ಬೆಂಗಳೂರು,ಸೆ.21- ಮೊನ್ನೆ ರಾತ್ರಿ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ ನಗರ ಪೊಲೀಸರು ಕಳೆದ ರಾತ್ರಿ ವಿಶೇಷ ಗಸ್ತು ಮಾಡಿದ್ದಾರೆ.ಮಹಾಲಯ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿ 11 ಗಂಟೆಯಿಂದ ಇಂದು ಬೆಳಗಿನ ಜಾವ 5 ಗಂಟೆವರೆಗೂ ನಗರದಾದ್ಯಂತ ಕಾರ್ಯಾಚರಣೆ ಕೈಗೊಂಡಿದ್ದರು.
ಖುದ್ದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಫೀಲ್‌್ಡಗಿಳಿದು ಇಡೀ ರಾತ್ರಿ ನಗರದಾದ್ಯಂತ ಸಂಚರಿಸಿ ಕಿರಿಯ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 20ಕ್ಕೂ ಹೆಚ್ಚು ಡಿಸಿಪಿಗಳು, ಎಲ್ಲಾ ವಿಭಾಗದ ಎಸಿಪಿಗಳು, ಇನ್ಸ್ ಪೆಕ್ಟರ್‌ಗಳು, ಸಬ್ ಇನ್‌್ಸಪೆಕ್ಟರ್‌ಗಳು ಹಾಗೂ ಸಿಬ್ಬಂದಿಗಳು ಈ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡಿದ್ದರು.
ಪೊಲೀಸರು ನಗರದಾದ್ಯಂತ ನಾಕಾಬಂದಿ ಕೈಗೊಂಡಿದ್ದು ವಾಹನಗಳ ಪರಿಶೀಲನೆ ಸಂದರ್ಭದಲ್ಲಿ ಹೆಲೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು, ತ್ರಿಬ್ಬಲ್ ರೈಡಿಂಗ್ ಹೋಗುವುದು, ಇನ್ನೂ ಮುಂತಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕುಡಿದು ವಾಹನ ಚಾಲನೆ ಮಾಡುವವರು ಹಾಗೂ ಡ್ರಗ್ಸ್ ಸೇವಿಸಿರುವವರು ಈ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರುಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಲಾಡ್ಜ್ , ಕ್ಲಬ್, ಹೋಟೆಲ್‌ಗಳು ಇನ್ನೂ ಮುಂತಾದ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟ ಪೊಲೀಸರು ಪರಿಶೀಲಿಸಿದ್ದಾರೆ. ಅಲ್ಲಿ ಅಕ್ರಮಗಳು ಕಂಡಬಗ್ಗೆ ವಿಚಾರಣೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ರಾತ್ರಿ ಭೇಟಿ ನೀಡಿ ಅಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದ್ದಾರೆ.ರಾತ್ರಿಯೂ ಸಹ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ.
ಮೊನ್ನೆ ರಾತ್ರಿ ಪೊಲೀಸರು 1474ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಸಿಕ್ಕಿದಂತಹ ರೌಡಿಗಳಿಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು. ನಿನ್ನೆ ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಕೆಲ ರೌಡಿಗಳು ಇಂದು ಸಿಕ್ಕಿದ್ದು, ಅವರುಗಳಿಗೂ ಸಹ ಪೊಲೀಸರು ತಾಕೀತು ಮಾಡಿದ್ದಾರೆ.