Monday, May 6, 2024
Homeಸಂಪಾದಕೀಯ-ಲೇಖನಗಳು'ನೋಟಾ' ಮತದ ಮಹತ್ವ ಏನು..?

‘ನೋಟಾ’ ಮತದ ಮಹತ್ವ ಏನು..?

ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಥವಾ ಪಕ್ಷೇತರ ಸೇರಿದಂತೆ ಯಾವುದೇ ಅಭ್ಯರ್ಥಿಗಳು ಇಷ್ಟವಾಗದಿದ್ದರೆ ಏನು ಮಾಡಬಹುದು? ಎಂಬುದಕ್ಕೆ ಚುನಾವಣಾ ಆಯೋಗ ನೋಟಾ (NOTA / NONE OF THE ABOVE) (ಈ ಮೇಲಿನ ಯಾವುದೂ/ ಯಾರೂ ಅಲ್ಲ) ಎಂಬ ಆಯ್ಕೆಯನ್ನು ಮತದಾರರಿಗೆ ನೀಡಿದೆ.

ಸುಪ್ರೀಂಕೋರ್ಟ್ ಸೂಚನೆಯಂತೆ 2013ರಲ್ಲಿ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಮತದಾರರಿಗೆ ನೀಡಲಾಯಿತು. ನಂತರ ನಡೆದ ಎಲ್ಲ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಈ ಆಯ್ಕೆ ನೀಡಲಾಗಿದೆ. ವಿದ್ಯುನ್ಮಾನ ಮತ ಯಂತ್ರ ಅಥವಾ ಇವಿಎಂ ನ ಕೊನೆಯಲ್ಲಿ ಈ ನೋಟಾ ಆಯ್ಕೆ ಇರುತ್ತದೆ.

ನೋಟಾ ಮಹತ್ವವೇನು:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಬಹಳ ಮುಖ್ಯವಾದ ಅಂಶ. ಒಂದು ವೇಳೆ ಕಣದಲ್ಲಿರುವ ಯಾವ ಅಭ್ಯರ್ಥಿಗಳು ಕೂಡ ಮತದಾರರಿಗೆ ಇಷ್ಟವಿಲ್ಲದಿದ್ದರೆ ಅವರು ಮತದಾನ ಪ್ರಕ್ರಿಯೆಯಿಂದ ದೂರವಿರಬಾರದು ಎಂಬ ಕಾರಣಕ್ಕಾಗಿ ನೋಟಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವ ಅಭ್ಯರ್ಥಿ ಕೂಡ ಇಷ್ಟವಿಲ್ಲದವರು ಈ ಆಯ್ಕೆಗೆ ಮತ ನೀಡಬಹುದಾಗಿದೆ.

ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಭ್ಯರ್ಥಿಗಳ ಬಗ್ಗೆ ಜನರಿಗೆ ತಮ್ಮ ಅಸಮಾಧಾನವನ್ನು ತೋಡಿಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಿದೆ. ಈ ಆಯ್ಕೆಯನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಯಾವೊಬ್ಬ ಅಭ್ಯರ್ಥಿ ಕೂಡ ಸಮರ್ಥನಲ್ಲ ಎಂಬ ಸಂದೇಶವನ್ನು ಆ ಪಕ್ಷಗಳಿಗೆ ಮತದಾರ ನೀಡಬಹುದಾಗಿದೆ.

ಅಭ್ಯರ್ಥಿಗಳಿಗಿಂತ ಹೆಚ್ಚು ಮತ ನೋಟಾ ಪಡೆದರೆ?:
ನೋಟಾ ಆಯ್ಕೆಯಲ್ಲಿ ಕೂಡ ಕಾಲಕಾಲಕ್ಕೆ ಬದಲಾವಣೆಗಳಾಗಿವೆ. ಆರಂಭದಲ್ಲಿ ನೋಟಾಗೆ ನೀಡುವ ಮತವನ್ನು ಅಕ್ರಮ ಮತಗಳೆಂದು ಪರಿಗಣಿಸಲಾಗುತ್ತಿತ್ತು. ನಂತರದಲ್ಲಿ ನೋಟಾಗೆ ಗರಿಷ್ಠ ಮತ ಚಲಾವಣೆಯಾದರೆ ಅದಕ್ಕಿಂತ ಕಡಿಮೆ ಮತ ಪಡೆದ, ಅಂದರೆ ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತಿತ್ತು. 2018ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ನೋಟಾಗೆ ಸಹ ಅಭ್ಯರ್ಥಿಗೆ ಸಮನಾದ ಸ್ಥಾನಮಾನವನ್ನು ನೀಡಲಾಯಿತು.

2018 ರ ಡಿಸೆಂಬರ್ನಲ್ಲಿ ಹರಿಯಾಣದ ಐದು ಜಿಲ್ಲೆಗಳಲ್ಲಿ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ನೋಟಾ ಅತಿ ಹೆಚ್ಚು ಮತಗಳನ್ನು ಪಡೆದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಅಭ್ಯರ್ಥಿಗಳನ್ನು ಅನರ್ಹರು ಎಂದು ಘೋಷಿಸಲಾಯಿತು. ಇದಾದ ಬಳಿಕ ಚುನಾವಣಾ ಆಯೋಗ ಮರು ಚುನಾವಣೆ ನಡೆಸಲು ನಿರ್ಧರಿಸಿತ್ತು.

ಮರು ಚುನಾವಣೆಯಲ್ಲೂ ನೋಟಾ ಗೆದ್ದರೆ..?:

ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ 2018ರ ಆದೇಶದಲ್ಲಿ, ನೋಟಾಗೆ ಕಾಲ್ಪನಿಕ ಚುನಾವಣಾ ಅಭ್ಯರ್ಥಿ ಸ್ಥಾನಮಾನವನ್ನು ನೀಡಲಾಗಿದೆ. ನೋಟಾ ಎಲ್ಲಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ಮತ್ತೆ ಚುನಾವಣೆ ನಡೆಯಲಿದೆ. ಆದರೆ ಚುನಾವಣೆಯ ನಂತರವೂ ಯಾವುದೇ ಅಭ್ಯರ್ಥಿ ನೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಮೂರನೇ ಬಾರಿಗೆ ಚುನಾವಣೆ ನಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೋಟಾ ನಂತರ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಆದೇಶದ ಪ್ರಕಾರ, ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ ಈ ನಿಯಮಗಳು ಆ ರಾಜ್ಯದಲ್ಲಿನ ಚುನಾವಣೆಗಳಿಗೆ ಸೀಮಿತವಾಗಿದೆ.

RELATED ARTICLES

Latest News