Tuesday, January 6, 2026
Homeರಾಜಕೀಯಬಳ್ಳಾರಿಯಲ್ಲಿ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು : ಹೆಚ್ಡಿಕೆ

ಬಳ್ಳಾರಿಯಲ್ಲಿ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು : ಹೆಚ್ಡಿಕೆ

CBI should investigate the clash case in Bellary: HDK

ಬೆಂಗಳೂರು,ಜ.5- ಬಳ್ಳಾರಿಯಲ್ಲಿ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕೆಂಬ ನೈಜ ಉದ್ದೇಶ ರಾಜ್ಯಸರ್ಕಾರಕ್ಕಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದರು. ಸರ್ಕಾರವೇ ಕೊಲೆಗಡುಕರಿಗೆ ರಕ್ಷಣೆ ಕೊಡುತ್ತಿದೆ. ರಾಜ್ಯಸರ್ಕಾರ ನಡೆಸುವ ಮತ್ಯಾವುದೇ ರೀತಿಯ ತನಿಖೆಯಿಂದ ಸತ್ಯಾಂಶ ಹೊರಬರುವ ವಿಶ್ವಾಸವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟ ಘಟನೆಯ ತನಿಖೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೇವಲ ಎಸ್ಪಿ ಒಬ್ಬರನ್ನು ಅಮಾನತು ಮಾಡಿದರೆ ಸಾಲದು. ಹಿರಿಯ ಅಧಿಕಾರಿಗಳ ಮೇಲೂ ಕ್ರಮವಾಗಬೇಕು. ಆ ಘಟನೆಯ ಮೂಲ ಕಾರಣಕರ್ತರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಖಾಸಗಿ ಗನ್‌ಮ್ಯಾನ್‌ಗಳಿಗೆ ಗನ್‌ ಇಟ್ಟುಕೊಳ್ಳಲು ಅನುಮತಿ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಅವರು, ರಾಜ್ಯ ಕಾಂಗ್ರೆಸ್‌‍ ಸರ್ಕಾರ ನಡೆಸುವ ಯಾವುದೇ ತನಿಖೆಗಳಿಂದ ಸತ್ಯಾಂಶ ಹೊರಬರುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮರಣೋತ್ತರ ಪರೀಕ್ಷೆ ಸತ್ಯಾಂಶ ಹೇಳಿ :
ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಅವರ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ಏಕೆ?, ಮರಣೋತ್ತರ ಪರೀಕ್ಷಾ ವರದಿ ಏನು ಬಂತು?, ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ಮಾಡುವಂತೆ ಒತ್ತಾಯಿಸಿದವರು ಯಾರು?, ಯಾರ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ಮಾಡಲಾಯಿತು?, ಯಾರನ್ನು ಮೆಚ್ಚಿಸಲು ಈ ರೀತಿ ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂಬ ಸತ್ಯ ಹೇಳಿ ಎಂದು ಅವರು ಆಗ್ರಹಿಸಿದರು.

ಶಾಸಕ ಜನಾರ್ದನರೆಡ್ಡಿ ಅವರ ವಿರುದ್ಧ ನೀಡಿದ್ದ ದೂರನ್ನು ಸತ್ಯ ಮಾಡಲು ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಯಿತೇ?, ಎರಡನೇ ಪರೀಕ್ಷೆಯಲ್ಲಿ ಗುಂಡು ಸಿಕ್ಕಿದೆ ಎಂಬ ಮಾಹಿತಿ ಇದೆ. ಈ ರೀತಿಯ ತನಿಖೆಯಿಂದ ನ್ಯಾಯ ಸಿಗಲಿದೆಯೇ ? ಎಂದು ಅವರು ಪ್ರಶ್ನಿಸಿದರು.

ರಾಜ್ಯಸರ್ಕಾರದ ಆಡಳಿತ ವೈಫಲ್ಯದಿಂದಲೇ ಬಳ್ಳಾರಿ ಘಟನೆ ನಡೆದಿದೆ. ಪೂರ್ವ ಯೋಜಿತ ಗಲಾಟೆ ಪ್ರಕರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಉಪಮುಖ್ಯಮಂತ್ರಿಗಳು ಶಾಸಕ ಭರತರೆಡ್ಡಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ಜನಾರ್ದನರೆಡ್ಡಿಗೆ ಬಳ್ಳಾರಿಗೆ ಹೋಗಲು ಅನುಮತಿ ನೀಡಿ ಒಂದೂವರೆ ವರ್ಷ ಆಗಿದೆ. ಆನಂತರ ಎಷ್ಟು ಎಫ್‌ಐಆರ್‌ಗಳಾಗಿವೆ?, ಎಷ್ಟು ಗಲಭೆಗಳಾಗಿವೆ? ಹೇಳಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌‍ ಕಾರ್ಯಕರ್ತನ ಕೊಲೆ ಮಾಡಿದ್ದಾರೆ. ಇಂತಹ ಸರ್ಕಾರವನ್ನು ಕಾಂಗ್ರೆಸ್‌‍ ಕಾರ್ಯಕರ್ತರು ಧಿಕ್ಕರಿಸಿ ರಾಜ್ಯವನ್ನು ಉಳಿಸಬೇಕು. ಅಧಿಕಾರದ ಆಸೆಗೆ ಯಾರನ್ನು ಬೇಕಾದರು ಬಲಿ ಕೊಡುವ ನಾಯಕರು. ಕನಿಕರವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಜನಾರ್ದನರೆಡ್ಡಿಯವರು ಕೋರಿದ ಭದ್ರತೆಗೆ ಸಂಬಂಧಿಸಿದಂತೆ ಅಮೆರಿಕದ ಪ್ರಸ್ತಾಪ ಮಾಡಿದ್ದಾರೆ. ಅಮೆರಿಕದಿಂದ ಕರೆಸುವುದಾದರೆ ಇವರೇಕೆ ಅಧಿಕಾರದಲ್ಲಿರಬೇಕು? ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಐಜಿ ಹಾಗೂ ಹೆಚ್ಚುವರಿ ಎಸ್ಪಿ ಅಲ್ಲೇ ಇದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಏಕೆ ಕ್ರಮ ಕೈಗೊಳ್ಳಲಿಲ್ಲ?, ಅವರ ಮೇಲೆ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶಾಸಕ ಭರತರೆಡ್ಡಿಗೆ ರಕ್ಷಣೆ ಕೊಟ್ಟು ಕರೆದುಕೊಂಡವರು ಪೊಲೀಸರೇ ಅಲ್ಲವೇ?, ಸತ್ಯಶೋಧನಾ ಸಮಿತಿಗೆ ಕಾಂಗ್ರೆಸ್‌‍ ಕಾರ್ಯಕರ್ತರು ಶಾಸಕರದೇ ತಪ್ಪು ಎಂದು ಹೇಳಿದ್ದಾರಲ್ಲವೇ? ಎಂದು ಅವರು ಪ್ರಶ್ನಿಸಿದರು. ಅಮಾನತುಗೊಂಡ ಎಸ್ಪಿ ಆತಹತ್ಯೆ ವದಂತಿ ಬೆನ್ನಲ್ಲೇ ತುಮಕೂರು ಎಸ್ಪಿ ಫಾರ್ಮ್‌ಹೌಸ್‌‍ಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ನ ಕೊನೆಯ ಆಡಳಿತ :
2028ಕ್ಕೆ ಮತ್ತೆ ಅಧಿಕಾರಕ್ಕೆ ಬರುವುದಾಗಿ ಕಾಂಗ್ರೆಸ್‌‍ನವರು ಹೇಳುತ್ತಿದ್ದಾರೆ. ಈ ರಾಜ್ಯದ ಕೊನೆಯ ಮುಖ್ಯಮಂತ್ರಿ ಹಾಗೂ ಕೊನೆಯ ಆಡಳಿತ ಇದಾಗಿದೆ. ಬರೆದಿಟ್ಟುಕೊಳ್ಳಿ. ಸರ್ಕಾರದ ನಡವಳಿಕೆಯಿಂದ ಜನರು ಬೇಸತ್ತು ಅವಕಾಶಕ್ಕಾಗಿ ಜನರು ಕಾಯುತ್ತಿದ್ದಾರೆ. ಪ್ರಾಯಶ್ಚಿತ್ತವನ್ನು ಅನುಭವಿಸುತ್ತೀರಿ ಎಂದು ಟೀಕಾಪ್ರಹಾರ ನಡೆಸಿದರು.

ವಿಪಕ್ಷಗಳನ್ನು ಬಗ್ಗುಬಡಿಯಲು ಸಾಧ್ಯವಿಲ್ಲ. ತಹಸೀಲ್ದಾರ್‌ ನಿಷೇಧಾಜ್ಞೆ ಹೊರಡಿಸಿದ್ದರೂ ಏಕೆ ಜಾರಿ ಮಾಡಲಿಲ್ಲ. ಜನಾರ್ದನರೆಡ್ಡಿಯವರ ಮನೆ ಮೇಲೆ ಏಕೆ ಗುಂಡು ಹಾರಿಸಿದ್ದರು, ಪೆಟ್ರೋಲ್‌ ಬಾಂಬ್‌ ತಂದಂತಹ ಆಟೋವನ್ನು ಏಕೆ ಸೀಜ್‌ ಮಾಡಲಿಲ್ಲ ಎಂದು ಪ್ರಶ್ನೆಗಳ ಸುರಿಮಳೆಗೈದರು.

ಗಲಾಟೆ ಪ್ರಕರಣದಲ್ಲಿ ಮೃತಪಟ್ಟ ಕಾರ್ಯಕರ್ತನಿಗೆ 25 ಲಕ್ಷ ರೂ. ಪರಿಹಾರವನ್ನು ಕೊಟ್ಟಿದ್ದಾರೆ. ಯಾವ ಖಾತೆಯಿಂದ ಕೊಟ್ಟರು. ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂಶಕ್ತಿ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸರ್ಕಾರದಿಂದ ಯಾವ ರೀತಿ ರಕ್ಷಣೆ ಸಿಗುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಕೋರ್‌ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ವಿಧಾನಪರಿಷತ್‌ ಸದಸ್ಯ ರಮೇಶ್‌ಗೌಡ, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್‌ಗೌಡ, ಕೆ.ಪಿ.ಶ್ರೀಕಂಠೇಗೌಡ, ಚೌಡರೆಡ್ಡಿ ಮತ್ತಿತರರಿದ್ದರು.

RELATED ARTICLES

Latest News