ಬೆಂಗಳೂರು, ಅ.16- ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ಸಂಘಟಿತವಾಗಿಸಲು ಬೆಂಗಳೂರಿನಲ್ಲಿಂದು ಇಂಡಿಯಾ ಕೂಟದ ಪ್ರಮುಖ ನಾಯಕರ ಸಭೆ ನಡೆಯಿತು.ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಪಿಐಎಂ, ಸಿಪಿಐ, ಸಿಪಿಐ ಎಂಎಲ್, ಸಮಾಜವಾದಿ ಪಕ್ಷ, ಫಾರ್ವರ್ಡ್ ಬ್ಲಾಕ್ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಿಪಿಎಂ ಕಾರ್ಯದರ್ಶಿ ಕೆ.ಪ್ರಕಾಶ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಎಸ್ಪಿ ರಾಜ್ಯಾಧ್ಯಕ್ಷ ಮಂಜಪ್ಪ ಯಾದವ್ ಸೇರಿದಂತೆ ಅನೇಕ ನಾಯಕರು ತಮ ಅಭಿಪ್ರಾಯ ಹಂಚಿಕೊಂಡರು.
ಬಳಿಕ ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕರ್ನಾಟಕದಲ್ಲಿ ಎಸ್ ಐ ಆರ್ ವಿರುದ್ಧ ಸಂಘಟಿತ ಹೋರಾಟದ ಕುರಿತು ಚರ್ಚೆ ನಡೆದಿದೆ. ಎಸ್ ಐ ಆರ್ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಬಿಜೆಪಿ, ಆರ್.ಎಸ್.ಎಸ್ ಹಾಗೂ ಎನ್ ಡಿ ಎ ಮಿತ್ರಕೂಟದ ಪಕ್ಷಗಳು ಬಿಟ್ಟು ಉಳಿದ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದರು.
ನವೆಂಬರ್ 5ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಮೊದಲಿಗೆ ಜಿಲ್ಲೆ ನಂತರ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.ಜಂಥರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದ್ದರೂ ಬೇರೆ ಕಡೆ ನಿಗದಿ ಪಡಿಸಿದ ಸ್ಥಳಗಳಲ್ಲಿ ಪ್ರತಿಭಟನೆಗಳು ಮುಂದುವರೆಯಲಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಜನರ ಹಕ್ಕು ಅದನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದರು.
ಇಂದು ಸಂಜೆ ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಕೆ.ಜಿ.ರಸ್ತೆವರೆಗೂ ನಡೆಯುವ ಪ್ರತಿಭಟನೆಗೂ ಕಾಂಗ್ರೆಸ್ ಪಕ್ಷ ಬೆಂಬಲ ನೀಡಲಿದೆ ಎಂದು ಹೇಳಿದರು.ರಾಹುಲ್ ಗಾಂಧಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಪ್ರತಿಭಟನೆಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಎಸ್ ಐ ಆರ್ ರದ್ದು ಮಾಡಬೇಕು ಮತ್ತು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ 13 ಕೋಟಿ ಜನರನ್ನು ಮತ್ತೆ ಸೇರ್ಪಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗಿದೆ.
ಈಗ ಸಂಭವಿಸುತ್ತಿರುವ ಎಲ್ಲಾ ಅನಾವುತಗಳಿಗೆ ಸುಪ್ರೀಂಕೋರ್ಟ್ ತೀರ್ಪು ಕಾರಣವಾಗಿದೆ. ಫಾರಂ ನಂಬರ್ 6ರ ತಿದ್ದುಪಡಿಗೆ ಸುಪ್ರೀಂಕೋರ್ಟ್ ಮುದ್ರೆ ಒತ್ತಿದ್ದರಿಂದ ಇಷ್ಟೆಲ್ಲಾ ನಡೆಯುತ್ತಿವೆ. ರಾಹುಲ್ ಗಾಂಧಿ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಮುಖ್ಯನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಗೆ ವಕೀಲರು ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಹಿರಿಯ ವಕೀಲ ಹರೀಶ್ ಸಾಳ್ವೆ ಲಂಡನ್ ನಲ್ಲಿ ಕುಳಿತು ಮಾತನಾಡುತ್ತಿದ್ದಾರೆ. ಪ್ರತಿಭಟನೆಗೆ ವಿದೇಶಿ ಹಣ ಬರುತ್ತಿದೆ ಎಂಬುದು ಸೇರಿದಂತೆ ಅವರ ಹೇಳಿಕೆಗಳು ದೇಶದ ವಾಸ್ತವ ಸ್ಥಿತಿಗೆ ಭಿನ್ನವಾಗಿವೆ ಎಂದು ಹೇಳಿದರು.ಈ ಹಿಂದೆ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಬೇಕು ಎಂದು ಹೇಳವಷ್ಟರ ಮಟ್ಟಿಗೆ ಜ್ಞಾನೇಶ್ ಕುಮಾರ್ಗೆ ದುರಹಂಕಾರ ಇತ್ತು. ಏಕಪಕ್ಷೀಯವಾಗಿ ಕೆಟ್ಟ ನಿರ್ಧಾರ ತೆಗೆದುಕೊಂಡು ಪ್ರಜಾಪ್ರಭುತ್ವವನ್ನೇ ನಾಶ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜಾಪುರದಲ್ಲಿ ಮೂವರನ್ನು ಸತ್ತಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಲಾಗಿತ್ತು. ಆ ಮೂರು ಮಂದಿ ಮಹಿಳೆಯರು ಖುದ್ದು ಹಾಜರಾಗಿ ಪತ್ರಿಕಾಗೋಷ್ಟಿ ನಡೆಸಿದರು. ಆರ್ ಎಸ್ ಎಸ್ ಪ್ರೇರಿತ ಎಸ್ ಐ ಆರ್ ರದ್ದುಗೊಳ್ಳಬೇಕು ಎಂದು ಹೇಳಿದರು.ಒಂದುವರೆ ವರ್ಷದಿಂದ ಕಾಂಗ್ರೆಸ್ ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ನಾನೇ ಏಳು ಪತ್ರಗಳನ್ನು ಬರೆದಿದ್ದೇನೆ. ಎಲ್ಲದಕ್ಕೂ ಆಯೋಗ ಉತ್ತರ ನೀಡಿದೆ. ಇಲ್ಲವಾದರೆ ಇನ್ನಷ್ಟು ಮತದಾರರನ್ನು ತೆಗೆದು ಹಾಕುತ್ತಿದ್ದರು ಎಂದು ಆತಂಕ ವ್ಯಕ್ತಪಡಿಸಿದರು.
65 ಸಾವಿರ ಫಾರಂ ನಂಬರ್ 7 ಅನ್ನು ಪೂರ್ವ ಮುದ್ರಿತವಾಗಿ ರಾಜ್ಯ ತಲುಪಿವೆ. ಇವು ಚುನಾವಣಾ ಆಯೋಗದ ಆಸ್ತಿ, ಅವು ಬಿಜೆಪಿಯವರಿಗೆ ಹೇಗೆ ಸಿಕ್ಕವು. ಜ್ಞಾನೇಶ್ ಕುಮಾರ್ ಕೊಟ್ಟಿದ್ದಾರೆಯೇ ? ಪೂರ್ವ ಮುದ್ರಿತ ಅರ್ಜಿಗಳನ್ನು ಮುದ್ರಿಸಿದವರ ವಿರುದ್ಧ ದೇಶ ದ್ರೋಹದ ಅಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಬೆಂಗಳೂರಿನಲ್ಲಿ ಪ್ರತಿಭಟನಾಕಾರರ ವಿರುದ್ಧ ಕಾನೂನು ಬಾಹಿರವಾಗಿ ಕ್ರಮ ಕೈಗೊಂಡಿದ್ದರೆ, ಅಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ರಾಹುಲ್ ಗಾಂಧಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದರು ಹೇಳಿದರು.
ಸಿಪಿಐನ ಪ್ರಕಾಶ್ ಅವರು ಮಾತನಾಡಿ, ನವೆಂಬರ್ 5ರಂದು ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಪಕ್ಷ ಹಾಗೂ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಲಿವೆ ಎಂದು ಹೇಳಿದರು.ಎಸ್ ಐ ಆರ್ ಅಕ್ರಮವಾಗಿ ಜಾರಿ ಮಾಡಿದ ಪ್ರಕ್ರಿಯೆ. ಚುನಾವಣಾ ಆಯೋಗದಲ್ಲಿ ಒಮ್ಮತದಿಂದ ತೀರ್ಮಾನವಾಗಿಲ್ಲ. ಜ್ಞಾನೇಶ್ ಕುಮಾರ್ ಮೂಲಕ ನರೇಂದ್ರ ಮೋದಿ ಹಾಗೂ ಅಮಿತ್ ಶಾಸ ಜಾರಿ ಮಾಡಿದ್ದಾರೆ. ಬಿಜೆಪಿ, ಆರ್ ಎಸ್ ಎಸ್ ದೇಶದಲ್ಲಿ ಪ್ರಜಾಪ್ರಭುತ್ವ ನಾಶ ಮಾಡಬೇಕು ಎಂದು ಸಂಚು ನಡೆಸಿವೆ. ಅದನ್ನು ಹಿಮ್ಮೆಟಿಸಬೇಕಿದೆ ಎಂದರು.ಇಂಡಿಯಾ ಕೂಟದ ಈ ಜನಾಂದೋಲನ ಜನರ ಚಳವಳಿಯಾಗಲಿದೆ. ರಾಜ್ಯದಲ್ಲಿ ನಡೆಯುವ ಹೋರಾಟಗಳಿಗೆ ಸರ್ಕಾರ ಪ್ರಜಾಸತಾಕ್ಮಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
