ಬೆಂಗಳೂರು,ನ.3- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲು ಕಾಂಗ್ರೆಸ್ ಪಕ್ಷದ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸರಿಪಡಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರತಿಯೊಂದಕ್ಕೂ ಪ್ರಿಯಾಂಕ ಖರ್ಗೆ ಹೇಳಿದ್ದಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ಅಷ್ಟಕ್ಕೂ ನಮಗೆ ಸವಾಲು ಹಾಕಲು ಅವರ್ಯಾರು? ಮೊದಲು ನಿಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸರಿಪಡಿಸಿಕೊಂಡು ನಂತರ ಸಂಘಪರಿವಾರದ ಬಗ್ಗೆ ಮಾತನಾಡಿ ಎಂದು ತಿರುಗೇಟು ಕೊಟ್ಟರು. ಪ್ರಿಯಾಂಕ್ ಖರ್ಗೆ ನಮನ್ನು ಪ್ರಶ್ನೆ ಮಾಡುವ ಮೊದಲು ಅವರ ಪಕ್ಷವನ್ನು ಪ್ರಶ್ನೆ ಮಾಡಲಿ. ಅವರ ಯಾವುದೇ ಪ್ರಶ್ನೆಗಳಿಗೆ ನಾವು ಉತ್ತರ ಕೊಡುವುದಿಲ್ಲ. ಅವರ ತಟ್ಟೆಯಲ್ಲಿ ನೊಣ ಬಿದ್ದಿದೆ.ಅದರ ಕಡೆ ಮೊದಲು ನೋಡಲಿ. ಇನ್ನೊಬ್ಬರ ತಟ್ಟೆ ಮೇಲೆ ಯಾಕೆ ನೋಡ್ತಾರೆ ಎಂದು ಪ್ರಶ್ನೆ ಮಾಡಿದರು.
ಟನೆಲ್ ರಸ್ತೆ ಯೋಜನೆಗೆ ಅಶೋಕ್ ನೇತೃತ್ವದಲ್ಲಿ ಸಮಿತಿ ಮಾಡೋಣ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಸಮಿತಿ ಮಾಡಲಿ, ನಾನು ಸಮಿತಿಗೆ ಅಧ್ಯಕ್ಷ ಆಗಲು ಒಪ್ಪುತ್ತೇನೆ. ಆದರೆ ಮೊದಲು ರಸ್ತೆ ಗುಂಡಿ ಮುಚ್ಚಲಿ, ಕಸ ಸಮಸ್ಯೆ ಬಗೆಹರಿಸಿ ನಂತರ ನನಗೆ ಆಹ್ವಾನ ಕೊಡಲಿ ಎಂದು ಟಕ್ಕರ್ ಕೊಟ್ಟರು.
ನಿಮ ಬಳಿ ಟನೆಲ್ ರೋಡ್ ಮಾಡುವುದಕ್ಕೆ ಹಣ ಇಲ್ಲ. ಇನ್ನು ಸಮಿತಿ ಮಾಡಿ ಹಣ ಯಾಕೆ ಪೋಲು ಮಾಡುತ್ತೀರಿ? ಟನೆಲ್ ರಸ್ತೆ ಬಗ್ಗೆ ಸರಿಯಾದ ಚರ್ಚೆಯಾಗಿಲ್ಲ. ಬೆಂಗಳೂರು ಜನತೆಯಅಭಿಪ್ರಾಯ ಪಡೆದಿಲ್ಲ. 120 ಇಲಾಖೆಗಳ ಅನುಮತಿ ಬೇಕು, ಒಂದು ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿದರು.
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಟನೆಲ್ ರೋಡ್ ಮಾಡುವ ಮುನ್ನ ಎಲ್ಲ ರಸ್ತೆಗುಂಡಿ ಮುಚ್ಚಿ, ನಗರದ ಕಸ ತೆಗೆಯಬೇಕು. ಅದು ಬಿಟ್ಟು ಧಮಕಿ ಹಾಕುವುದು, ಮಾಡೇ ಮಾಡುತ್ತೇವೆಂದು ಮೊಂಡುತನ ತೋರುವುದು, ಪರಿಸರಕ್ಕೆ ಹಾನಿ ಮಾಡುವುದು, ಕೆಂಪೇಗೌಡರ ಗೋಪುರ ಒಡೆಯಲು ಹೋಗುವುದು ಯಾಕೆ? ಎಂದು ಪ್ರಶ್ನೆ ಮಾಡಿದರು. ಜನರ ದನಿಯನ್ನು ಅರ್ಥ ಮಾಡಿಕೊಂಡು ಯೋಜನೆ ಮಾಡಿ. ಟನೆಲ್ ರಸ್ತೆ ಯೋಜನೆ ಮೂಲಕ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಕಾಂಗ್ರೆಸ್‌ನವರೇ ಮಾತನಾಡುತ್ತಿದ್ದಾರೆ. ರಾಜಣ್ಣ ಕ್ರಾಂತಿ ಬಗ್ಗೆ ಮಾತಾಡಿ ಮಂತ್ರಿ ಸ್ಥಾನ ಕಳೆದುಕೊಂಡರು. ರಾಮನಗರ ಶಾಸಕ ಮಾತಾಡಿದರು. ಅವರ ಕಡೆಯವರೇ ಕ್ರಾಂತಿ ಬಗ್ಗೆ ಮಾತನಾಡುತ್ತಿರುವುದು. ನಾವು ಕ್ರಾಂತಿ ಬಗ್ಗೆ ಮಾತನಾಡುತ್ತಿಲ್ಲ. ನಾವು ಅಭಿವೃದ್ಧಿ ಮಾಡಿ ಎನ್ನುತ್ತಿದ್ದೇವೆ. ಕ್ರಾಂತಿ ಭ್ರಾಂತಿ ಎಲ್ಲ ಅವರ ಪಕ್ಷದಲ್ಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
