Thursday, May 2, 2024
Homeರಾಜ್ಯಧಾರವಾಡ ಲೋಕಸಭಾದಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ..!

ಧಾರವಾಡ ಲೋಕಸಭಾದಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ..!

ಬೆಂಗಳೂರು,ಏ.8- ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪರ್ಧೆ ಮಾಡಿರುವ ಪ್ರತಿಷ್ಠಿತ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಸ್ವಾಮೀಜಿಯವರ ಈ ನಿರ್ಧಾರ ಬಿಜೆಪಿಗೆ ಭಾರೀ ಹಾನಿ ಮಾಡುವ ಸಂಭವವಿದ್ದು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಹೊಸ ತಂತ್ರವನ್ನು ಹೆಣೆಯಬೇಕಾದ ಸಂದಿಗ್ಧತೆಗೆ ಸಿಲುಕಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ತಮ್ಮ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಜೊತೆ ಸಭೆ ನಡೆಸಿದರು.

ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ನೀವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದ ಕಾರಣ ಅಂತಿಮವಾಗಿ ಸ್ಪರ್ಧೆ ಮಾಡುವುದಾಗಿ ಸ್ವಾಮೀಜಿ ತಮ್ಮ ನಿರ್ಧಾರವನ್ನು ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ನೊಂದ ಜನರು ನಮ್ಮ ಜೊತೆಗೆ ನೋವು ತೊಡಗಿಕೊಂಡರು. ಹೀಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ದ್ರೋಹವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಆದರೆ ಮತದಾರರು ನಮ್ಮನ್ನು ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ, ಸ್ವಾರ್ಥ ರಾಜಕಾರಣಿಗಳ ವಿರುದ್ಧ ಸ್ವಾಭಿಮಾನಿ ಧರ್ಮ ಗುರುಗಳು ಮಾಡಿದ ಧರ್ಮ ಯುದ್ಧದ ಘೋಷಣೆ ಇದಾಗಿದೆ. ಧರ್ಮ ಯುದ್ಧವು ಕೇವಲ ಈ ಚುನಾವಣೆಗೆ ಸೀಮಿತವಾಗಿಲ್ಲ, ಜೀವ ಇರುವವರೆಗೂ ಮುಂದುವರೆಯಲಿದೆ, ನೊಂದವರ ಕಷ್ಟಕ್ಕೆ ಸ್ಪಂದಿಸಲು ಈ ನಿರ್ಧಾರ ಎಂದು ಹೇಳಿದರು.

ರಾಜ್ಯದಲ್ಲಿ ಲಿಂಗಾಯತ, ಗೌಡ ಜನಾಂಗ ಬಿಟ್ಟರೆ ಕುರುಬ ಸಮಾಜ ದೊಡ್ಡದಿದೆ. ಆದರೆ ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೆಟ್‍ನ್ನು ಬಿಜೆಪಿ ನೀಡಿಲ್ಲ. ರೆಡ್ಡಿ, ಜಂಗಮ, ಲಂಬಾಣಿ ಸೇರಿ ನೂರಾರು ಸಮಾಜಗಳು ಅಲಕ್ಷ್ಯಕ್ಕೆ ಒಳಗಾಗಿವೆ. ಎಲ್ಲ ಸಮಾಜಗಳು ಇಂದು ಬಿಜೆಪಿಯಿಂದ ನೋವು ಅನುಭವಿಸಿವೆ.

ಈಶ್ವರಪ್ಪನವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪ ಪುತ್ರ ಒಂದೂವರೆ ವರ್ಷದಿಂದ ಕೆಲಸ ಮಾಡಿದರೂ ಟಿಕೆಟ್ ಕೊಡಲಿಲ್ಲ. ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. 2% ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ.

ದೊಡ್ಡ ಸಂಖ್ಯೆಯ ಜನರಿಗೆ ಟಿಕೆಟ್ ನೀಡದೆ ಕಡಿಮೆ ಜನಸಂಖ್ಯೆ ಇರುವ ಜಾತಿಗೆ ಮೂರು ಟಿಕೆಟ್ ಕೊಟ್ಟಿದ್ದಾರೆ, ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಆಕ್ರೋಶ ಹೊರಹಾಕಿದರು. ಲಿಂಗಾಯತ ಸಮುದಾಯದವರಿಗೆ ಕ್ಯಾಬಿನೆಟ್ ಸ್ಥಾನದಲ್ಲಿ ಖಾತೆ ಕೊಟ್ಟಿದ್ದು ಬರೀ ರಾಜ್ಯ ಖಾತೆ ಅಷ್ಟೇ ಕೊಟ್ಟಿದ್ದಾರೆ. ವಿ. ಸೋಮಣ್ಣ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಿಲ್ಲಿಸಬಹುದಿತ್ತು. ಆದರೆ ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಅವರನ್ನು ನಿಲ್ಲಿಸಿದ್ದಾರೆ. ಅಲ್ಲಿರುವ ಲಿಂಗಾಯತ ಸಮುದಾಯದ ನಾಯಕರು ಹೊಡೆದಾಡಲಿ ಎಂದು ಅಭಿಪ್ರಾಯವಿರಬೇಕು ಎಂದರು.

ತೇಜಸ್ವಿ ಸೂರ್ಯ ಅವರನ್ನು ತುಮಕೂರಿನಲ್ಲಿ ನಿಲ್ಲಿಸಿ. ಸೋಮಣ್ಣ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಿಲ್ಲಿಸಬೇಕಿತ್ತು. ಆಗ ಯಾರ ತಾಕತ್ ಹೇಗಿದೆ ಅಂತ ಗೊತ್ತಾಗ್ತಿತ್ತು. ಲಿಂಗಾಯತ ಸಮುದಾಯದ ನಾಯಕರಿಗೆ ಎರಡು ಅಥವಾ ಮೂರು ಅವಧಿಯಲ್ಲಿ ಅವಕಾಶ ಕೊಡುತ್ತಾರೆ. ಬೇರೆ ಸಮುದಾಯದ ನಾಯಕರಿಗೆ ಹತ್ತು ಅವಧಿಯವರೆಗೆ ಅವಕಾಶ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಹ್ಲಾದ್ ಜೋಷಿ ಹೀರೋ ಆಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಝಿರೋ ಆಗಿದ್ದಾರೆ. ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಬೇರೆ ಸಮುದಾಯದವನ್ನು ಕಡೆಗಣಿಸುತ್ತಾರೆ. ನಮ್ಮ ಸಮುದಾಯವನ್ನು ತುಳಿದು ರಾಜಕಾರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಪ್ರಹ್ಲಾದ್ ಜೋಷಿ ಅವರೇ ಕಾರಣ ಎಂದು ಇದೇ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದರು.

ಯಾರು ಈ ಸ್ವಾಮೀಜಿ:
ಶಿರಹಟ್ಟಿ ಮಠದ ಪಕೀರ ದಿಂಗಾಲೇಶ್ವರ ಸ್ವಾಮೀಜಿ ಸದಾ ಒಂದಲ್ಲ ಒಂದು ವಿವಾದಿಂದ ಸುದ್ದಿಯಲ್ಲಿದ್ದಾರೆ. ಕೋಮು ಸೌಹಾರ್ದ ಜಾತ್ಯಾತೀತ ಹೋರಾಟ, ಎಡಪಂಥೀಯ ದೃಷ್ಟಿಕೋನದಿಂದ ಬೆಳೆದು ಬಂದ ಅವರು ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಕ್ಕಾಗಿ ಹೋರಾಟ ಸೇರಿದಂತೆ ಅನೇಕ ಬೆಳವಣಿಗೆಗಳು, ಜೀವ ಬೆದರಿಕೆ, ಭಾವೈಕ್ಯತೆ ಸೇರಿದಂತೆ ಮಠದ ವಿಷಯವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಅವರು ಗಮನ ಸೆಳೆದವರು.

RELATED ARTICLES

Latest News