Sunday, October 6, 2024
Homeರಾಜ್ಯಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿನ ಕುರಿತು ಅರ್ಜಿದಾರ ಟಿ.ಜೆ.ಅಬ್ರಹಾಂ ಮೊದಲ ಪ್ರತಿಕ್ರಿಯೆ

ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿನ ಕುರಿತು ಅರ್ಜಿದಾರ ಟಿ.ಜೆ.ಅಬ್ರಹಾಂ ಮೊದಲ ಪ್ರತಿಕ್ರಿಯೆ

Petitioner T.J Abraham's first reaction to the High Court judgment in the Muda case

ಬೆಂಗಳೂರು,ಸೆ.24- ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಅರ್ಜಿದಾರರಾದ ಟಿ.ಜೆ.ಅಬ್ರಹಾಂ ಸುಪ್ರೀಂಕೋರ್ಟ್‌ನಲ್ಲೂ ಕೇವಿಯಟ್‌ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್‌ ನಮ ವಾದಕ್ಕೆ ಮತ್ತು ಆಕ್ಷೇಪಣೆಗಳಿಗೆ ಮನ್ನಣೆ ನೀಡಿದೆ. ರಾಜ್ಯಪಾಲರ ಪೂರ್ವಾನುಮತಿ ಸರಿಯಿಲ್ಲ ಎಂದು ವಾದ ಮಾಡುವುದು ಅವರ ಹಕ್ಕಾಗಿತ್ತು. ಆದರೆ ಹೈಕೋರ್ಟ್‌ ಅದನ್ನು ಮಾನ್ಯ ಮಾಡಿಲ್ಲ ಎಂದರು.

ತೀರ್ಪು ಸ್ವಾಗತಾರ್ಹ. ಇದನ್ನು ಪ್ರಶ್ನಿಸಿ ಮೇಲನವಿ ಸಲ್ಲಿಸುವ ಎಲ್ಲಾ ಹಕ್ಕುಗಳೂ ಅರ್ಜಿದಾರರಿಗಿವೆ. ಈಗಾಗಲೇ ನಾವು ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದ್ದೇವೆ. ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆಯೂ ಕೇವಿಯಟ್‌ ಸಲ್ಲಿಸುತ್ತೇವೆ ಎಂದು ಹೇಳಿದರು.

ಮುಡಾ ಪ್ರಕರಣದ ವಿಚಾರಣೆಗೆ ಯಾವುದೇ ಅಡೆತಡೆ ಇರಲಿಲ್ಲ. ಹೈಕೋರ್ಟ್‌ ವಿಚಾರಣೆಯಿಂದಾಗಿ ಒಂದಿಷ್ಟು ಕಾಲ ಮುಂದೂಡಿಕೆಯಾಗಿತ್ತು. ಈಗ ತೀರ್ಪಿನಿಂದಾಗಿ ಎಲ್ಲವೂ ಇತ್ಯರ್ಥವಾಗಿದೆ ಎಂದರು.ತೀರ್ಪಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟಿ.ಜೆ.ಅಬ್ರಹಾಂ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ನಾನು ಸಲ್ಲಿಸಿದ್ದ ದೂರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ನೀಡಿರುವ ಅನುಮೋದನೆ ಕಾನೂನಾತಕವಾಗಿ ಸರಿಯಿದೆ ಎಂದು ಪ್ರತಿಪಾದಿಸಿದ್ದರು.

ಅಭಿಯೋಜನೆಗೆ ಅನುಮತಿ ನೀಡಿರುವುದು ತಪ್ಪು ಎಂದು ಮುಖ್ಯಮಂತ್ರಿಯವರ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಯಾರ ಅರ್ಜಿಗೆ ಅನುಮತಿ ನೀಡಿರುವುದು ತಪ್ಪು ಎಂಬ ಪ್ರಶ್ನೆ ಕಾಡುತ್ತಿದೆ. ನಾನು ನಿಯಮ 154 ರ ಅಡಿ ಅನುಮತಿಗಾಗಿ ನೀಡಿದ್ದ ಅರ್ಜಿಯ ಜೊತೆ ಸಲ್ಲಿಸಬೇಕಾದ ದಾಖಲೆಗಳನ್ನು ಲಗತ್ತಿಸಿದ್ದೇನೆ. 154 (3) ಅಡಿ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ. ಇದನ್ನು ಆಧರಿಸಿ ರಾಜ್ಯಪಾಲರು ಶೋಕಾಸ್‌‍ ನೋಟಿಸ್‌‍ ನೀಡಿದ್ದರು.

ಮುಖ್ಯಮಂತ್ರಿಯವರಿಂದ ಉತ್ತರ ಪಡೆದು ಅದನ್ನು ಪರಿಶೀಲಿಸಿ ನಂತರ ಆದೇಶ ನೀಡಿದ್ದಾರೆ. ಹೀಗಾಗಿ ನನಗೆ ನೀಡಿರುವ ಅನುಮತಿ ತಪ್ಪು ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು.2004 ರಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಜಮೀನು ಖರೀದಿ ಮಾಡಿದ್ದಾರೆ. 2010 ರಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಮಾಡಲಾಗಿದೆ. 2014 ರಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

2001 ರಲ್ಲೇ ಸದರಿ ಜಮೀನಿನಲ್ಲಿ ಲೇಔಟ್‌ ಸಿದ್ಧಪಡಿಸಿ, ಪಾರ್ಕ್‌ ಮಾಡಿ, ನಿವೇಶನಗಳನ್ನು ಹಂಚಿದ್ದಾರೆ ಎಂದು ಪಾರ್ವತಿಯವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಹಾಗಿದ್ದ ಮೇಲೆ 2004 ರಲ್ಲಿ ಖರೀದಿಸಿದಾಗ ಅಲ್ಲಿ ಕೃಷಿಭೂಮಿ ಇರಲು ಹೇಗೆ ಸಾಧ್ಯ?, 2001 ರಲ್ಲಿ ನಿವೇಶನ ಹಂಚಿಕೆ ಮಾಡಿದ್ದ ಭೂಮಿಗೆ 2014 ರಲ್ಲಿ ಪರಿಹಾರ ಕೇಳಲು ಅವಕಾಶ ಇದೆಯೇ? ಎಂದು ಪ್ರಶ್ನಿಸಿದರು.

ವಾದಗಳು ಏನೇ ಇರಲಿ, ಅವರು ಹೇಳುವ ಮಾತುಗಳು, ಆರೋಪಗಳನ್ನು ಬದಿಗಿಟ್ಟರೂ ಪಾರ್ವತಿಯವರ ಪತ್ರದಲ್ಲೇ ಸತ್ಯಾಂಶ ಇದೆ. ಸಿದ್ದರಾಮಯ್ಯ ಅವರ ಪ್ರಭಾವ ಬಳಸಿ ಭೂಪರಿವರ್ತನೆ ಮಾಡಿಸಲಾಗಿದೆ ಎಂದು ಹೇಳಲಾಗಿದೆ. 2001 ರಲ್ಲಿ ನಿವೇಶನ ಹಂಚಿಕೆ ಮಾಡಿದ್ದರೆ 2005 ರಲ್ಲಿ ಭೂಪರಿವರ್ತನೆಗೆ ಹೇಗೆ ಅನುಮತಿ ಕೊಡಲು ಸಾಧ್ಯವಿದೆಯೇ ಎಂದು ವಿವರಿಸಿದರು.

ಅಭಿವೃದ್ಧಿಯಾಗಿರುವ ಜಮೀನು ಖಾಲಿ ಇತ್ತು ಎಂದು ಖರೀದಿ ಮಾಡಲು ಸಾಧ್ಯವೇ?, ಭೂಪರಿಹಾರಕ್ಕಾಗಿ 2021 ರಲ್ಲಿ ಪತ್ರ ಬರೆಯಲಾಗಿದೆ. 1998-99 ರಲ್ಲಿ ಮುಡಾ ಭೂಸ್ವಾಧೀನ ಮಾಡಿಕೊಂಡು ಭೂಮಿಯನ್ನು ತಮದು ಎಂದು ಪ್ರತಿಪಾದಿಸುತ್ತಿರುವ ಸಿದ್ದರಾಮಯ್ಯ ಅವರ ಕುಟುಂಬ 2014 ರಲ್ಲಿ ನೀಡಿರುವ ಅರ್ಜಿಯಲ್ಲಿ ಮುಡಾ ಅಕ್ರಮವಾಗಿ ನಿವೇಶನ ಮಾಡಿ ಮಾರಾಟ ಮಾಡಿದೆ ಎಂದು ಹೇಳುತ್ತಾರೆ.

ಒಂದು ವೇಳೆ ಅದು ನಿಜವೇ ಆಗಿದ್ದರೆ ಅಷ್ಟು ಸುದೀರ್ಘ ಅವಧಿಯಲ್ಲಿ ಯಾರು, ಯಾವುದೇ ತಕರಾರನ್ನು ಏಕೆ ಎತ್ತಿಲ್ಲ?, 2020 ರವರೆಗೂ ಭೂಮಿ ತಮದು ಎಂದು ಯಾರೂ ಹಕ್ಕು ಪ್ರತಿಪಾದಿಸಿಲ್ಲ. ಹೀಗಿದ್ದ ಮೇಲೆ ಜಮೀನು ಯಾರಿಗೆ ಸೇರಿದ್ದು? ಎಂದು ಪ್ರಶ್ನಿಸಿದರು.
ದೇವನೂರು ಬಡಾವಣೆಯಲ್ಲಿ ನಿವೇಶನ ಅಭಿವೃದ್ಧಿಯಾಗಿದೆ, ಹಂಚಿಕೆಯೂ ಆಗಿದೆ. ಎಲ್ಲವನ್ನೂ ಮೌನವಾಗಿ ನೋಡಿಕೊಂಡಿದ್ದಾರೆ. ಅನಂತರ 20 ವರ್ಷಗಳ ಬಳಿಕ ತಕರಾರು ತೆಗೆದಿದ್ದಾರೆ. 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ 55 ಕೋಟಿ ರೂ.ಗಳ ನಷ್ಟವಾಗಿದೆ. ನಿವೇಶನ ವಾಪಸ್‌‍ ಕೊಡುವವರೆಗೂ ತಾವು ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

RELATED ARTICLES

Latest News