Saturday, January 4, 2025
Homeರಾಜ್ಯಹೊಸ ವರ್ಷಾರಂಭದಿನ ದೇವರ ಮೊರೆಹೋದ ಜನ, ದೇವಾಲಯಗಳಲ್ಲಿ ಜನಜಂಗುಳಿ

ಹೊಸ ವರ್ಷಾರಂಭದಿನ ದೇವರ ಮೊರೆಹೋದ ಜನ, ದೇವಾಲಯಗಳಲ್ಲಿ ಜನಜಂಗುಳಿ

People rush to temples on New Year's Day

ಬೆಂಗಳೂರು,ಜ.1- ಹೊಸ ವರ್ಷಾರಂಭದ ಮೊದಲ ದಿನವಾದ ಇಂದು ನಾಡಿನ ಪ್ರಮುಖ ದೇವಾಲಯಗಳಿಗೆ ಭಕ್ತರು ಭೇಟಿ ಕೊಟ್ಟು ದೇವರ ದರ್ಶನ ಪಡೆದರು. ಬೆಂಗಳೂರು ಹಾಗೂ ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಮುಗಿಬಿದ್ದರು.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಬೆಂಗಳೂರಿನ ಗವಿಗಂಗಾಧರೇಶ್ವರ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ಬನಶಂಕರಿ, ರಾಜರಾಜರಾಜೇಶ್ವರಿ, ಗಾಳಿ ಆಂಜನೇಯಸ್ವಾಮಿ, ಇಸ್ಕಾನ್‌, ಮಹಾಲಕ್ಷ್ಮಿ ಲೇಔಟ್‌ನ ಶ್ರೀನಿವಾಸ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಡೆದರು.

ಚಿಕ್ಕಬಳ್ಳಾಪುರದ ನಂದಿಯ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರುತ್ತಿದೆ.

ಧರ್ಮಸ್ಥಳದ ಮಂಜುನಾಥಸ್ವಾಮಿ, ಮಲೆಮಹದೇಶ್ವರ ಸ್ವಾಮಿ, ನಂಜನಗೂಡಿನ ಶ್ರೀಕಂಠೇಶ್ವರ, ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ, ನಂದಿಬೆಟ್ಟದ ಭೋಗ ನಂದೀಶ್ವರ ದೇವಾಲಯ ಸೇರಿದಂತೆ ಪ್ರಸಿದ್ದ ದೇವಾಲಯಗಳಿಗೆ ಇಂದು ಭಕ್ತರ ದಂಡೇ ಭೇಟಿ ಕೊಟ್ಟಿತ್ತು. ಕದ್ರಿ ಮಂಜುನಾಥ ದೇಗುಲಕ್ಕೆ ಬೆಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕೆಲವರು ವಿಶೇಷ ಪೂಜೆ ಸಲ್ಲಿಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಮಾದಪ್ಪನಿಗೆ ಸಹಸ್ರಾರು ಭಕ್ತರು ಪೂಜೆ ಸಲ್ಲಿಸಿದರು. ಮಲೆ ಮಹದೇಶ್ವರನಿಗೆ ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಬಸವ ವಾಹನ, ರುದ್ರಾಕ್ಷಿ ಮಂಟಪ ಮತ್ತಿತರ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಹೊಸ ವರ್ಷದ ಮುನ್ನಾ ದಿನವಾದ ರಾತ್ರಿ ಬಹಳಷ್ಟು ಮಂದಿ ಪರಸ್ಪರ ಶುಭಾಶಯ ವಿನಿಮಯ ಮಾಡಿ ಸಂಭ್ರಮಾಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಬಹಳಷ್ಟು ಮಂದಿ ತಮ ಇಷ್ಟದೈವದ ದೇವಾಲಯಗಳಿಗೆ ತೆರಳಿ ಮೊದಲ ದಿನವೇ ದೇವರಿಗೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ.

ಹೊಸ ವರ್ಷ ಆರಂಭದಲ್ಲಿ ನಿರೀಕ್ಷೆಯಂತೆ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ಸೇರಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿತ್ತು. ಹೊಸ ವರ್ಷದ ಸಂಭ್ರಮದಲ್ಲಿದ್ದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.

ಭಕ್ತರಿಗೆ ಲಡ್ಡು ವಿತರಣೆ
ನೂತನ ಕ್ರೈಸ್ತ ವರ್ಷಾರಂಭವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು. 2025ನೇ ವರ್ಷದ ಮೊದಲ ದಿನವನ್ನ ಯೋಗನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಲೋಕ ಕಲ್ಯಾಣಾರ್ಥವಾಗಿ ಹಮಿಕೊಳ್ಳಲಾದ ಪೂಜಾ ಕೈಂಕರ್ಯಗಳು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ನೆರವೇರಿದವು.

ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲಾಯಿತು. ಭಾಷ್ಯಂ ಸ್ವಾಮೀಜಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಎನ್‌.ಶ್ರೀನಿವಾಸನ್‌ ನೇತೃತ್ವದಲ್ಲಿ ಭಕ್ತರಿಗೆ ಲಾಡು ಹಾಗೂ ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಯೋಗಾನರಸಿಂಹ ಸ್ವಾಮಿಯ ದರ್ಶನ ಪಡೆದಿದ್ದಾರೆ. 2 ಕೆಜಿ ತೂಕದ 10 ಸಾವಿರ ಲಡ್ಡು ಹಾಗೂ 150 ಗ್ರಾಂ. ತೂಕದ 2 ಲಕ್ಷ ಲಡ್ಡು ಭಕ್ತರ ಬಾಯಿ ಸಿಹಿ ಮಾಡಲಿದೆ. 1994ರಿಂದ ಆರಂಭವಾದ ಲಡ್ಡು ವಿತರಣಾ ಕಾರ್ಯ ನಿರಂತರವಾಗಿ ಪ್ರತಿ ವರ್ಷ ಮುಂದುವರೆಯುತ್ತಿದೆ. ರಾತ್ರಿ 11 ಗಂಟೆವರೆಗೆ ಲಡ್ಡು ವಿತರಿಸಲಾಗುತ್ತದೆ ಎಂದು ಭಾಷ್ಯಂ ಸ್ವಾಮೀಜಿ ತಿಳಿಸಿದರು.

RELATED ARTICLES

Latest News