ಹೈದ್ರಾಬಾದ್, ಫೆ.18- ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಆಯೋಗದ ಸಮಿತಿ ವರದಿ ಬಂದ ನಂತರ ಭಾರೀ ಸಂಚಲನ ಸೃಷ್ಟಿಯಾದ ಬೆನ್ನಲ್ಲೇ, ಟಾಲಿವುಡ್ನಲ್ಲೂ ಲೈಂಗಿಕ ದೌರ್ಜನ್ಯದ ಘಾಟು ಹೆಚ್ಚಾಗಿದೆ. ಇತ್ತೀಚೆಗೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯದಡಿ ದೂರು ದಾಖಲಾದ ಬೆನ್ನಲ್ಲೇ, ಖ್ಯಾತ ನಿರ್ದೇಶಕ ತ್ರಿವಿಕ್ರಮ್ ವಿರುದ್ಧವೂ ತನಿಖೆ ನಡೆಸಬೇಕೆಂದು ನಟಿ ಪೂನಂ ಕೌರ್ ಆಗ್ರಹಿಸಿದ್ದಾರೆ.
ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸನ್ ಮೇಲೆ ಲೈಂಗಿಕ ದೌರ್ಜನ್ಯದ ಬಾಂಬ್ ಸ್ಫೋಟಿಸಿರುವ ನಟಿ ಪೂನಂಕೌರ್ ಅವರು ತೆಲುಗು ಚಿತ್ರರಂಗಕ್ಕೆ ಇವರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ತ್ರಿವಿಕ್ರಮ್ ಅವರ ವಿರುದ್ಧ ನಾನು ಈ ಹಿಂದೆ ಚಿತ್ರರಂಗದ ಹಿರಿಯರಿಗೆ ದೂರು ನೀಡಿದ್ದೆ, ಆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಬೇಸತ್ತು ನಾನೇ ಚಿತ್ರರಂಗದಿಂದ ಹಿಂದೆ ಸರಿದೆ. ಇನ್ನಾದರೂ ಚಿತ್ರರಂಗದ ಹಿರಿಯರು ನಾನು ಕೊಟ್ಟಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ತ್ರಿವಿಕ್ರಮ್ ಅವರನ್ನು ಪ್ರಶ್ನೆ ಮಾಡುವಂತಾಗಲಿ ಎಂದು ಹೇಳಿದ್ದಾರೆ.
ನಟಿ ಪೂನಂಕೌರ್ ಅವರು ತ್ರಿವಿಕ್ರಮ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲವಾದರೂ, ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರ ವಿರುದ್ಧ ದೂರು ದಾಖಲಾಗಿ, ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ಪೂನಂ ತಮ ಧ್ವನಿ ಹೆಚ್ಚಿಸಿರುವುದನ್ನು ನೋಡಿದರೆ ಚಿತ್ರರಂಗದ ಕೆಲವರು ಆಕೆ ಸ್ಟಾರ್ ನಿರ್ದೇಶಕನ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಪೂನಂ ಹಾಗೂ ತ್ರಿವಿಕ್ರಮ್ ಅವರ ನಡುವೆ ನಡೆದಿರುವ ವಿಚಾರವನ್ನು ಬಹಿರಂಗವಾಗಿ ಹೇಳಿದರೆ ಆಗ ಸರಿಯಾದ ಕ್ರಮಕೈಗೊಳ್ಳಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸನ್ ಮೇಲೆ ನಟಿ ಪೂನಂ ಕೌರ್ ಅವರು ಇದೇ ಮೊದಲ ಬಾರಿ ವಾಗ್ದಾಳಿ ನಡೆಸಿಲ್ಲ, 2019ರಲ್ಲಿ ನಿರ್ದೇಶಕನ ವಿರುದ್ಧ ಸೈಬರ್ ಕ್ರೈಂಗೆ ದೂರನ್ನು ಸಲ್ಲಿಸಿದ್ದರು. ಅಲ್ಲದೆ ತ್ರಿವಿಕ್ರಮ್ ಅವರು ಚಿತ್ರರಂಗದಲ್ಲಿ ಹಲವರು ಅವಕಾಶ ಕಳೆದುಕೊಳ್ಳುವಂತೆ ಮಾಡಿದ್ದಾರೆ, ಅಲ್ಲದೆ ನನಗೂ ಮೋಸ ಮಾಡಿದ್ದಾರೆ ಎಂದು ತೆರೆಮರೆಯಲ್ಲಿ ಮಾತನಾಡುತ್ತಿದ್ದರು. ಆದರೆ ಈಗ ನೇರವಾಗಿ ಗುಡುಗಿದ್ದು ಶಿಸ್ತಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ,
2005ರಲ್ಲಿ ಮಿಸ್ ಆಂಧ್ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಪೂನಂ ಕೌರ್ ಅವರು, 2006ರಲ್ಲಿ ಚಿತ್ರರಂಗ ಪ್ರವೇಶಿಸಿ ಕನ್ನಡ, ತೆಲುಗು, ತಮಿಳು ಹಾಗೂ ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಬಂಧುಬಳಗ ಚಿತ್ರದಲ್ಲಿ ಪೂನಂ ಕೌರ್ ನಟಿಸಿದ್ದರು.
ಇನ್ನೂ ತ್ರಿವಿಕ್ರಮ್ ಶ್ರೀನಿವಾಸ್ ಅವರು 2002ರಲ್ಲಿ ತರುಣ್ ಹಾಗೂ ಶ್ರಿಯಾಶರಣ್ ಅಭಿನಯದ ನುವ್ವೆ ನುವ್ವೆ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿ, ನಂತರ ಅತ್ತಾರಿಂಟಿಕೆ ದಾರೇದಿ, ಸನ್ ಆಫ್ ಸತ್ಯಮೂರ್ತಿ, ಅರವಿಂದ ಸಮೇತ, ಅಲಾ ವೆಂಕುಟಪುರಂಲೋ, ಗುಂಟೂರು ಖಾರಂ ಸೇರಿದಂತೆ ಮಹೇಶ್ಬಾಬು, ಜ್ಯೂ.ಎನ್ಟಿಆರ್, ಅಲ್ಲುಅರ್ಜುನ್ರಂತಹ ಸ್ಟಾರ್ ನಟರುಗಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಟಿ ಪೂನಂಕೌರ್ ಅವರು ಮಾಡಿರುವ ಆರೋಪವನ್ನು `ಮಾ’ ಅಧ್ಯಕ್ಷ ಮಂಚು ವಿಷ್ಣು ಅವರು ಗಂಭೀರವಾಗಿ ಪರಿಗಣಿಸಿ ತ್ರಿವಿಕ್ರಮ್ ಶ್ರೀನಿವಾಸನ್ರನ್ನು ವಿಚಾರಣೆ ಮಾಡುತ್ತಾರಾ ಎಂದು ಕಾದು ನೋಡಬೇಕು.