Friday, October 25, 2024
Homeರಾಜಕೀಯ | Politicsಮತದಾರರ ಸೆಳೆಯಲು ನಾನಾ ತಂತ್ರ, ಬಗೆಬಗೆಯ ಆಮಿಷ

ಮತದಾರರ ಸೆಳೆಯಲು ನಾನಾ ತಂತ್ರ, ಬಗೆಬಗೆಯ ಆಮಿಷ

ಬೆಂಗಳೂರು, ಏ.8- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ತೀವ್ರಗೊಂಡಿದ್ದು, ಮತದಾರರ ಮನಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಚುನಾವಣಾ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆಯು ರಂಗೇರತೊಡಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾರರಿಗೆ ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹಣದ ಮಳೆ, ಹೆಂಡದ ಹೊಳೆಯೇ ಹರಿದಿತ್ತು. ಕುಕ್ಕರ್ ಸೀಟಿ ಜೋರಾಗಿತ್ತು. ಮಿಕ್ಸಿ, ಟಿವಿ, ಟಿಫಿನ್ ಬಾಕ್ಸ್, ವಾಚ್ ಸೇರಿದಂತೆ ನಾನಾ ರೀತಿಯ ಉಡುಗೊರೆಗಳನ್ನು ಮತದಾರರಿಗೆ ನೀಡಿ ಮತ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೂ ಮತದಾರರಿಗೆ ಬಂಪರ್ ಉಡುಗೊರೆಗಳನ್ನು ಅಭ್ಯರ್ಥಿಗಳು ತಲುಪಿಸಿದ್ದು ಕಂಡುಬಂತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಮತದಾರರನ್ನು ಸೆಳೆಯಲು ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗುತ್ತಿದೆ.ರೇಷನ್ ಕಿಟ್, ಗಿಫ್ಟ್ ಕೂಪನ್, ಕುಕ್ಕರ್, ಮಿಕ್ಸಿ, ಟಿವಿ, ಚಿನ್ನಾ-ಬೆಳ್ಳಿ ಆಭರಣಗಳು, ವಾಚ್ ಮತ್ತಿತರ ಉಡುಗೊರೆಗಳನ್ನು ಮತದಾರರಿಗೆ ಕೊಟ್ಟು ಮತಸೆಳೆಯಲು ಅಭ್ಯರ್ಥಿಗಳು ಪ್ರಯತ್ನ ನಡೆಸಿದ್ದಾರೆ,

ಈಗಾಗಲೇ ಅಭ್ಯರ್ಥಿಗಳು ಹಾಗೂ ಅವರ ಪರ ಬೆಂಬಲಿಗರೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಹಣ, ಎಣ್ಣೆ ಇನ್ನಿತರೆ ವಸ್ತುಗಳು ಬರಲಿವೆ ಎಂಬ ಭರವಸೆ ನೀಡಲಾಗುತ್ತಿದೆ.ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷದ ಮುಖಂಡರು ಹಾಗೂ ಬೆಂಬಲಿಗರು ರಂಗೋಲಿ ಕೆಳಗೆ ನುಸುಳಿ ಮತದಾರರ ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ರಂಜಾನ್, ಯುಗಾದಿ ಹಬ್ಬದ ನೆಪದಲ್ಲಿ ಬೇರೆ ಬೇರೆ ಮೂಲಗಳಿಂದ ಮತದಾರರಿಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ. ಜನ ಹಬ್ಬದ ಸಂಭ್ರಮದಲ್ಲಿದ್ದಾರೆ. ಹಾಗೇಯೆ ರಾಜಕೀಯ ಪಕ್ಷಗಳಿಂದ ಏನಾದರೂ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮಾಡದಂತೆ ಹೊಸ ಬಟ್ಟೆ, ಆಭರಣ, ಕಕ್ಕರ್, ಮಿಕ್ಸಿ, ಟಿವಿ, ಐರನ್ ಬಾಕ್ಸ್ ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಈ ಸುಳಿವನ್ನರಿತ ಚುನಾವಣಾ ಆಯೋಗ ಬಟ್ಟೆ, ಚಿನ್ನಾಭರಣ ಮಳಿಗೆ, ಗಾರ್ಮೆಂಟ್ -ಫ್ಯಾಕ್ಟರಿ , ಎಲೆಕ್ಟ್ರಾನಿಕ್ಸ್ ಅಂಗಡಿಗಳ ಮೇಲೆ ನಿಗಾವಹಿಸಿದೆ.ಯುಗಾದಿ, ರಂಜಾನ್ ಹಿನ್ನೆಲಯಲ್ಲಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದವರಿಗೆ ಒಂದೆಡೆ ನೀತಿ ಸಂಹಿತೆ ಅಡ್ಡಿಯಾಗಿದ್ದರೂ, ರಾಜಕೀಯ ಪಕ್ಷಗಳು ಉಡುಗೊರೆ ನೀಡುವ ನೆಪದಲ್ಲಿ ಮಾಡುವ ವ್ಯಾಪಾರ ಕೈ ಹಿಡಿಯಬಹುದೆಂಬ ಖುಷಿಯಲ್ಲಿದ್ದಾರೆ.

RELATED ARTICLES

Latest News