Thursday, November 6, 2025
Home Blog Page 45

ಈವರೆಗೆ 6.40 ಲಕ್ಷ ಮಂದಿ ಭಕ್ತರಿಂದ ಹಾಸನಾಂಬ ದರ್ಶನ

ಹಾಸನ,ಅ.15-ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ 6ನೇ ದಿನವಾದ ಇಂದೂ ಸಹ ಸಾಗರೋಪಾಧಿಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ನಿರಂತರ ದರ್ಶನ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯಲಿದ್ದಾರೆ. ಇಂದೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಾಲಯದ ಆವರಣ ಹಾಗೂ ಸುತ್ತಮುತ್ತ ಸರಥಿ ಸಾಲುಗಳಲ್ಲಿ ನಿಂತಿದ್ದ ಭಕ್ತರನ್ನು ಮಾತನಾಡಿಸಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ಕಳೆದ ಐದು ದಿನಗಳಿಂದ 6,40,700 ಮಂದಿ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆ ಒಂದು ಲಕ್ಷದ 1,22,600 ಮಂದಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು .

ಇಂದು ಒಂದೇ ದಿನ ಭಕ್ತರ ಸಂಖ್ಯೆ 2.50 ಲಕ್ಷ ದಾಟಬಹುದು ಎಂದ ಅವರು ಎಷ್ಟೇ ಜನ ಬಂದರೂ ಎಲ್ಲರಿಗೂ ಸುಗಮ ದರ್ಶನ ಆಗಲಿದೆ. ಎಲ್ಲಾ ವ್ಯವಸ್ಥೆ ಸರಿಯಾಗಿದ್ದು ದರ್ಶನ ಪಡೆಯಲು ಜನರಿಗೆ ಸ್ವಲ್ಪ ಸಮಯ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಗಂಟೆ ಸಮಯ ತಗುಲುತ್ತಿದ್ದು ಮುಂದಿನ ದಿನಗಳಲ್ಲಿ ಬರುವವರು ನಾಲ್ಕರಿಂದ ಐದು ಗಂಟೆ ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿ ಬರುವಂತೆ ಸಲಹೆ ನೀಡಿದರು.

ಒಂದು ಸಾವಿರ ,ರೂ.300 ವಿಶೇಷ ದರ್ಶನದ ಟಿಕೆಟ್‌ ಹಾಗೂ ಲಾಡು ಪ್ರಸಾದ ಮಾರಾಟದಿಂದ 4.21 ಲಕ್ಷ ಹಣ ಬಂದಿದೆ ಕಳೆದ ವರ್ಷಕ್ಕಿಂತ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು ಆದಾಯ ಬರಲಿ ಬಿಡಲಿ ನಮಗೆ ಜನರಿಗೆ ಶೀಘ್ರ ದರ್ಶನ ಮಾಡಿಸುವುದೇ ಮುಖ್ಯ ಎಂದರು .

ದರ್ಶನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಜನರು ತುಂಬಾ ಸಂತಸದಿಂದ ದರ್ಶನ ಮಾಡುತ್ತಿದ್ದಾರೆ. ದೇವಿಯ ಕೃಪೆಯಿಂದಾಗಿ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇನ್ನು ಎಂಟು ದಿನ ದರ್ಶನ ಇದೆ.ಎಲ್ಲಾ ದಿನ ಕನಿಷ್ಠ 50 ರಷ್ಟು ಜನರ ಸಂಖ್ಯೆ ಹೆಚ್ಚಾಗುವ ಜೊತೆಗೆ ಸವಾಲು ಎದುರಿಸಬೇಕಾಗಿದೆ ಆದರೂ ಉತ್ತಮ ವ್ಯವಸ್ಥೆ ಯೊಂದಿಗೆ ದರ್ಶನ ಮಾಡಿಸುತ್ತೇವೆ ಎಂದರು.

ಶಿಷ್ಟಾಚಾರ ನಿಯಮದಡಿ ಮಾಜಿ ಸಚಿವ ಗೋಪಾಲಯ್ಯ, ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ ಎಚ್‌ .ಕೆ ಸುರೇಶ್‌, ವಿನಯ್‌ ಗುರೂಜಿ, ನಯನಾ ಮೋಟಮ , ಛಲವಾದಿ ನಾರಾಯಣಸ್ವಾಮಿ, ಪಿಜಿ ಆರ್‌ ಸಿಂಧ್ಯಾ, ಪ್ರಥಮ್‌‍, ಚಿತ್ರ ನಟ ವಸಿಷ್ಠ ಸಿಂಹ, ಹರಿಪ್ರಿಯಾ, ಸೇರಿದಂತೆ ಇತರ ಗಣ್ಯರು ಇಂದು ಹಾಸನಾಂಬಾ ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌‍ ಲತಾ ಕುಮಾರಿ,ಜಿ.ಪಂ ಸಿಇಒ ಬಿ.ಆರ್‌ ಪೂರ್ಣಿಮಾ, ಎಸ್‌‍ ಪಿ ಮೊಹಮದ್‌ ಸುಜಿತಾ, ಸಂಸದ ಶ್ರೀಯಸ್‌‍ ಪಟೇಲ್‌ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಜೊತೆಯಲ್ಲಿ ಇದ್ದರು.

ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಗೋಡೆಗೆ ಕಾರು ಡಿಕ್ಕಿ

ದೊಡ್ಡಬಳ್ಳಾಪುರ,ಅ.15– ಚಾಲಕನ ನಿಯಂತ್ರಣ ತಪ್ಪಿ ಕಾರು ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಅರಳು ಮಲ್ಲಿಗೆ ಬಾಗಿಲು ಬಳಿ ಸಂಭವಿಸಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ನಗರದ ಅರ್ಚಕರೊಬ್ಬರಿಗೆ ಸೇರಿದ ಕಾರನ್ನು ರಿಪೇರಿಗಾಗಿ ಬಿಟ್ಟಿದ್ದರೆಂದು ಹೇಳಲಾಗುತ್ತಿದೆ. ಆದರೆ ಮೆಕಾನಿಕ್‌ ದುರಸ್ತಿಯಾದ ಕಾರಿನಲ್ಲಿ ಗೆಳೆಯರೊಂದಿಗೆ ತೆರಳುವ ವೇಳೆ ರಾತ್ರಿ 11.30ರ ಸುಮಾರಿಗೆ ನಿಯಂತ್ರಣತಪ್ಪಿ ಅರಳು ಮಲ್ಲಿಗೆ ಬಾಗಿಲು ವೃತ್ತದ ಗಣೇಶ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಚಾಲಕನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್‌‍ ಠಾಣೆೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನು ಕೊಂದು ಕೊಳವೆ ಬಾವಿಯಲ್ಲಿ ಹೂತಿಟ್ಟ ಪತಿರಾಯ

ಚಿಕ್ಕಮಗಳೂರು,ಅ.15-ಹೆಂಡತಿಯನ್ನುಕೊಂದು ಶವವನ್ನು ಕೊಳವೇ ಬಾವಿಯಲ್ಲಿ ಹೂತು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರತಿ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಒಂದೂವರೆ ತಿಂಗಳ ಹಿಂದೆ ನಡೆದಿದ್ದು ಪ್ರಕರಣ, ತನಿಖೆಯಲ್ಲಿ ಗಂಡನೇ ಹಂತಕ ಎನ್ನುವುದು ಬಹಿರಂಗವಾಗಿದೆ. ತವರಿಗೆ ಹೊರಟಿದ್ದ ಪತ್ನಿ ಭಾರತಿ ಕೆನ್ನೆಗೆ ಪತಿ ವಿಜಯ್‌ ಹೊಡೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ.

ಬಂಧನದ ಭೀತಿಯಿಂದ ಪತ್ನಿಯ ಶವವನ್ನು ತಮ ತೋಟದ ಕೊಳವೆ ಬಾವಿಯಲ್ಲಿ ಹೂತುಹಾಕಿ ಕಡೂರು ಠಾಣೆಗೆ ಪತ್ನಿ ನಾಪತ್ತೆಯಾಗಿದ್ದಾಳೆಂದು ವಿಜಯ್‌ ದೂರು. ಒಂದೂವರೆ ತಿಂಗಳ ನಂತರ ಪೊಲೀಸರ ತನಿಖೆಯಲ್ಲಿ ಪತಿ ವಿಜಯೇ ಹಂತಕನೆಂದು ತನಿಖೆಯಿಂದ ಸಾಬೀತು ಆಗಿದೆ.

ಕಡೂರು ಪೊಲೀಸರಿಂದ ವಿಜಯ್‌‍, ಅತ್ತೆ ತಾಯಮ, ಮಾವ ಗೋವಿಂದಪ್ಪ ಬಂಧನಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲಾಗಿದೆ.ದೇವರಿಗೆ ಪೂಜೆ, ನನ್ನ ಹೆಂಡತಿ ದೆವ್ವ ಆಗಬಾರದು,ಪ್ರಕರಣ ಬೆಳಕಿಗೆ ಬರಬಾರದು, ಒಂದು ವೇಳೆ ಬಂದ್ರು ಕೋರ್ಟ್‌ನಲ್ಲಿ ಕೇಸ್‌‍ ನಿಲ್ಲಿಬಾರದೆಂದು ತಗಡಿನ ಶೀಟ್‌ನಲ್ಲಿ ಹೆಂಡತಿಯ ಹೆಸರು ಬರೆದು, ಫೋಟೋವನ್ನು ಮರಕ್ಕೆ ಮೊಳೆ ಹೊಡೆದು ಅಂಟಿಸಿದ್ದ. ಆದರೂ ಕರ್ಮ ಬಿಡಲಿಲ್ಲ. ಕೊನೆಗೆ ಕಿರಾತಕ ಪತಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಕನ್ನಡ ಕುಟುಂಬ ಅವಾರ್ಡ್ಸ್-2025 : ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ ಕನ್ನಡ ಕುಟುಂಬ ಅವಾರ್ಡ್ಸ್-2025′ ಕ್ಷಣಗಣನೆ ಶುರುವಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್ ನ ಮಹಾಪರ್ವ ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ.

ಈ ವರುಷದ ‘ ಕನ್ನಡ ಕುಟುಂಬ ಅವಾರ್ಡ್ಸ್ ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ. ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ. ಇನ್ನು ಈ ಬಾರಿಯ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗು ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದು ಇದರ ಮತ್ತೊಂದು ಆಕರ್ಷಣೆ. ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವದರಲ್ಲಿ ಎರಡು ಮಾತಿಲ್ಲ.

ಕನ್ನಡ ಅವಾರ್ಡ್ 2025 ರಲ್ಲಿ ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಕನ್ನಡ ಅವಾರ್ಡ್ ನಲ್ಲಿ ವಿಶೇಷವಾಗಿ “ವೀಕೆಂಡ್ ವಿತ್ ರಮೇಶ್ ಮಿನಿಯೇಚರ್” ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿತ್ತು.

ಇನ್ನು ಇದರ ಬಗ್ಗೆ ಮಾತನಾಡಿದ ಕನ್ನಡ ಮತ್ತು ಕನ್ನಡ 5 ನ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು “ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಇನ್ನು ಕನ್ನಡ 20 ವರುಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಕೊಡೋದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರುಷ ‘ನಾ ನಿನ್ನ ಬಿಡಲಾರೆ’, ‘ಕರ್ಣ’ ಮತ್ತು ‘ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಪ್ರಸಿದ್ಧ ಧಾರಾವಾಹಿಗಳ ಜೊತೆಗೆ ‘ನಾವು ನಮ್ಮವರು’ ಎಂಬ ವಿಭಿನ್ನ ರಿಯಾಲಿಟಿ ಶೋ ವನ್ನು ಜನರ ಮುಂದಿಟ್ಟಿದ್ದೇವೆ.

ಇನ್ನು ನಮ್ಮ ವೀಕ್ಷಕರು ಈ ಎಲ್ಲಾ ಕಾರ್ಯಕ್ರಮಗಳನ್ನು ಮನಸಾರೆ ಮೆಚ್ಚಿದ್ದು ನಮ್ಮ ಹುರುಪನ್ನು ಮತ್ತಷ್ಟು ಹೆಚ್ಚಿಸಿದೆ. ಟೆಲಿವಿಷನ್ ಜೊತೆಗೆ OTT ಪ್ಲಾಟ್ಫಾರ್ಮ್ ಕನ್ನಡ ZEE5 “ನಮ್ಮ ಭಾಷೆ, ನಮ್ಮ ಕಥೆಗಳು” ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಸಪೋರ್ಟ್ ಮತ್ತು ಪ್ರೀತಿ ಅಭೂತಪೂರ್ಣ” ಎಂದರು.

ಯಾರು ಯಾವ ಪ್ರಶಸ್ತಿಗೆ ಭಾಜೀನರಾದರು, ಯಾರು ಯಾವ ಹಾಡಿಗೆ ನೃತ್ಯ ಮಾಡಿದರು, ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಹೀಗೆ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ನಗು, ತರ್ಲೆ, ಅಳು, ನೋವು, ನಲಿವು ಮತ್ತು ಇನ್ನಷ್ಟು ಭಾವನೆಗಳ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ನೋಡಿ ‘ ಕನ್ನಡ ಕುಟುಂಬ ಅವಾರ್ಡ್ಸ್-2025!
ಜನಮೆಚ್ಚಿದ ತಾರೆಗಳಿಗೆ ಪ್ರಶಸ್ತಿಯ ಗೌರವ ಇದೇ 17, 18 ಮತ್ತು 19 ರಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ಕನ್ನಡ ವಾಹಿನಿಯಲ್ಲಿ ನೋಡಲು ಮರೆಯದಿರಿ!

ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕರಾದ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮತ್ತು ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಷ್ಟೇ ಅಲ್ಲದೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಶ್ರೀನಾಥ್, ಸುಧಾರಾಣಿ, ಪ್ರೇಮ, ನಾಗಾಭರಣ, ಯೋಗರಾಜ್ ಭಟ, ಡಾಲಿ ಧನಂಜಯ್, ರಚಿತಾ ರಾಮ್, ವಿಜಯ ರಾಘವೇಂದ್ರ, ಅದಿತಿ ಪ್ರಭುದೇವ, ಪೃಥ್ವಿ ಅಂಬರ್, ಮಾನ್ವಿತ ಹರೀಶ್, ಅಮೂಲ್ಯ, ರಿಷಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಸಪ್ತಮಿ ಗೌಡ , ಪ್ರಮೋದ್ ಶೆಟ್ಟಿ, ವಿಕ್ರಂ ರವಿಚಂದ್ರನ್ ಮತ್ತು ಅನೇಕ ಸ್ಯಾಂಡಲವುಡ್ ಕಲಾವಿದರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಅಷ್ಟೇ ಅಲ್ಲದೆ ಹಾಡಿನ ಮೂಲಕ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮಾಡಿರೋ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ಕರೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿದ ಅಪರಿಚಿತ

ಬೆಂಗಳೂರು, ಅ.15- ಸರ್ಕಾರಿ ಆಸ್ತಿಗಳ ಆವರಣದಲ್ಲಿ ಆರ್‌ಎಸ್‌‍ಎಸ್‌‍ನ ಚಡುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದಿದ್ದ ಗ್ರಾಮೀಣಾಭಿವವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಮುಂದುವರೆದಿದ್ದು, ವ್ಯಕ್ತಿಯೊಬ್ಬರ ಅಶ್ಲೀಲ ನಿಂದನೆಯನ್ನು ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಚಿವರು ಹಂಚಿಕೊಂಡಿದ್ದಾರೆ.

ಕರೆ ಮಾಡಿರುವ ವ್ಯಕ್ತಿ ಸಚಿವರನ್ನು ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಸಚಿವರ ಯಾವ ಮಾತುಗಳನ್ನು ಕೇಳಿಸಿಕೊಳ್ಳದೇ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಖರ್ಗೆ, ಆರ್‌ಎಸ್‌‍ಎಸ್‌‍ ಯುವಕರ, ಮಕ್ಕಳ ಮನಸುಗಳಲ್ಲಿ ಕಲಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ ಎಂದಿದ್ದಾರೆ.

ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್‌ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಶಾಸಕ ಸುನಿಲ್‌ಕುಮಾರ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಅವರಂತಹ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರ ಮಕ್ಕಳು ತಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು, ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ ಎಂದು ಅನುಕಂಪ ವ್ಯಕ್ತಪಡಿಸಿದ್ದಾರೆ.

ನಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, ಆರ್‌ಎಸ್‌‍ಎಸ್‌‍ ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ, ಮುಗ್ದರನ್ನು ಬ್ರೈನ್‌ವಾಶ್‌ ಮಾಡಿ, ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌‍ಎಸ್‌‍ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ, ಬುದ್ಧ, ಬಸವ, ಅಂಬೇಡ್ಕರ್‌ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ ಎಂದು ಪುನರುಚ್ಚರಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-10-2025)

ನಿತ್ಯ ನೀತಿ : ಪ್ರಾರಬ್ಧ ಕರ್ಮವನ್ನು ಅನುಭವಿಸಿದ ಮೇಲೆ ನಿಶ್ಚಯವಾಗಿಯೂ ಸತ್ಕರ್ಮದ ಫಲವು ದೊರೆಯುತ್ತದೆಂಬ ದೃಢ ವಿಶ್ವಾಸ, ನಂಬಿಕೆಯನ್ನಿಟ್ಟು ಸ್ಥೈರ್ಯದಿಂದ ಬದುಕಬೇಕು.

ಪಂಚಾಂಗ : ಬುಧವಾರ, 15-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ನವಮಿ / ನಕ್ಷತ್ರ: ಪುಷ್ಯ / ಯೋಗ: ಸಾಧ್ಯ / ಕರಣ: ವಣಿಜ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.01
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳಲ್ಲಿ ತೃಪ್ತಿಕರವಾಗಲಿದೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ಪಡೆಯಲು ಸರ್ಕಾರ ಪ್ರಯತ್ನ : ಎಚ್‌.ಕೆ. ಪಾಟೀಲ

ಉದಯಪುರ : ಗದಗ ಜಿಲ್ಲೆಯ ಲಕ್ಕುಂಡಿಯನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನವನ್ನು ದೊರಕಿಸಲು ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿದೆ ತನ್ಮೂಲಕ ಕರ್ನಾಟಕವನ್ನು ಪಾರಂಪರಿಕ ಪ್ರವಾಸೋದ್ಯಮದ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ ಪಾಟೀಲ ರವರು ಇಂದು ಪ್ರಕಟಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಇಂದು ಮತ್ತು ನಾಳೆ (14 ಮತ್ತು 15 ಅಕ್ಟೋಬರ್‌, 2025) ನಡೆಯುತ್ತಿರುವ ಪ್ರವಾಸೋದ್ಯಮದ ಹೊಸ ಉಪಕ್ರಮಗಳ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಸಚಿವರು ಇಂದು ಮಾತನಾಡುತ್ತಿದ್ದರು.

ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಿಷನ್‌ನ ಅಡಿಯಲ್ಲಿ ಕರ್ನಾಟಕ ಸರ್ಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಗಳನ್ನು ಭವಿಷ್ಯೋತ್ತರ ಜಾಗತಿಕ ತಾಣಗಳೆಂದು ಪರಿಗಣಿಸಬೇಕೆಂದು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಪಾರಂಪರಿಕ ಜಾಗತಿಕ ತಾಣದ ಎಲೆಮರೆಯ ಕಾಯಿಯಂತೆ ಅನರ್ಘ್ಯ ರತ್ನದಂತಹ ತಾಣವಾಗಿರುವ ಗದಗ ಪರಂಪರೆ, ನಿಸರ್ಗ ಮತ್ತು ಸಂಸ್ಕೃತಿಗಳ ಸಮ್ಮೀಲನವಾಗಿ ಪರಿಪಕ್ವವಾದ ಸೌಹಾರ್ದತೆಯನ್ನು ಪಡೆದಿರುವ ಗದಗ ಜಿಲ್ಲೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 40 ನಿಮಿಷಗಳ ಪ್ರಯಾಣದ ದೂರದಲ್ಲಿದೆ. ಗದಗನಿಂದ ಕೇವಲ 08 ಕಿ.ಮೀ ದೂರದಲ್ಲಿರುವ ಲಕ್ಕುಂಡಿ ಚಾಲುಕ್ಯರ ಶಿಲ್ಪಕಲೆಯ ಬಯಲು ವಸ್ತುಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. 100 ಗಹನವಾದ ಕೆತ್ತನೆಯ ದೇವಾಲಯಗಳು, ಆಳವಾದ ಬಾವಿಗಳು, ಜೈನಬಸದಿಗಳು ಮತ್ತು ಪ್ರಾಚೀನ ಯುಗದ ಶಿಲ್ಪಕಲೆಯ ಚಾಣಾಕ್ಷತನವನ್ನು ಪ್ರತಿಬಿಂಬಿಸುವ ಶಿಲಾಶಾಸನಗಳನ್ನು ಹೊಂದಿದೆ.

ಗದಗ ನಗರವು ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ವೀರನಾರಾಯಣ ದೇವಸ್ಥಾನ ಹಾಗೂ ಡಂಬಳದ ದೊಡ್ಡಬಸಪ್ಪನ ದೇವಸ್ಥಾನಗಳು ಮತ್ತು ಪ್ರಾಚೀನ ಕೋಟೆಗಳು ಭಾರತೀಯ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ ರಾಜಮನೆತನಗಳ ಕಥೆಗಳನ್ನು ವರ್ಣಿಸುತ್ತಿವೆ ಎಂದು ವಿವರಿಸಿದರು. ಗದುಗಿನ ಭಾರತ ರತ್ನ ಪಂಡಿತ ಭೀಮಶೇನ್‌ ಜೋಷಿ ರವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿ, ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ವಿಶ್ವದಲ್ಲಿ ಹಾಸುಹೊಕ್ಕಾಗುವಂತೆ ಮಾಡಿದರು ಎಂದು ಸಚಿವರು ವಿವರಿಸಿದರು.

ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಸವದತ್ತಿ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ, ಅಂಜನಾದ್ರಿ ಬೆಟ್ಟದ ಮತ್ತು ಹಂಪಿ, ಮೈಸೂರು, ಬೀದರ ಮತ್ತು ಉಡುಪಿ ಹಾಗೂ ಬೆಂಗಳೂರು ಬಳಿಯ ರೋರಿಕ್‌ ಎಸ್ಟೇಟ್‌ಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಕಾಲಮಿತಿಗೊಳಪಟ್ಟು ಈ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದೆ. 343 ಕಿ.ಮೀ ಉದ್ದದ ಕರಾವಳಿಯನ್ನು ಕೇಂದ್ರೀಕೃತವಾಗಿಸಿ, ಅಭಿವೃದ್ಧಿಪಡಿಸಿ ಉನ್ನತ ಸ್ಥರದ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಯನ್ನು ಸಿದ್ದಪಡಿಸುತ್ತಿದೆ ಎಂದು ವಿವರಿಸಿದರು.

ಭಾರತ ದೇಶವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಕರ್ನಾಟಕ ಬದ್ಧವಾಗಿದೆ. ಕೇಂದ್ರ ಮತ್ತು ಇತರ ರಾಜ್ಯಗಳ ಸಂಯೋಜನೆಯೊಂದಿಗೆ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಶಕ್ತಿ ಕೇಂದ್ರವನ್ನಾಗಿಸಲು ಕರ್ನಾಟಕವು ತನ್ನೆಲ್ಲಾ ಶಕ್ತಿಯನ್ನು ಧಾರೆ ಎರೆಯುತ್ತದೆ ಎಂದು ಸಚಿವರು ವಿವರಿಸಿದರು. ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರಸಿಂಗ್‌ ಶೇಖಾವತ್‌ ಹಾಗೂ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಸಿಎಂ, ಡಿಸಿಎಂ ಮನೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ ಬೆದರಿಕೆ

ಬೆಂಗಳೂರು, ಅ.14- ಇತ್ತೀಚೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್‌ ಅವರ ನಿವಾಸಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬೆದರಿಕೆ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ.

ತಮಿಳುನಾಡಿನ ವ್ಯಕ್ತಿಯಿಂದ ಬೆದರಿಕೆ ಬಂದಿದೆ ಎಂದು ಅನುಮಾನಿಸಲಾಗಿದ್ದು, ಆರೋಪಿಯನ್ನು ಪತ್ತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಕ್ಟೋಬರ್‌ 11 ರಂದು ತಮಿಳುನಾಡು ಡಿಜಿಪಿಗೆ ನಿರ್ದಿಷ್ಟ ಐಡಿಯಿಂದ ಇಮೇಲ್‌ಗಳನ್ನು ಕಳುಹಿಸಲಾಗಿದೆ, ತಕ್ಷಣವೇ ಕರ್ನಾಟಕ ಪೊಲೀಸ್‌‍ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು. ಅನಂತರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್‌‍ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ashwinshekher@outlook.com ನಿಂದ ಬಂದಿರುವ ಈಮೇಲ್‌ನಲ್ಲಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರ ನಿವಾಸಗಳಲ್ಲಿ ನಾಲ್ಕು ಆರ್‌ಡಿಎಕ್‌್ಸ ಹಾಗೂ ಸುಧಾರಿತ ಐಇಡಿಗಳನ್ನು ಇರಿಸಲಾಗಿದೆ. ಅವುಗಳನ್ನು ರಿಮೋಟ್‌ ಮೂಲಕ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.

ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಾಂಬ್‌ ಪತ್ತೆ ದಳ ಎರಡೂ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌‍) ಸೆಕ್ಷನ್‌ 351(4) (ಕ್ರಿಮಿನಲ್‌ ಬೆದರಿಕೆ) ಮತ್ತು 353(1)(ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಹಲಸೂರು ಗೇಟ್‌ ಪೊಲೀಸ್‌‍ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ತಮಿಳುನಾಡಿನ ವ್ಯಕ್ತಿಯೊಬ್ಬರ ಇಮೇಲ್‌ ಐಡಿಯನ್ನು ಟ್ರ್ಯಾಕ್‌ ಮಾಡಲಾಗಿದ್ದು, ಆರೊಪಿಯನ್ನು ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಇದೇ ರೀತಿಯ ಬೆದರಿಕೆಗಳು ಮತ್ತುಮಾಹಿತಿಗಳು ಪದೇ ಪದೇ ಇಮೇಲ್‌ ಮೂಲಕ ಬರುತ್ತಿವೆ. ಬೆದರಿಕೆಯ ಇಮೇಲ್‌ಗಳ ಕಳುಹಿಸುವವರನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ಸಹ ರಚಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇಂದಿನ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸಿಮಂತ್‌ ಕುಮಾರ್‌ ಸಿಂಗ್‌, ಬೆದರಿಕೆ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಕ್ರಮ ಪಟಾಕಿ ದಾಸ್ತಾನು-ಮಾರಾಟ ಮಾಡಿದರೆ ಕಠಿಣ ಕ್ರಮ : ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಕೆ

ಬೆಂಗಳೂರು,ಅ.14– ನಗರದಲ್ಲಿ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಅಥವಾ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದಾಗಿ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಎಚ್ಚರಿಸಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರವಾನಿಗೆ ಪಡೆದಿರುವವರು ಮಾತ್ರ ಪಟಾಕಿಗಳನ್ನು ಸರಿಯಾದ ರೀತಿ ಯಲ್ಲಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಬೇಕು ನಿಯಮಗಳನ್ನು ಉಲ್ಲಂಘಿಸ ಬಾರದು ಎಂದುಸೂಚಿಸಿದರು.

ಕುಂಬಳಗೂಡು ಠಾಣೆ ಪೊಲೀಸರು, ಈಗಾಗಲೇ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿ ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಅವರು, ಈ ಕುರಿತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಭೆ ನಡೆಸಿದ್ದೇವೆ ಎಂದರು.

ಬೆಂಗಳೂರು ನಗರಕ್ಕೆ ಡ್ರಗ್ಸ್ ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುವುದನ್ನು ಪತ್ತೆ ಹಚ್ಚಲು ಅಪರಾಧ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈ ತಂಡ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.

ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಈವಾರ ಬಂಧಿಸಿ 2 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದೇವೆ. ಕಳೆದ ವಾರ 23.84 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು ಎಂದು ಅವರು ವಿವರಿಸಿದರು.

ಡ್ರಗ್‌್ಸ ಜಾಲವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಡ್ರಗ್ಸ್ ಸರಬರಾಜು ಹಾಗೂ ಮಾರಾಟ ಮಾಡುವವರ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಬೆಂಗಳೂರಲ್ಲಿ ಕುಳಿತು ಅಮೆರಿಕಾದ ಪ್ರಜೆಗಳನ್ನು ಡಿಜಿಟಲ್‌ ಅರೆಸ್ಟ್‌ ಮಾಡುತ್ತಿದ್ದ ಕಿಲಾಡಿಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು,ಅ.14-ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಅಮೆರಿಕಾದ ಪ್ರಜೆಗಳಿಗೆ ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಹೆಚ್‌ಎಸ್‌‍ಆರ್‌ ಲೇಔಟ್‌ ಠಾಣೆ ಪೊಲೀಸರು ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ನಗರದಲ್ಲಿ ಕುಳಿತು ಸೈಬರ್‌ ವಂಚಕರು ಅಮೆರಿಕಾ ಪ್ರಜೆಗಳಿಗೆ ವಂಚಿಸುತ್ತಿದ್ದವರನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸೈಬರ್‌ ವಂಚನೆಗಾಗಿ ಹೆಚ್‌ಎಸ್‌‍ಆರ್‌ ಲೇಔಟ್‌ನಲ್ಲಿ ಸೈಬಿಸ್ಟ್‌ ಸಲ್ಯೂಷನ್ಸ್ ಪ್ರೈ.ಲಿ. ಹೆಸರಿನ ನಕಲಿ ಬಿಪಿಓ ಕಂಪನಿಯೊಂದನ್ನು ತೆರೆದು ಎರಡು ಮಹಡಿಗಳಲ್ಲಿ ಹೊರ ರಾಜ್ಯದ ಸುಮಾರು 26 ಯುವಕರು ಮತ್ತು ಯುವತಿಯರನ್ನು ಕೆಲಸಕ್ಕೆ ಸೇರಿಸಿಕೊಂಡು ಅವರಿಗೆ ತರಬೇತಿ ನೀಡಿ ಆನ್‌ ಲೈನ್‌ ಮೂಲಕ ಅಮೆರಿಕಾ ಪ್ರಜೆಗಳ ಮಾಹಿತಿ ಸಂಗ್ರಹಿಸುವಂತೆ ತಿಳಿಸಿ ಅವರುಗಳನ್ನು ಪೋನ್‌ ಮುಖೇನ ಸಂಪರ್ಕಿಸಿ, ಸೈಬರ್‌ ಅಪರಾಧ ವೆಸಗಿರುವುದು ಗೊತ್ತಾಗಿದೆ.

ಈ ನೌಕರರ ಪೈಕಿ 14 ಮಂದಿ ಯಾವುದೇ ಅಪರಾಧದಲ್ಲಿ ತೊಡಗಿಸಿಕೊಳ್ಳದ ಕಾರಣ ಅವರನ್ನು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಉಳಿದ 16 ಮಂದಿಯನ್ನು ಬಂಧಿಸಿ ದ್ದಾರೆ. ಇವರಿಂದ ಒಟ್ಟು 25 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.

ವಂಚಕರು ತನಿಖಾ ಸಂಸ್ಥೆ ಅಥವಾ ಪೊಲೀಸ್‌‍ ಏಜೆನ್ಸಿ ರವರೆಂದು ಹೇಳಿಕೊಂಡು, ಅಮಾಯಕರಿಗೆ ಹೆದರಿಸಿ ಸಹಾಯ ಮಾಡುವ ನೆಪದಲ್ಲಿ ಅಮೆರಿಕಾ ಪ್ರಜೆಗಳಿಗೆ ಮಾದಕ ವಸ್ತುಗಳ ಬಗ್ಗೆ ಅಪರಾಧ ಮಾಡಿರುವುದಾಗಿ ಹೆದರಿಸುವುದಲ್ಲದೇ, ಮನಿಲ್ಯಾಂಡರಿಂಗ್‌ನಲ್ಲಿ ವಂಚನೆ ಮಾಡಿರುವುದಾಗಿ ಹೇಳಿ ಸಹಾಯ ಮಾಡುವ ನೆಪದಲ್ಲಿ ಲಾಭ ಪಡೆದು, ಸೈಬರ್‌ ಅಪರಾಧಗಳನ್ನು ಎಸಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ದಾಳಿ ಸಮಯದಲ್ಲಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ, ಅವರುಗಳು ವರ್ಕ್‌ ಇಂಡಿಯಾ, ಲಿಂಕ್ಡಿನ್‌ ಮಾದರಿಯ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಬ್‌ ಆರಿಂಗ್‌ ಮತ್ತು ವೆಬ್‌ ಸೈಟ್‌ ನಲ್ಲಿ ಕೆಲಸ ಕೊಡಿಸುವ ಸಲುವಾಗಿ ಮಾಹಿತಿಯನ್ನು ಅಪಲೋಡ್‌ ಮಾಡಿದ್ದರು ಎಂದು ಹೇಳಿದ್ದಾರೆ.

ಕಂಪನಿಯ ಮ್ಯಾನೇಜರ್‌, ಉಸ್ತುವಾರಿಗಳು ನಗರದಲ್ಲಿರುವ ಯು.ಎಸ್‌‍.ಎ, ಕೆನಡಾ ಮತ್ತು ಇತರೆ ದೇಶಗಳಿಗೆ ಆನ್‌ ಲೈನ್‌ ಮಾಹಿತಿ ಸೇವೆ ಒದಗಿಸುವ ಕಾಲ್‌ ಸೆಂಟರ್‌ಗಳಲ್ಲಿ ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಕರೆಯಿಸಿಕೊಂಡು, ಹೆಚ್‌ಎಸ್‌‍ಆರ್‌ ಲೇಔಟ್‌ ಮತ್ತು ಬಿ.ಟಿ.ಎಂ. ಲೇಔಟ್‌ನಲ್ಲಿ ವಾಸಿಸಲು ಮನೆಗಳನ್ನು ಮತ್ತು ಕ್ಯಾಬ್‌ಗಳ ಸೇವೆ ಮತ್ತು ಊಟದ ವ್ಯವಸ್ಥೆಯನ್ನು ಸಹ ಮಾಡಿರುವುದಾಗಿ ತಿಳಿಸಿದ್ದಾರೆ.

ಪೊಲೀಸರು ಕಂಪ್ಯೂಟರ್‌ಗಳನ್ನು ಪರಿಶೀಲಿಸಿದಾಗ ಇಂಟರ್‌ನೆಟ್‌ ಮೂಲಕ ಕರೆಗಳನ್ನು ಮಾಡಿ ಯುಎಸ್‌‍ಎ ನಾಗರಿಕರಿಗೆ ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿಲ್ಯಾಂಡರಿಂಗ್‌ ವಂಚನೆ ಮಾಡಿರುವ ಹಾಗೂ ಇತರೆ ಕಾರಣಗಳನ್ನು ಹೇಳಿ ಹೆದರಿಸಿ ವಂಚನೆ ಮಾಡುತ್ತಿರುವುದು ತನಿಖೆಯಿಂದ ತಿಳಿದಿರುತ್ತದೆ.

ಆಗ್ನೇಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಸಾರಾ ಾತಿಮಾ ಮಾರ್ಗದರ್ಶನದಲ್ಲಿ, ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸ್‌‍ ಠಾಣೆಯ ಸಹಾಯಕ ಪೊಲೀಸ್‌‍ ಆಯುಕ್ತರಾದ ಗೋವರ್ದನ್‌ ಗೋಪಾಲ್‌ ರವರ ನೇತೃತ್ವದಲ್ಲಿ, ಇನ್‌್ಸ ಪೆಕ್ಟರ್‌ ಹರೀಶ್‌ ಮತ್ತು ಸಿಇಎನ್‌ ಪೊಲೀಸ್‌‍ ಠಾಣೆಯ ಇನ್ಸ್ ಪೆಕ್ಟರ್‌ ಈಶ್ವರಿ ಹಾಗೂ ಹೆಚ್‌ಎಸ್‌‍ಆರ್‌ ಮತ್ತು ಸಿಇಎನ್‌ ಪೊಲೀಸ್‌‍ ಠಾಣೆ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡಗಳು ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.