Sunday, October 6, 2024
Homeರಾಜ್ಯರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ : ಉಪಕುಲಪತಿಗಳ ನೇಮಕಾತಿ ಸರ್ಕಾರದ ಸುಪರ್ದಿಗೆ

ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ : ಉಪಕುಲಪತಿಗಳ ನೇಮಕಾತಿ ಸರ್ಕಾರದ ಸುಪರ್ದಿಗೆ

Karnataka Governor

ಬೆಂಗಳೂರು,ಸೆ.18- ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿಯನ್ನು ರಾಜ್ಯ ಸರ್ಕಾರವೇ ನೇರವಾಗಿ ನೇಮಕಾತಿ ಮಾಡಲು ಮುಂದಾಗಿದ್ದು, ಈವರೆಗೆ ರಾಜ್ಯಪಾಲರಿಗಿದ್ದ ಅಧಿಕಾರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

ರಾಜ್ಯದ ವಿಶ್ವವಿದ್ಯಾನಿಲಯಗಳ ಉಪಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಉಪಕುಲಪತಿ ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದ್ದರು. ಅದರೆ ಸರ್ಕಾರ ಶಿಫಾರಸ್ಸು ಮಾಡುವ ಹೆಸರುಗಳಿಗೆ ಅಂಕಿತ ಹಾಕುವುದು ಅವರ ಕರ್ತವ್ಯವಾಗಿತ್ತು. ಇದೀಗ ರಾಜ್ಯ ಸರ್ಕಾರ ಉಪಕುಲಪತಿಗಳ ನೇಮಕಾತಿ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರಿಗಿದ್ದ ಅಧಿಕಾರವನ್ನು ಹಿಂಪಡೆದು ಸಚಿವ ಸಂಪುಟದ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳು ನೇಮಕಾತಿ ಮಾಡುವ ವಿಶೇಷ ಅಧಿಕಾರವನ್ನು ಪಡೆಯಲಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ನಡೆ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ 2024ಕ್ಕೆ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರವೇ ಕುಲಪತಿ ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದೆ.

ಮಸೂದೆ ಮಂಡನೆ: ಮೂಲಗಳ ಪ್ರಕಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ರಾಜ್ಯಪಾಲರ ಅಧಿಕಾರವನ್ನು ಹಿಂಪಡೆಯುವ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ.

ಈ ಮಸೂದೆಯನ್ನು ಎರಡು ಸದನಗಳಲ್ಲಿ ಮಂಡಿಸಿ ರಾಜ್ಯ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಇನ್ನು ಮುಂದೆ ಉಪಕುಲಪತಿಗಳನ್ನು ಸರ್ಕಾರವೇ ನೇರವಾಗಿ ನೇಮಕಾತಿ ಮಾಡಲಿದೆ. ಹೆಚ್ಚಿನ ಸಂದರ್ಭಗಳಲ್ಲಿ ರಾಜ್ಯಪಾಲರು ಆ ರಾಜ್ಯದ ವಿವಿಗಳ ಪದನಿಮಿತ್ತ ಕುಲಪತಿಗಳಾಗಿರುತ್ತಾರೆ. ಸಚಿವ ಸಂಪುಟದ ಶಿಫಾರಸ್ಸು, ಮಂತ್ರಿ ಪರಿಷತ್ನ ಸಹಾಯ ಮತ್ತು ಸಲಹೆಯೊಂದಿಗೆ ಕಾರ್ಯ ನಿರ್ವಹಿಸಬೇಕು.

ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ನೇರವಾಗಿ ರಾಜ್ಯಪಾಲರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಉಪಕುಲಪತಿ, ಸಿಂಡಿಕೇಟ್ ಸದಸ್ಯರ ನೇಮಕಾತಿ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರದ ಶಿಫಾರಸ್ಸನ್ನು ಅಂಗೀಕರಿಸುವುದು ಇಲ್ಲವೇ ಕಾರಣ ಕೇಳಿ ವಾಪಸ್ ಕಳುಹಿಸುವ ಅಧಿಕಾರವನ್ನು ಹೊಂದಿದ್ದಾರೆ. ಶಿಕ್ಷಣವು ರಾಜ್ಯ ಪಟ್ಟಿಯಲ್ಲಿ ಬರುವುದರಿಂದ ಕೇಂದ್ರ ಮತ್ತು ರಾಜ್ಯಗಳ ಕೊಂಡಿಯಂತೆ ಇವರು ಕೆಲಸ ಮಾಡಬೇಕು.

ವಿವಾದಗಳ ಆಗರ: ಕೇಂದ್ರದಲ್ಲಿ 2014ರಿಂದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರು ನೇರವಾಗಿ ಇಲ್ಲವೇ ಪರೋಕ್ಷವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸರ್ಕಾರದ ಶಿಫಾರಸ್ಸುಗಳನ್ನೇ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ತಿರಸ್ಕರಿಸಿದ್ದರು.

ಕೇರಳದಲ್ಲಿ 8 ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳನ್ನು ಅಲ್ಲಿನ ಸರ್ಕಾರ ನೇಮಕ ಮಾಡಿತ್ತು. ಆದರೆ ರಾಜ್ಯಪಾಲ ಅರೀಫ್ ಮೊಹಮದ್ ಖಾನ್ ಅವರು ಕಾರಣ ಕೇಳಿ ವಾಪಸ್ ಕಳುಹಿಸಿದ್ದರು. ಸಿಂಡಿಕೇಟ್ ಸದಸ್ಯರು ಮತ್ತು ಉಪಕುಲಪತಿಗಳ ಪಟ್ಟಿಯನ್ನು ಸರ್ಕಾರ ಕಳುಹಿಸಿದರೆ ರಾಜಭವನದಲ್ಲಿ ಬೇರೊಂದು ಹೆಸರುಗಳ ಪಟ್ಟಿ ಸಿದ್ದವಾಗುತ್ತಿತ್ತು. ಹೀಗಾಗಿ ರಾಜಭವನ ಮತ್ತು ಸರ್ಕಾರದ ನಡುವೆ ಕೇರಳದಲ್ಲಿ ಈಗಲೂ ತಿಕ್ಕಾಟ ನಡೆಯುತ್ತಲೇ ಇದೆ.

ತಮಿಳುನಾಡಿನಲ್ಲಿ ಅಲ್ಲಿನ ರಾಜ್ಯಪಾಲರ ಆರ್.ಎನ್.ರವಿ ಮತ್ತು ಮುಖ್ಯಮಂತ್ರಿ ಎನ್.ಕೆ.ಸ್ಟಾಲಿನ್ ನಡುವೆ ಪ್ರತಿದಿನ ಒಂದಿಲ್ಲೊಂದು ಸಂರ್ಘ ನಡೆಯುತ್ತಲೇ ಇದೆ. ಭ್ರಷ್ಟಾಚಾರದ ಆರೋಪದ ಮೇಲೆ ಇಡಿಯು ಸಚಿವ ಸೆಂಥಿ ಬಾಲಾಜಿ ಅವರನ್ನು ಬಂಧಿಸಿತ್ತು.

ಪುನಃ ಅವರನ್ನು ಸಂಪುಟಕ್ಕೆ ತೆಗೆದುಕೊಂಡಾಗ ರಾಜ್ಯಪಾಲ ರವಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಸೆಂಥಿ ಬಾಲಾಜಿ ಅವರನ್ನು ಸಂಪುಟದಿಂದಲೇ ವಜಾಗೊಳಿಸಿದ್ದರು. ಬಳಿಕ ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಈ ಸಮಸ್ಯೆ ಸುಖಾಂತ್ಯ ಕಂಡಿತ್ತು. ಹಠಕ್ಕೆ ಬಿದ್ದ ತಮಿಳುನಾಡು ಸರ್ಕಾರ ವಿವಿ ಉಪಕುಲಪತಿಗಳ ನೇಮಕಾತಿಗೆ ರಾಜ್ಯಪಾಲರಿಗಿದ್ದ ಅಧಿಕಾರವನ್ನೇ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಹಿಂಪಡೆದುಕೊಂಡಿತ್ತು.

ಇತ್ತ ಪಶ್ಚಿಮ ಬಂಗಾಳದಲ್ಲೂ ಸಿಎಂ ಮಮತ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿ.ವಿ.ಆನಂದ ಬೋಸ್ ನಡುವೆ ಸಂಘರ್ಷ ಈಗಲೂ ನಿಂತಿಲ್ಲ. ಸರ್ಕಾರದ ಪ್ರತಿಯೊಂದು ವಿಷಯದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದರಿಂದ ರಾಜ್ಯಪಾಲರಿಗಿದ್ದ ಅಧಿಕಾರವನ್ನು ಹಿಂಪಡೆದಿತ್ತು.

ಕಾಕತಾಳೀಯ ಎಂಬಂತೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು, ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಈಗ ರಾಜ್ಯಪಾಲರ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಸಿಡಿದೆದ್ದಿದ್ದು ಹಂತ ಹಂತವಾಗಿ ಅಧಿಕಾರವನ್ನು ಕಿತ್ತು ಹಾಕುವ ಅಜೆಂಡಾಕ್ಕೆ ಚಾಲನೆ ಕೊಟ್ಟಿದೆ.

RELATED ARTICLES

Latest News