Tuesday, April 1, 2025
Homeರಾಷ್ಟ್ರೀಯ | Nationalಹನಿಟ್ರ್ಯಾಪ್‌ ಪ್ರಕರಣಗಳ ಸಿಬಿಐ ತನಿಖೆ ಕೋರಿ ಸುಪ್ರೀಂನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್‌ ವಜಾ

ಹನಿಟ್ರ್ಯಾಪ್‌ ಪ್ರಕರಣಗಳ ಸಿಬಿಐ ತನಿಖೆ ಕೋರಿ ಸುಪ್ರೀಂನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್‌ ವಜಾ

PIL filed in Supreme Court seeking CBI probe into honey trap cases dismissed

ನವದೆಹಲಿ,ಮಾ.26– ಕರ್ನಾಟಕದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸೇರಿದಂತೆ ಒಟ್ಟು 48 ಮಂದಿ ಮೇಲೆ ನಡೆದಿದೆ ಎನ್ನಲಾದ ಹನಿಟ್ರಾಪ್‌ ಪ್ರಕರಣವನ್ನು ಸಿಬಿಐ ಇಲ್ಲವೇ ನ್ಯಾಯಾಂಗದ ತನಿಖೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಇದೇ ವೇಳೆ ಅರ್ಜಿದಾರರ ವಿರುದ್ಧವೂ ಕೆಂಡ ಕಾರಿರುವ ನ್ಯಾಯಾಲಯ ನಿಮಗೆ ಮಾಡಲು ಕೆಲಸವಿಲ್ಲ ಎಂದರೆ ನಮ ಅಮೂಲ್ಯವಾದ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದೆ.ಮಾಧ್ಯಮಗಳ ವರದಿ ಆಧರಿಸಿ ಜಾರ್ಖಂಡ್‌ ಮೂಲದ ನಿವಾಸಿ ವಿನಯಕುಮಾರ್‌ ಸಿಂಗ್‌ ಪರವಾಗಿ ವಕೀಲ ವಿನಯ್‌ಕುಮಾರ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠವು ಪಿಐಎಲ್‌ಅನ್ನು ವಜಾಗೊಳಿಸಿ ಅರ್ಜಿದಾರರನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡರು.

ಅರ್ಜಿದಾರರು ಮೂಲತಃ ಜಾರ್ಖಂಡ್‌ನವರು. ನಿಮಗೂ ಈ ಪ್ರಕರಣಕ್ಕೂ ಏನು ಸಂಬಂಧ? ಒಂದು ವೇಳೆ ಹನಿಟ್ರಾಪ್‌ಗೆ ಒಳಗಾಗಿದ್ದರೆ ಕರ್ನಾಟಕದವರು ಅರ್ಜಿ ಹಾಕಲಿ. ಮುಂದೆ ನಾವೇ ನೋಡಿಕೊಳ್ಳುತ್ತೇವೆ. ನಿಮಗೆ ಕೆಲಸ ಇಲ್ಲ ಎಂದರೆ ಬೇರೆ ಯಾವುದಾದರೂ ಕೆಲಸ ಮಾಡಿ. ಸುಖಾಸುಮನೆ ನ್ಯಾಯಾಲಯದ ಸಮಯವನ್ನು ಹಾಳು ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿತು.

ಒಂದು ವೇಳೆ ನ್ಯಾಯಾಧೀಶರು ಹನಿಟ್ರಾಪ್‌ಗೆ ಒಳಗಾಗಿದ್ದರೆ ಅವರು ನೋಡಿಕೊಳ್ಳುತ್ತಾರೆ. ಇದಕ್ಕೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ? ರಾಜಕೀಯದ ನಾನ್ಸೆನ್‌್ಸ ವಿಚಾರಗಳನ್ನು ವಿಚಾರಣೆ ಮಾಡಲು ನಮಗೆ ಸಮಯವಿಲ್ಲ. ಮತ್ತೊಮೆ ಇಂಥ ಅರ್ಥವಿಲ್ಲದ ಪಿಐಎಲ್‌ ಹಾಕಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠ ಕಟು ಶಬ್ದಗಳಲ್ಲಿ ಟೀಕೆ ಮಾಡಿತು.

ಹನಿಟ್ರಾಪ್‌ ಒಳಗಾಗದವರೇ ಸುಮನಿರುವಾಗ ನೀವೇಕೆ? ಆಸಕ್ತಿ ವಹಿಸಿದ್ದೀರಿ? ಒಂದು ವೇಳೆ ನಿಮ ಪ್ರಕಾರ ಈ ಪ್ರಕರಣದಲ್ಲಿ ನ್ಯಾಯಾಧೀಶರು ಇದ್ದರೆ ಅದನ್ನು ಅವರು ಸರಿಪಡಿಸುತ್ತಾರೆ. ನೀವು ನಿಮ ಕೆಲಸ ನೋಡಿಕೊಳ್ಳಿ. ಇಲ್ಲದ ವಿಷಯವನ್ನು ತಲೆಗೆ ಬಿಟ್ಟುಕೊಡಬೇಡಿ. ಮೊದಲು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮಹತ್ವವನ್ನು ತಿಳಿದುಕೊಳ್ಳಿ ಎಂದು ಸಲಹೆ ಮಾಡಿದರು.ಅರ್ಜಿ ಹಿನ್ನೆಲೆ: ಸಚಿವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರಾಪ್‌ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗಿತ್ತು.

ರಾಜ್ಯದಲ್ಲಿ ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಮೂರ್ತಿಗಳು ಸೇರಿದಂತೆ 48 ಜನರನ್ನು ಗುರಿಯಾಗಿಟ್ಟುಕೊಂಡು ಹನಿಟ್ರ್ಯಾಪ್‌ ಪ್ರಕರಣ ನಡೆದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರಾಪ್‌ ನಡೆಸಲು ತಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದು ವಿವಾದ ಭುಗಿಲೆದ್ದಿತ್ತು.ಕಾಂಗ್ರೆಸ್‌‍ ಸರ್ಕಾರದಡಿ ನಡೆಸಲಾಗುತ್ತಿದೆ ಎನ್ನಲಾದ ಹನಿಟ್ರಾಪ್‌ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು, ಸಿಬಿಐ ಅಥವಾ ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ತನಿಖೆ ವಹಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದರು.

ಈ ಬಗ್ಗೆ ಸದನದಲ್ಲಿಯೇ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ವೇಳೆ ಹನಿಟ್ರ್ಯಾಪ್‌ ಪ್ರಕರಣದಲ್ಲಿ ಯಾರೇ ಭಾಗಿಯಾಗಿರುವುದು ದೃಢಪಟ್ಟರೆ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು. ಕಳೆದ ಗುರುವಾರ ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಮಧುಗಿರಿಯ ಕಾಂಗ್ರೆಸ್‌‍ ಶಾಸಕ, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹನಿಟ್ರಾಪ್‌ ವಿಚಾರವನ್ನು ಪ್ರಸ್ತಾಪಿಸಿದ್ದರು. ಬಳಿಕ ಈ ಕುರಿತು ಭಾರೀ ಚರ್ಚೆ ನಡೆದು ಪ್ರತಿಪಕ್ಷ ಬಿಜೆಪಿ ಈ ಕುರಿತು ಸಿಬಿಐ ಅಥವಾ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿತ್ತು.

ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಸೇರಿ ಸುಮಾರು 48 ಜನರು ಹನಿಟ್ರಾಪ್‌ಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದ್ದರಿಂದ ಈ ಕುರಿತು ಸ್ವತಂತ್ರ್ಯವಾದ ತನಿಖೆಯಾಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದೇವೆ ಎಂದು ವಕೀಲ ವರುಣ್‌ಕುಮಾರ್‌ ಸಿಂಗ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.

ವಿಧಾನಸಭೆಯಲ್ಲಿ ಹನಿಟ್ರಾಪ್‌ ಬಗ್ಗೆ ವಿಚಾರ ಪ್ರಸ್ತಾಪವಾದಾಗ ಕರ್ನಾಟಕದ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ ಇಲ್ಲಿಯ ತನಕ ಹನಿಟ್ರ್ಯಾಪ್‌ ಕುರಿತು ಯಾರೂ ಸಹ ದೂರು ನೀಡಿಲ್ಲ. ನನ್ನನ್ನು ಹನಿಟ್ರಾಪ್‌ ಮಾಡಲು ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದರು.

ಹನಿಟ್ರಾಪ್‌ ಆರೋಪದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಭಾರೀ ಚರ್ಚೆ ಆರಂಭವಾಗಿದೆ. ಕರ್ನಾಟಕ ಸರ್ಕಾರ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಯಾವುದೇ ಎಸ್‌‍ಐಟಿ ರಚನೆ ಮಾಡಿಲ್ಲ. ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿದ್ದು, ಯಾವ ತನಿಖೆಗೂ ಇನ್ನೂ ಆದೇಶ ಮಾಡಿಲ್ಲ. ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಹನಿಟ್ರಾಪ್‌ ಬಗ್ಗೆ ಏಕೆ ಮೌನವಾಗಿದೆ? ಎಂಬುದು ಪ್ರಶ್ನೆಯಾಗಿದೆ.

RELATED ARTICLES

Latest News