ನವದೆಹಲಿ,ಏ.30- ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣ ಮತ್ತು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಕುರಿತಂತೆ ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಕುರಿತು ಮೂರು ದಿನಗಳ ಒಳಗೆ ಸಮಗ್ರ ವರದಿ ನೀಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಅವರು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಹಾಗೂ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿದ್ದು, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರವಾದ ವರದಿಯನ್ನು ಮೂರು ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಯೋಗವು ಇಂತಹ ಘಟನೆಗಳು ಮಹಿಳೆಯರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಲ್ಲದೆ ಅವರ ವಿರುದ್ಧ ಅಗೌರವ ಮತ್ತು ಹಿಂಸಾ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಕೇಳಿಬಂದ ನಂತರ ಆರೋಪಿ ಸ್ಥಾನದಲ್ಲಿರುವವರು ದೇಶ ಬಿಟ್ಟು ಹೊರ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಪರಾರಿಯಾಗಿರುವ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಸಂಬಂಧಪಟ್ಟ ಪೊಲೀಸ್ ಪ್ರಾಧಿಕಾರದಿಂದ ತ್ವರಿತ ಮತ್ತು ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಕರಣವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಕೇಳಿ ಬಂದಿರುವ ಆರೋಪಗಳು ಅತ್ಯಂತ ಗಂಭೀರವಾಗಿವೆ. ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಮಹಿಳೆಯರ ಘನತೆಗೆ ಕುತ್ತು ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಡಿಯೋಗಳು ವೈರಲ್ ಆಗದಂತೆ ತಡೆಯಿರಿ. ವಿಡಿಯೋ ಲೀಕ್ ಮಾಡಿದ್ದು ಯಾರು? ಎಲ್ಲಿಂದ ಲೀಕ್ ಮಾಡಿದ್ದಾರೆ? ಎಂಬುದನ್ನು ಪತ್ತೆ ಮಾಡಬೇಕು. ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆಯಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಇನ್ನು ಮಹಿಳಾ ಆಯೋಗ ಸೈಬರ್ ಕ್ರೈಂ ಜೊತೆ ಸಭೆ ನಡೆಸಿದ್ದು, ವಿಡಿಯೋ ವೈರಲ್ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ವಿಡಿಯೋಗಳು ಹೆಚ್ಚು ಶೇರ್ ಆಗದಂತೆ ತಡೆಯಿರಿ ಎಂದು ಹೇಳಿದೆ.
ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಂದು ಸರ್ಕಾರದ ಆದ್ಯಕರ್ತವ್ಯ. ಈ ಹಿನ್ನಲೆಯಲ್ಲಿ ತಪ್ಪಿತಸ್ಥ ಆರೋಪಿ ಪ್ರಜ್ವಲ್ ವಿರುದ್ಧ ಪೊಲೀಸರು ಈವರೆಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಯೋಗಕ್ಕೆ ಮೂರು ದಿನದೊಳಗೆ ವಿಸ್ತೃತ ವರದಿ ನೀಡಬೇಕೆಂದು ರೇಖಾ ಶರ್ಮ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಬರೆದಿರುವ ಪತ್ರದಲ್ಲಿ ಸೂಚನೆ ಕೊಟ್ಟಿದ್ದಾರೆ.