ಬೆಂಗಳೂರು, ನ.4- ಕಳೆದೆರಡು ವರ್ಷಗಳ ಹಿಂದಿನ ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತವಾಗಿ ಗಗನಕ್ಕೇರಿದ್ದ ಎಳನೀರು ಬೆಲೆ ಸದ್ಯಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಎಳನೀರು ಬೆಲೆ ಏರುತ್ತದೆ. ಆದರೆ, ಈ ವರ್ಷ ಪೂರ್ತಿ ಏರಿಕೆಯಾಗಿರುವುದು ಇದೇ ಮೊದಲು. ಹಣ ಕೊಟ್ಟರೂ ಎಳನೀರು ಸಿಗದಷ್ಟು ಬರ ಬಂದಿತ್ತು. ಕೇವಲ ಎಳನೀರು ಮಾತ್ರವಲ್ಲ ತೆಂಗಿನಕಾಯಿ, ಕೊಬ್ಬರಿ, ಚಿಪ್ಪು ಬೆಲೆ ಏರಿಕೆಯಾಗಿ ದಾಖಲೆ ನಿರ್ಮಾಣ ಮಾಡಿತ್ತು.
ಕಳೆದೆರಡು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆಯಾಗಿ ಕಪ್ಪುತಲೆ ಹುಳುಬಾಧೆ ಹಾಗೂ ನುಸಿಪೀಡೆಯಿಂದ ಈ ವರ್ಷ ತೆಂಗಿನ ಇಳುವರಿ ಸಂಪೂರ್ಣವಾಗಿ ಕುಸಿದಿದ್ದು, ಎಳನೀರು ಶತಕದ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ತೆಂಗಿನ ಕಾಯಿಯೂ ಸಹ 60 ರಿಂದ 80ರೂ., ಕೊಬ್ಬರಿ ಕ್ವಿಂಟಾಲ್‌ಗೆ 35 ಸಾವಿರ ರೂ. ಹಾಗೂ ಚಿಪ್ಪು ಟನ್‌ಗೆ 25 ಸಾವಿರಕ್ಕೆ ಮಾರಾಟವಾಗಿ ಇತಿಹಾಸ ಸೃಷ್ಟಿಸಿತ್ತು.
ಏಷ್ಯಾದಲ್ಲೇ ಅತಿದೊಡ್ಡ ಎಳನೀರು ಮಾರುಕಟ್ಟೆಯಾದ ಮದ್ದೂರು ಎಪಿಎಂಸಿಯಲ್ಲಿ ಈ ವರ್ಷ ಹಣ ಕೊಟ್ಟರೂ ಎಳನೀರು ಸಿಗದಷ್ಟು ಕೊರತೆ ಎದುರಾಗಿತ್ತು. ಮದ್ದೂರು ಮಾರುಕಟ್ಟೆಗೆ ರಾಮನಗರ, ಮಂಡ್ಯ, ಮೈಸೂರು, ಕೊಳ್ಳೆಗಾಲ, ಟಿ.ನರಸೀಪುರ, ತುಮಕೂರು ಸೇರಿದಂತೆ ಮತ್ತಿತರ ಕಡೆಗಳಿಂದ ಬಹಳ ಹಿಂದಿನ ಕಾಲದಿಂದಲೂ ಎಳನೀರು ಪೂರೈಕೆಯಾಗುತ್ತದೆ. ಇಲ್ಲಿಂದ ರಾಜಧಾನಿ ಬೆಂಗಳೂರು, ನೆರೆಯ ತುಳುನಾಡು, ಆಂಧ್ರ ಪ್ರದೇಶಕ್ಕೂ ಸರಬರಾಜಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ಎಳನೀರು ಬಾರದೆ ಇದ್ದುದರಿಂದ ಬೆಲೆ ಹೆಚ್ಚಳವಾಗಿ ಸರಬರಾಜು ಸಂಪೂರ್ಣವಾಗಿ ಇಳಿಮುಖವಾಗಿತ್ತು.
ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಕಾಣಸಿಗುತ್ತಿದ್ದ ಎಳನೀರು ಅಂಗಡಿಗಳು ಕಣರೆಯಾಗಿದ್ದವು .ಎಲ್ಲೋ ಒಂದೊಂದು ಕಡೆ ಮಾತ್ರ ಎಳನೀರು ಮರಾಟವಾಗುತ್ತಿದ್ದು, ಅಲ್ಲಿ ಬೆಲೆ ನೋಡಿದರೆ ತಲೆ ತಿರುಗುತ್ತಿತ್ತು. 60 ರಿಂದ 80 ರೂ. ವರೆಗೂ ಮಾರಾಟವಾಗಿತ್ತು. ಕೆಲ ವ್ಯಾಪಾರಿಗಳು ಎಳನೀರು ಸಿಗದೆ ವ್ಯಾಪಾರಬಿಟ್ಟು ತರಕಾರಿ, ಹೂ, ಹಣ್ಣು ಮರಾಟಕ್ಕಿಳಿದಿದ್ದರು. ಮದ್ದೂರು ಮಾರುಕಟ್ಟೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವರ್ತಕರು, ಹಮಾಲಿಗಳು, ಕಾರ್ಮಿಕರು ತೀವ್ರಸಂಕಷ್ಟಕ್ಕೆ ಸಿಲುಕಿದ್ದರು.
ಈ ಬಾರಿ ಮಳೆ ಉತ್ತಮವಾಗಿದ್ದು, ಮತ್ತೆ ಇಳುವರಿ ಚೇತರಿಸಿಕೊಂಡಿದ್ದು, ಮಾರುಕಟ್ಟೆಗೆ ಎಳನೀರು ಬರುತ್ತಿರುವುದರಿಂದ ಮತ್ತೆ ಎಳನೀರು ಅಂಗಡಿಗಳ ವೈಭವ ಮರುಕಳಿಸಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 40 ರಿಂದ 50 ರೂ.ಗೆ ಮಾರಾಟವಾಗುತ್ತಿದೆ.
ಕಳೆದ 15 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದು, ಬಿರು ಬೇಸಿಗೆಯಲ್ಲೂ ಸಹ 50ರೂ. ದಾಟುತ್ತಿರಲಿಲ್ಲ . ಆದರೆ ಈ ವರ್ಷ ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲೂ ಸಹ 60 ರಿಂದ 80 ರೂ.ಗೆ ಎಳನೀರು ಮಾರಾಟ ಮಾಡಿದ್ದೇವೆ. ನಾವು ಮದ್ದೂರಿನಿಂದ ಎಳನೀರು ತರಿಸುತ್ತೇವೆ ಅಲ್ಲೆ ಮಾಲು ಇಲ್ಲದ್ದರಿಂದ ನಮಗೆ ಪೂರೈಕೆ ಮಾಡುತ್ತಿರಲಿಲ್ಲ ಹಾಗಾಗಿ ಬೆಲೆ ಏರಿಕೆಯಾಗಿತ್ತು. ಸ್ಪಲ್ಪ ದಿನ ಎಳನೀರು ಸಿಗದೆ ತರಕಾರಿ ವ್ಯಾಪಾರ ಮಾಡುವ ಪರಿಸ್ಥಿತಿ ಬಂದಿತ್ತು.
ಈಗ ಮಾಮೂಲಿಯಂತೆ ಎಳನೀರು ಸರಬರಾಜಾಗುತ್ತಿದ್ದು, ಮದ್ದೂರಿನಲ್ಲಿ 30 ರಿಂದ 40 ರೂ.ಗೆ ಸಿಗುತ್ತದೆ. ಸಾಗಾಣಿಕೆ ವೆಚ್ಚ, ಕೂಲಿ, ಜಾಗದ ಬಾಡಿಗೆ ಸೇರಿ 50 ರಿಂದ 60ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಮುಂದಿನ ಕೆಲ ದಿನಗಳಲ್ಲಿ ಇನ್ನೂ ಸ್ವಲ್ಪ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ನಾಗರಬಾವಿಯ ಎಳನೀರು ವ್ಯಾಪಾರಿ ರಾಜಣ್ಣ ಅವರು ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
