Sunday, May 19, 2024
Homeರಾಜ್ಯಬಿಜೆಪಿಯವರೇ ಪೆನ್‌ಡ್ರೈವ್‌ ಬಿಡುಗಡೆ ಮಾಡಿಸಿದ್ದಾರೆ, ಇದರಲ್ಲಿ ಡಿಕೆಶಿ ಕೈವಾಡ ಇಲ್ಲ : ಶಿವರಾಮೇಗೌಡ

ಬಿಜೆಪಿಯವರೇ ಪೆನ್‌ಡ್ರೈವ್‌ ಬಿಡುಗಡೆ ಮಾಡಿಸಿದ್ದಾರೆ, ಇದರಲ್ಲಿ ಡಿಕೆಶಿ ಕೈವಾಡ ಇಲ್ಲ : ಶಿವರಾಮೇಗೌಡ

ಬೆಂಗಳೂರು, ಮೇ 7-ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್‌ಡ್ರೈವ್‌ ಬಿಡುಗಡೆ ಬಿಡುಗಡೆಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕೈವಾಡ ಇಲ್ಲ. ಬಿಜೆಪಿಯ ನಾಯಕರ ಒತ್ತಡದಿಂದ ವಿಡಿಯೋಗಳನ್ನು ತಾನೇ ಬಹಿರಂಗ ಪಡಿಸಿದ್ದಾಗಿ ವಕೀಲ ದೇವರಾಜೇಗೌಡ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಮಾಜಿ ಸಚಿವ ಎಲ್‌.ಆರ್‌.ಶಿವರಾಮೇಗೌಡ ಸ್ಪಷ್ಟ ಪಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇವರಾಜಗೌಡ ಹಾಗೂ ತಮ ನಡುವಿನ ಭೇಟಿ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಜೊತೆಗೆ ತಮ ಹಾಗೂ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕೇಳಿ ಬಂದಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಪೆನ್‌ಡ್ರೈವ್‌ ಬಹಿರಂಗದ ಹಿಂದೆ ಡಿ.ಕೆ.ಶಿವಕುಮಾರ್‌ ಅವರ ಹಸ್ತಕ್ಷೇಪವಿದೆ. ಎಲ್‌.ಆರ್‌.ಶಿವರಾಮೇಗೌಡ ಅವರ ಮುಖಾಂತರ ತಮನ್ನು ಸಂಪರ್ಕಿಸಿದ್ದ ಡಿ.ಕೆ.ಶಿವಕುಮಾರ್‌ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಆಮಿಶ ತೊರಿಸಿದ್ದರು ಎಂದು ಬಿಜೆಪಿ ನಾಯಕರು ಆಗಿರುವ ದೇವರಾಜೇಗೌಡ ನಿನ್ನೆ ತುರ್ತು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಎಲ್‌.ಆರ್‌.ಶಿವರಾಮೇಗೌಡ, ತಾವು ಮತ್ತು ದೇವರಾಜೇಗೌಡ ಬಿಜೆಪಿಯಲ್ಲಿದ್ದೇವು. ಅವರು ಹೊಳೆನರಸೀಪುರದ ಅಭ್ಯರ್ಥಿ ಎಂಬ ಕಾರಣಕ್ಕೆ ಸಿಕ್ಕಾಗ ಹಾಯ್‌ ಬಾಯ್‌ ಹೇಳುತ್ತಿದ್ದೆ. ನಾಲ್ಕು ದಿನಗಳ ಹಿಂದಷ್ಟೆ ಅವರ ಜೊತೆ ಮಾತನಾಡಿದ್ದು ಬಿಟ್ಟರೆ, ಅದಕ್ಕೂ ಮೊದಲು ಹೆಚ್ಚಿನ ಪರಿಚಯ ಇರಲಿಲ್ಲ ಎಂದರು.

ತಮ್ಮ ಮನೆಯಲ್ಲಿ ಎಂದಿನಂತೆ ಜನರನ್ನು ಭೇಟಿ ಮಾಡುವ ವೇಳೆ ಹೊಳೆನರಸೀಪುರದವರು ಬಂದಿದ್ದರು. ಅವರು ನಮ್ಮ ದೇವರಾಜೇಗೌಡರು ನಿಮ್ಮನ್ನು ಕೇಳುತ್ತಿದ್ದರು ಎಂದು ಹೇಳಿದರು. ವಿಡಿಯೋ ಬಹಿರಂಗದ ಬಗ್ಗೆ ನನಗೂ ಕುತೂಹಲ ಇತ್ತು. ಹಾಗಾಗಿ ಕರೆ ಮಾಡಿಕೊಡುವಂತೆ ಹೊಳೆನರಸೀಪುರದವರ ಬಳಿ ಹೇಳಿದ್ದೆ. ಫೋನ್‌ನಲ್ಲಿ ಸಂಪರ್ಕಕ್ಕೆ ಸಿಕ್ಕ ದೇವರಾಜೇಗೌಡರಿಗೆ ನಿಮ್ಮ ಆಸೆ ಈಡೇರಿತ್ತಲ್ಲ, ಎರಡು ವರ್ಷದ ನಿಮ್ಮ ಹೋರಾಟ ಯಶಸ್ವಿಯಾಯಿತಲ್ಲ. ಕೊನೆಗೂ ಹೋರಾಟವನ್ನು ಒಂದು ಹಂತಕ್ಕೆ ತಂದು ಬಿಟ್ಟಿರಿ ಎಂದು ನಾನು ಹೇಳಿದ್ದೆ.

ಆಗ ನಾನು ತುಂಬ ಕಷ್ಟದಲ್ಲಿದ್ದೇನೆ. ನಿಮನ್ನು ಭೇಟಿ ಮಾಡಬೇಕು ಎಂದು ದೇವರಾಜ್‌ಗೌಡ ಕೇಳಿಕೊಂಡರು. ನಾನು ಬ್ಯೂಸಿ ಇದ್ದೇನೆ, ಸದ್ಯಕ್ಕೆ ಭೇಟಿ ಸಾಧ್ಯವಿಲ್ಲ ಎಂದು ಹೇಳಿದ್ದೆ. ನಾನು ಪ್ರಮೀಳಾ ನೇಸರ್ಗಿ ಅವರ ಕಚೇರಿಯಲ್ಲಿ ಕಿರಿಯ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ದೇವರಾಜೇಗೌಡ ಹೇಳಿದರು. ಪ್ರಮೀಳಾ ಮೇಡಂ ತಮಗೆ ಹಳೇ ವಕೀಲರು, ಇವತ್ತು ಮೂರು ಗಂಟೆಗೆ ಎಂ.ಜಿ.ರಸ್ತೆ ಬರುತ್ತೇನೆ, ಅಲ್ಲಿಗೆ ಬಾ ಸಿಗುತ್ತೇನೆ ಎಂದು ನಾನು ಹೇಳಿದ್ದೆ. ಅದರಂತೆ ನಾವು ಎಂ.ಜಿ.ರಸ್ತೆಯಲ್ಲಿ ಭೇಟಿಯಾದವು ಎಂದು ವಿವರಿಸಿದ್ದಾರೆ.

ಆ ವೇಳೆ ದೇವರಾಜೇಗೌಡ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಬಿಜೆಪಿಯ ಎಲ್ಲಾ ಮುಖಂಡರು ವಿಡಿಯೋ ಬಹಿರಂಗ ಪಡಿಸುವಂತೆ ಬಲವಂತ ಮಾಡಿದ್ದರು. ಅದಕ್ಕಾಗಿ ನಾನೇ ಬಿಡುಗಡೆ ಮಾಡಿದ್ದೆ. ಅದಕ್ಕೆ ಕುಮಾರಸ್ವಾಮಿಯವರ ಒಪ್ಪಿಗೆಯೂ ಇತ್ತು ಎಂದು ದೇವರಾಜೇಗೌಡ ನನ್ನ ಬಳಿ ಹೇಳಿಕೊಂಡರು. ನಾನು ವಿಡಿಯೋ ಬಿಡುಗಡೆ ಮಾಡಿದ ಮೇಲೆ ಸಾಕಷ್ಟು ಬೆಳವಣಿಗೆಯಾಗಿದೆ.

ವ್ಯಾಪಕ ಚರ್ಚೆಯಾಗುತ್ತಿದೆ. ಒಮೆ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿಸಿ ಎಂದು ಅವರು ಕೇಳಿಕೊಂಡರು. ದೇವರಾಜಗೌಡ ಕೂಡ ಯುವ ಕಾಂಗ್ರೆಸ್‌‍ನಲ್ಲಿದ್ದರಂತೆ, ಆಗ ಡಿ.ಕೆ.ಶಿವಕುಮಾರ್‌ ಬೆಂಬಲ ನೀಡಲಿಲ್ಲ ಎಂಬ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಆಗಿದ್ದು ಆಗಿ ಹೋಯಿತು ಬಿಡಿ ಎಂದು ನಾನು ಸಮಾಧಾನ ಮಾಡಿದ್ದೆ. ನಮ ಮಾತುಕತೆ ವೇಳೆಗೆ ಡಿ.ಕೆ.ಶಿವಕುಮಾರ್‌ ಬೇರೆ ಊರಿನ ಪ್ರವಾಸದಲ್ಲಿದ್ದರು. ದೇವರಾಜೇಗೌಡ ರಾತ್ರಿ ಏಳು ಗಂಟೆಯವರೆಗೂ ತಮ ಜೊತೆಯಲ್ಲಿ ತಿಂಡಿ ತಿಂದುಕೊಂಡು ತಿರುಗಾಡಿಕೊಂಡಿದ್ದರು. ಆ ಬಳಿಕ ಹೋದರು. ಆ ಕ್ಷಣದಲ್ಲಿ ಅವರ ಚಟುವಟಿಕೆ ನೋಡಿದರೆ ಪ್ರಜ್ವಲ್‌ ರೇವಣ್ಣನಿಗಿಂತ ದೊಡ್ಡ ಮನೋರೋಗಿ ಎನಿಸಿತ್ತು ಎಂದು ದೂರಿದ್ದರು.

ತಮ ಮೊಬೈಲ್‌ ಅನ್ನು ಗುಪ್ತಚರ ಇಲಾಖೆಯವರು ಟಾಪ್‌ ಮಾಡುತ್ತಿದ್ದಾರೆ ಎಂದು ಆತ ವಾಕಿಟಾಕಿ ಬಳಸುತ್ತಿದ್ದಾರೆ. ಹೋರಾಟ ಮಾಡುವ ನೀನು ಹುಷಾರು ಎಂದು ನಾನು ಕಾಳಜಿಯಿಂದ ಹೇಳಿದ್ದೆ. ರಾತ್ರಿ 11ಗಂಟೆಗೆ ಎಂದಿನಂತೆ ನಾನು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆರಂಭದಲ್ಲಿ ದೇವರಾಜೇಗೌಡ ನಿಮ ಬಳಿ ಮಾತನಾಡಬೇಕಂತೆ ಮಾತನಾಡುತ್ತೀರಾ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಿದೆ.

ಅವರು ಬೇಡ ಎಂದರು, ನಾನೇಕೆ ಅವರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು. ನಾನೇ ಬಲವಂತ ಮಾಡಿ ಒಪ್ಪಿಸಿದೆ. ಸರಿ ಕರೆ ಮಾಡಿಕೊಡಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಆ ವೇಳೆಗೆ ದೇವರಾಜೇಗೌಡ ದೂರದಲ್ಲಿದ್ದೇನೆ ಬರಲು ತಡವಾಗುತ್ತದೆ ಎಂದು ಹೇಳಿದ್ದರು. ಫೋನ್‌ನಲ್ಲೇ ಮಾತನಾಡಿ ಎಂದು ಡಿ.ಕೆ.ಶಿವಕುಮಾರ್‌ ಕೈಗೆ ಫೋನ್‌ ಕೊಟ್ಟೆ. ಡಿ.ಕೆ.ಶಿವಕುಮಾರ್‌ ಬಳಿಯೂ ದೇವರಾಜ್‌ಗೌಡ ಫೋನ್‌ನಲ್ಲಿ ಎರಡು ಮೂರು ಮಂದಿ ಸಂತ್ರಸ್ಥರ ಬಗ್ಗೆ ವಿವರಣೆ ನೀಡುತ್ತಿದ್ದರು.

ಅದನ್ನೇಲ್ಲಾ ಕೇಳಲು ನಿರಾಕರಿಸಿದ ಡಿ.ಕೆ.ಶಿವಕುಮಾರ್‌ ಎಸ್‌‍ಐಟಿ ರಚನೆ ಮಾಡಿದ್ದೇವೆ. ಏನೇ ಇದ್ದರೂ ತನಿಖಾಧಿಕಾರಿಗಳ ಮುಂದೆ ಹೇಳಿ ಎಂದು ಫೋನ್‌ ಕಟ್‌ ಮಾಡಿದ್ದರು ಎಂದು ಶಿವರಾಮೇಗೌಡ ವಿವರಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ಗೂ ಇದಕ್ಕೂ ಸಂಬಂಧ ಇಲ್ಲ, ದೇವರಾಜೇಗೌಡನನ್ನೂ ಕರೆದುಕೊಂಡು ಬಾ ಎಂದು ನನ್ನ ಬಳಿ ಅವರು ಹೇಳಿರಲಿಲ್ಲ. ಇಷ್ಟು ಕೆಳಮಟ್ಟದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಆಡಿಯೋ ಇದ್ದರೆ ಪೂರ್ತಿ ಬಹಿರಂಗ ಮಾಡಲಿ. ರಾಜಕೀಯಕ್ಕಾಗಿ ಸ್ಟಂಟ್‌ ಮಾಡುವುದು ಬೇಡ ಎಂದು ಶಿವರಾಮೇಗೌಡ ಸವಾಲು ಹಾಕಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಕಾಲ್‌ ಅನ್ನು ದೇವರಾಜೇಗೌಡ ರೆಕಾರ್ಡ್‌ ಮಾಡಿಕೊಳ್ಳುವುದು ನನಗೆ ಗೊತ್ತಿರಲಿಲ್ಲ. ವಕೀಲ ಎಂಬ ಗೌರವದಿಂದ ನಾನು ಮಾತನಾಡಿದ್ದೆ, ಈ ರೀತಿ ಮಾಡುತ್ತಾರೆ ಎಂಬ ಮಾಹಿತಿ ಇದಿದ್ದರೆ ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಹಾಸನದ ಪ್ರಕರಣ ವಿಶ್ವದಲ್ಲೇ ದೊಡ್ಡ ಹಗರಣ, ಅದರ ವಿರುದ್ಧ ದೇವರಾಜೇಗೌಡ ಎರಡು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ, ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಈಗ ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Latest News