Homeರಾಜಕೀಯಹಬ್ಬದ ಬಳಿಕ ಮತ್ತಷ್ಟು ತೀವ್ರಗೊಳ್ಳಲಿದೆ ಜೆಡಿಎಸ್‌‍ ಹೋರಾಟ

ಹಬ್ಬದ ಬಳಿಕ ಮತ್ತಷ್ಟು ತೀವ್ರಗೊಳ್ಳಲಿದೆ ಜೆಡಿಎಸ್‌‍ ಹೋರಾಟ

ಬೆಂಗಳೂರು,ಅ.19- ಸ್ಟಿಂಗ್‌ ಆಪರೇಷನ್‌ ಮಾಡಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ವಿಜಯ ದಶಮಿ ಹಬ್ಬದ ಬಳಿಕ ರಾಜ್ಯಾದ್ಯಂತ ತೀವ್ರಗೊಳಿಸಲು ಜೆಡಿಎಸ್‌‍ ಸಜ್ಜಾಗಿದೆ. ಕಳೆದ ಒಂದು ವಾರ ದಿಂದಲೂ ಸ್ಟಿಂಗ್‌ ಆಪರೇಷನ್‌ ಮಾಡಿದ ವ್ಯಕ್ತಿ ಹಾಗೂ ಅದರ ಹಿಂದಿರುವ ಸೂತ್ರದಾರಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್‌‍ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.

ಸ್ಟಿಂಗ್‌ ಆಪರೇಷನ್‌ ವಿಚಾರದ ಬಗ್ಗೆ ಕುಮಾರಸ್ವಾಮಿ ಅವರು ಆರೋಪ ಮಾಡಿದ ಬೆನ್ನಲ್ಲೆ ಜೆಡಿಎಸ್‌‍ ಸಮಾಜಿಕ ಜಾಲತಾಣದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಕುಮಾರಸ್ವಾಮಿ ಅವರು ನಗರ ಪೊಲೀಸ್‌‍ ಆಯುಕ್ತರನ್ನು ಭೇಟಿ ಮಾಡಿದ್ದಲ್ಲದೆ, ಆಯುಕ್ತರ ಕಚೇರಿಯಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಕೆಲ ಕಾಲ ಧರಣಿ ನಡೆಸಿ ಎರಡು ದಿನಗಳ ಗಡುವು ನೀಡಿದ್ದರು.

ಗಡುವು ಮುಗಿದರೂ ಸ್ಟಿಂಗ್‌ ಆಪರೇಷನ್‌ ಆರೋಪಿಗಳನ್ನು ಬಂಧಿಸಿ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಮಾಡಿಲ್ಲ ಎಂದು ಆಕ್ರೋಶಗೊಂಡ ಶನಿವಾರ ಜೆಡಿಎಸ್‌‍ ಕೇಂದ್ರ ಕಚೇರಿ ಜೆ.ಪಿ.ಭವನದಿಂದ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರ ಕಚೇರಿವರೆಗೆ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿದ್ದರು. ಅಲ್ಲದೆ, ಆರೋಪಿಯೇ ಸ್ಟಿಂಗ್‌ ಆಪರೇಷನ್‌ ಮಾಡಿರುವುದನ್ನು ಒಪ್ಪಿಕೊಂಡಿರುವಾಗ ಬೇರೆ ಯಾವ ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು. ಜೊತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಿದ್ದರು.

ಬಿಎಂಐಸಿ ಅಕ್ರಮ, ಬಿಡಿದಿ ಉಪ ನಗರ ಯೋಜನೆ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ಡೈವರ್ಟ್‌ ಮಾಡಲು ರಾಜ್ಯ ಸರ್ಕಾರವು ಸ್ಟಿಂಗ್‌ ಆಪರೇಷನ್‌ ವಿಚಾರ ಪ್ರಸ್ತಾಪಿಸಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಅಲ್ಲದೆ, ಈ ಹೋರಾಟವನ್ನು ತಾರ್ಕಿಕ ಅಂತ್ಯ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ.
ವಿಜಯ ದಶಮಿ ಹಬ್ಬ ಮುಗಿಯುವುದರೊಳಗೆ ರಾಜ್ಯ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ, ಸ್ಟಿಂಗ್‌ ಆಪರೇಷನ್‌ ಹೋರಾಟ ತೀವ್ರಗೊಳಿಸಿ ರಾಜ್ಯಾದ್ಯಂತ ನಡೆಲು ತೀರ್ಮಾನಿಸಿದ್ದಾರೆ. ಶನಿವಾರ ಹೋರಾಟದ ರೂಪು ರೇಷೆಗಳ ಬಗ್ಗೆ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

RELATED ARTICLES
spot_img

Latest News