ನವದೆಹಲಿ,ಡಿ.17- ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಎಲ್ಲಾ ಆರೋಪಿಗಳ ಮೊಬೈಲ್ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆಯಲ್ಲಿ ಮತ್ತೊಂದು ಮೈಲಿಗಲು ತಲುಪಿದ್ದಾರೆ. ಈ ಪ್ರಕರಣದ ಕಿಂಗ್ಪಿನ್ ಎಂದೇ ಹೇಳಲಾಗಿರುವ ಲಲಿತ್ ಝಾ ಬಳಿ ಎಲ್ಲಾ ಆರೋಪಿಗಳ ಫೋನ್ಗಳು ಇತ್ತು ಎಂದು ಹೇಳಲಾಗಿದೆ. ಎಲ್ಲ ಫೋನ್ಗಳನ್ನು ಮುರಿದು ಹಾಕಿದ ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಗೆ ಸಂಬಂಧಿಸಿದ ಸುಟ್ಟ ಸ್ಥಿತಿಯಲ್ಲಿದ್ದ ಮೊಬೈಲ್ ಫೋನ್ಗಳ ಬಿಡಿ ಭಾಗಗಳು, ಬಟ್ಟೆಗಳು ಮತ್ತು ಶೂಗಳನ್ನು ರಾಜಸ್ಥಾನದಲ್ಲಿ ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರು ಆರೋಪಿಗಳಾದ ಸಾಗರ್, ಮನೋರಂಜನ್, ನೀಲಂ ಆಜಾದ್, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಅವರನ್ನು ಬಂಧಿಸಲಾಗಿದೆ.
ಲಲಿತ್ ಝಾ ಕೆಲವು ದಿನಗಳ ನಂತರ ಸಿಕ್ಕಿಬೀಳುವ ಭಯದಿಂದ ಎಲ್ಲಾ ಫೋನ್ಗಳನ್ನು ಸುಟ್ಟು ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ. 2 ವರ್ಷಗಳಿಂದ ದೇಶದ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು. ಡಿ.13ರಂದು ಸಂಸತ್ತಿನ ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಸಾಗರ್ ಹಾಗೂ ಮನೋರಂಜ್ ಸಂದನದ ಒಳಗೆ ನುಗ್ಗಿದ್ದರು, ಬಳಿಕ ಹೊಗೆ ಬಾಂಬ್ ಸಿಡಿಸಿದ್ದರು.
ಅವರನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು, ಸಂಸತ್ತಿನ ಹೊರಗೆ ಘೋಷಣೆ ಕೂಗುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ನಂತರ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದ, ಒಂದು ದಿನದ ಬಳಿಕ ಮಹೇಶ್ನನ್ನೂ ಪೊಲೀಸರು ಬಂಧಿಸಿದ್ದಾರೆ.
ಘಟನೆ ಕುರಿತು ಸದನದಲ್ಲಿ ಪ್ರತಿಭಟನೆ ಮಾಡಿದ್ದ 13 ಸಂಸದರಲ್ಲಿ ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ. ಈ ಕುರಿತು ಸಚಿವೆ ಸ್ಮತಿ ಇರಾನಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ಮಾತನಾಡಿ, ಲೋಕಸಭೆ ಸ್ಪೀಕರ್ ಅವರು ಯಾವುದೇ ಪಕ್ಷಪಾತವಿಲ್ಲದೆ ದೇಶದ ಪ್ರತಿಯೊಂದು ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಎಲ್ಲಾ ಪಕ್ಷಗಳ ನಾಯಕರಿಗೆ ಅವಕಾಶ ನೀಡಿದ್ದಾರೆ ಆದರೆ ಅಮಾನತುಗೊಂಡಿರುವ 13 ಸಂಸದರು ರಾಜಕೀಯ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.
ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಭದ್ರತಾ ಲೋಪ ಎಸಗಿದ ಇಬ್ಬರು ಕಿಡಿಗೇಡಿಗಳ ಬಳಿ ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಇದ್ದಿದ್ದರಿಂದ ಅವರನ್ನೂ ಸಹ ತನಿಖೆ ಮಾಡುವ ಸಾಧ್ಯತೆ ಇದೆ.
ಸರ್ಕಾರಕ್ಕೆ ತಮ್ಮ ಸಂದೇಶ ರವಾನಿಸಲು, ಆಡಳಿತದ ಮೇಲೆ ಪ್ರಭಾವ ಬೀರುವ ಕೆಲವು ಮಾರ್ಗಗಳ ಬಗ್ಗೆ ಐವರು ಆರೋಪಿಗಳು ಚರ್ಚೆ ನಡೆಸಿದ್ದರು. ತಮ್ಮ ದೇಹವನ್ನು ಅಗ್ನಿಶಾಮಕ ಜೆಲ್ನಿಂದ ಲೇಪಿಸಿಕೊಂಡು ಸದನದಲ್ಲೇ ಬೆಂಕಿ ಹಚ್ಚಿಕೊಳ್ಳುವ ಬಗ್ಗೆ ಯೋಜನೆ ರೂಪಿಸಿದ್ದರು. ಆದರೆ ಭದ್ರತಾ ಕಾರಣ ಮತ್ತು ಹಣದ ಕೊರತೆಯಿಂದ ಇದು ಅಸಾಧ್ಯ ಎಂಬ ಕಾರಣಕ್ಕೆ ಕೈಬಿಟ್ಟಿದ್ದರು. ಸಂಸತ್ತಿನ ಒಳಗೆ ಕರಪತ್ರಗಳನ್ನು ಹಂಚುವ ಬಗ್ಗೆಯೂ ಅವರು ಯೋಚಿಸಿದ್ದರು. ಆದರೆ ಅಂತಿಮವಾಗಿ ಅವರು ಕಲರ್ ಸ್ಪ್ರೇ ಮಾಡುವ ನಿರ್ಧಾರ ಕೈಕೊಂಡಿದ್ದರು.
ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ
ಡಿ.13 ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಆರೋಪಿ ಸಾಗರ್ ಶರ್ಮಾ, ಸಂದರ್ಶಕರ ಗ್ಯಾಲರಿಯಿಂದ ಚೇಂಬರ್ಗೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಹಳದಿ ಹೊಗೆ ಹೊರಸೂಸುವ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಸಾಗರ್ ಶರ್ಮ ಡೆಸ್ಕ್ನಿಂದ ಡೆಸ್ಕ್ಗೆ ಜಿಗಿದರು. ಆದರೆ, ಕೆಲ ಸಂಸದರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಂತೆ, ಅಲ್ಲಿಯೇ ಇದ್ದ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದು ಓಡಲು ಆರಂಭಿಸಿದರು. ಆದರೆ ಆತನನ್ನು ಕೂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಾಯಿತು.
ಲೋಕಸಭೆಯ ಒಳಗೆ ನಡೆದ ಈ ಆಘಾತಕಾರಿ ಘಟನೆಗೂ ಮುನ್ನ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಸಿಡಿಸಿ ಸರ್ವಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.