Saturday, September 14, 2024
Homeರಾಷ್ಟ್ರೀಯ | Nationalಸಂಸತ್ ಉಭಯ ಸದನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕೋಲಾಹಲ, ಕಲಾಪಕ್ಕೆ ಅಡ್ಡಿ

ಸಂಸತ್ ಉಭಯ ಸದನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕೋಲಾಹಲ, ಕಲಾಪಕ್ಕೆ ಅಡ್ಡಿ

ನವದೆಹಲಿ, ಜೂ.28– ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ ಸಂಸತ್‌ನಲ್ಲಿ ಭಾರಿ ಗದ್ದಲ ಉಂಟಾಯಿತು.

ಪ್ರತಿಪಕ್ಷಗಳು ತಮ ನಿಲುವಿನಿಂದ ಹಿಂದೆ ಸರಿಯದ ಕಾರಣ ಲೋಕಸಭಾ ಕಲಾಪವನ್ನು ಜು.1 ಕ್ಕೆ ಸ್ಪೀಕರ್‌ ಓಂಬಿರ್ಲಾ ಮುಂದೂಡಿದರು. ಇತ್ತ ರಾಜ್ಯಸಭೆಯಲ್ಲೂ ಇದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಲಾಪಕ್ಕೆ ಅಡ್ಡಿಪಡಿಸಿತು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿಯವರು ನಿಲುವಳಿ ಮಂಡನೆ ಸೂಚಿಸಿ ನೀಟ್‌ ಪರೀಕ್ಷೆಯ ಅಕ್ರಮ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದರು.

ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮೊದಲು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳಿ. ನಂತರ ಪ್ರತಿಪಕ್ಷಗಳ ನಿಲುವಳಿ ಸೂಚನೆ ಬಗ್ಗೆ ತೀರ್ಮಾನ ಮಾಡಿ ಎಂದು ಓಂಬಿರ್ಲಾ ಅವರಿಗೆ ಮನವಿ ಮಾಡಿಕೊಂಡರು.

ಈ ವೇಳೆ ಕಾನೂನು ಸಚಿವ ಅರ್ಜುನ್‌ ಮೇಗರವಾಲ್‌ರವರು ಸದನವು ನಿಯಮಗಳ ಪ್ರಕಾರವೇ ನಡೆಯಬೇಕು. ನಿಲುವಳಿ ಸೂಚನೆ ಮಂಡಿಸಿದ ತಕ್ಷಣವೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂಬ ನಿಯಮವಿಲ್ಲ. ಯಾವ ಸಮಯದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂಬುದು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ಈಗಲೇ ತೆಗೆದುಕೊಳ್ಳಬೇಕು, ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರ ಮೇಲೆ ಯಾರೂ ಕೂಡ ಒತ್ತಡ ಹಾಕುವಂತಿಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ನಡೆಯಿತು.ಗದ್ದಲದ ನಡುವೆಯೇ ಮಾತನಾಡಿದ ರಾಹುಲ್‌ಗಾಂಧಿಯವರು ನೀಟ್‌ ಪರೀಕ್ಷೆಯಲ್ಲಿ ಹಿಂದೆಂದೂ ಕಾಣದ ಭಾರಿ ಅಕ್ರಮ ನಡೆದಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಯಾರು ಕಾರಣ. ಇದು ಸರ್ಕಾರದ ವೈಫಲ್ಯವೋ ಇಲ್ಲವೇ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯೋ? ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ವಿದ್ಯಾರ್ಥಿಗಳು ಎದುರುನೋಡುತ್ತಿದ್ದಾರೆ. ಪ್ರಶ್ನೋತ್ತರ ಕಲಾಪವನ್ನು ಬದಿಗೊತ್ತಿ ಪ್ರಸ್ತಾವನೆ ಮಂಡಿಸಲು ಅವಕಾಶ ಕೊಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಈ ಹಂತದಲ್ಲಿ ಸಚಿವ ಕಿರಣ್‌ ರಿಜಿಜು, ಸರ್ಕಾರ ಯಾವುದೇ ವಿಷಯವನ್ನು ಮುಚ್ಚುಮರೆ ಮಾಡುತ್ತಿಲ್ಲ ಅಥವಾ ಮುಚ್ಚಿಡುವ ಪ್ರಯತ್ನವನ್ನೂ ಮಾಡುವುದಿಲ್ಲ. ನೀಟ್‌ ಪರೀಕ್ಷೆಯ ಪ್ರಕರಣ ಕುರಿತು ಚರ್ಚಿಸಲು ನಮ ಸರ್ಕಾರ ಮುಕ್ತವಾಗಿದೆ. ಪ್ರತಿಪಕ್ಷಗಳ ಸದಸ್ಯರು ಎತ್ತುವ ಪ್ರತಿಯೊಂದು ಪ್ರಶ್ನೆಗೂ ಸಮರ್ಪಕ ಉತ್ತರ ನೀಡಲಿದ್ದೇವೆ.

ಆದರೆ ಇಲ್ಲಿ ನಿಲುವಳಿ ಸೂಚನೆಯನ್ನು ಯಾವ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಬೇಕೆಂಬುದನ್ನು ಸಭಾಧ್ಯಕ್ಷರು ತೀರ್ಮಾನಿಸಬೇಕು ಎಂದು ಸಮರ್ಥನೆ ಮಾಡಿದರು.ಆಗ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರೂ ಕೂಡ ಪ್ರತಿಪಕ್ಷದ ವಿರುದ್ಧ ತಿರುಗಿಬಿದ್ದರು.

ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸಭಾಧ್ಯಕ್ಷರು ಕೆಲಕಾಲ ಕಲಾಪವನ್ನು ಮುಂದೂಡಿದರು. ಪುನಃ ಸದನ ಸೇರಿದಾಗ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಅನಿವಾರ್ಯವಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಇತ್ತ ರಾಜ್ಯಸಭೆಯಲ್ಲೂ ಪ್ರತಿಪಕ್ಷದ ನಾಯಕ ಎಂ.ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ನೀಟ್‌ ಪರೀಕ್ಷೆಯ ಅಕ್ರಮಗಳ ಕುರಿತು ಚರ್ಚಿಸಲು ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದಿದ್ದರಿಂದ ಕೋಲಾಹಲ ಉಂಟಾಯಿತು.

ಸರ್ಕಾರ ಉತ್ತರ ಕೊಡಲು ಸಿದ್ಧವಿದೆ. ಆದರೆ ಈಗಲೇ ಉತ್ತರ ನೀಡಬೇಕೆಂದು ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ನಾಯಕರಾಗಿರುವ ಜೆ.ಪಿ.ನಡ್ಡಾ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ಕೊಟ್ಟರು.ಆಗ ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಸಭಾಪತಿ ಧನ್ಕರ್‌ ಮುಂದೂಡಿದರು.

RELATED ARTICLES

Latest News