Friday, May 3, 2024
Homeರಾಜಕೀಯತವರು ಜಿಲ್ಲೆ ಶಿವಮೊಗ್ಗದಲ್ಲೇ ಬಂಡಾಯ ಶಮನ ಮಾಡಲು ಯಡಿಯೂರಪ್ಪ ವಿಫಲ

ತವರು ಜಿಲ್ಲೆ ಶಿವಮೊಗ್ಗದಲ್ಲೇ ಬಂಡಾಯ ಶಮನ ಮಾಡಲು ಯಡಿಯೂರಪ್ಪ ವಿಫಲ

ಬೆಂಗಳೂರು,ಏ.8- ರಾಜ್ಯದ ಇತರ ಕ್ಷೇತ್ರಗಳಲ್ಲಿ ಬಿಜೆಪಿಯೊಳಗಿನ ಬಂಡಾಯ ತಣಿಸುವಲ್ಲಿ ಹೈಕಮಾಂಡ್ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾದರೂ ಅವರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಮಾತ್ರ ಕೆ.ಎಸ್.ಈಶ್ವರಪ್ಪನವರ ಬಂಡಾಯ ಶಮನವಾಗಿಲ್ಲ. ಸ್ವಕ್ಷೇತ್ರದಲ್ಲೇ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿರುವುದು ಸಹಜವಾಗಿ ಬಿಎಸ್ವೈಗೂ ಮುಜುಗರ ಉಂಟುಮಾಡುತ್ತಿದೆ. ಆದರೆ ವಾಸ್ತವದಲ್ಲಿ ಈಶ್ವರಪ್ಪ ಬಂಡಾಯ ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು? ಎಂಬುದು ಚರ್ಚೆಯ ವಿಚಾರವಾಗಿದೆ.

ಈಶ್ವರಪ್ಪ ಸಾಮಥ್ರ್ಯ ಏನು? ರಾಘವೇಂದ್ರರಿಗೆ ಟಕ್ಕರ್ ಕೊಡುವಷ್ಟು ಪ್ರಬಲರೇ? ಸದ್ಯದ ಜಿಲ್ಲೆಯ ರಾಜಕೀಯ ಸ್ಥಿತಿಗತಿ ಏನು ಎಂಬುದು ಕೂಡಾ ಮಹತ್ವ ಪಡೆದುಕೊಳ್ಳುತ್ತದೆ.2009ರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿದೆ.2019ರಲ್ಲಿ ಬಿ.ವೈ.ರಾಘವೇಂದ್ರ 7,29,872 ಮತಗಳನ್ನು ಪಡೆದುಕೊಂಡಿದ್ದರು. ಇವರ ವಿರುದ್ಧ ಸ್ರ್ಪಧಿಸಿದ್ದ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ 5,06,512 ಮತಗಳನ್ನು ಪಡೆದುಕೊಂಡಿದ್ದರು.

ಗೆಲುವಿನ ಅಂತರ ಸುಮಾರು 2 ಲಕ್ಷ ದಾಟಿತ್ತು. ಕ್ಷೇತ್ರದಲ್ಲಿ ಲಿಂಗಾಯತ, ಈಡಿಗ, ಬ್ರಾಹ್ಮಣ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದರೂ ಬಿ.ವೈ.ರಾಘವೇಂದ್ರ ಎರಡು ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಕೆ.ಎಸ್ ಈಶ್ವರಪ್ಪ ಸ್ರ್ಪಧಿಸಲು ಸಜ್ಜಾಗಿದ್ದಾರೆ. ಹಿಂದುತ್ವ, ಮೋದಿ ಹೆಸರಿನಲ್ಲಿ ಚುನಾವಣೆಗೆ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಇವರ ಬಂಡಾಯವನ್ನು ಹೈಕಮಾಂಡ್ ಶಮನ ಮಾಡಲಿದೆ ಎಂಬ ನಿರೀಕ್ಷೆ ಇತ್ತಾದರೂ ಅದು ಈವರೆಗೆ ಸುಳ್ಳಾಗಿದೆ. ಅಮಿತ್ ಶಾ ಭೇಟಿಗೂ ಈಶ್ವರಪ್ಪಗೆ ಅವಕಾಶ ಸಿಕ್ಕಿಲ್ಲ ಎಂಬ ಹಿನ್ನೆಲೆಯಲ್ಲಿ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಆದರೆ ಈಶ್ವರಪ್ಪ ಸ್ಪರ್ಧೆಯಿಂದ ರಾಘವೇಂದ್ರರ ಮೇಲೆ ಆಗುವ ಪರಿಣಾಮಗಳೇನು? ಎಂಬುದೇ ಪ್ರಮುಖ ವಿಷಯವಾಗಿದೆ.

ಈ ಬಾರಿಯ ಲೋಕಸಭೆ ಚುನಾವಣೆ ಯಡಿಯೂರಪ್ಪನವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೈಕಮಾಂಡ್ನಿಂದ ಸಿಕ್ಕ ಸಂಪೂರ್ಣ ಅವಕಾಶವನ್ನು ಬಳಸಿಕೊಳ್ಳಲು ಅವರು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅವರ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಕೂಡ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪುತ್ರನನ್ನು ಗೆಲ್ಲಿಸಿಕೊಂಡು ಬರುವ ರಣತಂತ್ರವನ್ನು ಪ್ರಯೋಗ ಮಾಡೇ ಮಾಡುತ್ತಾರೆ.

ಇನ್ನು ಕೆ.ಎಸ್.ಈಶ್ವರಪ್ಪ ಬಿಜೆಪಿಯಲ್ಲಿ ಪ್ರಭಾವಿ ನಾಯಕ. ಸಂಘ ಪರಿವಾರದ ನಾಯಕರ ಜೊತೆಗೆ ಒನ್ ಟು ಒನ್ ಸಂಪರ್ಕ ಇಟ್ಟುಕೊಂಡವರು. ಜಾತಿ ರಾಜಕಾರಣಕ್ಕಿಂತ ಹಿಂದುತ್ವ ರಾಜಕಾರಣವನ್ನು ನೆಚ್ಚಿಕೊಂಡವರು. ಆದರೆ, ಯಡಿಯೂರಪ್ಪ ಮುಂದೆ ಈಶ್ವರಪ್ಪನವರ ರಾಜಕೀಯಕ್ಕೆ ಮನ್ನಣೆ ಸಿಗುತ್ತಾ? ಎಂಬ ಪ್ರಶ್ನೆಗೆ ಹಲವರ ಉತ್ತರ ಇಲ್ಲ. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಹಾಗೂ ಬಿಜೆಪಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ಸಾಂಪ್ರದಾಯಿಕ ಮತಗಳು ಇವೆ. ಈ ಮತಗಳು ಮೋದಿ, ಹಿಂದುತ್ವ ಹಾಗೂ ಜಾತಿ ಸಮೀಕರಣದಲ್ಲಿ ಚಲಾವಣೆ ಆಗುತ್ತವೆ. ಈ ಮತಗಳು ಈಶ್ವರಪ್ಪರ ಪಾಲಾಗುವುದು ಅಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಕ್ಷೇತ್ರದಲ್ಲಿ ಈಶ್ವರಪ್ಪ ಸಮುದಾಯದ ಮತಗಳನ್ನು ನೋಡುವುದಾದರೆ ಅದು ಕೇವಲ 60,000. ಆದರೆ ಈ ಮತಗಳು ಸಿದ್ದರಾಮಯ್ಯ ಪರವಾಗಿ ಚಲಾವಣೆ ಆಗಲಿವೆಯೇ ಹೊರತು ಈಶ್ವರಪ್ಪ ಪರವಾಗಿಯಲ್ಲ. ಕಾರಣ ಈಶ್ವರಪ್ಪ ಈ ಸಮುದಾಯಕ್ಕೆ ನಾಯಕತ್ವವನ್ನು ನೀಡಿಲ್ಲ. ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದರೂ ಅದನ್ನು ಅವರು ಅರ್ಧಕ್ಕೆ ಕೈಬಿಟ್ಟರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ರಾಜಕೀಯವಾಗಿ ಹೆಚ್ಚಾಗಿಯೇ ಹೇಳಿಕೆಗಳನ್ನು ನೀಡಿದರು. ಜಾತಿ ಬದಲಾಗಿ ಅವರ ಆಯ್ಕೆ ಇದ್ದಿದ್ದು ಹಿಂದುತ್ವ.

ಹೀಗಾಗಿ ಈ ಸಮುದಾಯದ ಮತಗಳು ಅವರ ಕೈಹಿಡಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಈಶ್ವರಪ್ಪನವರಿಗೆ ವೈಯಕ್ತಿಕ ವರ್ಚಸ್ಸು ಕಡಿಮೆ. ಯಡಿಯೂರಪ್ಪ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಅಲ್ಲದೆ ದೊಡ್ಡ ಸಮುದಾಯ ಅವರ ಹಿಂದಿದೆ ಹಾಗೂ ಬಿಜೆಪಿ ಸಾಂಪ್ರದಾಯಿಕ ಮತಗಳೂ ಅವರ ಬೆನ್ನಿಗಿದೆ. ಈ ನಿಟ್ಟಿನಲ್ಲಿ ಈಶ್ವರಪ್ಪ ಸ್ಪರ್ಧೆ ರಾಘವೇಂದ್ರಗೆ ದೊಡ್ಡ ಮಟ್ಟಿನ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇಲ್ಲ.

ಇನ್ನು ಕಾಂಗ್ರೆಸ್ನಿಂದ ಗೀತಾ ಶಿವರಾಜ್ಕುಮಾರ್ ಕಣದಲ್ಲಿದ್ದಾರೆ. ಆದರೆ ಇವರು ರಾಘವೇಂದ್ರ ವಿರುದ್ಧ ಪ್ರಬಲ ಅಭ್ಯರ್ಥಿ ಎಂದೇಳಲು ಸಾಧ್ಯವಿಲ್ಲ. ಈಡಿಗ ಸಮುದಾಯದ ಮತಗಳು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದರೂ ಹಾಗೂ ಬಂಗಾರಪ್ಪನವರ ಅಭಿಮಾನಿಗಳ ಬೆಂಬಲ ಇದ್ದರೂ ಕಾಂಗ್ರೆಸ್ನಲ್ಲೇ ಇರುವ ಸ್ಥಳೀಯ ಒಡಕು ಬಿಜೆಪಿಗೆ ಲಾಭವಾಗಲಿದೆ ಎಂಬುದು ಸತ್ಯ. ಅಲ್ಲದೆ ಬೂತ್ನಲ್ಲಿ ಕಾಂಗ್ರೆಸ್ ಇಲ್ಲ ಬದಲಾಗಿ ಬೀದಿಯಲ್ಲಿದೆ. ಆದರೆ ಬಿಜೆಪಿ ಈಗಾಗಲೇ ಮನೆಮನೆ ಪ್ರಚಾರ ಮುಗಿಸಿದೆ. ಬೂತ್ನಲ್ಲೂ ಪ್ರಬಲವಾಗಿ ಕೆಲಸ ಮಾಡುತ್ತಿದೆ.

ಆಂತರಿಕ ಸಮೀಕ್ಷೆಯಲ್ಲೂ ಸುಳಿವು:
ಇನ್ನು ಈಶ್ವರಪ್ಪ ಸ್ಪರ್ಧೆಯ ಬಗ್ಗೆ ಶಿವಮೊಗ್ಗದಲ್ಲಿ ಆಂತರಿಕ ಸಮೀಕ್ಷೆ ನಡೆಸಲಾಗಿದೆ. ಆದರೆ ಈ ಆಂತರಿಕ ಸಮೀಕ್ಷೆಯಲ್ಲೂ ಬಿಜೆಪಿಗೆ ಹಿನ್ನಡೆಯಾಗುವ ಬಗ್ಗೆ ವರದಿ ಸಿಕ್ಕಿಲ್ಲ. ಇದು ಯಡಿಯೂರಪ್ಪ ಹಾಗೂ ರಾಘವೇಂದ್ರ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಇವೆಲ್ಲದರ ನಡುವೆಯೂ ಕೆ.ಎಸ್.ಈಶ್ವರಪ್ಪಗೆ ಸಂಘ ಪರಿವಾರದ ಒಂದು ವರ್ಗದ ಬೆಂಬಲ ಇದೆ. ಅಲ್ಲದೆ ಬಿಜೆಪಿಯ ಒಂದು ಬಣವೂ ಈಶ್ವರಪ್ಪ ಬೆನ್ನಿಗಿದೆ. ಇದು ಬಹಿರಂಗವಾಗಿ ಗೋಚರಿಸದೇ ಇದ್ದರೂ ಆಂತರಿಕವಾಗಿ ಈಶ್ವರಪ್ಪ ಪರವಾಗಿ ಕೆಲಸ ಮಾಡುತ್ತಿದೆ. ಇದು ಯಡಿಯೂರಪ್ಪಗೂ ಕೊಂಚ ಮಟ್ಟಿಗೆ ತಲೆನೋವು ಸೃಷ್ಟಿಸಿದೆ ಎಂಬುದು ಗಮನಾರ್ಹ.

RELATED ARTICLES

Latest News