Tuesday, July 2, 2024
Homeರಾಷ್ಟ್ರೀಯಬಿಹಾರ ಸರ್ಕಾರ ಶೇ.50 ರಿಂದ 65 ರಷ್ಟು ಹೆಚ್ಚಿಸಿದ್ದ ಮೀಸಲಾತಿ ಆದೇಶ ರದ್ದು

ಬಿಹಾರ ಸರ್ಕಾರ ಶೇ.50 ರಿಂದ 65 ರಷ್ಟು ಹೆಚ್ಚಿಸಿದ್ದ ಮೀಸಲಾತಿ ಆದೇಶ ರದ್ದು

ಪಾಟ್ನಾ,ಜೂ.20- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗ ಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.50 ರಿಂದ 65 ರಷ್ಟು ಮೀಸಲಾತಿ ಹೆಚ್ಚಿಸುವ ಬಿಹಾರ ಸರ್ಕಾರದ ಕಾನೂನನ್ನು ಪಾಟ್ನಾ ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಬಿಹಾರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಹಾಲಿ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಮುಂದಾಗಿದ ಅನೇಕ ರಾಜ್ಯಸರ್ಕಾರಗಳಿಗೂ ಇದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಾಲಿ ಇರುವ ಮೀಸಲಾತಿ ಪ್ರಮಾಣವನ್ನು ಶೇ. 50 ರಿಂದ 65 ಕ್ಕೆ ಹೆಚ್ಚಳ ಮಾಡಲು ಬಿಹಾರದ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿತ್ತು.

ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡೂ ಕಡೆ ವಾದ ಮತ್ತು ಪ್ರತಿವಾದವನ್ನು ಆಲಿಸಿದ್ದ ಹೈಕೋರ್ಟ್ ಮಾ.11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಮತ್ತು ಹರೀಶ್ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಬಿಹಾರ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನ ಸಂವಿಧಾನ ವಿರೋಧಿ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಸಚಿವ ಸಂಪುಟದಲ್ಲಿ ಎಸ್ಸಿ/ಎಸ್ಟಿ, ಇಬಿಸಿ ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.65 ರಷ್ಟು ಮೀಸಲಾತಿ ನೀಡುವುದು ಸಾಧುವಲ್ಲ. ಮೀಸಲಾತಿ ಪ್ರಮಾಣ ಶೇ.50 ಕ್ಕಿಂತಲೂ ಹೆಚ್ಚು ಇರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಆದರೆ ಬಿಹಾರ ಸರ್ಕಾರ ಮೀಸಲಾತಿ (ತಿದ್ದುಪಡಿ ಕಾಯ್ದೆ) 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ), ಮೀಸಲಾತಿ ತಿದ್ದುಪಡಿ ಕಾಯ್ದೆ 2023 ಅಸಾಂವಿಧಾನಿಕ ಎಂದು ತೀರ್ಪು ನೀಡಿತು. ಸಂವಿಧಾನದ ಪರಿಚ್ಛೇದ 14,15 ಮತ್ತು 16ನೇ ವಿಧಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನಾವು ಮಾನ್ಯ ಮಾಡುತ್ತೇವೆ ಹಾಗೂ ಸರ್ಕಾರದ ತೀರ್ಮಾನವನ್ನು ಅಮಾನ್ಯಗೊಳಿಸುತ್ತೇವೆ ಎಂದು ದ್ವಿಸದಸ್ಯ ಪೀಠ ಮಹತ್ವದ ಆದೇಶ ನೀಡಿತು.

ಗೌರವ್ಕುಮಾರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಪೀಠ ಪುರಸ್ಕರಿಸಿತು. ಈ ವೇಳೆ ಬಿಹಾರದ ಅಡ್ವೊಕೇಟ್ ಜನರಲ್ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾತಿನಿಧ್ಯ ಹೆಚ್ಚಾಗುತ್ತಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಸರ್ಕಾರ ಮೀಸಲಾತಿಯನ್ನು ಜನಸಂಖ್ಯೆ ಅನುಪಾತದ ಮೇಲೆ ನೀಡುತ್ತಿಲ್ಲ ಎಂದು ಮನವರಿಕೆ ಮಾಡುವ ಯತ್ನ ಮಾಡಿದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ದಿನುಕುಮಾರ್, ಶೇ.50 ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬಾರದೆಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಸಾಮಾಜಿಕ, ಆರ್ಥಿಕ ಸಮೀಕ್ಷೆಗಳ ಆಧಾರದ ಮೇಲೆ ಮಾಡುತ್ತಾ ಹೋದರೆ ನ್ಯಾಯಾಲಯದ ತೀರ್ಪಿಗೆ ಗೌರವ ಇರುತ್ತದೆಯೇ ಎಂದು ಪ್ರಶ್ನಿಸಿದರು.

ಈ ಹಿಂದೆ ಇಂದ್ರಾಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶೇ.50 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಐತಿಹಾಸಿಕ ತೀರ್ಪು ಕೊಟ್ಟಿದೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಅನೇಕ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳು ಕೋರ್ಟ್ ನ್ಯಾಯಾಲಯದಲ್ಲಿ ಈಗಲೂ ಚರ್ಚೆಯ ಹಂತದಲ್ಲಿವೆ.

ಮೀಸಲಾತಿ ಪ್ರಮಾಣವನ್ನು ಕೇಂದ್ರ ಸರ್ಕಾರ ಹೆಚ್ಚಿಸಬೇಕೇ? ಇಲ್ಲವೇ ರಾಜ್ಯಸರ್ಕಾರ ಹೆಚ್ಚಿಸಬೇಕೇ? ಎಂಬುದು ಈಗಲೂ ಚರ್ಚೆಯಲ್ಲಿದೆ.ಬಿಹಾರ ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಭವಿಷ್ಯದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಕೋರಿದರು. ಅಂತಿಮವಾಗಿ ನ್ಯಾಯಾಲಯ ಬಿಹಾರ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡಿದ್ದ ತೀರ್ಮಾನವನ್ನು ರದ್ದುಪಡಿಸಿ ತೀರ್ಪು ನೀಡಿತು.

RELATED ARTICLES

Latest News