ಕೋಲ್ಕತ್ತಾ,ಮಾ.6- ಪ್ರಧಾನಿ ನರೇಂದ್ರಮೋದಿ ಅವರು ಇಂದು ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲಿಗೆ ಚಾಲನೆ ನೀಡಿದ್ದಾರೆ. ಹೂಗ್ಲಿ ನದಿಯಡಿ ನಿರ್ಮಿಸಲಾಗಿರುವ ಸುರಂಗದ ಮೂಲಕ ಈ ಮೆಟ್ರೋ ರೈಲು ಗಳು ಚಲಿಸಲಿವೆ.ವಿಶೇಷವೆಂದರೆ ಈ ಮೆಟ್ರೋ ವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಮೂಲಕ ಉದ್ಘಾಟಿಸಿದ್ದು, ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಗರದಲ್ಲಿ ಈ ರೈಲು ಸೇವೆಗಳು ಆರಂಭವಾಗಿದೆ.
ಹೌರಾ ಮೈದಾನ – ಎಸ್ಪ್ಲಾನೇಡ್ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಹಸಿರು ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಿದ್ದಾರೆ. ಇದು ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ನ ಒಂದು ಭಾಗವಾಗಿದೆ. ಹೌರಾ ಮೈದಾನ – ಎಸ್ಪ್ಲಾನೇಡ್ ಮಾರ್ಗವು ಹೌರಾ ಮೈದಾನ, ಹೌರಾ ಸ್ಟೇಷನ್ ಕಾಂಪ್ಲೆಕ್ಸ್, ಬಿಬಿಡಿ ಬಾಗ್ ನಿಲ್ದಾಣಗಳನ್ನು ಹೊಂದಿದೆ.
ಕೋಲ್ಕತ್ತಾ ಮೆಟ್ರೋದಲ್ಲಿ ಹೌರಾ ಮೈದಾನ- ಎಸ್ಪ್ಲೇನೇಡ್ ಮಾರ್ಗವು ತುಂಬಾ ವಿಶೇಷವಾಗಿದೆ. ಏಕೆಂದರೆ ಇದು ನದಿಯ ಅಡಿಯಲ್ಲಿರುವ ದೇಶದ ಅತಿದೊಡ್ಡ ಸುರಂಗವಾಗಿದೆ. ಈ ಮಾರ್ಗದಲ್ಲಿರುವ ಹೌರಾ ಮೆಟ್ರೋ ನಿಲ್ದಾಣವು ನಮ್ಮ ದೇಶದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವಾಗಿ ದಾಖಲೆ ಬರೆಯಲಿದೆ. ಈ ಸುರಂಗವನ್ನು ನೀರಿನ 6 ಮೀಟರ್ ಆಳದಲ್ಲಿ 520 ಮೀಟರ್ ಉದ್ದದಲ್ಲಿ ನಿರ್ಮಿಸಲಾಗಿದೆ.
ನಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೋಲ್ಕತ್ತಾ ನಗರದಲ್ಲಿ ಮೆಟ್ರೋ ರೈಲು ಸೇವೆ ಆರಂಭವಾಗಿತ್ತು. 1984ರಲ್ಲಿ ಕೋಲ್ಕತ್ತಾ ಮೆಟ್ರೋ ರೈಲು ಆರಂಭವಾಗಿತ್ತು. ಇದೀಗ ನೀರೊಳಗಿನ ಮೆಟ್ರೋ ರೈಲು ಆರಂಭಿಸುವ ಮೂಲಕ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗದ ಒಟ್ಟು ಉದ್ದ 16.6 ಕಿ.ಮೀ. ಈ ಪೈಕಿ 10.8 ಕಿ.ಮೀ ಸುರಂಗ ಮಾರ್ಗದಲ್ಲಿ ಹಾದು ಹೋಗಲಿದೆ.
ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ನಿರ್ಮಾಣದ ಭಾಗವಾಗಿ, ಈ ಜಲ ಸುರಂಗ ರೈಲುಮಾರ್ಗವನ್ನು 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. 520 ಮೀಟರ್ ಉದ್ದದ ಈ ಸುರಂಗವನ್ನು 45 ಸೆಕೆಂಡುಗಳಲ್ಲಿ ಮೆಟ್ರೋ ರೈಲು ಹಾದು ಹೋಗುತ್ತದೆ. ಲಂಡನ್-ಪ್ಯಾರಿಸ್ ಕಾರಿಡಾರ್ನಲ್ಲಿ ಯುರೋಸ್ಟಾರ್ ಸೇವೆಯಂತೆ ಸುರಂಗವನ್ನು ನಿರ್ಮಿಸಲಾಗಿದೆ.
ಹೂಗ್ಲಿ ನದಿಯಡಿ ನಿರ್ಮಿಸಲಾದ ಈ ನೀರೊಳಗಿನ ಮೆಟ್ರೋ ಅವಳಿ ನಗರಗಳಾದ ಹೌರಾ ಮತ್ತು ಕೋಲ್ಕತ್ತಾಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಈ ಮಾರ್ಗದಲ್ಲಿ 6 ನಿಲ್ದಾಣಗಳಿದ್ದರೆ, 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ ಇರುತ್ತವೆ. ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ನ ಅಡಿಪಾಯವನ್ನು ಫೆಬ್ರವರಿ 2009ರಲ್ಲೇ ಹಾಕಲಾಗಿತ್ತು. ಆದರೆ ನೀರೊಳಗಿನ ಮೆಟ್ರೋ ಸುರಂಗದ ನಿರ್ಮಾಣ ಕಾರ್ಯ 2017ರಲ್ಲಿ ಪ್ರಾರಂಭವಾಗಿತ್ತು.