Tuesday, May 7, 2024
Homeರಾಜ್ಯಜ.19ಕ್ಕೆ ಮೋದಿ ಬೆಂಗಳೂರಿಗೆ

ಜ.19ಕ್ಕೆ ಮೋದಿ ಬೆಂಗಳೂರಿಗೆ

ಬೆಂಗಳೂರು, ಜ.16- ಪ್ರಧಾನಿ ನರೇಂದ್ರಮೋದಿ ಅವರು ಇದೇ ತಿಂಗಳ 19ರಂದು ಬೆಂಗಳೂರಿಗೆ ಆಗಮಿಸಲಿದ್ದು, ರೋಡ್ ಶೋ ನಡೆಸುವ ಬಗ್ಗೆ ಈವರೆಗೂ ಅಧಿಕೃತವಾಗಿ ದೃಢಪಟ್ಟಿಲ್ಲ. ಕೇರಳದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿಯವರು ನಗರದ ಏರೋಸ್ಪೇಸ್ ಇಂಜಿನಿಯರಿಂಗ್ ಸ್ಪೆಷಾಲಿಟಿ ಇಂಡಿಯಾ ಇಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‍ಗೆ ಆಗಮಿಸುವರು.

ಈ ಹಿಂದೆ ಬೆಂಗಳೂರಿನ ಇಸ್ರೋ ಕಚೇರಿಗೆ ನರೇಂದ್ರಮೋದಿ ಅವರು ಆಗಮಿಸಿದ್ದರೂ ಆ ವೇಳೆ ಬಿಜೆಪಿಯ ಯಾವುದೇ ಕಾರ್ಯಕರ್ತರನ್ನು ಭೇಟಿಯಾಗಿರಲಿಲ್ಲ. ಅದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಸಂಪೂರ್ಣವಾಗಿ ಪಕ್ಷದ ಪ್ರಮುಖರಿಂದ ಅಂತರವನ್ನು ಕಾಪಾಡಿಕೊಂಡಿದ್ದರು. ಇದೀಗ 19ರಂದು ಬೆಂಗಳೂರಿಗೆ ಆಗಮಿಸುವ ಮೋದಿ ಅವರನ್ನು ಬಿಜೆಪಿ ಅದ್ಧೂರಿಯಾಗಿ ಸ್ವಾಗತಿಸಲು ತೀರ್ಮಾನಿಸಿದೆ. ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರಿಗೆ ಭವ್ಯ ಸ್ವಾಗತ ಕೋರಲು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗಿದೆ.

ಮೋದಿ ಅವರಿಂದ ಬೆಂಗಳೂರು ಇಲ್ಲವೇ ಚಾಮರಾಜನಗರದಲ್ಲಿ ಬೃಹತ್ ರೋಡ್ ಶೋ ನಡೆಸಬೇಕೆಂಬ ಚಿಂತನೆ ಇದೆಯಾದರೂ ಪ್ರಧಾನಿ ಕಾರ್ಯಾಲಯದಿಂದ ಈವರೆಗೂ ಅನುಮತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಕಾರ್ಯಕ್ರಮ ನಡೆಯಲು ಇನ್ನು ಮೂರೇ ದಿನಗಳು ಇರುವುದರಿಂದ ಭದ್ರತಾ ದೃಷ್ಟಿಯಿಂದ ರೋಡ್ ಶೋಗೆ ಅನುಮತಿ ಸಿಗುತ್ತದೆಯೇ ಎಂಬ ಯಕ್ಷ ಪ್ರಶ್ನೆಯೂ ಇದೆ.

‘ಪೂಜಿಸಲೆಂದೇ ಹೂಗಳ ತಂದೆ’ ಕನ್ನಡ ಹಾಡಿಗೆ ಮನಸೋತ ಮೋದಿ

ಬೆಂಗಳೂರಿನಲ್ಲಿ ಶುಕ್ರವಾರ ರೋಡ್ ಶೋ ನಡೆಸಿದರೆ ಸಂಚಾರ ದಟ್ಟಣೆಯಾಗುವ ಸಂಭವವಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಚಾಮರಾಜನಗರದಲ್ಲಿ ರೋಡ್ ಶೋ ನಡೆಸಿ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಲೋಕಸಭೆ ಚುನಾವಣೆಗೆ ಭರ್ಜರಿ ಹುರುಪಿನಿಂದ ಮುನ್ನುಗ್ಗುತ್ತಿರುವ ಬಿಜೆಪಿ ಮೋದಿಯವರನ್ನೇ ಬಲವಾಗಿ ನಂಬಿಕೊಂಡಿದೆ. ಅವರು ರಾಜ್ಯದಲ್ಲಿ ಹೆಚ್ಚು ಹೆಚ್ಚು ಪ್ರಚಾರ ನಡೆಸಿದಷ್ಟು ಪಕ್ಷಕ್ಕೆ ಆನೆಬಲ ಬರಲಿದೆ ಎಂದು ಬಿಜೆಪಿಯೊಳಗಿನ ಚಿಂತಕರ ಛಾವಡಿ ಸಲಹೆ ಕೊಟ್ಟಿದೆ.

ಹೀಗಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿರುವ ಮೋದಿ ಅವರು ರೋಡ್ ಶೋ ನಡೆಸಲಿದ್ದಾರೆ ಎಂಬುದು ಈ ಕ್ಷಣದವರೆಗೂ ಖಚಿತವಾಗಿಲ್ಲ. ಪ್ರಧಾನಿ ಭೇಟಿಯ ಹಿನ್ನಲೆಯಲ್ಲಿ ಜ.19ರಂದು ನಿಗದಿಯಾಗಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ.

ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುವ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸಮಾಲೋಚನೆ ನಡೆಸಿದ್ದು, ಪ್ರಧಾನಿ ಕಾರ್ಯಾಲಯದಿಂದ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿ ಬಿಜೆಪಿ ರಾಜ್ಯ ನಾಯಕರಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಚಂದ್ರಯಾನ ಯೋಜನೆಯ ಯಶಸ್ಸಿನ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆಂದೇ ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭ ಪ್ರಧಾನಿಯವರು ರೋಡ್ ಶೋ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿ ನಂತರ ಮುಜುಗರಕ್ಕೀಡಾದ ಸನ್ನಿವೇಶ ಸೃಷ್ಟಿಯಾಗಿತ್ತು. ಯಾಕೆಂದರೆ, ಬಿಜೆಪಿ ನಾಯಕರ ಹೇಳಿಕೆಗಳ ಬೆನ್ನಲ್ಲೇ ರೋಡ್‍ಶೋ ಉದ್ದೇಶವಿಲ್ಲ ಎಂದು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿತ್ತು.

ನಂತರ ಪ್ರಧಾನಿ ಭೇಟಿ ವೇಳೆ ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೆರಳದ ವಿಚಾರವೂ ರಾಜ್ಯ ರಾಜಕೀಯದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಸಿಎಂ ಹಾಗೂ ಡಿಸಿಎಂ ಶಿಷ್ಟಾಚಾರ ಪಾಲಿಸಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದಲೇ ಸೂಚನೆ ಬಂದ ಕಾರಣ ತಾವು ಅವರನ್ನು ಸ್ವಾಗತಿಸಲು ತೆರಳಲಿಲ್ಲ ಎಂದು ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದರು. ಇದು ಸಹ ರಾಜ್ಯ ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿತ್ತು.
ಹೀಗಾಗಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿಯವರು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News