Wednesday, May 1, 2024
Homeರಾಜ್ಯರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆಯಿಂದ ಏ.21 ರವರೆಗೆ ಅಂಚೆ ಮತದಾನ

ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆಯಿಂದ ಏ.21 ರವರೆಗೆ ಅಂಚೆ ಮತದಾನ

ಬೆಂಗಳೂರು, ಏ.18- ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾಳೆಯಿಂದ ಏ.21 ರವರೆಗೆ ಅಗತ್ಯ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಂಚೆ ಮತದಾನದ ಸೌಲಭ್ಯ ಕಲ್ಪಿಸಲಾಗಿದೆ.

ಭಾರತ ಚುನಾವಣಾ ಆಯೋಗ ಅಗತ್ಯ ಸೇವೆಗಳೆಂದು ಗುರುತಿಸಿರುವ ವಿದ್ಯುಚ್ಛಕ್ತಿ, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ, ವಿಮಾನಯಾನ, ಸಾರಿಗೆ ಸೇವೆ, ಅಗ್ನಿಶಾಮಕ ಸೇವೆಗಳು, ಸಂಚಾರಿ ಪೊಲೀಸ್, ಆಂಬ್ಯುಲೆನ್ಸ್ ಸೇವೆಗಳು, ಬೆಂಗಳೂರು ಮೆಟ್ರೋ ರೈಲು ನಿಗಮ, ಕಂಟ್ರೋಲ್ ರೂಂ, ಗ್ರಾಮೀಣ ಮತ್ತು ನಗರ ಕುಡಿಯುವ ನೀರು ಸರಬರಾಜು ಇಲಾಖೆ, ಬಂಧೀಖಾನೆ ಇಲಾಖೆ ಹಾಗೂ ಮತದಾನದ ದಿನ ಸುದ್ದಿ ಪ್ರಸಾರ ಮಾಡಲು ಅಧಿಕೃತಗೊಳಿಸಿದ ಮಾಧ್ಯಮದ ವರದಿಗಾರರು ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ನಾಳೆ ಬೆಳಿಗ್ಗೆ 9 ರಿಂದ ಏ.21 ರ ಸಂಜೆ 5 ಗಂಟೆವರೆಗೆ ಅಂಚೆ ಮತದಾನ ಕೇಂದ್ರಗಳಲ್ಲಿ ಅಗತ್ಯ ಸೇವೆಯಲ್ಲಿ ತೊಡಗಿರುವವರು ಮತದಾನ ಮಾಡಬಹುದಾಗಿದೆ.ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಅಂಚೆ ಮತದಾನ ನಾಳೆಯಿಂದ ಮೂರು ದಿನ ನಡೆಯಲಿದೆ.

ಆಯಾ ಕ್ಷೇತ್ರದಲ್ಲಿ ತಲಾ ಒಂದು ಅಂಚೆ ಮತದಾನ ಕೇಂದ್ರವನ್ನು ತೆರೆಯಲಾಗಿದೆ. ಅಗತ್ಯ ಸೇವೆಗಳ ಇಲಾಖೆಗೆ ಸಂಬಂಧಿಸಿದ ಗೈರುವರ್ಗದ ಮತದಾರರು ನಿಗದಿತ ಅವಯಲ್ಲಿ ಮತ ಚಲಾಯಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News