Homeರಾಜಕೀಯತಾಕತ್ತಿದ್ದರೆ ಡಿಕೆಶಿಯಿಂದ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿಸು : ಪ್ರಿಯಾಂಕ್‌ ಖರ್ಗೆಗೆ ಆರ್‌.ಅಶೋಕ್‌ ಸವಾಲು

ತಾಕತ್ತಿದ್ದರೆ ಡಿಕೆಶಿಯಿಂದ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿಸು : ಪ್ರಿಯಾಂಕ್‌ ಖರ್ಗೆಗೆ ಆರ್‌.ಅಶೋಕ್‌ ಸವಾಲು

ಬೆಂಗಳೂರು, ಅ.25- ನಿನಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿಸು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಅವರು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಏಕವಚನದಲ್ಲೇ ಬಹಿರಂಗ ಸವಾಲು ಹಾಕಿದ್ದಾರೆ.

ವಿಜಯದಶಮಿ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರದ ಬಿಬಿಎಂಪಿ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವತಿಯಿಂದ ಪಥಸಂಚಲನ ನಡೆಯಿತು.ಪಥಸಂಚಲನದ ಬಳಿಕ ಮಾತನಾಡಿದ ಆರ್‌. ಅಶೋಕ್‌, ಪ್ರಿಯಾಂಕ್‌ ಖರ್ಗೆ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ನೀನು ಮಂತ್ರಿಯಾಗಿ ನಿನ್ನೆ-ಮೊನ್ನೆ ಬಂದಿದ್ದೀಯಾ. ಇನ್ನೊಂದು ವರ್ಷದಲ್ಲೇ ಜನ ನಿನ್ನನ್ನು ಬೀದಿ ಬೀದಿಯಲ್ಲಿ ಓಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ನಿನಗೆ ಧೈರ್ಯ, ತಾಕತ್ತಿದ್ದರೆ ನಿನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರಿಂದ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿಸು. ನಿಮ್ಮ ಮುಖ್ಯಮಂತ್ರಿಗಳೇನು ಮೌನರಥವೇ? ಅವರು ಮಾತನಾಡಿದರೆ ನಾವು ಉತ್ತರಿಸುತ್ತೇವೆ. ಪ್ರಿಯಾಂಕ್‌ ಖರ್ಗೆಯಂತಹವರಿಗೆ ನಾವು ಉತ್ತರಿಸುವುದಿಲ್ಲ ಎಂದು ಸವಾಲೆಸೆದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ಟ್ವೀಟ್‌ಗೆ ತಿರುಗೇಟು ನೀಡಿದ ಅವರು, ಆರ್‌ಎಸ್‌ಎಸ್‌ಗೆ ಎಲ್ಲಿಂದ ಹಣ ಬರುತ್ತದೆ ಎಂಬುದು ನಮ್ಮ ಸ್ವಯಂಸೇವಕರಿಗೆ ತಿಳಿದಿದೆ. ಆದರೆ ಕಾಂಗ್ರೆಸ್‌ಗೆ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಮೆರಿಕದಿಂದ ಹಣ ಬರುತ್ತದೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದರು. ಆರ್‌ಎಸ್‌ಎಸ್‌ ದೇಶಪ್ರೇಮವನ್ನು ಬೆಳೆಸುವ ಮತ್ತು ಭಾರತವನ್ನು ಪ್ರೀತಿಸುವ ಸಂಘಟನೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಸಂಘದ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದರು.

ನಾನು ಕಳೆದ 50 ವರ್ಷಗಳಿಂದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗುತ್ತಿದ್ದೇನೆ. ದೇಶಾದ್ಯಂತ ಹಾಗೂ ವಿಶ್ವದ 175ಕ್ಕೂ ಹೆಚ್ಚು ದೇಶಗಳಲ್ಲಿ ಆರ್‌ಎಸ್‌ಎಸ್‌ ಸಕ್ರಿಯವಾಗಿದೆ. ನಾನೊಬ್ಬ ಸ್ವಯಂಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ದೇಶಕ್ಕೆ ಸಂಕಷ್ಟ ಅಥವಾ ಯುದ್ಧದಂತಹ ಪರಿಸ್ಥಿತಿ ಬಂದಾಗಲೆಲ್ಲ ದೇಶದ ಪರವಾಗಿ ನಿಲ್ಲುವ ಏಕೈಕ ಸಾಮಾಜಿಕ ಸಂಘಟನೆ ಆರ್‌ಎಸ್‌ಎಸ್‌ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಪಥಸಂಚಲನಕ್ಕೆ ಸಾಕಷ್ಟು ಕಿರುಕುಳ ಹಾಗೂ ನಿರ್ಬಂಧಗಳನ್ನು ವಿಧಿಸಿ, ಕೊನೆಯ ದಿನದವರೆಗೂ ಅನುಮತಿ ನೀಡದೆ ಸತಾಯಿಸಿತು. ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಕಾಲದಲ್ಲೂ ಇಂತಹ ಕೆಲಸ ನಡೆದಿರಲಿಲ್ಲ. ಆದರೂ ಶಾಂತಿ ಮತ್ತು ದೇಶದ ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ಪಥಸಂಚಲನ ನಡೆಸಲಾಗಿದೆ ಎಂದು ತಿಳಿಸಿದರು.

ವಿಜಯದಶಮಿ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರದ ಬಿಬಿಎಂಪಿ ಮೈದಾನದಲ್ಲಿ ನಡೆದ ಪಥಸಂಚಲನದಲ್ಲಿ ಗಣವೇಷ ಧರಿಸಿದ್ದ ನೂರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಹೆಜ್ಜೆ ಹಾಕಿದರು.

ಪಥಸಂಚಲನ ನಡೆಯುವ ಸ್ಥಳದಲ್ಲಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಸ್ವಯಂಸೇವಕರನ್ನು ಸಾರ್ವಜನಿಕರು ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

RELATED ARTICLES
spot_img

Latest News