ಬೆಂಗಳೂರು,ಮಾ.15- ಹಠಾತ್ ಹಾಗೂ ತೀವ್ರ ಹೃದಯಾಘಾತದ ಪ್ರಕರಣಗಳಲ್ಲಿ ಸುವರ್ಣ ಸಮಯದ ಚಿಕಿತ್ಸೆ ನೀಡಿ ಜೀವ ರಕ್ಷಿಸುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಧಾರವಾಡದಲ್ಲಿಂದು ಚಾಲನೆ ನೀಡಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಕೋನ ರೆಡ್ಡಿ, ಇಲಾಖೆಯ ಆಯುಕ್ತ ರಂದೀಪ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಅತ್ಯಂತ ಜನಪ್ರಿಯ ನಟ ಡಾ.ಪುನೀತ್ ರಾಜಕುಮಾರ್ ಕೇವಲ ನಟನೆಯಿಂದಷ್ಟೇ ಅಲ್ಲ, ಜನಪರ ಹಾಗೂ ಮಾನವೀಯ ಸೇವೆಗಳ ಮೂಲಕ ಪ್ರಖ್ಯಾತರಾಗಿದ್ದರು. ಅವರಿಗೆ ತೀವ್ರ ಹೃದಯಾಘಾತವಾದಾಗ ಟೆನೆಕ್ಟ್ ಪ್ಲೇಸ್ ಇಂಜೆಕ್ಷನ್ ದೊರೆತಿದ್ದರೆ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರಲಿಲ್ಲ ಎಂದರು.
ಹೃದಯಾಘಾತ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆತರೆ ಜೀವರಕ್ಷಣೆ ಸಾಧ್ಯವಾಗಲಿದೆ. ಬಹಳಷ್ಟು ಪ್ರಕರಣಗಳಲ್ಲಿ ಹೃದಯಾಘಾತಕ್ಕೊಳದಾಗ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಜೀವಹಾನಿಯಾಗುತ್ತಿದೆ. ಒಂದು ವೇಳೆ ಆಸ್ಪತ್ರೆ ತಲುಪಿದ ಬಳಿಕವೂ ಜೀವ ಉಳಿದರೆ ಹೃದಯ ತೀವ್ರವಾಗಿ ದುರ್ಬಲಗೊಂಡಿರುತ್ತದೆ. ಇದನ್ನು ಮನಗಂಡು ನಮ್ಮ ಸರ್ಕಾರ 71 ತಾಲೂಕು ಹಾಗೂ 15 ಜಿಲ್ಲಾಸ್ಪತ್ರೆಗಳಲ್ಲಿ ಟೆಲಿ ಸಂಪರ್ಕ ಆಧಾರಿತವಾಗಿ ತುರ್ತು ಚಿಕಿತ್ಸೆ ನೀಡುವ ಯೋಜನೆಯನ್ನು ಆರಂಭಿಸಿದೆ ಎಂದು ಹೇಳಿದರು.
ಟೆನೆಕ್ಟ್ ಪ್ಲೇಸ್ ಇಂಜೆಕ್ಷನ್ಗೆ 30 ಸಾವಿರ ರೂ.ಗಳ ವೆಚ್ಚ ತಗುಲಲಿದೆ. ತೀವ್ರ ಅಪಘಾತಕ್ಕೀಡಾದವರಿಗೆ ತಕ್ಷಣ ಇದನ್ನು ನೀಡಿದರೆ ಜೀವರಕ್ಷಣೆಯಷ್ಟೇ ಅಲ್ಲ, ಹೃದಯ ದುರ್ಬಲತೆ ತಪ್ಪಲಿದೆ. 71 ತಾಲೂಕು ಹಾಗೂ 15 ಜಿಲ್ಲಾಸ್ಪತ್ರೆಗಳಲ್ಲಿ ಟೆಲಿ ಸಂಪರ್ಕ ವ್ಯವಸ್ಥೆಯಿದ್ದು, 65 ಕ್ಕೂ ಹೆಚ್ಚು ತಜ್ಞ ವೈದ್ಯರು ಹಬ್ಗಳಲ್ಲಿ ಕೆಲಸ ಮಾಡುತ್ತಾರೆ.
ತುರ್ತು ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ಇಸಿಜಿ ಮಾಡಲಾಗುತ್ತದೆ. ಮೊಬೈಲ್ ಮತ್ತು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆಯಾಗುವುದರಿಂದ ತಜ್ಞ ವೈದ್ಯರು ಅದನ್ನು ನೇರವಾಗಿ ಪರಿಶೀಲನೆ ನಡೆಸಲಿದ್ದಾರೆ. ಗಂಭೀರ ಸ್ವರೂಪದ ಹೃದಯಾಘಾತವಾಗಿದ್ದರೆ 6 ನಿಮಿಷದಲ್ಲಿ ಪತ್ತೆ ಹಚ್ಚಿ ಟೆನೆಕ್ಟ್ ಪ್ಲೇಸ್ ಇಂಜೆಕ್ಷನ್ ನೀಡಲು ಸ್ಥಳೀಯ ಅಧಿಕಾರಿಗಳಿಂದ ಮುನ್ಸೂಚನೆ ನೀಡಲಾಗುತ್ತದೆ. ಅನಂತರ ಹೆಚ್ಚುವರಿ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗುವುದು ಎಂದರು.
ಇದರ ಜೊತೆಗೆ ತುರ್ತು ಸಂದರ್ಭದಲ್ಲಿಯೂ ಎಲೆಕ್ಟ್ರಾನ್ ಶಾಕ್ ಮೂಲಕ ಜೀವ ರಕ್ಷಿಸುವ ಸ್ಟೆಮಿ ಕಿಟ್ಗಳನ್ನು ರೈಲ್ವೆ, ಬಸ್ ಹಾಗೂ ವಿಮಾನನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತದೆ. ಅಲ್ಲಿ ಆರೋಗ್ಯ ಸಿಬ್ಬಂದಿಗಳೂ ಇರುತ್ತಾರೆ. ಹೃದಯಾಘಾತಕ್ಕೆ ಒಳಗಾಗಿದ್ದರೆ ಪ್ರಾಥಮಿಕ ಚಿಕಿತ್ಸೆ ಕೊಡಲು ಈ ಕಿಟ್ಗಳು ಸಹಾಯ ಮಾಡಲಿದೆ ಎಂದರು.
ಅತ್ಯಂತ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಪುನೀತ್ ರಾಜ್ಕುಮಾರ್ ಹುಟ್ಟಿದ ದಿನವಾದ ಮಾ.17 ರಂದು ಉದ್ಘಾಟನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗ ಯಾವ ಕ್ಷಣದಲ್ಲಾದರೂ ಲೋಕಸಭೆಗೆ ಚುನಾವಣೆ ಘೋಷಣೆ ಮಾಡುವ ನಿರೀಕ್ಷೆ ಇರುವುದರಿಂದ ಎರಡು ದಿನ ಮೊದಲೇ ಚಾಲನೆ ನೀಡುತ್ತಿದ್ದೇವೆ ಎಂದರು.
ರಾಜ್ಯಾದ್ಯಂತ 2,800 ಸ್ಟೆಮಿ ಉಪಕರಣಗಳನ್ನು ಒದಗಿಸಲಾಗಿದೆ. ಟೆನೆಕ್ಟ್ ಪ್ಲೇಸ್ ಇಂಜೆಕ್ಷನ್ನಿಂದ ಹಲವು ಜೀವರಕ್ಷಣೆಯಾಗಿದ್ದು, ಅದರಲ್ಲಿ 25 ವರ್ಷದೊಳಗಿನ ನಾಲ್ವರು ಯುವಜನರಿದ್ದಾರೆ ಎಂದು ಹೇಳಿದರು.ತಮ್ಮ ಸರ್ಕಾರ ಪ್ರತಿಯೊಂದು ಜೀವವನ್ನು ಅತ್ಯಮೂಲ್ಯ ಎಂದು ಪರಿಗಣಿಸಿದೆ. ಆರಂಭಿಕ ಹಂತದಲ್ಲಿ 71 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಸಂಪರ್ಕ ಸೌಲಭ್ಯವಿದ್ದು, ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲೂ ವಿಸ್ತರಣೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಬಡವರಷ್ಟೇ ಅಲ್ಲ, ಶ್ರೀಮಂತರು ಕೂಡ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ವಾತಾವರಣ ನಿರ್ಮಿಸುವ ಗುರಿ ನಮ್ಮದು ಎಂದರು.