ಬೆಂಗಳೂರು, ಮಾ.4- ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂಗವಾಗಿ ಸನ್‍ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ನೇಮಕ ಮಾಡಲಾಗಿದೆ. 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಎಸ್‍ಎ20 ಲೀಗ್‍ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ ರೌಂಡರ್ ಏಡನೆ ಮಾಕ್ರ್ರಮ್ ಅವರನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಜಾಗಕ್ಕೆ ಕರೆ ತರಲಾಗಿತ್ತು.
ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಕಾಣದ ಹೈದ್ರಾಬಾದ್ ಫ್ರಾಂಚೈಸಿ ಉತ್ತಮ ಪ್ರದರ್ಶನ ತೋರಿಸುವಲ್ಲಿ ಎಡವಿ 14 ಪಂದ್ಯಗಳಿಂದ ಕೇವಲ 4 ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‍ನಲ್ಲಿ 10 ಸ್ಥಾನ ಅಲಂಕರಿಸಿತ್ತು.
2016ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸನ್‍ರೈಸರ್ಸ್ ಹೈದ್ರಾಬಾದ್ ಮುಂಬರುವ ಐಪಿಎಲ್ ಟೂರ್ನಿಯಲ್ಲೂ ಚಾಂಪಿಯನ್ ಪಟ್ಟ ಗೆಲ್ಲುವ ಉದ್ದೇಶದಿಂದ ಆಸ್ಟ್ರೇಲಿಯಾದ ವೈಟ್‍ಬಾಲ್ ಕ್ರಿಕೆಟ್ ನಾಯಕ ಪ್ಯಾಟ್ ಕಮ್ಮಿನ್ಸ್‍ಗೆ ಪಟ್ಟಾಭಿಷೇಕ ಮಾಡಿದ್ದಾರೆ.
2023ರಲ್ಲಿ ಪ್ಯಾಟ್ ಕಮ್ಮಿನ್ಸ್ ತಮ್ಮ ನಾಯಕತ್ವದಲ್ಲಿ ಡಬ್ಲ್ಯುಟಿಸಿ ಹಾಗೂ ಏಕದಿನ ವಿಶ್ವಕಪ್ ಫೈನಲ್‍ನಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾವನ್ನು ಮಣಿಸಿ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.
ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ 20.50 ಕೋಟಿಗೆ ಬಿಕರಿಯಾಗಿರುವ ಪ್ಯಾಟ್ ಕಮ್ಮಿನ್ಸ್ 42 ಐಪಿಎಲ್ ಪಂದ್ಯಗಳಿಂದ 45 ವಿಕೆಟ್ ಹಾಗೂ 3 ಅರ್ಧಶತಕಗಳ ನೆರವಿನಿಂದ 379 ರನ್ ಗಳಿಸಿದ್ದಾರೆ.