Friday, November 22, 2024
Homeರಾಜ್ಯಪರಿಷತ್‌ ಚುನಾವಣೆ : ಭಾನುವಾರ ಜೆಡಿಎಸ್‌‍ ಸಭೆ, ಜವರಾಯಿಗೌಡರಿಗೆ ಟಿಕೆಟ್‌ ಸಾಧ್ಯತೆ

ಪರಿಷತ್‌ ಚುನಾವಣೆ : ಭಾನುವಾರ ಜೆಡಿಎಸ್‌‍ ಸಭೆ, ಜವರಾಯಿಗೌಡರಿಗೆ ಟಿಕೆಟ್‌ ಸಾಧ್ಯತೆ

ಬೆಂಗಳೂರು, ಮೇ 29-ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾಣೆಗೆ ಸಂಬಂಧಿಸಿದ ಜೆಡಿಎಸ್‌‍ ಅಭ್ಯರ್ಥಿ ಆಯ್ಕೆ ಕುರಿತ ಸಭೆ ಮೇ 2ರಂದು ನಡೆಯಲಿದೆ.

ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ನಾಲ್ವರು ಆಕಾಂಕ್ಷಿಗಳು ಜೆಡಿಎಸ್‌‍ನಲ್ಲಿದ್ದಾರೆ. ಭಾನುವಾರ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬಿ ಫಾರಂ ನೀಡಲಾಗುತ್ತದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ. ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಾಲ್ವರು ಆಕಾಂಕ್ಷಿಗಳಿದ್ದರೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌‍ ಅಭ್ಯರ್ಥಿಯಾಗಿದ್ದ ಟಿ.ಎನ್‌.ಜವರಾಯಿಗೌಡ ಅವರ ಹೆಸರು ಮುಂಚೂಣಿಯಲ್ಲಿದೆ. ಯಶವಂತಪುರ ಕ್ಷೇತ್ರದಲ್ಲಿ ಮೂರು ಸಾರ್ವತ್ರಿಕ ಚುನಾವಣೆ ಹಾಗೂ ಒಂದು ಉಪ ಚುನಾವಣೆಯಲ್ಲಿ ಜೆಡಿಎಸ್‌‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಜೆಡಿಎಸ್‌‍ನ ನಿಷ್ಠಾವಂತ ಕಾರ್ಯಕರ್ತರಾಗಿರುವ ಹಿನ್ನೆಲೆಯಲ್ಲಿ ವರಿಷ್ಠರು ಮೇಲನೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಚುನಾವಣೆಗಳಲ್ಲಿ ಜೆಡಿಎಸ್‌‍ ಪಕ್ಷವು ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಮುಂದೆ ಆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ, ಜವರಾಯಿಗೌಡ ಅವರ ಸ್ಪರ್ಧೆಗೆ ಅವಕಾಶವಿಲ್ಲದಂತಾಗುತ್ತದೆ ಎಂಬ ಆಲೋಚನೆ ವರಿಷ್ಠರಲ್ಲಿರಬಹುದು.

ಜೂನ್‌ 17ರಂದು ನಿವೃತ್ತರಾಗುವ ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌ ಅವರು ಮರು ಸ್ಪರ್ಧೆ ಮಾಡಲು ಜೆಡಿಎಸ್‌‍ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಅವರೂ ವಿಧಾನ ಪರಿಷ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಬೆಂಗಳೂರು ಮಹಾನಗರ ಜೆಡಿಎಸ್‌‍ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ.

ಫಾರೂಕ್‌ ಮತ್ತು ಕುಪೇಂದ್ರರೆಡ್ಡಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುವರೋ ಕಾದುನೋಡಬೇಕು. ಕೊನೆ ಕ್ಷಣದಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬ ಕುತೂಹಲವಿದೆ.

RELATED ARTICLES

Latest News