ಬೆಂಗಳೂರು,ಮೇ11- ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿರುವ ಬೆನ್ನಲ್ಲೇ ಹಾಸನ ಸಂಸದ ರೇವಣ್ಣ ಅವರ ಅಶ್ಲೀಲ ಆಡಿಯೋ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದಲು ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಇದು ಸಾಮಾಜಿಕ ಜಾಲತಾಣಗಳ ಯುಗ. ಆಡಳಿತ ಮತ್ತು ಪ್ರತಿಪಕ್ಷ ಯಾವುದನ್ನೂ ಲೆಕ್ಕಿಸದೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ ರಾಜಕಾರಣಿಗಳಿಗೆ ಛೀಮಾರಿ ಹಾಕುತ್ತಿದ್ದಾರೆ.
ಪ್ರಜ್ವಲ್ ಪ್ರಕರಣ ದಿನ ಕಳೆದಂತೆ ಒಂದೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಅವರ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಅವರ ತಂದೆ ಎಚ್.ಡಿ.ರೇವಣ್ಣ ಈಗಾಗಲೇ ಜೈಲು ಪಾಲಾಗಿದ್ದಾರೆ. ಇದೇ ಪ್ರಕರಣದಲ್ಲಿ ಅವರ ತಾಯಿ ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.
ಅಸಲಿಗೆ ಪೆನ್‌ಡ್ರೈವ್‌ನಲ್ಲಿ ಎಷ್ಟು ಮಹಿಳೆಯರು ಇದ್ದಾರೆ ಎಂಬ ವಾಸ್ತವ ಯಾರಿಗೂ ಗೊತ್ತಿಲ್ಲ. ಎಲ್ಲವೂ ಅಂತೆಕಂತೆಗಳ ಮೇಲೆಯೇ ಚರ್ಚೆಯಾಗುತ್ತಿದೆ. ಪ್ರಾರಂಭದಲ್ಲಿ 2,960 ನೊಂದ ಸಂತ್ರಸ್ತ ಮಹಿಳೆಯರು ಇದ್ದಾರೆ ಎಂಬ ಗುಸುಗುಸು ಹಬ್ಬಿತ್ತು.
ಕೆಲವು ವಿಡಿಯೋಗಳು ಹೊರಬಂದವು. ಆ ವೇಳೆಗೆ ಎಸ್‌ಐಟಿ ಇಂತಹ ಅಶ್ಲೀಲ ಆಡಿಯೋಗಳನ್ನು ಯಾರಾದರೂ ಹಂಚಿಕೊಂಡರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟ ನಂತರ ಪೆನ್‌ಡ್ರೈವ್ ಚರ್ಚೆ ಒಂದು ಹಂತಕ್ಕೆ ನಿಂತಿತು.
ಆದರೆ ಯಾವಾಗ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪ್ರಜ್ವಲ್ ರೇವಣ್ಣ ಮತದಾನ ಮುಗಿದ ಬಳಿಕ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾದರೋ ಅಲ್ಲಿಂದ ಆರಂಭವಾದ ರಾಜಕೀಯ ಕೆಸರೆರಾಚಾಟ ಈ ಕ್ಷಣದವರೆಗೂ ನಿಂತಿಲ್ಲ. ಅವರನ್ನು ಸ್ವದೇಶಕ್ಕೆ ಕರೆತರಲು ಸರ್ಕಾರ ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್ ಸೇರಿದಂತೆ ಎಲ್ಲಾ ರಾಜತಾಂತ್ರಿಕ ಮಾರ್ಗಗಳ ಮೂಲಕ ಕಾನೂನಿನ ಕುಣಿಕೆಯನ್ನು ಬಿಗಿ ಮಾಡಿದೆ. ಈಗ ಎಲ್ಲೆಡೆ ಕೇಳಿಬರುತ್ತಿರುವ ಒಂದೇ ಮಾತೆಂದರೆ ಪ್ರಜ್ವಲ್ ಎಲ್ಲಿದ್ದೀಯಪ್ಪಾ?.. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರಿನಿಂದ ತೆರಳಿದ ಮೇಲೆ ಫ್ರಾಂಕ್‌ಫರ್ಟ್, ದುಬೈ ಹೀಗೆ ಹಲವು ರಾಷ್ಟ್ರಗಳಲ್ಲಿ ವಾಸ್ತವ್ಯಹೂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅಸಲಿಗೆ ಪ್ರಜ್ವಲ್ ಎಲ್ಲಿದ್ದಾನೆ ಎಂಬ ಕಟುಸತ್ಯ ಯಾರಿಗೂ ಗೊತ್ತಿಲ್ಲ.ಇದರ ನಡುವೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಕರಣವನ್ನು ತಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ತುತ್ತಾಗಿದೆ.
ಪ್ರಜ್ವಲ್ ರೇವಣ್ಣ ಅವರಿಂದ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶ ಯಾರೊಬ್ಬರಿಗೂ ಇಲ್ಲ. ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ತಮಗೆ ಎಷ್ಟು ಲಾಭವಾಗಬಹುದು ಎಂಬುದನ್ನೇ ಮುಖ್ಯ ಅಂಶ ಮಾಡಿಕೊಂಡಿದ್ದಾರೆ. ಈಗಾದರೆ ನಿಜವಾಗಿಯೂ ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವುದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ.
ಇಂತಹ ಘಟನೆಗಳು ಸಮಾಜದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ಇಲ್ಲಿ ಜನಪ್ರತಿನಿಧಿ ತನ್ನ ಜವಾಬ್ದಾರಿಯನ್ನು ಮರೆತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾನೆ. ಮತ್ತೊಂದು ಕಡೆಯಲ್ಲಿ ಈ ವಿಡಿಯೋ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ. ಇಲ್ಲಿ ಹೆಣ್ಣನ್ನು ಸರಕಾಗಿ ಹೇಗೆ ಸಮಾಜ ಬಳಕೆ ಮಾಡುತ್ತಿದೆ ಎಂಬುವುದರ ದೋತ್ಯಕವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಸರ್ಕಾರದ ಮುಂದಿನ ಸವಾಲೇನು?:
ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಂದೆ ಬಹುದೊಡ್ಡ ಸವಾಲಿದೆ. ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಸಂತ್ರಸ್ತೆಯ ರಕ್ಷಣೆಗೂ ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ರಾಜಕೀಯವಾಗಿ ನೋಡದೆ ಸಾಮಾಜಿಕ ಆಯಾಮದಲ್ಲಿ ನೋಡಬೇಕಾಗಿದೆ. ಸದ್ಯ ಎಸ್‌ಐಟಿ ವಿಡಿಯೋ ಹಂಚಿಕೆ ವಿಚಾರವಾಗಿ ಕೆಲವೊಂದು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದು ಕೇವಲ ಪತ್ರಿಕಾ ಹೇಳಿಕೆಗಳ ಬಿಡುಗಡೆಗಷ್ಟೇ ಸೀಮಿತವಾಗಬಾರದು. ಬದಲಾಗಿ ಕ್ರಮದ ಮೂಲಕ ಸಾಬೀತುಪಡಿಸಬೇಕಾಗಿದೆ.