Friday, October 11, 2024
Homeರಾಜ್ಯನಾಗಮಂಗಲ ಗಲಭೆ ಹಿಂದೆ ನಿಷೇಧಿತ ಪಿಎಫ್ಐ..?

ನಾಗಮಂಗಲ ಗಲಭೆ ಹಿಂದೆ ನಿಷೇಧಿತ ಪಿಎಫ್ಐ..?

PFI behind the Nagamangala riots

ನವದೆಹಲಿ,ಸೆ.15- ಕರ್ನಾಟಕದ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಎರಡು ಸಮುದಾಯಗಳ ನಡುವೆ ನಡೆದ ಕೋಮುಗಲಭೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಕೈಗೆತ್ತಿಕೊಳ್ಳಲು ಮುಂದಾಗಿದೆ. ಏಕೆಂದರೆ ನಾಗಮಂಗಲ ಪೊಲೀಸರ್ ಎಫ್ಐಆರ್ನಲ್ಲಿ ದಾಖಲಿಸಿರುವ 76 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ನಿಷೇಧಿತ ಪಾಪುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್ಐ) ಸಂಘಟನೆಗೆ ಸೇರಿದವರೆಂಬುದು ಬೆಳಕಿಗೆ ಬಂದಿದೆ.

ಕೇರಳ ರಾಜ್ಯದ ಮಲ್ಲಾಪುರಂ ನಿವಾಸಿಗಳಾದ 44ನೇ ಆರೋಪಿ ಯುಸೋಫ್ ಮತ್ತು 61ನೇ ಆರೋಪಿ ನಾಸೀರ್ ಇಬ್ಬರು ಈ ಹಿಂದೆ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಕೇರಳ ಸೇರಿದಂತೆ ದೇಶದ ಬೇರೆ ಬೇರೆ ಮಾರ್ಗಗಳಲ್ಲಿ ನಡೆದ ಕೋಮುಗಲಭೆಯಲ್ಲಿ ಈ ಇಬ್ಬರು ಭಾಗಿಯಾಗಿರುವ ಶಂಕೆಯಿದ್ದು, ಇದೀಗ ನಾಗಮಂಗಲ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಈ ಇಬ್ಬರು ಹೆಸರುಗಳು ಇರುವುದರಿಂದ ಎನ್ಐಎ ತನಿಖೆ ನಡೆಸುವ ಸಾಧ್ಯತೆ ಇದೆ.

ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಬಿಜೆಪಿ ಮತ್ತು ಜೆಡಿಎಸ್ನ ಅನೇಕ ನಾಯಕರುಗಳು ಆರೋಪಿಸಿದ್ದರು. ಘಟನೆ ಆಕಸಿಕ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರಾದರೂ ಮೇಲ್ನೋಟಕ್ಕೆ ವ್ಯವಸ್ಥಿತ ಸಂಚು ಎಂಬ ಅನುಮಾನ ವ್ಯಕ್ತವಾಗಿದೆ.

ನಾಗಮಂಗಲ ಪಟ್ಟಣದ ಮಸೀದಿ ಬಳಿ ಗಲಭೆಗೆ ಬಳಸಿರುವ ಪೆಟ್ರೋಲ್ ಬಾಂಬ್, ತಲವಾರ್, ಗಲಾಟೆ ನಡೆದ ದಿನ ಮೆಡಿಕಲ್ ಶಾಪ್ನಲ್ಲಿ 200 ಮಾಸ್ಕ್ಗಳನ್ನು ಖರೀದಿ ಮಾಡಿರುವುದು ಪೂರ್ವ ನಿಯೋಜಿತ ಕೃತ್ಯಕ್ಕೆ ಸಾಕ್ಷಿಯಾಗಿವೆ. ದುಷ್ಕೃತ್ಯಕ್ಕೆ ಬಳಸಿರುವ ಕೆಲವು ಮಾರಕಾಸ್ತ್ರಗಳು ಕೇರಳದ ಮಲ್ಲಪುರಂನಿಂದ ಬಂದಿದ್ದವು ಎಂಬ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಶಿವಮೊಗ್ಗದ ರಾಗಿಗುಡ್ಡದ ಬಳಿ ಟಿಪ್ಪು ಜಯಂತಿ ಆಚರಣೆ ವೇಳೆಯು ನಿಷೇಧಿತ ಪಿಎಫ್ಐ ಸಂಘಟನೆಯವರೇ ಗಲಭೆ ಎಬ್ಬಿಸಿದ್ದರೆಂಬುದು ತನಿಖೆಯಿಂದ ಗೊತ್ತಾಗಿತ್ತು. ಶಾಂತಿಪ್ರಿಯವಾಗಿದ್ದ ನಾಗಮಂಗಲದಲ್ಲಿ ಏಕಾಏಕಿ ಇಷ್ಟು ದೊಡ್ಡ ಮಟ್ಟದ ಕೋಮುಗಲಭೆ ನಡೆಯಲು ಹಲವು ದಿನಗಳಿಂದ ವ್ಯವಸ್ಥಿತವಾದ ಪಿತೂರಿಯನ್ನು ನಡೆಸಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಎಫ್ಐಆರ್ನಲ್ಲಿ ದಾಖಲಾಗಿರುವ ಯುಸೋಫ್ ಮತ್ತು ನಾಸೀರ್ನನ್ನು ಶೀಘ್ರದಲ್ಲೇ ಎನ್ಐಎ ವಶಕ್ಕೆ ಪಡೆಯಲಿದ್ದು, ಅಧಿಕೃತವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಕಳೆದ ಸೆ.2ರಂದು ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ಗಲಭೆ ನಡೆದಿತ್ತು. ಘಟನೆಯಲ್ಲಿ ಎರಡು ಸಮುದಾಯಗಳಿಗೆ ಸೇರಿದ ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು.

ಈ ಪ್ರಕರಣ ಅಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದೊಂದು ಸಣ್ಣ ಆಕಸಿಕ ಘಟನೆ ಎಂದು ಸರ್ಕಾರ ಹೇಳಿದೆ. ಆದರೆ ವ್ಯವಸ್ಥಿತ ಪೂರ್ವ ನಿಯೋಜಿತ ಕೃತ್ಯ ಎಂದು ಪ್ರತಿಪಕ್ಷಗಳ ಆರೋಪವಾಗಿದೆ.
ಘಟನೆ ಸಂಬಂಧ ಪೊಲೀಸರು ಈಗಾಗಲೇ 54 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಾಗಮಂಗಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಮಾನತುಗೊಂಡ ಬೆನ್ನಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್ಶ್ಚಂದ್ರ ಅವರನ್ನು ವರ್ಗಾವಣೆ ಮಾಡಿತ್ತು.

RELATED ARTICLES

Latest News