ಬೆಂಗಳೂರು, ಮಾ.23- ಲೋಕಸಭೆ ಚುನಾವಣೆ ಸಮೀಪಿ ಸುತ್ತಿರುವ ಹಿನ್ನಲೆಯಲ್ಲಿ ನಗರದ ಪಶ್ಚಿಮ ಮತ್ತು ಕೇಂದ್ರ ವಿಭಾಗದ ಪೊಲೀಸರು ಇಂದು ಮುಂಜಾನೆ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ. ಇಂದು ಮುಂಜಾನೆ 5 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಈ ದಾಳಿ ನಡೆಸಲಾಗಿದೆ.
ಪಶ್ಚಿಮ ವಿಭಾಗದಲ್ಲಿ 326 ರೌಡಿಗಳ ಮನೆ ಮೇಲೆ ಹಾಗೂ ಕೇಂದ್ರ ವಿಭಾಗದಲ್ಲಿ 90 ರೌಡಿಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಕೆಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಕೆಲವು ರೌಡಿಗಳು ಮನೆಗಳಲ್ಲಿ ಇರಲಿಲ್ಲ. ಮನೆಯಲ್ಲಿದ್ದ ರೌಡಿಗಳನ್ನು ಹೊರಗೆ ಕರೆದು ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಬಳಸುತ್ತಿರುವ ಮೊಬೈಲ್ ಸಂಖ್ಯೆ ಪಡೆದುಕೊಂಡು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಬಾಲ ಬಿಚ್ಚಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ರೌಡಿಗಳಿಗೆ ಪೊಲೀಸ್ ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿದ್ದಾರೆ.ಮೊನ್ನೆ ದಕ್ಷಿಣ ವಿಭಾಗದ ಪೊಲೀಸರು 234 ಮಂದಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದ್ದರು. ಇಂದೂ ಸಹ ಎರಡು ವಿಭಾಗಗಳಲ್ಲಿ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು, ಮುಂದಿನ ದಿನಗಳಲ್ಲಿಯೂ ಉಳಿದ ವಿಭಾಗಗಳಲ್ಲಿ ದಾಳಿ ಮುಂದುವರೆಯಲಿದೆ.