ಬೆಂಗಳೂರು,ಜು.3- ಮಹಾನಗರಿಯಲ್ಲಿ ಆಟೋವೊಂದರ ಮೇಲೆ ವಿವಾದಿತ ಧ್ವಜ ಹಾರಾಟವಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಚಾಲಕ ತನ್ನ ಆಟೋದ ಮುಂಭಾಗದಲ್ಲಿ ಪಾಕಿಸ್ತಾನದ್ದು ಎಂದು ಹೇಳಲಾದ ಧ್ವಜವನ್ನು ಸಿಕ್ಕಿಸಿಕೊಂಡು ನಗರದ ತುಂಬೆಲ್ಲಾ ಅಡ್ಡಾಡುತ್ತಿರುವುದು ಕಂಡುಬಂದಿದೆ.
ದಾರಿಯಲ್ಲಿ ಸಹಪ್ರಯಾಣಿಕರೊಬ್ಬರು ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದು ಪರಸ್ಪರ ಹಂಚಿಕೆಯಾಗಿ ವಿವಾದಕ್ಕೆ ಕಾರಣವಾಗಿದೆ.ವಾಹನದ ಸಂಖ್ಯೆ ಕೂಡ ನಮೂದಿಸಲಾಗಿದ್ದು, ಅದರ ಆಧಾರದ ಮೇಲೆ ವಾಹನ ಬೆಂಗಳೂರಿಗೆ ಸೇರಿದ್ದು ಎಂದು ಹೇಳಲಾಗಿದೆ.
ಇದರ ವಿರುದ್ಧವಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ತುಷ್ಟೀಕರಣ ನೀತಿಗೆ ಅಂಟಿಕೊಂಡಿದ್ದು, ಇಂತಹ ಚಟುವಟಿಕೆಗಳಿಗೆ ಕುಮಕ್ಕು ದೊರೆಯುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.ಸರ್ಕಾರದ ಲೋಪಗಳನ್ನು ಪತ್ತೆಹಚ್ಚಿ ಚಾವಟಿ ಬೀಸಬೇಕಾದ ವಿರೋಧಪಕ್ಷ ಕೂಡ ಮೈ ಮರೆತಿದ್ದು ಹೇಳುವವರು, ಕೇಳುವವರು ಇಲ್ಲ ಎಂಬಂತಾಗಿದೆ.