ನವದೆಹಲಿ,ಫೆ.22– ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಾರದಿದ್ದರೂ ಮಿತ್ರ ಪಕ್ಷಗಳ ಬೆಂಬಲದಿಂದ ಎನ್ ಡಿಎ ಸರ್ಕಾರ ರಚನೆ ಮಾಡಿದೆ. ಆದರೆ ರಾಜಕಾರಣ ನಿಂತ ನೀರಲ್ಲ ಎಂಬಂತೆ, ಶತ್ರುವಿನ ಶತ್ರುತ್ವದಲ್ಲೇ ಮಿತ್ರತ್ವ ಕಾಣು ಎಂಬಂತೆ ಪ್ರಧಾನಿ ನರೇಂದ್ರಮೋದಿ ಮತ್ತೆ ಪ್ರಾದೇಶಿಕ ಪಕ್ಷಗಳತ್ತ ದೃಷ್ಟಿ ಹರಿಸಿದ್ದಾರೆ.
ಸದ್ಯ ಎನ್‌ಡಿಎ ತೆಕ್ಕೆಯಲ್ಲಿರುವ ಟಿಡಿಪಿ, ಜೆಡಿಯೂ ಹಾಗೂ ಶಿವಸೇನೆಯ ಏಕ್‌ನಾಥ್ ಶಿಂಧೆ ಪ್ರಧಾನಿಗೆ ಊರುಗೋಲಾಗಿ ನಿಂತಿದ್ದಾರೆ. ಇದರಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಶಿಂಧೆ ನಡೆಯ ಬಗ್ಗೆ ಮೋದಿಗೆ ಅನುಮಾನ ಕಾಡುತ್ತಿದೆ.
ಯವುದೇ ಕಾರಣಕ್ಕೂ ನಾನು ಎನ್‌ಡಿಎ ಬಿಟ್ಟು ಹೋಗುವುದಿಲ್ಲ ಎಂದು ನಿತೀಶ್ ಈಗಾಗಲೇ ಸ್ಪಷ್ಟಪಡಿಸಿದ್ದರೂ ಅವರ ಮಾತು ಮತ್ತು ಕೃತಿಗೆ ಸಾಕಷ್ಟು ವ್ಯತ್ಯಾಸವಿರುವುದು ಹಿಂದಿನ ನಡೆವಳಿಕೆಯಿಂದಲೇ ಸಾಬೀತಾಗಿದೆ.
ಇನ್ನು ಮಹಾರಾಷ್ಟ್ರದ ಡಿಸಿಎಂ ಏಕ್‌ನಾಥ್ ಶಿಂಧೆ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಭವಿಷ್ಯದಲ್ಲಿ ಬಂದೊದಗುವ ಸಂಕಷ್ಟದಿಂದ ಪರಾಗಲು ಮೋದಿ, ಹೊಸ ಮಿತ್ರ ಪಕ್ಷಗಳನ್ನು ಸಂಭಾಳಿಸಲು ಮುಂದಾಗಿದ್ದಾರೆ. ಎನ್ನಲಾಗಿದೆ.
ರಾಜಕಾರಣದಲ್ಲಿ ಪಕ್ಷ ಮತ್ತು ಸಿದ್ದಾಂತಗಳು ಬೇರೆ ಬೇರೆ ಇರಬಹುದು ಎಂದು ಹಲವು ಬಾರಿ ಹೇಳಿರುವ ಮೋದಿ, ಚೆನ್ನೈನಲ್ಲಿ ಕರುಣಾನಿಧಿಯವರನ್ನೂ ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಸದ್ಯ, ಮರಾಠಿ ಕಾರ್ಯಕ್ರಮವೊಂದರಲ್ಲಿ ಶರದ್ ಪವಾರ್ ಅವರಿಗೆ ಪ್ರೀತಿ, ಗೌರವವನ್ನು ಮೋದಿ ತೋರಿದ್ದಾರೆ. ಇದು ದೊಡ್ಡ ಸುದ್ದಿಯಾಗುತ್ತಿದೆ.
ಶುಕ್ರವಾರ ದೆಹಲಿಯಲ್ಲಿ ನಡೆದ ಅಖಿಲ ಭಾರತ ಮರಾಠಿ ಸಮ್ಮೇಳನದಲ್ಲಿ ಮೋದಿ ಮತ್ತು ಶರದ್ ಪವಾರ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಶರದ್ ಪವಾರ್ ಅವರನ್ನು ಪಕ್ಕದ ಕುರ್ಚಿಯಲ್ಲಿ ಕೂರಿಸಿ, ಅವರ ಖಾಲಿ ಗ್ಲಾಸಿಗೆ ನೀರನ್ನು ತುಂಬಿಸಿಕೊಟ್ಟರು. ಮೋದಿಯ ಈ ನಡೆ ಭಾರೀ ಪ್ರಶಂಸೆಗೆ ಒಳಗಾಯಿತು.
ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ ನಡುವೆ ಸಣ್ಣ ಶೀತಲ ಸಮರ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ. ನನ್ನ ಶಕ್ತಿಯನ್ನು ಪರೀಕ್ಷಿಸಿಸಬೇಡಿ ಎಂದು ಶಿಂಧೆ ಹೇಳಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಪವಾರ್ ಅವರ ಜೊತೆ ಮೋದಿಯ ಬಾಡಿ ಲಾಂಗ್ರೇಜ್ ಸುದ್ದಿಯಾಗುತ್ತಿದೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ದೇಶದ ಹಿರಿಯ ನಾಯಕರ ಸೇವೆಯನ್ನು ಪ್ರಧಾನಿ ಮೋದಿ ಆಗಾಗ ಸ್ಮರಿಸುವುದುಂಟು. ಸಂಸತ್ತಿನಲ್ಲಿ ಹಲವು ಬಾರಿ, ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡಲು, ಕಾಂಗ್ರೆಸ್ ಪಾರ್ಟಿಗೆ ಖರ್ಗೆ ಅವರ ಕೆಲಸವನ್ನು ಪ್ರಧಾನಿಗಳು ಅದೆಷ್ಟೋ ಬಾರಿ ನೆನಪಿಸಿದ್ದರು.
ನರೇಂದ್ರ ಮೋದಿ ಪ್ರಧಾನಿಯಾದರೆ, ದೇಶ ಬಿಟ್ಟು ಹೋಗುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದರು. ಚುನಾವಣಾ ಪ್ರಚಾರದ ಅಬ್ಬರದಲ್ಲಿ ಹೇಳಿದ್ದ ಮಾತನ್ನು ಮನಸ್ಸಿಗೆ ಹಾಕಿಕೊಳ್ಳದ ಮೋದಿ, ಅವರು ದೇಶ ಬಿಟ್ಟು ಹೋಗುವುದು ಬೇಡ, ನಮ್ಮ ಮನೆಯಲ್ಲಿ ಇರಲಿ ಎಂದು ಜಾಣ್ಣೆಯ ತಿರುಗೇಟು ನೀಡಿದ್ದರು.
ಇದಾದ ನಂತರ ಮೊದಲ ಬಾರಿಗೆ ದೇವೇಗೌಡರು, ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಜೊತೆ ಅವರ ನಿವಾಸಕ್ಕೆ ಹೋಗಿದ್ದರು. ಗೌಡರನ್ನು ಮನೆಯ ಬಾಗಿಲಿಗೆ ಬಂದು ಸ್ವಾಗತಿಸಿದ್ದರು. ಮೋದಿ ಅಂದು ತೋರಿದ ಗೌರವ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅದೇ ರೀತಿಯ ಗೌರವವನ್ನು, ತಮ್ಮ ವಿರೋಧಿ ಬಣದ ಶರದ್ ಪವಾರ್ ಕಡೆಯೂ ತೋರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೂ ಮುನ್ನವೂ, ಕೇಂದ್ರದಲ್ಲಿ ಪ್ರಧಾನಿ ಮೋದಿ ಜೊತೆ ಉತ್ತಮ ಒಡನಾಟವನ್ನು ದೇವೇಗೌಡರ ಕುಟುಂಬ ಹೊಂದಿದೆ. 2024ರ ಲೋಕಸಭಾ ಚುನಾವಣೆಯ ಮೇಲಂತೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇನ್ನಷ್ಟು ಗಟ್ಟಿಯಾಗಿದೆ. ಆ ಕಾರಣಕ್ಕಾಗಿಯೇ ಎರಡು ಸ್ಥಾನ ಹೊಂದಿದ್ದರೂ, ಬೃಹತ್ ಕೈಗಾರಿಕೆ ಖಾತೆ ಎಚ್.ಡಿ.ಕುಮಾರಸ್ವಾಮಿಗೆ ಒಲಿದಿದೆ.
ದೆಹಲಿಗೆ ಹೋದಾಗಲೆಲ್ಲಾ ಹೆಚ್ಚಾಗಿ ಪ್ರಧಾನಿಯವರನ್ನು ಭೇಟಿಯಾಗುವ ದೇವೇಗೌಡರಿಗೆ ಅದೇ ಗೌರವ ಸಿಗುತ್ತಿದೆ. ರಾಜ್ಯ ಸಭೆಯಲ್ಲಿ ಮೋದಿಯಂತಹ ಮಹಾನ್ ನಾಯಕನನ್ನು ನಾನು ನೋಡಿಲ್ಲ. ಈ ದೇಶದ ನದಿನೀರಿನ ಸಮಸ್ಯೆ ಬಗೆಹರಿಯತ್ತದೆ ಎಂದಾದರೆ ಅದು ಮೋದಿಯಿಂದ ಮಾತ್ರ ಸಾಧ್ಯ ಎಂದು ರಾಜ್ಯ ಸಭೆಯಲ್ಲಿ ಗೌಡರು ಬ್ಯಾಟಿಂಗ್ ಮಾಡಿದ್ದಾರೆ.
ತಮಿಳುನಾಡಿನ ದಿವಂಗತ ಸಿಎಂ ಕರುಣಾನಿಧಿ ಹಾಸಿಗೆ ಹಿಡಿದಿದ್ದಾಗ, ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಸಿಎಂ ಸ್ಟಾಲಿನ್ ಅವರನ್ನು ಕೈಹಿಡಿದು ಕರೆದುಕೊಂಡು ಹೋಗಿದ್ದರು. ವಿಪಕ್ಷಗಳ ಜೊತೆಗೆ, ಮೋದಿ ನಡೆದುಕೊಳ್ಳುತ್ತಿರುವ ಪ್ರತೀಬಾರಿಯೂ ಆ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಇದಕ್ಕೆ ಕಾ ಕಾರಣ ಆಕಾಲಘಟ್ಟದಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳು, ಮರಾಠಿ ಕಾರ್ಯಕ್ರಮದಲ್ಲಿ ಮೋದಿಯವರು ದೀಪ ಬೆಳಗುವ ಮೂಲಕ ಉದ್ಘಾಟಿಸ ಬೇಕಾಗಿತ್ತು. ಆದರೆ ಶರದ್ ಪವಾರ್ ಅವರನ್ನು ಕರೆಸಿಕೊಂಡು ಅವರ ಕೈಯಿಂದ ದೀಪ ಬೆಳಗಿಸಿದರು. ಮರಾಠಿ ಭಾಷೆಗೆ, ಮರಾಠಿಗರಿಗೆ ಶರದ್ ಪವಾರ್ ಅವರ ಕೊಡುಗೆಯನ್ನು ಮೋದಿ ಸ್ಥರಿಸಿಕೊಂಡರು. ಆ ಮೂಲಕ ಪ್ರಾದೇಶಿಕ ಪಕ್ಷಗಳ ನಾಯಕರನ್ನು ವಿಶೇಷವಾಗಿ ಗೌರವಿಸುವ ಕೆಲಸವನ್ನು ಮೋದಿ ಮುಂದುವರಿಸಿದ್ದಾರೆ.