಯವಿರುತ್ತದೆ. ಆದರೆ ದೊಡ್ಡವರು ಇಷ್ಟು ಸೌಜನ್ಯದಿಂದ ವರ್ತಿಸಿ ಸತ್ಕರಿಸಿದ್ದನ್ನು ಕಂಡು ಆ ಶಿಕ್ಷಕಿಗೆ ಆನಂದಬಾಷ್ಪ ಬಂದಿತ್ತು. ಏನೇ ಆಗಲಿ ಈ ಪ್ರಸಂಗ ಮಾದರಿಯಾಗಲಿ. ಯಾವುದೇ ಸರ್ಕಾರಿ ಕರ್ತವ್ಯ ನಿಭಾಯಿಸುವವರಿಗೆ ಸಾರ್ವಜನಿಕರು ಮೃದುವಾಗಿ ಸಹಕರಿಸಲಿ ಎಂಬುದು ನಮ ಆಶಯ.

ಇನ್ನುಮುಂದೆ SSLC ಮತ್ತು PUC ಪರೀಕ್ಷೆಯಲ್ಲಿ ಶೇ.33ರಷ್ಟು ಪಡೆದರೆ ಪಾಸ್

ಬೆಂಗಳೂರು, ಅ.15-ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್‌‍.ಎಸ್‌‍.ಎಲ್‌.ಸಿ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸಲಾಗಿದ್ದು, ಶೇ.33ರಷ್ಟು ಅಂಕ ಪಡೆದವರನ್ನು ತೇರ್ಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌‍. ಮಧುಬಂಗಾರಪ್ಪ ತಿಳಿಸಿದರು.

ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆಯಬೇಕು. ಪ್ರತಿ ವಿಷಯದಲ್ಲೂ ಲಿಖಿತ/ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ನಿಯಮವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್‌‍ಎಸ್‌‍ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಅನ್ವಯ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸಿಬಿಎಸ್‌‍ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗವು ಕೂಡ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಇದುವರೆಗೂ ಎಸ್‌‍ಎಸ್‌‍ ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಪಡೆಯಬೇಕೆಂಬ ನಿಯಮವಿತ್ತು ಎಂದು ಅವರು ಹೇಳಿದರು.

ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತಕ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತಷ್ಟು ವಿವರಗಳನ್ನು ಒದಗಿಸಲಿದೆ ಎಂದರು.

ತೇರ್ಗಡೆಯ ಕನಿಷ್ಠ ಅಂಕಗಳನ್ನು ಕಡಿತ ಮಾಡುವುದಕ್ಕೆ ಸಾರ್ವಜನಿಕ ಸಲಹೆ-ಸೂಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಶೇ. 33ರಷ್ಟು ಅಂಕಗಳ ಪರವಾಗಿ 701 ಪತ್ರಗಳು ಬಂದಿದ್ದವು. ಶೇ. 35 ರಷ್ಟು ಅಂಕಗಳ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಶೇ.33ರಷ್ಟು ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದರು.
ಪರೀಕ್ಷೆಯ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತಿ ಮುಖ್ಯವಾಗುತ್ತದೆ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದವು. ವಿದ್ಯಾರ್ಥಿಗಳು ಬೇರೆ ವ್ಯವಸ್ಥೆಯಲ್ಲಿ ಉತ್ತೀರ್ಣರಾದರೆ ಮುಂದೆ ತೊಂದರೆಯಾಗುತ್ತದೆ. ಹೀಗಾಗಿ ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ. ವಾರ್ಷಿಕ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಒಳ್ಳೆ ಶಿಕ್ಷಕರಿದ್ದಾರೆ. ಆದರೆ, ಅವರ ಸೇವೆ ಬಳಸಿಕೊಳ್ಳುವುದರಲ್ಲಿ ಇಲಾಖೆ ಎಡವುತ್ತಿತ್ತು. ಶಿಕ್ಷಕರು ಅದನ್ನು ಸರಿಪಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಗ್ರೇಸ್‌‍ ಅಂಕಗಳನ್ನು ನೀಡಬಾರದು ಎಂದು ಹೇಳಿದ್ದರು. ನಮಗೆ ಶೇ. 75ರಷ್ಟು ಗುರಿ ನೀಡಿದ್ದರು. ಈ ವರ್ಷ ನಾವು ಶೇ.79 ರಷ್ಟು ಫಲಿತಾಂಶ ಪಡೆದಿದ್ದೇವೆ ಎಂದರು.

ರಾಜ್ಯಾದ್ಯಂತ 800 ಸರ್ಕಾರಿ ಶಾಲೆಗಳನ್ನು ಒಂದೇ ಬಾರಿಗೆ ಉನ್ನತೀಕರಿಸಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದ್ದು, 400 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು. ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಹಯೋಗದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ 500 ಶಾಲೆಗಳನ್ನು ಕೆಪಿಎಸ್‌‍ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯ ಮೂಲಕ 200 ಶಾಲೆಗಳನ್ನು ಕೆಪಿಎಸ್‌‍ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ಗಣಿ ಪರಿಸರ ಪುನಶ್ಚೇತನ ನಿಗಮದ ವತಿಯಿಂದ 10 ತಾಲ್ಲೂಕುಗಳಲ್ಲಿ 100 ಕೆಪಿಎಸ್‌‍ ಶಾಲೆಗಳನ್ನು ಉನ್ನತೀಕರಿಸಿ ಪ್ರತ್ಯೇಕ ಡಿಪಿಎಆರ್‌ ತಯಾರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2ರಿಂದ 3 ಕೆಪಿಎಸ್‌‍ ಶಾಲೆಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು, ನಿನ್ನೆಯವರೆಗೆ ಜಿಬಿಎ ಹೊರತುಪಡಿಸಿ ಶೇ.91.46ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಸಾಕಷ್ಟು ಶಿಕ್ಷಕರಿಗೆ ಸಾರ್ವಜನಿಕರು ತೊಂದರೆ ಕೊಟ್ಟಿದ್ದಾರೆ. ಆದರೂ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪಾಠ ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಪಾಠದ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲೂ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ, ಒತ್ತಡದ ಮಧ್ಯೆಯೂ ಶಿಕ್ಷಕರು ತುಂಬ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್‌, ಆಯುಕ್ತ ಸೂರಳ್ಕರ್‌ ವಿಕಾಸ್‌‍ ಕಿಶೋರ್‌, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರಾದ ವಿದ್ಯಾಕುಮಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಲಿಸುತ್ತಿದ್ದ ಬಸ್‌‍ಗೆ ಬೆಂಕಿ, 20 ಮಂದಿ ಸಜೀವ ದಹನ

ಜೈಸಲೇರ್‌. ಅ.14 (ಪಿಟಿಐ) ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌‍ ಹಠಾತ್ತನೆ ಹೊತ್ತಿ ಉರಿದು 20 ಜನರು ಸಜೀವ ದಹನವಾಗಿದ್ದು, 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 57 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌‍ ಜೈಸಲ್ಮೇರ್‌ನಿಂದ ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ವಾಹನದ ಹಿಂಭಾಗದಿಂದ ಹೊಗೆ ಹೊರಬರಲು ಪ್ರಾರಂಭಿಸಿತು.ಇದನ್ನು ಗಮನಿಸಿದ ಚಾಲಕ ಬಸ್‌‍ ಅನ್ನು ನಿಲ್ಲಿಸಿದನು, ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡಿ ಬಸ್‌‍ಗೆ ಆವರಿಸಿತು.

ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಿದರು. ಸೇನಾ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಗಾಯಾಳು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಜೈಸಲ್ಮೇರ್‌ನ ಜವಾಹರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಗಂಭೀರವಾಗಿ ಗಾಯಗೊಂಡ 16 ಪ್ರಯಾಣಿಕರನ್ನು ಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌‍ ಬೆಂಕಿಯಲ್ಲಿ 20 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೋಕರನ್‌ ಬಿಜೆಪಿ ಶಾಸಕ ಪ್ರತಾಪ್‌ ಪುರಿ ಪಿಟಿಐಗೆ ತಿಳಿಸಿದ್ದಾರೆ. ಬಸ್‌‍ನಲ್ಲಿ ಹತ್ತೊಂಬತ್ತು ಪ್ರಯಾಣಿಕರು ಸಾವನ್ನಪ್ಪಿದರು ಮತ್ತು ಜೋಧಪುರಕ್ಕೆ ಹೋಗುವ ದಾರಿಯಲ್ಲಿ ಒಬ್ಬರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದರು ಎಂದು ಅವರು ಹೇಳಿದರು.

ಜೈಸಲ್ಮೇರ್‌ನಿಂದ ಹೊರಟ 10 ನಿಮಿಷಗಳ ನಂತರ ಬಸ್‌‍ ಬೆಂಕಿಗೆ ಆಹುತಿಯಾಯಿತು ಎಂದು ಶಾಸಕರು ಹೇಳಿದರು.ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಭಜನ್‌ಲಾಲ್‌‍ ಶರ್ಮಾ ಜೈಸಲ್ಮೇರ್‌ ತಲುಪಿದರು ಮತ್ತು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.ಗಾಯಗೊಂಡವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜೈಸಲ್ಮೇರ್‌ನಲ್ಲಿ ಬಸ್‌‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ಈ ದುರಂತ ಅಪಘಾತದಲ್ಲಿ ಹಾನಿಗೊಳಗಾದವರಿಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಬಲಿಪಶುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಎಕ್‌್ಸ ಮಾಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಈ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.

ಭಾರತ-ಮುಂಗೋಲಿಯಾ ನಡುವೆ ಯುರೇನಿಯಂ ಪೂರೈಕೆ ಸೇರಿದಂತೆ 10 ಒಪ್ಪಂದಗಳಿಗೆ ಸಹಿ

ನವದೆಹಲಿ, ಅ. 14 (ಪಿಟಿಐ) ಭಾರತವು ಮಂಗೋಲಿಯಾದಿಂದ ಯುರೇನಿಯಂ ಪಡೆಯುವ ಸಾಧ್ಯತೆ ಮತ್ತು ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಖುರೆಲ್‌ ಸುಖ್‌ ಉಖ್ನಾ ನಡುವಿನ ಮಾತುಕತೆಯಲ್ಲಿ ಚರ್ಚೆಗೆ ಬಂದವು.

ಇಬ್ಬರು ನಾಯಕರ ನಡುವಿನ ಮಾತುಕತೆಯ ನಂತರ ಡಿಜಿಟಲ್‌ ಪರಿಹಾರಗಳು, ಖನಿಜ ಸಂಪನ್ಮೂಲಗಳ ಪರಿಶೋಧನೆ ಮತ್ತು ತ್ವರಿತ ಪರಿಣಾಮ ಯೋಜನೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು 10 ಒಪ್ಪಂದಗಳಿಗೆ ಸಹಿ ಹಾಕಿದರು.

ಮಂಗೋಲಿಯಾದಲ್ಲಿ 1.7 ಬಿಲಿಯನ್‌ ಡಾಲರ್‌ ಮೌಲ್ಯದ ಭಾರತ ನೆರವಿನ ತೈಲ ಸಂಸ್ಕರಣಾಗಾರ ಯೋಜನೆ ಮತ್ತು ಎರಡೂ ದೇಶಗಳ ನಡುವಿನ ಒಟ್ಟಾರೆ ಇಂಧನ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳು ಸಹ ಚರ್ಚೆಯ ಪ್ರಮುಖ ವಿಷಯಗಳಲ್ಲಿ ಸೇರಿವೆ.

ಸಂವಾದದ ನಂತರ ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಪ್ರಧಾನಿ ಮೋದಿ, ಮಂಗೋಲಿಯಾದ ಅಭಿವೃದ್ಧಿಗೆ ಭಾರತ ಬಲವಾದ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಹೇಳಿದರು.ಉಖ್ನಾ ನಾಲ್ಕು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಬಂದಿಳಿದಿದ್ದಾರೆ.

ಭಾರತವು ಮಂಗೋಲಿಯಾದ ಜನರಿಗೆ ಉಚಿತ ಇ-ವೀಸಾಗಳನ್ನು ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.ಭಾರತದ 1.7 ಶತಕೋಟಿ ಡಾಲರ್‌ ಸಾಲದ ಬೆಂಬಲದೊಂದಿಗೆ ಈ ತೈಲ ಸಂಸ್ಕರಣಾಗಾರ ಯೋಜನೆಯು ಮಂಗೋಲಿಯಾದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.ಇದು ಜಾಗತಿಕವಾಗಿ ಭಾರತದ ಅತಿದೊಡ್ಡ ಅಭಿವೃದ್ಧಿ ಪಾಲುದಾರಿಕೆ ಯೋಜನೆಯಾಗಿದ್ದು, ಇದನ್ನು ನನಸಾಗಿಸಲು 2,500 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರು ತಮ್ಮ ಮಂಗೋಲಿಯನ್‌ ಸಹವರ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನಾವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟ ಪಾಲುದಾರರಾಗಿ ನಿಲ್ಲುತ್ತೇವೆ, ಮುಕ್ತ, ಮುಕ್ತ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಿಯಮಗಳನ್ನು ಆಧರಿಸಿದ ಇಂಡೋ-ಪೆಸಿಫಿಕ್‌ ಅನ್ನು ಬೆಂಬಲಿಸುತ್ತೇವೆ. ಒಟ್ಟಾಗಿ, ನಾವು ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಲು ಸಹ ಕೆಲಸ ಮಾಡುತ್ತೇವೆ ಎಂದು ಮೋದಿ ಹೇಳಿದರು.ತಮ್ಮ ಕಡೆಯಿಂದ, ಮಂಗೋಲಿಯನ್‌ ಅಧ್ಯಕ್ಷರು ಶುದ್ಧ ಇಂಧನ ಕ್ಷೇತ್ರದಲ್ಲಿ ಭಾರತದ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು ಮತ್ತು ನಿರ್ದಿಷ್ಟವಾಗಿ ನವದೆಹಲಿ ನೇತೃತ್ವದ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಉಲ್ಲೇಖಿಸಿದರು.ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಭಾರತ ಮತ್ತು ಮಂಗೋಲಿಯಾ ನಡುವಿನ ನಿಶ್ಚಿತಾರ್ಥವು ಕೇವಲ ರಾಜತಾಂತ್ರಿಕ ಸಂಬಂಧಕ್ಕಿಂತ ಹೆಚ್ಚಿನದಾಗಿದೆ ಎಂದು ಮೋದಿ ಗಮನಿಸಿದರು.

ಇದು ಆಳವಾದ, ಆತ್ಮೀಯ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ನಮ್ಮ ಪಾಲುದಾರಿಕೆಯ ಆಳ ಮತ್ತು ವ್ಯಾಪ್ತಿಯು ನಮ್ಮ ಜನರಿಂದ ಜನರ ಸಂಬಂಧಗಳಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.ನಮ್ಮ ಎರಡೂ ದೇಶಗಳು ಬೌದ್ಧಧರ್ಮದ ಪ್ರಾಚೀನ ಬಂಧವನ್ನು ಹಂಚಿಕೊಂಡಿವೆ, ಅದಕ್ಕಾಗಿಯೇ ನಮ್ಮನ್ನು ಆಧ್ಯಾತ್ಮಿಕ ಸಹೋದರರು ಎಂದೂ ಕರೆಯುತ್ತಾರೆ ಎಂದು ಅವರು ಹೇಳಿದರು.

ಉಖ್ನಾ ಜೊತೆ ನಡೆಸಿದ ಮಾತುಕತೆಯಲ್ಲಿ ಈ ಸಂಪ್ರದಾಯ ಮತ್ತು ನಮ್ಮ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.ಮುಂದಿನ ವರ್ಷ, ಬುದ್ಧನ ಇಬ್ಬರು ಮಹಾನ್‌ ಶಿಷ್ಯರಾದ ಸಾರಿಪುತ್ರ ಮತ್ತು ಮೌದ್ಗಲ್ಯಾಯನರ ಪವಿತ್ರ ಅವಶೇಷಗಳನ್ನು ಭಾರತದಿಂದ ಮಂಗೋಲಿಯಾಕ್ಕೆ ಕಳುಹಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.

ಬೌದ್ಧ ಗ್ರಂಥಗಳ ಆಳವಾದ ಅಧ್ಯಯನವನ್ನು ಬೆಂಬಲಿಸಲು ಮತ್ತು ಪ್ರಾಚೀನ ಜ್ಞಾನದ ಸಂಪ್ರದಾಯವನ್ನು ಮುಂದುವರಿಸಲು ಭಾರತವು ಗಂಡನ್‌ ಮಠಕ್ಕೆ ಸಂಸ್ಕೃತ ಶಿಕ್ಷಕರನ್ನು ಕಳುಹಿಸುತ್ತದೆ ಎಂದು ಅವರು ಹೇಳಿದರು.ಒಂದು ಮಿಲಿಯನ್‌ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ.

ಮಂಗೋಲಿಯಾದಲ್ಲಿ ಬೌದ್ಧಧರ್ಮದಲ್ಲಿ ನಳಂದ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸಿದೆ ಮತ್ತು ಇಂದು ನಾವು ನಳಂದವನ್ನು ಗಂಡನ್‌ ಮಠದೊಂದಿಗೆ ಸಂಪರ್ಕಿಸುವ ಮೂಲಕ ಈ ಐತಿಹಾಸಿಕ ಸಂಪರ್ಕವನ್ನು ಬಲಪಡಿಸಲು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಲಡಾಖ್‌ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ ಮತ್ತು ಮಂಗೋಲಿಯಾದ ಅರ್ಖಂಗೈ ಪ್ರಾಂತ್ಯದ ನಡುವೆ ಇಂದು ಸಹಿ ಹಾಕಲಾದ ಒಪ್ಪಂದವು ನಮ್ಮ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.ಮಂಗೋಲಿಯಾದ ಅಭಿವೃದ್ಧಿ ಕಥೆಯಲ್ಲಿ ಭಾರತವು ಸ್ಥಿರ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಪ್ರಧಾನಿ ಬಣ್ಣಿಸಿದರು.

ಎರಡೂ ದೇಶಗಳ ನಡುವಿನ ಪಾಲುದಾರಿಕೆಯು ರಕ್ಷಣೆ ಮತ್ತು ಭದ್ರತೆ, ಇಂಧನ, ಗಣಿಗಾರಿಕೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಂಸ್ಕೃತಿಕ ಸಹಕಾರದಂತಹ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.ನಮ್ಮ ಖಾಸಗಿ ವಲಯವು ಇಂಧನ, ನಿರ್ಣಾಯಕ ಖನಿಜಗಳು, ಅಪರೂಪದ ಭೂಮಿ, ಡಿಜಿಟಲ್‌‍, ಗಣಿಗಾರಿಕೆ, ಕೃಷಿ, ಡೈರಿ ಮತ್ತು ಸಹಕಾರಿ ಸಂಸ್ಥೆಗಳಂತಹ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.ಮಂಗೋಲಿಯಾದಿಂದ ಯುರೇನಿಯಂ ಮತ್ತು ತಾಮ್ರ, ಚಿನ್ನ ಮತ್ತು ಸತು ಸೇರಿದಂತೆ ಇತರ ಖನಿಜಗಳನ್ನು ಖರೀದಿಸಲು ಭಾರತದ ಕಡೆಯವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್‌ ನಂಟು ಹೊಂದಿದ್ದ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರನ ಬಂಧನ

ಚಂಡೀಗಢ, ಅ. 14 (ಪಿಟಿಐ) ಪಂಜಾಬ್‌ ಪೊಲೀಸರು ಅಮೃತಸರ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸುವ ಮೂಲಕ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ.ಆರೋಪಿ ಅಮರ್‌ಬೀರ್‌ ಸಿಂಗ್‌ನಿಂದ ಪೊಲೀಸರು ಆರು ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು ಮತ್ತು 111 ಲೈವ್‌ ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದು ಪ್ರಮುಖ ಪ್ರಗತಿಯಲ್ಲಿ, ಅಮೃತಸರ ಗ್ರಾಮೀಣ ಪೊಲೀಸರು ಅಮೃತಸರದ ತಾರ್ಸಿಕ್ಕಾ ಪಿಎಸ್‌‍ನ ಡೈರಿವಾಲ್‌ ನಿವಾಸಿ ಅಮರ್‌ಬೀರ್‌ ಸಿಂಗ್‌ ಅವರನ್ನು ಬಂಧಿಸಿದ್ದಾರೆ ಮತ್ತು 6 ಪಿಸ್ತೂಲ್‌ಗಳು, 11 ಮ್ಯಾಗಜೀನ್‌ಗಳು, .30 ಬೋರ್‌ನ 91 ಲೈವ್‌ ಕಾರ್ಟ್ರಿಡ್ಜ್ ಗಳು ಮತ್ತು 9 ಎಂಎಂನ 20 ಲೈವ್‌ ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್‌‍ ಮಹಾನಿರ್ದೇಶಕ (ಡಿಜಿಪಿ) ಗೌರವ್‌ ಯಾದವ್‌ ತಿಳಿಸಿದ್ದಾರೆ.

ಆರೋಪಿ ಇತ್ತೀಚೆಗೆ ಕೆನಡಾದಿಂದ ಹಿಂದಿರುಗಿದ್ದು, ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು.

ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು ಇತರ ಕಾರ್ಯಕರ್ತರನ್ನು ಗುರುತಿಸಲು, ಮುಂದಕ್ಕೆ ಮತ್ತು ಹಿಂದಕ್ಕೆ ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ಸಂಪೂರ್ಣ ಗಡಿಯಾಚೆಗಿನ ಕಳ್ಳಸಾಗಣೆ ಜಾಲವನ್ನು ಕಿತ್ತುಹಾಕಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಹೇಳಿದರು.

ಪ್ರತೀ ಜಿಲ್ಲೆಯಲ್ಲೂ ಸುಸರ್ಜಿತ ಕ್ಯಾನ್ಸರ್‌ ಆಸ್ಪತ್ರೆ : ಸಚಿವ ಶರಣಪ್ರಕಾಶ ಪಾಟೀಲ

ತುಮಕೂರು,ಅ.15-ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಮಾರು ನಿರ್ಮಿಸಿರುವ 100 ಹಾಸಿಗೆಗಳ ನೂತನ ಕ್ಯಾನ್ಸರ್‌ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್‌ 7ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ತಿಳಿಸಿದರು.

ಕ್ಯಾನ್ಸರ್‌ ಆಸ್ಪತ್ರೆ ಕಟ್ಟಡವನ್ನು ಪರಿಶೀಲಿಸಿ ಮಾತನಾಡಿದ ಅವರು, ಕ್ಯಾನ್ಸರ್‌ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆಗೆ ಕಾರ್ಯಾಚರಣೆಗೊಳಿಸಲು ಪ್ರಥಮ ಹಂತದಲ್ಲಿ ಸುಮಾರು 41 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗುವುದು. ಉಪಕರಣಗಳ ಅಳವಡಿಕೆಗೆ ನಾಲ್ಕೈದು ತಿಂಗಳು ಸಮಯ ಬೇಕಾಗಬಹುದು ಎಂದರಲ್ಲದೆ, ಉಪಕರಣ ಖರೀದಿಗಾಗಿ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತೀ ದಿನ ಸುಮಾರು 20 ರಿಂದ 30 ಕ್ಯಾನ್ಸರ್‌ ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡುತ್ತಿದ್ದು, ಈ ರೋಗಿಗಳಿಗೆ ಕಿಮೋಥೆರಪಿ, ರೇಡಿಯೋ ಥೆರಪಿ ಹಾಗೂ ಆಂಕೊ ಸರ್ಜರಿ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಪ್ರತೀ ದಿನ ರಾಜ್ಯವಲ್ಲದೆ ಇತರೆ ರಾಜ್ಯದ ಕ್ಯಾನ್ಸರ್‌ ರೋಗಿಗಳೂ ಚಿಕಿತ್ಸೆಗೆ ಬರುತ್ತಿರುವುದರಿಂದ ಕಿದ್ವಾಯಿ ಆಸ್ಪತ್ರೆಯ ಒತ್ತಡ ಕಡಿಮೆ ಮಾಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 24 ಸರ್ಕಾರಿ ಮೆಡಿಕಲ್‌ ಕಾಲೇಜುಗಳಿದ್ದು ಬಡವರು, ಸಾಮಾನ್ಯರಿಗೆ ಉಚಿತ ಹಾಗೂ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನೀಡುವ ಉದ್ದೇಶದಿಂದ ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜನ್ನು ತೆರೆಯಲು ಯೋಜಿಸಲಾಗಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್‌ ಆಸ್ಪತ್ರೆ, ಟ್ರಾಮಾ ಕೇರ್‌ ಸೆಂಟರ್‌ ನಿರ್ಮಿಸಲು ನಿರ್ಣಯಿಸಲಾಗಿದೆ. ಗುಲ್ಬರ್ಗಾ, ರಾಜಯಚೂರಿನಲ್ಲಿ ಈಗಾಗಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಬಳ್ಳಾರಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಕಳೆದ ಆಯವ್ಯಯದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ರತೀ ಜಿಲ್ಲೆಯಲ್ಲಿಯೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಕಲ್ಬುರ್ಗಿಯಲ್ಲಿ ಈಗಾಗಲೇ ನಿರ್ಮಿಸಿರುವ 100 ಹಾಸಿಗೆಗಳುಳ್ಳ ಕ್ಯಾನ್ಸರ್‌ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಬಳ್ಳಾರಿ, ಬೀದರ್‌, ರಾಯಚೂರಿಗೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಶಿವಮೊಗ್ಗ, ಮಂಡ್ಯದಲ್ಲಿ ಕಟ್ಟಡ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಮುಖ್ಯಮಂತ್ರಿಗಳು ನವೆಂಬರ್‌ 7ರಂದು ನಗರದಲ್ಲಿ ಕ್ಯಾನ್ಸರ್‌ ಆಸ್ಪತ್ರೆಯೊಂದಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್‌ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕ್ಯಾನ್ಸರ್‌ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳೊಂದಿಗೆ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‌ ಹಾಗೂ ಸುರೇಶ್‌ ಗೌಡ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಸುಜಾತ ರಾಥೋಡ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್‌, ಜಿಲ್ಲಾ ಶಸಚಿಕಿತ್ಸಕ ಡಾ. ಅಸ್ಗರ್‌ ಬೇಗ್‌, ಕಿದ್ವಾಯಿ ಆಸ್ಪತ್ರೆಯ ಡಾ. ನವೀನ್‌, ಇಂಜಿನಿಯರ್‌ ಚಂದ್ರು, ಸೇರಿದಂತೆ ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರು : ನವವಿವಾಹಿತೆ ಕೊಲೆ ಪ್ರಕರಣದಲ್ಲಿ ಪತಿ ಮತ್ತು ಮಾವನ ಬಂಧನ

ಚಿಕ್ಕಮಗಳೂರು,ಅ.15-ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಮಾವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಡಾ.ವಿಕ್ರಮ್‌ಅಮಟೆ ತಿಳಿಸಿದರು. ಆರೋಪಿ ಪತಿ ನವೀನ್‌ ಹಾಗೂ ಮಾವ ಮಂಜೇಗೌಡ ಬಂಧಿತರು . ಅತ್ತೆ ಕುಸುಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದ ನೇತ್ರಾವತಿ ಸಕಲೇಶಪುರದ ನವೀನ್‌ನನ್ನು ಐದು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ನವೀನ್‌ ಸಕಲೇಶಪುರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರನ್ನು ಸಖಿ ಕೇಂದ್ರಕ್ಕೆ ಕರೆಸಿ ಕೌನ್ಸಿಲಿಂಗ್‌ ಕೂಡ ನಡೆಸಲಾಗಿತ್ತು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಬಾರದ ಹಿನ್ನಲೆಯಿಂದಾಗಿ ನೇತ್ರಾವತಿ ಕಳೆದ ಮೂರು ತಿಂಗಳಿಂದ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿನ ತವರು ಮನೆ ಸೇರಿದ್ದರು.

ಅ.12ರ ಸಂಜೆ 6.30ರ ಸುಮಾರಿನಲ್ಲಿ ನೇತ್ರಾವತಿ ಅವರ ಮನೆಗೆ ಹೋಗಿದ್ದ ನವೀನ್‌ ಮನೆಗೆ ವಾಪಸ್‌‍ ಬರುವಂತೆ ಹೇಳಿದಾಗ ನೇತ್ರಾವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನವೀನ್‌ ಚಾಕುವಿನಿಂದ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರಗಾಯಗೊಂಡಿದ್ದ ನೇತ್ರಾವತಿಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.

ನೇತ್ರಾವತಿ ಸಂಬಂಧಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಲ್ದೂರು ಠಾಣೆಯ ಪೊಲೀಸರು ನೇತ್ರಾವತಿ ಅವರ ಪತಿ ಹಾಗೂ ಮಾವನನ್ನುಬಂಧಿಸಿದ್ದಾರೆ. ನೇತ್ರಾವತಿ ಅತ್ತೆ ಕುಸುಮ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.