ವಾಷಿಂಗ್ಟನ್,ಸೆ.21- ಪ್ರಧಾನ ಮಂತ್ರಿ ಇಂದು ಅಮೆರಿಕಕ್ಕೆ ತೆರಳಿದ್ದು, ನಾಲ್ಕನೇ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಸೆ.23ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ತವರೂರು ವಿಲಿಂಗ್ಟನ್‌ನಲ್ಲಿ ಕ್ವಾಡ್ ಶಂಗಸಭೆ ಸಭೆಯನ್ನು ಆಯೋಜಿಸಲಾಗಿದೆ. ಕ್ವಾಡ್ ಶಂಗಸಭೆಯಲ್ಲಿ ನನ್ನ ಸ್ನೇಹಿತರಾದ ಅಧ್ಯಕ್ಷ ಬೈಡನ್, ಪ್ರಧಾನಿ ಅಲ್ಬನೀಸ್ ಮತ್ತು ಪ್ರಧಾನಿ ಕಿಶಿದಾ ಅವರನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದಾನೆ ಎಂದು ಮೋದಿ ಎಕ್ಸ್ ಮಾಡಿದ್ದಾರೆ.
ಈ ವೇದಿಕೆಯು ಶಾಂತಿಯನ್ನು ಉತ್ತೇಜಿಸುವ ಸಮಾನ ಮನಸ್ಕ ರಾಷ್ಟ್ರಗಳ ವೇದಿಕೆಯಾಗಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಗತಿ, ಮತ್ತು ಸಮದ್ಧಿ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ಎರಡೂ ರಾಷ್ಟ್ರಗಳ ಮತ್ತು ಜಾಗತಿಕ ಹಿತಾಸಕ್ತಿಗಳ ಸುಧಾರಣೆಗಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಕ್ವಾಡ್ ಶಂಗಸಭೆಯನ್ನು ಚತುರ್ಭುಜ ಭದ್ರತಾ ಸಂವಾದ ಎಂದು ಕರೆಯಲಾಗುತ್ತದೆ. ಭಾರತ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ.
ಪ್ರಧಾನಿ ಮೋದಿ ಅವರ ಈ ಭೇಟಿಯಲ್ಲಿ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. ಭಾರತೀಯ ಸಮುದಾಯ ಮತ್ತು ಪ್ರಮುಖ ಅಮೆರಿಕನ್ ಉದ್ಯಮಿಗಳ ಜತೆಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಕ್ವಾಡ್ ಶಂಗಸಭೆಯು ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು, ಕಡಲ ಭದ್ರತೆ, ಉದಯೋನುಖ ತಂತ್ರಜ್ಞಾನಗಳು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ವಿಚಾರಗಳು ಸೇರಿದಂತೆ ಹಲವಾರು ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಇದೇ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ನವೆಂಬರ್ 5 ರಂದು ಯುಎಸ್ ಚುನಾವಣೆಗಳು ನಿಗದಿಯಾಗಿದ್ದು, ಈಗಾಗಲೇ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಭರದಿಂದ ಪ್ರಚಾರ ನಡೆಸುತ್ತಿದ್ದರೆ ಅವರ ಪ್ರತಿಸ್ಪರ್ಧಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಸೆಣಸುತ್ತಿದ್ದಾರೆ.