Monday, June 17, 2024
Homeಬೆಂಗಳೂರುರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ಬಟ್ಟೆ ವ್ಯಾಪಾರಿ ಬಂಧನ

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ಬಟ್ಟೆ ವ್ಯಾಪಾರಿ ಬಂಧನ

ಬೆಂಗಳೂರು, ಮಾ. 15- ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕಾರಿನೊಳಗೆ ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿದ್ದ ಬಟ್ಟೆ ವ್ಯಾಪಾರಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಮೃತಹಳ್ಳಿಯ ದಾಸರಹಳ್ಳಿ ನಿವಾಸಿ ಸಂತೋಷ್ (38) ಬಂಧಿತ ಆರೋಪಿ. ಈತ ಬಟ್ಟೆ ವ್ಯಾಪಾರಿ.ಆಂಧ್ರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್(55) ಮಾರುತಿ ನಗರದಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು.

ಆಗ್ಗಾಗೆ ಕೃಷ್ಣಯಾದವ್ ಯಲಹಂಕದ ದಾಸರಹಳ್ಳಿಯ ಮೊಬೈಲ್ ಅಂಗಡಿಗೆ ಭೇಟಿ ನೀಡುತ್ತಿದ್ದಾಗ ಬಟ್ಟೆ ವ್ಯಾಪಾರಿ ಸಂತೋಷನ ಪರಿಚಯವಾಗಿದೆ.ಆರ್ಥಿಕವಾಗಿ ನಷ್ಟದಲ್ಲಿದ್ದ ಸಂತೋಷ್ಗೆ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಹಣ ಸಹಾಯ ಮಾಡುವುದಾಗಿ ಹೇಳಿದ್ದರು.

ಕೃಷ್ಣ ಯಾದವ್ ಅವರು ಸೋಮವಾರ ಸಂಜೆ 6.30ರಲ್ಲಿ ಕೆಲಸದ ನಿಮಿತ್ತ ತಮ್ಮ ಶಿಪ್ಟ್ ಕಾರನ್ನು ತೆಗೆದುಕೊಂಡು ದಾಸರಹಳ್ಳಿಗೆ ಹೋಗಿ ಸಂತೋಷ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮಾತನಾಡುತ್ತಾ ಹೋಗುತ್ತಿದ್ದಾಗ, ಕೃಷ್ಣ ಯಾದವ್ ಅವರು ಸಂತೋಷ್ ಅವರ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

ಇದೇ ವಿಚಾರವಾಗಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಸಂತೋಷ್ ಕಾರಿನಲ್ಲೇ ಇದ್ದ ಸ್ಕ್ರೂಡ್ರೈವರ್ನಿಂದ ಕೃಷ್ಣಯಾದವ್ ಅವರ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿ, ಕಾರಿನ ಮುಂಭಾಗದ ಸೀಟಿನಲ್ಲಿ ಶವವಿಟ್ಟುಕೊಂಡು ಸಂತೋಷ್ ಸ್ವತಃಕಾರು ಚಾಲನೆ ಮಾಡಿಕೊಂಡು ಬಾಗಲೂರು ಕ್ರಾಸ್ನ ಫುಟ್ ಪಾತ್ ಬಳಿ ಯಾರಿಗೂ ಅನುಮಾನ ಬಾರದಂತೆ ಕಾರು ನಿಲ್ಲಿಸಿ ಪರಾರಿಯಾಗಿದ್ದನು.

ಅಂದು ಸಂಜೆ ಕಾರನ್ನು ತೆಗೆದುಕೊಂಡು ಹೊರಗೆ ಹೋಗಿದ್ದ ಕೃಷ್ಣಯಾದವ್ ರಾತ್ರಿಯಾದರೂ ಮನೆಗೆ ಹಿಂದಿರುಗದಿದ್ದಾಗ ಬೆಳಗ್ಗೆ ಬರಬಹುದೆಂದು ಕುಟುಂಬದವರು ಸುಮ್ಮನಾಗಿದ್ದಾರೆ.ಮಾರನೇ ದಿನ ಬೆಳಗ್ಗೆ ಬಾಗಲೂರು ಕ್ರಾಸ್ನ ಫುಟ್ ಪಾತ್ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ವ್ಯಕ್ತಿಯ ಶವ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಕಾರಿನ ಮುಂಭಾಗದ ಸೀಟಿನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವುದು ಕಂಡು ಬಂದಿದ್ದು, ಈ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇವರು ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ ಎಂಬುದು ಗೊತ್ತಾಗಿತ್ತು.

ಈ ಉದ್ಯಮಿಯನ್ನು ವೃತ್ತಿ ವೈಷಮ್ಯದಿಂದಲೋ ಅಥವಾ ಹಣಕಾಸಿನ ವಿಚಾರವಾಗಿ ಕೊಲೆ ಮಾಡಿರಬಹುದೆಂದು ಮೊದಲ ತನಿಖೆಯಲ್ಲಿ ಪೊಲೀಸರು ಶಂಕಿಸಿದ್ದರು.ನಂತರ ಕೂಲಂಕುಶವಾಗಿ ಕಾರನ್ನು ಪರಿಶೀಲಿಸಿದಾಗ ಅಲ್ಲಿ ದೊರೆತ ವೇಲ್ ಗಮನಿಸಿ ಇದು ಮಹಿಳೆಯ ವಿಚಾರವಾಗಿ ಕೊಲೆ ನಡೆದಿರಬಹುದಾಗಿ ತನಿಖೆ ತೀವ್ರಗೊಳಿಸಿ, ಉದ್ಯಮಿಯ ಪರಿಚಯಸ್ಥರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಸ್ನೇಹಿತನೇ ಕೊಲೆ ಮಾಡಿರುವುದು ಗೊತ್ತಾಗಿ, ಬಟ್ಟೆ ವ್ಯಾಪಾರಿ ಸಂತೋಷ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.ಆರೋಪಿಯನ್ನು ಬಂ„ಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES

Latest News