ಮಧುಗಿರಿ, ಡಿ.1- ವಿಶ್ವದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ ಎಂದು ಕೀರ್ತಿ ಪಡೆದಿರುವ ಇಲ್ಲಿನ ಏಕಶಿಲಾ ಬೆಟ್ಟವು ದೇಶ- ವಿದೇಶದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಆದರೆ ಏಕಾಶಿಲಾ ಬೆಟ್ಟದಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ಕಲ್ಲಿನ ಕೋಟೆಯಲ್ಲಿ ಗಿಡಗಳು ಬೆಳೆದು ಮರಗಳಾಗಿ ಬೇರುಗಳು ಆಳವಾಗಿ ಇಳಿದು ಕಲ್ಲುಗಳು ಸಡಿಲವಾಗಿ ಬೀಳುವ ಹಂತ ತಲುಪುತ್ತಿವೆ ಹಾಗೂ ಕೋಟೆಯ ಆವರಣದಲ್ಲಿ ಅನುಪಯುಕ್ತ ಗಿಡಗಳು ಆಳೆತ್ತರವಾಗಿ ಬೆಳೆದು ವಿಷಪೂರಿತ ಹಾವು ಮತ್ತು ಸೊಳ್ಳೆಗಳ ಆವಾಸ ಕೇಂದ್ರವಾಗಿ ಮಾರ್ಪಟ್ಟಿರುವುದರಿಂದ ಪ್ರವಾಸಿಗರು ಈ ಬೆಟ್ಟಕ್ಕೆ ಚಾರಣ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಉತ್ತಮ ಮಳೆಯಿಂದಾಗಿ ಏಕಾಶಿಲಾ ಬೆಟ್ಟ ಆವರಣದಲ್ಲಿ ಹಾಗೂ ಕಲ್ಲಿನ ಕೋಟೆಗಳಲ್ಲಿ ಗಿಡಗಳು ಬೆಳೆದು ಮರಗಳ ಬೇರುಗಳು ಆಳವಾಗಿ ಕೋಟೆಯ ಒಳಗೆ ಹೋಗಿ ಕಲ್ಲುಗಳನ್ನು ಸಡಿಲ ಮಾಡುತ್ತಿರುವುದರಿಂದ ಕಲ್ಲುಗಳು ಹೊರ ಬಂದು ಬೀಳುವ ಹಂತ ತಲುಪುತ್ತಿವೆ. ಕೋಟೆಗಳನ್ನು ಸಂರಕ್ಷಣೆ ಮಾಡದೆ ಇದ್ದರೆ ಸಂಪೂರ್ಣವಾಗಿ ಹಾಳಾಗಿ ಕೋಟೆಯ ಚಿತ್ರಗಳನ್ನು ಪೋಟೋಗಳಲ್ಲಿ ನೋಡುವ ಸ್ಥಿತಿ ಎದುರಾಗಬಹುದು.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸುಂದರವಾದ ಗೋಡೆ ಸಂಪೂರ್ಣವಾಗಿ ಕುಸಿದು ಹಾಳಾಗಿದೆ. ಈವರೆಗೂ ಅದನ್ನು ಸರಿಪಡಿಸಲು ಯಾವ ಅಧಿಕಾರಿಗಳು ಕೂಡ ಮುಂದಾಗಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಹೀಗೆ ನಿರ್ಲಕ್ಷ್ಯ ಮಾಡಿದರೆ ಇತಿಹಾಸ ಹೇಳುವ ಸುಂದರವಾದ ಕೋಟೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟೆಯ ಪ್ರವೇಶ ದ್ವಾರದಿಂದಲೇ ಅನುಪಯುಕ್ತ ಗಿಡಗಳು ಆಳೆತ್ತರವಾಗಿ ಬೆಳೆದಿರುವುದರಿಂದ ಕಾಲಿಡಲು ಪ್ರವಾಸಿಗರು ಭಯಭೀತರಾಗಿದ್ದಾರೆ. ಎಲ್ಲಿ ನೋಡಿದರೂ ಗಿಡಗಳು ಬೆಳೆದುನಿಂತಿವೆ. ಯಾವ ಪೊದೆಯಲ್ಲಿ ಏನಿದೆಯೋ ಎಂಬ ಭಯ ಕಾಡುತ್ತಿದೆ. ಹೊಸದಾಗಿ ನಿರ್ಮಾಣವಾಗಿರುವ ಶೌಚಾಲಯದ ಸಮೀಪ ಗಿಡಗಳು ಹೆಚ್ಚಾಗಿ ಬೆಳೆದಿರುವುದರಿಂದ ಶೌಚಾಲಕ್ಕೆ ಹೋಗಲು ಪ್ರವಾಸಿಗರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಏಕಾಶಿಲಾ ಬೆಟ್ಟವನ್ನು ವೀಕ್ಷಣೆ ಮತ್ತು ಚಾರಣ ಕೈ ಗೊಳ್ಳಲು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಬಂದಿದ್ದೇವೆ. ಆದರೆ ಕೋಟೆಯ ಆವರಣದಲ್ಲಿ ಬೆಳದಿರುವ ಗಿಡಗಳನ್ನು ನೋಡಿ ಭಯವಾಗುತ್ತಿದೆ. ಇಂತಹ ಸುಂದರ ತಾಣವನ್ನು ಸರಿಯಾಗಿ ನಿರ್ವಹಣೆ ಇಲ್ಲದೇ ಹಾವು ಮತ್ತು ಸೊಳ್ಳೆಗಳ ಕೇಂದ್ರವಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಪ್ರವಾಸಿಗ ರಾಜೇಶ್ ಹೇಳಿದರು.
ಬೆಟ್ಟದಲ್ಲಿರುವ ತಾಣಗಳ ರಕ್ಷಣೆಗೆ, ಸ್ವಚ್ಛತೆಗೆ ಹಾಗೂ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಏಕಾಶಿಲಾ ಬೆಟ್ಟ ಮತ್ತಷ್ಟು ಹೆಸರುಗಳಿಸಿ, ತಾಲ್ಲೂಕು ಕೂಡ ಅಭಿವೃದ್ಧಿಯಾಗುತ್ತದೆ ಎಂದು ಕೋಲಾರದ ಶಿವಕುಮಾರ್ ಹೇಳಿದರು.