ನವದೆಹಲಿ,ಮೇ 23- ಆಪ್ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರ ಮೂಲಕ ನನ್ನ ಪೋಷಕರ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು, ನನ್ನ ಪೋಷಕರು ಮತ್ತು ಹೆಂಡತಿಯೊಂದಿಗೆ ಪೊಲೀಸರಿಗಾಗಿ ಕಾಯುತ್ತಿದ್ದೇನೆ. ನಿನ್ನೆ ಪೊಲೀಸರು ಕರೆ ಮಾಡಿ ನನ್ನ ಪೋಷಕರ ವಿಚಾರಣೆಗೆ ಸಮಯ ಕೇಳಿದ್ದಾರೆ. ಆದರೆ ಅವರು ಬರುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿನೀಡಿಲ್ಲ ಎಂದು ಹೇಳಿದ್ದಾರೆ.
ಪೊಲೀಸರ ಮೂಲಕ ಕೇಜ್ರಿವಾಲ್ ಅವರ ಪೋಷಕರ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಾಗಿನಿಂದ ಬಿಜೆಪಿ ಬೆಚ್ಚಿಬಿದ್ದಿದೆ. ಅವರು ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ದಾಳಿ ಮತ್ತು ಪಿತೂರಿ ನಡೆಸುತ್ತಿದ್ದಾರೆ. ಆದರೆ ಇಂದು ದೆಹಲಿ ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರನ್ನು ವಿಚಾರಣೆಗೆ ಕರೆದ ನಂತರ ಅವರು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಆಪಾದಿಸಿದೆ.
ಬಿಜೆಪಿ ಈಗ ತೀರಾ ಕೆಳಮಟ್ಟಕ್ಕೆ ಕುಸಿದಿದೆ, ಅವರು ದೆಹಲಿ ಪೊಲೀಸರನ್ನು ಬಳಸಿಕೊಂಡು ಕೇಜ್ರಿವಾಲ್ ಅವರ ಅನಾರೋಗ್ಯ ಮತ್ತು ವಯಸ್ಸಾದ ಪೋಷಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅವರ ತಂದೆ 84 ವರ್ಷ, ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ ಮತ್ತು ಅವರ ತಾಯಿಗೆ ಶ್ರವಣ ದೋಷವಿದೆ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ಬಂಧಿಸುವ ಎರಡು ದಿನಗಳ ಮೊದಲು ಅವರ ಪೋಷಕರು ಆಸ್ಪತ್ರೆಯಿಂದ ಹಿಂದಿರುಗಿದ್ದರು ಆ ಸಮಯದಲ್ಲಿ ಪೋಷಕರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.